ADVERTISEMENT

700 ಮಂದಿಯ 70 ದಿನದ ಶ್ರಮದಿಂದ ಜೀವಂತವಾಯ್ತು ಕೇರಳದ ನದಿ!

ನದಿಗೆ ಮರುಜೀವ

ಏಜೆನ್ಸೀಸ್
Published 5 ಮೇ 2017, 5:50 IST
Last Updated 5 ಮೇ 2017, 5:50 IST
ಚಿತ್ರ: ವಿಕಿ ಮಿಡಿಯಾ
ಚಿತ್ರ: ವಿಕಿ ಮಿಡಿಯಾ   

ಅಲಪ್ಪುಳ (ಅಲೆಪ್ಪಿ): ಮಾಲಿನ್ಯ ಹಾಗೂ ಮರಳು ಗಣಿಗಾರಿಕೆ ಎಂಬ ಮಾನವನ ದುರಾಸೆಯಿಂದ ದಶಕದ ಕಾಲ ‘ನಿರ್ಜೀವ’ ಸ್ಥಿತಿ ತಲುಪಿದ್ದ ನದಿಯೊಂದು ಮತ್ತೆ ಪರಿಶುದ್ಧವಾಗಿ ಮೈದುಂಬಿ ಹರಿಯುತ್ತಿದೆ. ಪುನರ್‌ ‘ಜೀವ’ ಪಡೆದ ನದಿ ಈಗ ಜನರ ‘ಜೀವ ನದಿ’ಯಾಗಿದೆ.

– ಇದು ಕೇರಳದ ಗ್ರಾಮ ಪಂಚಾಯ್ತಿಯೊಂದರ ಸಾಧನೆಯ ನೈಜ ಕಥನ. ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಕೈ ಜೋಡಿಸಿದ್ದರಿಂದ ಕುಟ್ಟೆಂಪೆರೂರ್‌ ನದಿ ಪುನರುಜ್ಜೀವನಗೊಂಡಿದೆ. ಬತ್ತುವ ಸ್ಥಿತಿ ತಲುಪಿದ್ದ ನದಿ ಈಗ ಮೈದುಂಬಿ ಹರಿಯುತ್ತಿದೆ.

ಅಂದಹಾಗೆ, ಈ ಸಾಧನೆ ನಡೆದಿರುವುದು ಕೇರಳದ ಅಲಪ್ಪುಳ (ಅಲೆಪ್ಪಿ) ಜಿಲ್ಲೆಯ ಬುಧನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ. ಪಂಚಾಯ್ತಿ ಜತೆ ಸೇರಿ ನದಿಗೆ ಮರು ಜೀವ ನೀಡಿರುವ ಸ್ಥಳೀಯರ ಯಶಸ್ವಿ ಕೆಲಸದ ಬಗ್ಗೆ ‘ದಿ ಬೆಟರ್ ಇಂಡಿಯಾ’ ಸುದ್ದಿತಾಣ ವಿಶೇಷ ವರದಿ ಮಾಡಿದೆ.

ADVERTISEMENT

ವಿಪರೀತ ಮಾಲಿನ್ಯ ಮತ್ತು ಅಕ್ರಮ ಮರಳು ಗಣಿಗಾರಿಕೆಯಿಂದ ಕುಟ್ಟೆಂಪೇರೂರ್ ನದಿ ಊಹಿಸಲೂ ಸಾಧ್ಯವಾಗದಂಥ ಶೋಚನೀಯ ಸ್ಥಿತಿಗೆ ತಲುಪಿತ್ತು.

ಪಂಬಾ ಮತ್ತು ಅಚಾಂಕೋವಿಲ್ ನದಿಗಳಿಗೆ ಉಪ ನದಿಯಾಗಿರುವ ಈ ನದಿ 12 ಕಿ.ಮೀ. ಉದ್ದ ಮತ್ತು 100 ಮೀಟರ್‌ಗಳಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಈ ನದಿ ಬುಧನೂರಿನ ನಿವಾಸಿಗಳಿಗೆ ಕುಡಿಯುವ ನೀರಿನ ಮೂಲವಾಗಿತ್ತು. ನೂರಾರು ಎಕರೆ ಪ್ರದೇಶದ ಭತ್ತದ ಬೆಳೆಗೆ ನೀರನ್ನೂ ಒದಗಿಸುತ್ತಿತ್ತು. ಇದಲ್ಲದೆ, ನದಿಯು ಸ್ಥಳೀಯ ವ್ಯಾಪಾರಿಗಳಿಗೆ ಸರಕು ಸಾಗಣೆಗೆ ಒಳನಾಡು ಜಲ ಸಾರಿಗೆ ಮಾರ್ಗವೂ ಆಗಿತ್ತು.

‘ನದಿ ಪುನರುಜ್ಜೀವನಕ್ಕಾಗಿ ಅನೇಕ ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ನದಿ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಯಿತು’ ಎಂದು ಮಾಹಿತಿ ನೀಡುತ್ತಾರೆ ಬುಧನೂರು ಗ್ರಾಮ ಪಂಚಾಯ್ತಿ ಮುಖ್ಯ ಸಹಾಯಕಿ ರಶ್ಮಿ ಪ್ರಿಯಾ.

ಪಂಚಾಯ್ತಿ ಅಧ್ಯಕ್ಷ ವಿಶ್ವಭಾರ ಪಣಿಕರ್ ಅವರು ಹೇಳುವಂತೆ, ನದಿಯ ಪುನರುಜ್ಜೀವನಕ್ಕೂ ಮೊದಲು ಅದರ ಸ್ಥಿತಿ ಕರುಣಾಜನಕವಾಗಿತ್ತು. ಈಗ ನದಿ ಮಾಲಿನ್ಯ ಮತ್ತು ಕಳೆಗಳಿಂದ ಮುಕ್ತವಾಗಿದೆ. ಇದಕ್ಕೆ ಸರ್ಕಾರದ ಹಣಕಾಸಿನ ನೆರವಿನ ಜತೆಗೆ ಜನರ ಸಹಭಾಗಿತ್ವವೂ ಕಾರಣ.

ನದಿಯನ್ನು ಪಂಚಾಯ್ತಿ ಕಾರ್ಯಕ್ರಮದ ಪಟ್ಟಿಯಲ್ಲಿ ಎಂ ನರೇಗ ಯೋಜನೆ ಅಡಿ ಸ್ವಚ್ಛಗೊಳಿಸಲಾಗಿದ್ದು, 14 ವಾರ್ಡ್‌ಗಳ 700 ಮಂದಿ ಪುರುಷ ಹಾಗೂ ಮಹಿಳಾ ಕೆಲಸಗಾರರು 70 ದಿನಗಳ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇವರು ಕೇವಲ ಶ್ರಮ ವಿನಿಯೋಗ ಮಾಡಲಿಲ್ಲ. ಬದಲಿಗೆ, ತಮ್ಮ ನದಿಯನ್ನು ರಕ್ಷಿಸಿಕೊಳ್ಳಲು ಹೃದಯಪೂರ್ವಕವಾಗಿ ಆತ್ಮ ಸಂತೋಷದಿಂದ ಕೆಲಸ ಮಾಡಿದ್ದಾರೆ.

ನದಿಯಲ್ಲಿ ಕಳೆ ಸಸ್ಯಗಳನ್ನು ತೆಗೆಯುವ ಮೂಲಕ ಸ್ವಚ್ಛತಾ ಅಭಿಯಾನ ಆರಂಭಿಸಲಾಯಿತು. ಬಳಿಕ, ದಡದಲ್ಲಿನ ಕಳೆಗಳನ್ನೂ ತೆಗೆಯಲಾಯಿತು. ನಂತರದಲ್ಲಿ ನದಿಯಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೆಕ್ಕಿ ಹೊರ ಹಾಕಲಾಯಿತು. ಅಂತಿಮವಾಗಿ, ನದಿಯ ತಳಭಾಗದ ಹೂಳನ್ನು ತೆಗೆಯವ ಕಾರ್ಯಕ್ಕೆ ಕೈ ಹಾಕಲಾಯಿತು.

‘ಹಲವು ವರ್ವಗಳಿಂದ ಸಂಗ್ರಹವಾಗಿದ್ದ ಹೂಳನ್ನು ಹೊರ ತೆಗೆಯುವುದು ಸುಲಭದ ಕೆಲಸವಲ್ಲ ಮತ್ತು ಅದು ಅಪಾಯಕಾರಿಯೂ ಆಗಿತ್ತು. ಕೊಳಚೆ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮಣ್ಣಿನ ಸಂಚಯಗಳನ್ನು ಒಳಗೊಂಡಿರುವ ವರ್ಷಗಳ ತ್ಯಾಜ್ಯವನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿತ್ತು’ ಎನ್ನುತ್ತಾರೆ ರಶ್ಮಿ.

ಈ ಎಲ್ಲಾ ಕಾರ್ಯಗಳ ನಂತರ ನದಿಯು ನೀರು ಶುಚಿಯಾಗಿದ್ದಲ್ಲದೆ, ನಿಧಾನವಾಗಿ ಹೊಸ ನೀರು ಬರಲಾರಂಭಿಸಿತು.

‘ನದಿಯ ಪುನರುಜ್ಜೀವನದ ನಂತರ ಜನ ದೋಣಿಗಳಲ್ಲಿ ಕುಳಿತು ವಿಹರಿಸಿದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇನ್ನಿದು ಕೆಲಸಕ್ಕೆ ಬಾರದ ನದಿ ಎನ್ನುವಂಥ ಸ್ಥಿತಿ ತಲುಪಿದ್ದ ನದಿ ಜೀವ ಪಡೆದುಕೊಂಡ ಪರಿ ಕನಸೊಂದು ನನಸಾದಂತೆ’ ಎನ್ನುತ್ತಾರೆ ರಶ್ಮಿ.

‘ಕಳೆದ ವರ್ಷದ ನವೆಂಬರ್‌ನಲ್ಲಿ ಆರಂಭಗೊಂಡ ನದಿ ಸ್ವಚ್ಛತಾ ಕೆಲಸ ಈ ವರ್ಷದ ಮಾರ್ಚ್ 20ರಂದು ಪೂರ್ಣಗೊಂಡಿತು. ಯೋಜನೆಯು ಪೂರ್ಣಗೊಂಡ ನಂತರ ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಈ ಭಾಗದ ಬಾವಿಗಳಲ್ಲಿ ಹಿಂದಿಗಿಂತ ನೀರು ಹೆಚ್ಚಿದೆ. ಇದು ಆಶ್ಚರ್ಯಕರ ಸಂಗತಿ’ ಎನ್ನುತ್ತಾರೆ ಅವರು.

ಬುಧನೂರಿನ ಜನಕ್ಕೆ ಹಿಂದಿನಿಂದಲೂ ಕುಡಿಯುವ ನೀರಿಗೆ ಈ ನದಿಯೇ ಮೂಲವಾಗಿತ್ತು. ಜನರು ಈಗಲೂ ಅದನ್ನು ಉಪಯೋಗಿಸುವುದರ ಬಗ್ಗೆ ಮತ್ತಷ್ಟು ಜಾಗರೂಕರಾಗಿದ್ದಾರೆ. ನದಿಯ ಪುನರುಜ್ಜೀವನ ಕಾರ್ಯ ಯಶಸ್ವಿಯಾಗಿದೆ. ಜನ ನದಿಯನ್ನು ಮತ್ತೆ ಹಾಳುಮಾಡಬಾರದೆಂದು ನಿರ್ಧರಿಸಿದ್ದಾರೆ. ಜನರಲ್ಲಿ ನದಿ ಮತ್ತು ನೀರಿನ ಮಹತ್ವದ ಬಗ್ಗೆ ಅರಿವು ಮೂಡಿದೆ’ ಎನ್ನುತ್ತಾರೆ ರಶ್ಮಿ.

ಲಿಂಕ್‌: http://www.thebetterindia.com/98667/kuttemperoor-river-resuscitation/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.