ADVERTISEMENT

ಸ್ಫೂರ್ತಿಯ ಮಾತು

ಡಾ. ಗುರುರಾಜ ಕರಜಗಿ
Published 13 ಮೇ 2014, 19:30 IST
Last Updated 13 ಮೇ 2014, 19:30 IST

ಒಂದೂರಿನಲ್ಲಿ ಒಬ್ಬ ಅಗಸನಿದ್ದ. ಅವನ ಬಳಿ ನಾಲ್ಕಾರು ಕತ್ತೆಗಳು. ಅವು­ಗಳ ಕೆಲಸ ಬಹಳ ಕಷ್ಟದ್ದು. ಅವು ಮನೆಗೂ ಸಲ್ಲುವುದಿಲ್ಲ, ಘಾಟಿಗೂ ಸಲ್ಲುವುದಿಲ್ಲ. ಮನೆಯಿಂದ ಬಟ್ಟೆಗಳ ಭಾರವಾದ ಗಂಟುಗಳನ್ನು ಹೊತ್ತು­­ಕೊಂಡು ನದಿ ತೀರಕ್ಕೆ ಹೋಗಬೇಕು. ಮತ್ತೆ ಒಗೆದ ಬಟ್ಟೆಗಳ ಮತ್ತಷ್ಟು ಭಾರ­ವಾದ ಗಂಟುಗಳನ್ನು ಹೊತ್ತು­ಕೊಂಡು ಮನೆಗೆ ಬರಬೇಕು. ಅವುಗಳಿಗೆ ಬೇರೆ ಜೀವನವೇ ಇಲ್ಲ.

ದಿನದಿನವೂ ಇದೇ ಕೆಲಸ ಮಾಡುತ್ತ ಅವುಗಳಿಗೆ ತಮ್ಮ ಜೀವ­ನದ ಬಗ್ಗೆಯೇ ಬೇಸರ ಬಂದಿತ್ತು. ಆ ಕತ್ತೆಗಳಲ್ಲಿ ಕಿರಿಯ ಕತ್ತೆ ಹೊಡೆಸಿ­ಕೊಂಡಷ್ಟು ಯಾರೂ ಹೊಡೆಸಿ­ಕೊಂಡಿ­ರಲಿಲ್ಲ. ದಿನಾಲು ಅದಕ್ಕೆ ಯಜಮಾನನ ಮೂದ­ಲಿಕೆಯ ಮಾತುಗಳು, ಹೊಡೆತ­ಗಳು ಎಷ್ಟು ಅಭ್ಯಾಸವಾ­ಗಿದ್ದವೆಂದರೆ ಎಂದಾ­ದರೂ ಒಂದು ದಿನ ಅವನು ಹೊಡೆಯದಿದ್ದರೆ ಕತ್ತೆಗೆ ಬೇಜಾರಾ­ಗುತ್ತಿತ್ತು. ಅದರ ಕೆಲಸವೂ ಆ ಮಟ್ಟದ್ದೆ. ಯಾವುದೇ ಆದೇಶವನ್ನು ಸರಿಯಾಗಿ ಪಾಲಿಸು­ವುದು ಸಾಧ್ಯವಿರಲಿಲ್ಲ ಈ ಕತ್ತೆಗೆ.

ಹಿರಿಯ ಕತ್ತೆಗಳು ಕನಿಕರದಿಂದ ಎಷ್ಟು ತಿಳಿಹೇಳಿ­ದರೂ ಅದಕ್ಕೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಹಿರಿಯ ಕತ್ತೆ ಅದರ ಜವಾಬ್ದಾರಿ ತೆಗೆದು­ಕೊಂಡು ದಿನನಿತ್ಯ ಕತ್ತೆಯ ಮೈಮೇಲೆ ಮೂಡಿದ ಬಾರುಕೋಲಿನ ಪೆಟ್ಟು­ಗಳ ಮೇಲೆ ನಾಲಿ­ಗೆ­ಯಾಡಿಸಿ ಸಮಾಧಾನ ಮಾಡುತ್ತಿತ್ತು. ಕಿರಿಯ ಕತ್ತೆ ಮೌನ­ವಾಗಿ ಅತ್ತಾಗ ಮೈಉಜ್ಜಿ ಸಹಾನುಭೂತಿ ತೋರು­ತ್ತಿತ್ತು. ಒಂದು ವಾರದಿಂದ ಕಿರಿಯ ಕತ್ತೆಯ ನಡವಳಿಕೆಯಲ್ಲಿ ವಿಚಿತ್ರ ಬದಲಾವಣೆ ಕಾಣತೊಡಗಿತ್ತು. ಈಗ ಅದು ಕುಣಿಯುತ್ತ ನಡೆಯುತ್ತಿದೆ, ಕೆಲಸದಲ್ಲಿ ಉತ್ಸಾಹ ತೋರುತ್ತಿದೆ. ಹೇಳಿದ ಕೆಲಸ­ವನ್ನು ಸರಿಯಾಗಿ ತಿಳಿದು­ಕೊಂಡು ಸಾಗುತ್ತಿದೆ. ಯಜಮಾನ ಯಾವಾ­ಗಲಾ­ದರೂ ಹೊಡೆದರೂ ಬೇಜಾರುಮಾಡಿಕೊಳ್ಳದೇ ನಗುತ್ತದೆ.

ಇದರ ವಿಪರೀತ ನಡವಳಿಕೆಯನ್ನು ನೋಡಿ ಹಿರಿಯ ಕತ್ತೆ ಕೇಳಿತು, ‘ಏನಯ್ಯ ನಿನ್ನಲ್ಲಿ ತಕ್ಷಣದ ಬದಲಾವಣೆ ಬಂದಿದೆ? ನಮ್ಮೆಲ್ಲರಿಗಿಂತ ನಿನ್ನ ಪರಿಸ್ಥಿತಿ ತುಂಬ ಕೆಟ್ಟದ್ದು ಎಂದು ನಾವು ಭಾವಿಸಿದ್ದೆವು. ಆದರೆ, ನಿನ್ನಲ್ಲಿ ಏನೋ ವಿಶೇಷ ಉತ್ಸಾಹ ಬಂದಂ­ತಿ­ದೆ? ಏನು ಕಾರಣ?’ ಅದಕ್ಕೆ ಕಿರಿಯ ಕತ್ತೆ ನಗುತ್ತಲೇ ಉತ್ತರಿಸಿತು, ‘ಹೌದಣ್ಣ, ಎಲ್ಲರಿಗೂ ಒಂದಲ್ಲ ಒಂದು ದಿನ ಒಳ್ಳೆಯ ಕಾಲ ಬರುತ್ತದಂತೆ. ಅದಕ್ಕೇ ನನ್ನಂತಹ ಕತ್ತೆಗೂ ಒಳ್ಳೆಯ ಕಾಲ ಬರುವ ಲಕ್ಷಣಗಳು ಕಾಣುತ್ತಿವೆ.’ ‘ಹೌದೇ? ನಿನಗೆ ಒಳ್ಳೆಯ ಕಾಲ ಬರಲಿದೆಯೇ? ನಿನಗೇ ಅಷ್ಟು ಒಳ್ಳೆಯ ಕಾಲ ಬಂದರೆ ನಮಗೂ ಭಾಗ್ಯ ತೆರೆಯುತ್ತದೆ. ನಿನಗೆ ಯಾರಪ್ಪ ಈ ಶುಭಸಮಾಚಾರ ಕೊಟ್ಟ­ವರು?’ ಎಂದು ಕೇಳಿತು ಹಿರಿಯ ಕತ್ತೆ.

ಯಾಕೋ ಕಿರಿಯ ಕತ್ತೆಗೆ ನಾಚಿಕೆ­ಯಾದಂತೆನಿಸಿತು. ತಲೆ ತಗ್ಗಿಸಿ ನಾಚುತ್ತ ಹೇಳಿತು, ‘ಮೊನ್ನೆ ನಮ್ಮ ಯಜಮಾನ ತನ್ನ ಮಗಳ ಮೇಲೆ ಯಾಕೋ ವಿಪರೀತ ಕೋಪಿಸಿ­ಕೊಂಡಿದ್ದ. ರೇಗುತ್ತಲೇ ಹೇಳಿದ, ನೀನು ಕತ್ತೆಯಂತೆ ಬೆಳೆದು ನಿಂತಿದ್ದೀ, ನಿನ್ನಷ್ಟು ಮೂರ್ಖರು ಇನ್ನಾರೂ ಇರಲಿಕ್ಕಿಲ್ಲ. ನೀನು ಹೀಗೆಯೇ ಮುಂದುವರೆದರೆ ನನ್ನ ಬಳಿ ಇದೆಯಲ್ಲ ಅತಿಮೂರ್ಖ ಕಿರಿಯ ಕತ್ತೆ, ಅದರ ಜೊತೆಗೇ ನಿನ್ನ ಮದುವೆ ಮಾಡಿ ಬಿಡುತ್ತೇನೆ. ಎಂಥ ಒಳ್ಳೆಯ ಹುಡುಗಿ ಆಕೆ. ಒಬ್ಬಳೇ ಮಗಳು ಬೇರೆ. ಆಕೆ ಯನ್ನು ನಾನು ಮದುವೆ­ಯಾದರೆ ಯಜ­ಮಾನನ ಆಸ್ತಿಯೆಲ್ಲ ನನ್ನದೇ ಅಲ್ಲವೇ?’ ಉಳಿದ ಕತ್ತೆಗಳು ಇದರ ಮೂರ್ಖತನಕ್ಕೆ ಮರುಗಿ, ನಕ್ಕು ಮುನ್ನಡೆದವು.

ಯಾರಿಗೆ, ಯಾವಾಗ, ಯಾರಿಂದ, ಹೇಗೆ ಸ್ಫೂರ್ತಿ ದೊರೆತೀತು ಎಂದು ಹೇಳುವುದು ಕಷ್ಟ. ಅಸಾಧ್ಯ­ವಾದ, ಮೂದಲಿಕೆಯ ಮಾತೇ ಮೂರ್ಖ ಕತ್ತೆಗೆ ಸ್ಫೂರ್ತಿಯಾಗು­ವುದಾದರೆ ಮತ್ತೊ­ಬ್ಬರು ನುಡಿದ ಒಂದು ಮೆಚ್ಚಿಕೆಯ ಮಾತು ಉಳಿದವರಿಗೆ ಸ್ಫೂರ್ತಿಯಾಗ ಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.