ADVERTISEMENT

ಸಮಸ್ಯೆಗಳ ಸವಾರಿ

ಡಾ. ಗುರುರಾಜ ಕರಜಗಿ
Published 31 ಡಿಸೆಂಬರ್ 2014, 19:30 IST
Last Updated 31 ಡಿಸೆಂಬರ್ 2014, 19:30 IST

ಗೋವಿಂದ ಅನಾಥ ತರುಣ. ದೇವಸ್ಥಾನದಲ್ಲಿ ಪೂಜೆ ಮಾಡುತ್ತ ತನ್ನ ಗುಡಿಸಲಿ­ನಲ್ಲಿ ಬದುಕುತ್ತಿದ್ದ. ಅವನನ್ನು ಊರ ಜನ ತುಂಬ ಮೆಚ್ಚುತ್ತಿದ್ದರು. ಇದು ಗೋವಿಂದನ ಇಬ್ಬರು ದೊಡ್ಡಪ್ಪಂದಿರಿಗೆ ಸಂಕಟ ಉಂಟು ಮಾಡುತ್ತಿತ್ತು. ಒಂದು ದಿನ ಗೋವಿಂದ ದೇವಸ್ಥಾನಕ್ಕೆ ಹೋದಾಗ ಅವನ ಗುಡಿಸಲಿಗೆ ಇವರು ಬೆಂಕಿ ಹಾಕಿದರು.

ಇವನು ಬರುವ ಹೊತ್ತಿಗೆ ಒಳಗಿನ ವಸ್ತುಗಳೊಂದಿಗೆ ಇಡೀ ಗುಡಿಸಲು ಭಸ್ಮವಾಗಿತ್ತು. ಗೋವಿಂದ ದುಃಖದಿಂದ ಒಂದು ಚೀಲದಲ್ಲಿ ಆ ಬೂದಿ­­ಯನ್ನು ತುಂಬಿಕೊಂಡು ಊರುಬಿಟ್ಟು ಮತ್ತೊಂದು ಹಳ್ಳಿಗೆ ನಡೆದ.  ಒಂದು ಮರದ ಕೆಳಗೆ ಕುಳಿತುಕೊಂಡ. ಊರ ಜನ ಇವನ ಅರ್ಚಕನ ವೇಷ, ಹಣೆಯ ಕುಂಕುಮ, ಚೀಲ­ದಲ್ಲಿದ್ದ ಬೂದಿಯನ್ನು ನೋಡಿ ಬಂದು ಕುತೂಹ­ಲದಿಂದ ಮಾತನಾಡಿಸಿದರು.

ಈತ ಒಂದು ಮಾತೂ ಆಡಲಿಲ್ಲ. ಅವರು ಬೂದಿಯ ಬಗ್ಗೆ ಕೇಳಿದಾಗ ಒಂದು ಚಿಟಿಕೆ ಬೂದಿ ತೆಗೆದುಕೊಟ್ಟ.  ಅದನ್ನು ತೆಗೆದುಕೊಂಡು ಹೋದವರು ಕಥೆಗಳನ್ನು ಕಟ್ಟಿದರು. ‘ಕೇದಾರನಾಥನಿಂದ ಮಹಾತ್ಮರು ಬಂದಿದ್ದಾರೆ, ಅವರು ಮಾತನಾಡು­ವುದಿಲ್ಲ, ಅತ್ಯಂತ ಪವಿತ್ರವಾದ ಭಸ್ಮ ತಂದಿದ್ದಾರೆ’ ಎಂದೆಲ್ಲ ಕಥೆಗಳು.

ಒಂದು ತಿಂಗಳಲ್ಲಿ ಗೋವಿಂದ ಮಹಾತ್ಮನೇ ಆದ. ಅವನ ಭಸ್ಮದಿಂದ ಪವಾಡ­ಗಳಾದ ಸುದ್ದಿ ಬಂದವು. ಗೋವಿಂದನ ಮುಂದೆ ಜನರ ಸಂದಣಿಯೇ ನೆರೆಯಿತು.  ಅವನ ಮುಂದೆ ಧನದ ರಾಶಿ. ಅಂದು ರಾತ್ರಿ ಎಲ್ಲ ಬೂದಿಯನ್ನು ಕೊಟ್ಟು ಹಣ­ವನ್ನು ಕಟ್ಟಿಕೊಂಡು ಗೋವಿಂದ ಊರಿಗೆ ಮರಳಿದ, ಅಲ್ಲಿ ಗಟ್ಟಿ ಮನೆ ಕಟ್ಟಿಸಿದ.

ದೊಡ್ಡಪ್ಪಂದಿರಿಗೆ ಮತ್ತೆ ಸಂಕಟವಾಯಿತು. ಅವನು ಹೇಗೆ ಹಣ ಗಳಿಸಿದ ಎಂದು ಕೇಳಿದಾಗ ಆತ ನಿಜವಾಗಿ ನಡೆದದ್ದನ್ನು ಹೇಳಿದ. ಗುಡಿಸಿಲಿನ ಬೂದಿಗೇ ಇಷ್ಟು ಬೆಲೆ ಇದ್ದರೆ ತಮ್ಮ ದೊಡ್ಡ ಮನೆಯ ಬೂದಿಗೆ ಮತ್ತಷ್ಟು ಹಣ ಸಿಕ್ಕೀತು ಎಂದು ತಮ್ಮ ಮನೆಗಳನ್ನು ಸುಟ್ಟು ಬೂದಿ ಕಟ್ಟಿಕೊಂಡು ಆ ಊರಿಗೆ ಹೋದರು.  ಒಬ್ಬ ಮಹಾತ್ಮ ಹೋಗಿ ಇಬ್ಬರು ಢೋಂಗಿ ಜನ ಬಂದಿದ್ದಾರೆಂದು ಜನ ಇವರನ್ನು ಹೊಡೆದು ಓಡಿಸಿದರು. ಇವರಿಗೆ ಬದುಕಿ ಬಂದದ್ದೇ ದೊಡ್ಡದಾಯಿತು.

ಊರಿಗೆ ಬಂದ ಮೇಲೆ ಇವರ ಕೋಪ ಇನ್ನೂ ಹೆಚ್ಚಾಯಿತು. ಒಂದು ದಿನ ಗೋವಿಂದನನ್ನು ಊರ ಹೊರವಲಯದಲ್ಲಿದ್ದ ನದಿಯ ಮೇಲಿದ್ದ ಸೇತುವೆಯ ಮೇಲೆ ಕರೆದುಕೊಂಡು ಹೋಗಿ, ‘ಅಲ್ಲಿ ನೋಡು. ಮತ್ಸ್ಯಕನ್ಯೆ ನಿನ್ನನ್ನು ಕರೆ­ಯುತ್ತಿದ್ದಾಳೆ’ ಎಂದು ಮೇಲಿನಿಂದ ತಳ್ಳಿ ಬಂದುಬಿಟ್ಟರು.  ಗೋವಿಂದನ ದೈವ ಚೆನ್ನಾಗಿತ್ತು. ನದಿ ದಂಡೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಹುಡುಗಿ ಇವನು ಬೀಳು­ವುದನ್ನು ನೋಡಿದಳು.

  ಆಕೆ ಒಳ್ಳೆಯ ಈಜುಗಾರ್ತಿ. ನೀರಿಗೆ ಹಾರಿ ಅವನನ್ನು ಎಳೆದು ದಂಡೆಗೆ ತಂದು ಉಪಚರಿಸಿದಳು. ಎಂಟು ದಿನಗಳ ಮೇಲೆ ಗೋವಿಂದ ಒಂದು ಯೋಜನೆ ಮಾಡಿದ. ಆ ಹುಡುಗಿಗೆ ಸುಂದರವಾದ ಚಕಚಕನೇ ಹೊಳೆ­ಯುವ ಬಟ್ಟೆಗಳನ್ನು ತೊಡಿಸಿ, ಹೊಳೆಹೊಳೆಯುವ ನಕಲಿ ಆಭರಣ­ಗಳನ್ನು ಹಾಕಿಸಿ, ತಾನೂ ಅತ್ಯಂತ ಬೆಲೆಬಾಳುವ ಬಟ್ಟೆಗಳು, ಆಭರಣಗಳನ್ನು ಧರಿಸಿ ದೊಡ್ಡಪ್ಪಂದಿರ ಮನೆಗೆ ಹೋದ. ಇವನು ಬದುಕಿ ಬಂದದ್ದನ್ನು ಇಷ್ಟು ಐಶ್ವರ್ಯ­ವಂತನಾದದ್ದನ್ನು ಕಂಡು ಅವರು ಬೆರಗುಪಟ್ಟರು.

ಗೋವಿಂದ ಹೇಳಿದ, ‘ದೊಡ್ಡಪ್ಪ, ನೀವು ನನ್ನನ್ನು ನೀರಿಗೆ ತಳ್ಳಿ ತುಂಬ ಉಪಕಾರ ಮಾಡಿದಿರಿ. ನನಗೆ ಈ ಮತ್ಸ್ಯ ಕನ್ಯೆ ದೊರಕಿದಳು. ನದೀ ತಳದಲ್ಲಿ ಅವಳ ಸಾಮ್ರಾಜ್ಯವಿದೆ. ನಾವಿಬ್ಬರೂ ಮದುವೆಯಾಗಿದ್ದೇವೆ. ಈಗ ನಾನೇ ಚಕ್ರವರ್ತಿ. ಆದರೆ ನಾವಿಬ್ಬರೇ ಇದ್ದು ಬೇಜಾರಾಗಿದೆ. ನೀವೂ ದಯವಿಟ್ಟು ಅಲ್ಲಿಗೇ ಬಂದುಬಿಡಿ’. ಹೀಗೆ ಹೇಳಿ ಇಬ್ಬರೂ ನದಿಯ ಕಡೆಗೆ ನಡೆದರು. ದೊಡ್ಡಪ್ಪಂದಿರು ನದೀ ತಳದ ಸಾಮ್ರಾಜ್ಯಕ್ಕೆ ಹೋಗಿ ಅಲ್ಲಿಯೂ ಇವನ ಆಸ್ತಿ ಹೊಡೆಯುವ ಉದ್ದೇಶದಿಂದ ನದಿಗೆ ಹಾರಿದರು.

ಮತ್ಸ್ಯ ಕನ್ಯೆ ದೊರಕಲಿಲ್ಲ, ಆದರೆ ಮೀನುಗಳಿಗೆ ಆಹಾರವಾಗಿ ಮೇಲಕ್ಕೆ ಬರಲೇ ಇಲ್ಲ. ನಂತರ ಗೋವಿಂದ ಮರಳಿ ತನ್ನ ಊರಿಗೆ ಹುಡುಗಿಯೊಂದಿಗೆ ಬಂದು ಸುಖವಾಗಿದ್ದ. ಬುದ್ಧಿವಂತಿಕೆ ಇಲ್ಲದವರ ಮೇಲೆ ಸಮಸ್ಯೆಗಳು ಸವಾರಿ ಮಾಡುತ್ತವೆ. ಬುದ್ಧಿವಂತರು ಸಮಸ್ಯೆಗಳನ್ನೇ ಪರಿಹಾರಗಳನ್ನಾಗಿ ಮಾಡಿಕೊಂಡು ಅವುಗಳ ಮೇಲೆ ಸವಾರಿ ಮಾಡುತ್ತಾರೆ, ನಿರಾಳವಾಗಿ ಬದುಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.