ADVERTISEMENT

ಮೂರು ಲಕ್ಷ ರೂಪಾಯಿಗಳ ಹೊಸ ಹೀರೋಗಳು!

ನಾಗತಿಹಳ್ಳಿ ಚಂದ್ರಶೇಖರ
Published 24 ಜನವರಿ 2015, 19:30 IST
Last Updated 24 ಜನವರಿ 2015, 19:30 IST
ಮೂರು ಲಕ್ಷ ರೂಪಾಯಿಗಳ ಹೊಸ ಹೀರೋಗಳು!
ಮೂರು ಲಕ್ಷ ರೂಪಾಯಿಗಳ ಹೊಸ ಹೀರೋಗಳು!   

ಹೊಸದಾಗಿ ಬೆಳ್ಳಿತೆರೆಗೆ ಪರಿಚಯಿಸಲಾದ ಇಬ್ಬರು ಹೀರೋಗಳಂತೆ ಮೇಕಪ್ ಮಾಡಿಕೊಂಡು ಫಸ್ಟ್‌ಶಾಟ್ ಎದುರಿಸುತ್ತಿರುವ ಈ ಹೋರಿಗಳು ಎಷ್ಟು ಆಕರ್ಷಕವಾಗಿವೆ! ಇವುಗಳ ವಯಸ್ಸು ಒಂದು ವರ್ಷ ಎರಡು ತಿಂಗಳು. ಇನ್ನೂ ಹಲ್ಲಾಗಿಲ್ಲ.

‘ಅಲ್ರಿ... ಇಷ್ಟು ವರ್ಷ ನಿಮ್ಮನೇಲಿ ಇಡೀ ನಮ್ ವಂಶದವರೆಲ್ಲಾ ಜೀತ ಮಾಡಿದ್ವಿ, ನಿಮ್ಮ ಹೊಲಾ ತೋಟ ಗದ್ದೆ ಹಸನು ಮಾಡಿ ಕಡ್ಡೀಕಾಳು ಬೆಳೆದ್ ಕೊಟ್ವಿ. ನಮ್ ಸಗಣಿ ಗಂಜಲಾನೂ ಬಿಡ್ದೆ ಬಳಸ್ಕೊಂಡ್ರಿ. ಈಗ ಹೊಗೆ ಬಿಡೋ ಟ್ರ್ಯಾಕ್ಟರು, ಟಿಲ್ಲರು ಬಂದ ಮೇಲೆ ನಮ್ಮನ್ನ ಹೀಗೆ ಮೂಲೆಗುಂಪು ಮಾಡೋದು ಸರೀನಾ? ಅಲಂಕಾರ ಮಾಡಿ ಜಾತ್ರೇಲಿ ನಿಲ್ಲಿಸ್‌ಬಿಟ್ರೆ ಸಾಕಾ? ನಾವ್ ದುಡಿಯೋದ್ ಬೇಡ್ವಾ?’ ಎಂದು ಕೇಳುತ್ತಿರುವಂತೆ ಭಾಸವಾಗುತ್ತಿರುವ ಜೋಡಿ ಎತ್ತುಗಳ ಈ ಚಿತ್ರ ಅನೇಕ ಸ್ಥಿತ್ಯಂತರದ ಕಥೆ ಹೇಳುತ್ತದೆ. ಒಂದು ಕಾಲಕ್ಕೆ ಮೂರು ಕಾಯಂ ಹೇಳಿಕೆಗಳು ಈ ದೇಶದಲ್ಲಿದ್ದುವು. ಒಂದು: ಭಾರತ ಹಳ್ಳಿಗಾಡಿನ ದೇಶ. ಎರಡು: ಹಳ್ಳಿಗಾಡಿನ ಜನರು ಶ್ರಮಿಕರಾಗಿದ್ದು, ನಮ್ಮದು ಕೃಷಿ ಪ್ರಧಾನ ದೇಶವಾಗಿದೆ.

ಮೂರು: ಕೃಷಿ ಪ್ರಧಾನವಾಗಿರುವುದರಿಂದ ಪಶುಪಾಲನೆಯು ಅಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಈಗ ಮೊದಲನೆ ಹೇಳಿಕೆ ಮಾತ್ರ ಉಳಿದಿದೆ. ಹಳ್ಳಿಗಾಡಿನ ಬಹಳಷ್ಟು ಜನರು ಸೋಮಾರಿಗಳಾಗಿದ್ದಾರೆ. ಅದನ್ನು ಸಮರ್ಥಿಸಿಕೊಳ್ಳಲು ಅವರಿಗೆ ಬೇಕಾದಷ್ಟು ಕಾರಣ ಮತ್ತು ನೆಪಗಳಿವೆ. ಪಶುಪಾಲನೆ ಗಣನೀಯವಾಗಿ ಕುಗ್ಗಿದೆ. ಇನ್ನೂ ಕೃಷಿಯಲ್ಲಿ ತೊಡಗಿರುವ ಕೆಲವು ರೈತರು ಆ ಕಾಯಕವನ್ನು ಪ್ರೀತಿಯಿಂದ ಮಾಡುತ್ತಿರುವುದಕ್ಕಿಂತ ಬೇರೇನೂ ತೋಚದೆ ಅನಿವಾರ್ಯವಾಗಿ ಮುಂದುವರಿಸುತ್ತಿದ್ದಾರೆ. ಎರಡು ಸಾವಿರ ಜನಸಂಖ್ಯೆಯ ನನ್ನ ಹಳ್ಳಿಯಲ್ಲಿ ಒಳ್ಳೆಯ ಎರಡು ಜತೆ ಎತ್ತುಗಳಿಲ್ಲ. ಅಧಿಕ ಇಳುವರಿಗಾಗಿ ಟ್ರ್ಯಾಕ್ಟರು ಅಥವಾ ಯಂತ್ರೋಪಕರಣ ಬಳಸುವುದು ತಪ್ಪಲ್ಲ. ಆದರೆ ಟ್ರ್ಯಾಕ್ಟರಿನ ಜತೆಗೆ ಎತ್ತುಗಳೂ ಇರಬೇಕು. ಏಕೆಂದರೆ ಟ್ರ್ಯಾಕ್ಟರು ತೋಟ ತುಡಿಕೆ ಉಳುವಾಗ ಮೂಲೆ ಮುಡುಕುಗಳನ್ನು ಪ್ರವೇಶಿಸಲಾರದು ಮತ್ತು ಸಗಣಿ, ಗಂಜಲ ಹಾಕಲಾರದು.

ಪಶುಪಾಲನೆ ಕಡಿಮೆಯಾಗುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಒಂದು ಮುಖ್ಯ ಕಾರಣ ಆಲಸ್ಯ. ಅವಕ್ಕೆ ದಿನಾ ಮೈ ತೊಳೆಯಬೇಕು. ಹುಲ್ಲು ಹಾಕಬೇಕು. ಬೇಸಿಗೆಗೆ ಹುಲ್ಲು ಸಂಗ್ರಹಿಸಿಡಬೇಕು. ಕೊಟ್ಟಿಗೆಗೆ ಮಗ್ಗಲು ಸೊಪ್ಪು ತಂದು ಹಾಸಬೇಕು. ಅವಕ್ಕೂ ಬಸಿರು, ಬಾಣಂತನದ ವ್ಯವಸ್ಥೆ ಮಾಡಬೇಕು. ಪಶುವೈದ್ಯರನ್ನು ಕರೆಸಬೇಕು. ಲಾಳ ಕಟ್ಟಿಸಬೇಕು. ನಾನಾ ರೀತಿಯ ಆರೈಕೆ ಮಾಡಬೇಕು. ಹಾಲು ಕರೆಯುವ ಎಮ್ಮೆ, ಹಸುಗಳಿಗೆ ಹಲವು ಬಗೆಯ ಉಪಚಾರವಿರುವಂತೆ ಹೊಲಗದ್ದೆ ಗೆಯ್ಯುವ, ಗಾಡಿಗೆ ಹೂಡುವ ಎತ್ತುಗಳಿಗೆ ಹಾಲು, ಬೆಣ್ಣೆ, ರವೆ ಗಂಜಿ, ಹುರುಳಿನುಚ್ಚು, ಹಿಂಡಿ, ಕೋಳಿಮೊಟ್ಟೆ ಏನೆಲ್ಲಾ ಕೊಟ್ಟು ಉಪಚರಿಸಬೇಕು. ಮಾಗಿಯ ಚಳಿಯಲ್ಲಿ ಮನೆ ಎದುರಿನ ಜಗುಲಿಯಲ್ಲಿ ಗುಬುರು ಹಾಕಿಕೊಂಡು ಕುಳಿತು ಹಸಿ ಜೋಳದ ಕಡ್ಡಿಯನ್ನು ಕಂತೆಕಂತೆಯಾಗಿ ಎತ್ತುಗಳ ಬಾಯಿಗೆ ಗಿಡಿದು ತಿನ್ನಿಸುತ್ತಿದ್ದ ಚಿತ್ರ ನನ್ನ ಬಾಲ್ಯದ ನೆನಪುಗಳಲ್ಲೊಂದು.

ಜಾಣನೆಂದು ತಪ್ಪಾಗಿ ಗ್ರಹಿಸಿದ್ದ ಅಪ್ಪ, ಪಿಯುಸಿಯಲ್ಲಿ ನನಗೆ ಪೀಸೀಎಂಬಿ ಕೊಡಿಸಿದ್ದರು. ನಾಲ್ಕರಲ್ಲೂ ಫೇಲಾಗಿ ಊರಿಗೆ ಹೋದಾಗ ಶಿಕ್ಷೆ ಎಂಬಂತೆ ಒಂದು ಜೊತೆ ಕೆಂದು ಹೋರಿಗಳನ್ನು ತಂದು ಕೊಟ್ಟಿದ್ದರು. ಬಲದಾ ಎತ್ತು ಮಹಾ ಮೈಗಳ್ಳನಾಗಿದ್ದು ಗಳಿಗೆಗೊಮ್ಮೆ ಕಣ್ಣಿ ಎಸೆದು ನಿಲ್ಲುತ್ತಿತ್ತು. ಗಾಡಿ ಎಳೆಯುವಾಗ ನಡುದಾರಿಯಲ್ಲಿ ತಟ್ಟನೆ ಮಲಗಿ ಬಹಳ ಅವಮಾನ ಮಾಡುತ್ತಿತ್ತು. ಬಾಲ ಮುರಿದು ಬಾರುಕೋಲಿನಲ್ಲಿ ಬಾರಿಸಿದರೂ ಜಗ್ಗುತ್ತಿರಲಿಲ್ಲ. ಅದರ ಮೈಗಳ್ಳತನವನ್ನು ಕಷ್ಟಪಟ್ಟು ಬಿಡಿಸಿ ಸರಿದಾರಿಗೆ ತರುವ ಹೊತ್ತಿಗೆ, ಎಡದಾ ಎತ್ತು ಆ ಚಾಳಿಯನ್ನು ಪ್ರಾಕ್ಟೀಸು ಮಾಡಿಕೊಳ್ಳತೊಡಗಿತು. ಯಾವ ಕಾರಣಕ್ಕೂ ಕೆಲಸ ಮಾಡಕೂಡದು ಎಂದು ಅವೆರಡೂ ಪರಸ್ಪರ ಒಪ್ಪಂದಕ್ಕೆ ಬಂದಿದ್ದವು. ಅವುಗಳನ್ನು ಮಾರಲು ಅಪ್ಪ ತೀರ್ಮಾನಿಸಿದಾಗ ನನಗೆ ಒಳಗೊಳಗೇ ಖುಷಿ. ಆದರೆ ಅವುಗಳನ್ನು ಮಾರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಯಾವ ಸಂತೆ, ಜಾತ್ರೆಗೆ ಹೋದರೂ ಅವುಗಳನ್ನು ಕುರಿ, ಆಡಿನ ರೇಟಿಗೆ ಕೇಳುತ್ತಿದ್ದರು. ಅವೆರಡಕ್ಕೂ ಹೀನಸುಳಿ ಇತ್ತಂತೆ. ಅಪ್ಪನಿಗೆ ಯಾರೋ ತಟಾಯಿಸಿದ್ದರು. ಬೂಕನ ಬೆಟ್ಟದ ಜಾತ್ರೆಯಲ್ಲಿ ಅಪ್ಪ ಅಗ್ಗವಾದ ಬೆಲೆಗೆ ಮಾರಿದರು. ಆಮೇಲೆ ಅಪ್ಪ ಹೋರಿಗಳ ತಂಟೆಗೆ ಹೋಗಲಿಲ್ಲ.

ಬೂಕನಬೆಟ್ಟ ನಮ್ಮೂರ ಸಮೀಪದ ಅದ್ದೂರಿ ದನಗಳ ಜಾತ್ರೆ. ಚುಂಚನ ಕಟ್ಟೆ, ಹಾಸನ, ಹೇಮಗಿರಿ, ಮಾಗಡಿ, ಜೋಡಿಘಟ್ಟ, ಘಾಟಿ ಸುಬ್ರಹ್ಮಣ್ಯ, ಗುಡಿಬಂಡೆ, ಬೆಟ್ಟದಪುರ ಮುಂತಾದ ಜಾತ್ರೆಗಳಂತೆಯೇ ಬೂಕನ ಬೆಟ್ಟದ ಜಾತ್ರೆಯೂ ಪ್ರಸಿದ್ಧ. ಚಿಕ್ಕವರಿದ್ದಾಗ ಅಲ್ಲಿಗೆ ಸಿನಿಮಾ ಟೆಂಟೂ ಬರುತ್ತಿತ್ತು. ಶ್ರವಣಬೆಳಗೊಳಕ್ಕೆ ಅಂಟಿಕೊಂಡಂತೆ ಇರುವ ಬೂಕನಬೆಟ್ಟದ ಜಾತ್ರೆಯಲ್ಲಿ ಈ ಚಾಂಪಿಯನ್ ಹೋರಿಗಳು ಕೃಷಿ ಇಲಾಖೆಯಿಂದ ಈ ವರ್ಷ ಮೊದಲ ಬಹುಮಾನ ಪಡೆದಿವೆ. ಕೃಷಿ ಮಾರಾಟ ಮಂಡಳಿ ಇಂಥ ಆಕರ್ಷಕ ಯೋಜನೆಗಳನ್ನಿರಿಸಿರುವುದು ಮೆಚ್ಚತಕ್ಕದ್ದೆ. ರೈತರ ಹೊಲತೋಟಗಳಿಗೆ ಕಾಲಿಡದ ಕೃಷಿ ಅಧಿಕಾರಿಗಳು ದನಗಳ ಜಾತ್ರೆಗಾದರೂ ಬರುತ್ತಾರಲ್ಲ ಅನ್ನುವುದೇ ಸಮಾಧಾನ. ಈ ಹೋರಿಗಳನ್ನು ಸಾಕಿದ ಸೋದರರು ನಾಗಮಂಗಲ ತಾಲ್ಲೂಕಿನ ಕನ್ನೇನಹಳ್ಳಿ ಗ್ರಾಮದ ಕುಮಾರ್ ಮತ್ತು ಜಗದೀಶ್.

ಕೊರಳಿಗೆ ಮಲ್ಲಿಗೆ ಹಾರ ಹಾಕಿ, ವಧುಪರೀಕ್ಷೆಗೆ ಹೊರಟ ಜೋಡಿ ವರಗಳಂತೆ ಕಾಣುತ್ತಿರುವ ಈ ಹಳ್ಳಿಕಾರ್ ತಳಿಯ ಹೋರಿಗಳು ಇಂದ್ರಾಶ್ವಗಳಂತೆ ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದಿವೆ. ರೇಟು ತಿಳಿಯುವ ಕುತೂಹಲಕ್ಕೆ ಎಷ್ಟಕ್ಕೆ ಕೊಡ್ತೀರಿ ಅಂದೆ. ಮೂರ್ ಲಕ್ಷ ನೆಟ್ ಕ್ಯಾಶ್ ಇಲ್ಲದಿದ್ರೆ ಹತ್ರಕ್ಕೇ ಸುಳೀಬೇಡಿ ಅಂದರು. ಸಂತೋಷವಾಯಿತು. ಕಾರು, ಚಪ್ಪಲಿ ಕೊಳ್ಳುವಾಗ ಚೌಕಾಸಿ ಮಾಡುವಂತಿಲ್ಲ. ಹೋರಿಗಳಿಗೆ ಏಕೆ ಮಾಡಬೇಕು? ಸಾಕುವುದಕ್ಕೆ ಲಕ್ಷಾಂತರ ಖರ್ಚಾಗುತ್ತದೆ. ಮೂರು ಲಕ್ಷದ್ದೇನೂ ಹೆಚ್ಚುಗಾರಿಕೆಯಲ್ಲ. ಚುಂಚನಕಟ್ಟೆ ಜಾತ್ರೆಯಲ್ಲಿ ಹಳ್ಳಿಕಾರ ಎತ್ತುಗಳು ಏಳು ಲಕ್ಷದವರೆಗೂ ಮಾರಾಟವಾಗಿವೆಯಂತೆ.

ನಮ್ಮ ಹಳ್ಳಿಯಲ್ಲಿ ‘ಸುಳಿಜ್ಞಾನಿ’ ಎಂದು ಅಭಿಮಾನಪೂರ್ವಕವಾಗಿ ಕರೆಯುವ ರಾಮಸ್ವಾಮಿಗೌಡ ಎಂಬ ರೈತ ಸೋದರ ಇದ್ದಾನೆ. ಅದು ಎಲ್ಲಿ ಹೇಗೆ ಏಕೆ ಮತ್ತು ಯಾವಾಗ ದನಗಳ ಸುಳಿ ಕುರಿತು ಯಾವ ವಿಶ್ವವಿದ್ಯಾನಿಲಯದಿಂದ ಜ್ಞಾನ ಸಂಗ್ರಹಿಸಿದನೋ ಕಾಣೆ. ಕೇಳಿದರೆ ಹಿರಿಯರಿಂದ ಕಲಿತೆ ಅನ್ನುತ್ತಾನೆ. ಕೊಂಬು, ಚರ್ಮ, ಮೈಕಟ್ಟು, ಬಣ್ಣ ಹೇಗಿರಬೇಕು ಅಂತ ಖಚಿತವಾಗಿ ಹೇಳಬಲ್ಲ. ಹಣೆ ಗಿಳಿ ಕಂಡ ಹಾಗಿರಬೇಕು. ಒಂದು ರೂಪಾಯಿ ನೋಟಿನ ಬಣ್ಣ ಇರಬೇಕು. ಕಣ್ಣಲ್ಲಿ ಛಲ ಇರಬೇಕು. ಬೇಡಿ ಸುಳಿ ಇರೋ ಎತ್ತು ಕೊಂಡರೆ ಕೊಂಡವರಿಗೂ ಪೊಲೀಸರು ಬೇಡಿ ಹಾಕೋದ್ ಗ್ಯಾರಂಟಿ. ಮ್ಯಾಳೆ ಒಳಗೆ ಸುಳಿ ಇರಬಾರ್ದು ಮತ್ತು ಮ್ಯಾಳೆ ಜೋತಾಡಬಾರದು. ಕೊಂಬು ತೆಳುವಾಗಿರಬೇಕು ಮತ್ತು ಚೂಪಾಗಿರಬೇಕು. ಗುಂಡಿಗೆ ಸುಳಿ ಇರಬಾರದು. ರಾಜ ಸುಳಿ ಇದ್ರೆ ಒಳ್ಳೆ ಬೆಲೆ. ಕುದುರೆ ಇದ್ದ ಹಾಗೆ ಇರಬೇಕು ಇತ್ಯಾದಿಯಾಗಿ ಹೇಳುತ್ತಾನೆ.

ಹೋರಿ ಹೋರಿಯಂತಿರಬೇಕು. ಕುದುರೆಯಂತೆ ಯಾಕಿರಬೇಕು? ಹಾಗೆ ನೋಡಿದರೆ ಕೆಟ್ಟ ಸುಳಿ ಇದ್ದ ಹೋರಿಗಳು ಕೂಡಾ ಚೆನ್ನಾಗಿ ದುಡಿಯುತ್ತವೆ. ಆದರೂ ಇವು ಅಸ್ಪೃಶ್ಯರಂತೆ. ಇದು ಘೋರ ಅನ್ಯಾಯ. ಇವುಗಳನ್ನು ಕಡಿಮೆ ರೇಟಿಗೆ ಲಪಟಾಯಿಸುತ್ತಾರೆ. ಟವೆಲ್ ಒಳಗೆ ಅಂಗೈ ಇಟ್ಟು ಬೆರಳಿನಲ್ಲೇ ಸಾವಿರ, ಲಕ್ಷ ವ್ಯಾಪಾರ ಮಾಡುತ್ತಾರೆ. ರಾಮಸ್ವಾಮಿ ಬರೇ ದುಡ್ಡಿಗಾಗಿ ವ್ಯಾಪಾರ ಮಾಡುವವನಲ್ಲ. ಆದರೂ ಅವನ ತರ್ಕ ವೈಜ್ಞಾನಿಕವೋ, ಅವೈಜ್ಞಾನಿಕವೋ ಹೇಳುವುದು ಕಷ್ಟ. ನಮ್ಮ ಕಡೆ ಯಾರಾದರೂ ಹೋರಿ ಕೊಳ್ಳಬೇಕಾದರೆ ರಾಮಸ್ವಾಮೀನ ಒಂದ್ ಮಾತು ಕೇಳಿ ಅನ್ನುತ್ತಾರೆ. ಎಲ್ಲಿ ದನಗಳ ಜಾತ್ರೆಯೋ ಅಲ್ಲಿ ಇವನು ಹಾಜರ್.

ನಗರದ ಜನ ಪ್ರತಿಷ್ಠತ ಬ್ರಾಂಡ್‌ಗಳ ಬಟ್ಟೆ, ಕಾರು, ಎಲೆಕ್ಟ್ರಾನಿಕ್ ವಸ್ತುಗಳನ್ನಿರಿಸಿಕೊಳ್ಳುವಂತೆ ಹಳ್ಳಿಗಾಡಿನ ರೈತರು ಪ್ರಸಿದ್ಧ ತಳಿಗಳ ವಿವಿಧ ಜಾನುವಾರುಗಳನ್ನು ಅಭಿಮಾನಪೂರ್ವಕವಾಗಿ ಸಾಕುತ್ತಾರೆ. ಅದರಲ್ಲಿ ನಮ್ಮ ಕಡೆ ಹಳ್ಳಿಕಾರ್ ತಳಿಯ ಹೋರಿಗಳು ಬಹಳ ಮುಖ್ಯವಾದವು. ನಮ್ಮ ಪಕ್ಕದೂರಿನ ಜವರನಹಳ್ಳಿಯ ರಾಮಕೃಷ್ಣೇಗೌಡರು ಪರಂಪರಾಗತವಾಗಿ ಎಂಬಂತೆ ಇವುಗಳನ್ನು ಸಾಕಿ ಬೆಳೆಸುತ್ತಿದ್ದಾರೆ. ಜಾತ್ರೆಗಳನ್ನಲೆದು ಜೋಡಿ ಹುಡುಕಿ ತಂದು, ಬಿಸಿನೀರಲ್ಲಿ ಸ್ನಾನ ಮಾಡಿಸಿ, ಕೊಂಬು ಹೆರೆದು, ಷೋಡಷೋಪಚಾರ ಮಾಡಿ ಮನೆಮಕ್ಕಳಂತೆ ಸಾಕುತ್ತಾರೆ. ಎತ್ತುಗಳನ್ನು ಸಾಕುತ್ತಿರುವುದು ಸುತ್ತಲ ಹಳ್ಳಿಗಳಲ್ಲಿ ಕೌತುಕದ ಸುದ್ದಿಯಾಗಿ ಆ ಎತ್ತುಗಳು ಎಷ್ಟು ಲಕ್ಷಕ್ಕೆ ಮಾರಾಟವಾದವು ಎನ್ನುವವರೆಗೂ ಸುದ್ದಿ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಇದು ಕೃಷಿಕಾಯಕ ಅನ್ನುವುದಕ್ಕಿಂತ ಖುಷಿ ಕಾಯಕ.

ರಾಮಕೃಷ್ಣೇಗೌಡರು ಆದಿಚುಂಚನಗಿರಿ ಮಠಕ್ಕೆ ಸೇರಿದ ಮೇಲೆ ಅಧ್ಯಾತ್ಮದ ಕಡೆಗೆ ವಾಲಿ, ಹೋರಿ ಸಾಕುವುದನ್ನು ಕೈಬಿಡುತ್ತಾರೆಂದು ಊಹಿಸಿದ್ದೆ. ಆದರೆ ಅವರ ಕೊಟ್ಟಿಗೆ ತುಂಬಾ ಅದ್ಭುತವಾದ ಹಳ್ಳಿಕಾರ ದನಗಳು ಈಗಲೂ ತುಂಬಿಕೊಂಡಿವೆ. ಹೀಗೆ ಕೆಲವು ರೈತರು ಹಟಕ್ಕೆ ಬಿದ್ದು ಉಳಿಸಿಕೊಳ್ಳದಿದ್ದರೆ ಹಳ್ಳಿಕಾರ ಸಂತತಿ ಅವನತಿ ಹೊಂದಲಿದೆ. ‘ಹಳ್ಳಿಕಾರನ ಅವಸಾನ’ ಎಂಬ ಮಹತ್ವದ ಸಣ್ಣಕತೆಗಳ ಸಂಕಲನ ಇಲ್ಲಿ ನೆನಪಾಗುತ್ತಿದೆ. ಹೋರಿಚಿಕ್ಕಣ್ಣ ಎಂಬ ರೈತನ ದುರಂತವನ್ನು ಈ ಕತೆ ಮಾರ್ಮಿಕವಾಗಿ ಹೇಳುತ್ತದೆ. ಬೀಜದ ಹೋರಿ ಸಾಕಿಕೊಂಡು ವರ್ಣರಂಜಿತ ವ್ಯಕ್ತಿಯಾಗಿದ್ದ ಚಿಕ್ಕಣ್ಣ, ಇಂಜೆಕ್ಷನ್‌ನಿಂದ ಹಸುಗಳಿಗೆ ಗರ್ಭ ಕೊಡಿಸುವ ಕ್ರಮ ಬರುತ್ತಿದ್ದಂತೆ ನಿರುದ್ಯೋಗಿಯಾಗುತ್ತ, ಅಸ್ತಿತ್ವ ಕಳೆದುಕೊಳ್ಳುತ್ತ ದುರಂತದಲ್ಲಿ ಅಂತ್ಯಗೊಳ್ಳುತ್ತಾನೆ. ಈ ಕೃತಿಯ ಲೇಖಕರು ಬಿ. ಚಂದ್ರೇಗೌಡ. ಅವರಿಗೆ ದನಗಳು, ಜಾತ್ರೆಗಳು ಎಂದರೆ ಇನ್ನಿಲ್ಲದ ಪ್ರೀತಿ. ಅವರ ಕೃತಿಗಳನ್ನೂ ದನಗಳ ಜಾತ್ರೆಯಲ್ಲೇ ಬಿಡುಗಡೆ ಮಾಡುವುದುಂಟು. ತಮ್ಮ ಬಗ್ಗೆ ಕಕ್ಕುಲಾತಿಯಿಂದ ಬರೆಯುವ ಲೇಖಕನ ಭಾಷಣವನ್ನು ದನಗಳೂ ಕಿವಿ ನಿಗುರಿಸಿ, ಗಂಜಲ ಊದು, ಸಗಣಿ ಹಾಕಿ ಪ್ರೀತಿಯಿಂದ ಕೇಳಿಸಿಕೊಳ್ಳುತ್ತವೆ. ಕುಟುಂಬದ ಸದಸ್ಯರನ್ನು ನೋಡಲು ಹೋಗುವಂತೆ ದನಗಳನ್ನು ನೋಡಲು ಚಂದ್ರೇಗೌಡರು ಎಲ್ಲ ಜಾತ್ರೆಗಳಿಗೂ ಎಡತಾಕುತ್ತಿರುತ್ತಾರೆ.

ನ್ಯೂಜಿಲ್ಯಾಂಡ್‌ನಲ್ಲಿ ಜನಸಂಖ್ಯೆಯ ನಾಲ್ಕುಪಟ್ಟು ಕುರಿಗಳಿವೆ. ವಿದೇಶಗಳಲ್ಲಿ ರಾಸುಗಳನ್ನು ದೊಡ್ಡಪ್ರಮಾಣದಲ್ಲಿ ಮಾಂಸ, ಹಾಲು ಮತ್ತು ಇತರೆ ಉತ್ಪನ್ನಗಳಿಗಾಗಿ ವೈಜ್ಞಾನಿಕವಾಗಿ ಸಾಕುತ್ತಾರೆ. ಅಷ್ಟೇ ವೈಜ್ಞಾನಿಕವಾಗಿ ಕೊಲ್ಲುತ್ತಾರೆ. ನಮ್ಮಲ್ಲಿ ಎಲ್ಲವೂ ಅಪಾಯಕಾರಿ ಮತ್ತು ಭಾವನಾತ್ಮಕ. ದನ ಸಾಕಿ ಗೊತ್ತಿಲ್ಲದವರು ಗೋರಕ್ಷಣೆಯ ಭಾಷಣ ಮಾಡುತ್ತಾರೆ. ಹಸುಗಳನ್ನು ತಬ್ಬಿಕೊಂಡು ಫೋಟೊ ತೆಗೆಸಿಕೊಳ್ಳುತ್ತಾರೆ. ನಗರಗಳಲ್ಲಿನ ಕೆಲವು ಗೌಳಿಗರು ಹಾಲು ಹಿಂಡಿಕೊಂಡು ಹಸುಗಳನ್ನು ರಸ್ತೆಗೆ ಬಿಡುತ್ತಾರೆ. ಅವು ಕಸದ ತೊಟ್ಟಿಯಲ್ಲಿನ ಪ್ಲಾಸ್ಟಿಕ್ ತಿಂದು ಸಾಯುತ್ತವೆ. ಪೊಲೀಸರ, ಅಧಿಕಾರಿಗಳ, ರಾಜಕಾರಣಿಗಳ ಆಶೀರ್ವಾದದಿಂದ ಗುಟ್ಟಾಗಿ ಕಾರ್ಯನಿರ್ವಹಿಸುವ ಕಸಾಯಿಖಾನೆಗಳಲ್ಲಿ ಅವೈಜ್ಞಾನಿಕವಾಗಿ ಕ್ರೂರವಾಗಿ ದನಗಳನ್ನು ಕೊಲ್ಲಲಾಗುತ್ತದೆ. ಇತರೆ ಜಾನುವಾರುಗಳನ್ನು ದೇವರ ಹೆಸರಲ್ಲಿ, ಆಚರಣೆಗಳ ನೆಪದಲ್ಲಿ, ಹಬ್ಬ ಜಾತ್ರೆಗಳಲ್ಲಿ ಇಷ್ಟೇ ಕ್ರೂರವಾಗಿ ಕೊಲ್ಲಲಾಗುತ್ತಿದೆ. ಕೊಲ್ಲುವುದು ಸಹ ವೈಜ್ಞಾನಿಕವಾಗಿ ಮತ್ತು ಕಡಿಮೆ ಹಿಂಸೆಯಿಂದ ಕೂಡಿರಬಹುದು ಎಂದು ನಮ್ಮವರಿಗೆ ತಿಳಿದೇ ಇಲ್ಲ. ಮೂರು ಲಕ್ಷ ರೂಪಾಯಿ ಬೆಲೆಯ ಈ ಹೊಸ ಹೀರೋಗಳ ಮುಗ್ಧ ಚಿತ್ರವನ್ನು ನೋಡುತ್ತಿದ್ದಾಗ ಇಷ್ಟೆಲ್ಲ ನೆನಪಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.