ADVERTISEMENT

ಇಎಂಐ ಕಡಿಮೆ ಆಗದೇ?

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2015, 19:30 IST
Last Updated 3 ಫೆಬ್ರುವರಿ 2015, 19:30 IST

ಬಡ್ಡಿದರವೇನೋ ತಗ್ಗಿತು, ಆದರೆ ಗೃಹಸಾಲ ಮತ್ತು ಕಾರು ಖರೀದಿ ಸಾಲದ ಸಮಾನ ಮಾಸಿಕ ಕಂತು ಇಎಂಐ ಇಳಿಕೆ ಆಗಲಿಲ್ಲವಲ್ಲ!
ನಿರೀಕ್ಷೆ ಹುಸಿಯಾಗಿದೆ. ಗೃಹಸಾಲ ಮತ್ತು ಕಾರು ಖರೀದಿ ಸಾಲದ ಬಡ್ಡಿ ಕಡಿಮೆ ಆಗಲಿದೆ. ಈ ಮೊದಲೇ ಫ್ಲೋಟಿಂಗ್‌ ರೇಟ್‌ನಲ್ಲಿ (ಬದಲಾಗುವ ಬಡ್ಡಿದರ ಆಯ್ಕೆಯಲ್ಲಿ) ಸಾಲ ಪಡೆದವರು ಕಟ್ಟುತ್ತಿರುವ ಇಎಂಐ (ಸಮಾನ ಮಾಸಿಕ ಕಂತು) ಪ್ರಮಾಣವೂ ತಗ್ಗಲಿದೆ ಎಂದು ಬಹಳಷ್ಟು ಮಂದಿ ನಿರೀಕ್ಷಿಸಿದ್ದರು.

ಆದರೆ, ಒಂದೆರಡು ಬ್ಯಾಂಕ್‌ಗಳು ಮಾತ್ರವೇ ಸಾಲ ಮತ್ತು ಠೇವಣಿಯ ಬಡ್ಡಿದರವನ್ನು ತಗ್ಗಿಸಿವೆ. ಕೆಲವು ಬ್ಯಾಂಕ್‌ಗಳು ಠೇವಣಿ ಬಡ್ಡಿಯನ್ನಷ್ಟೇ ಕಡಿಮೆ ಮಾಡಿವೆ. ಸಾಲಗಳ ಮೇಲಿನ ಬಡ್ಡಿದರ ತಗ್ಗಿಸದೇ ಜಾಣ ಮೌನ ತಾಳಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಡ್ಡಿದರದಲ್ಲಿ ಶೇ 0.25ರಷ್ಟು  ಕಡಿತ ಮಾಡಿತ್ತು. ಇದರಿಂದ ಗೃಹ ಮತ್ತು ವಾಹನ ಸಾಲಗಳು ಅಗ್ಗವಾಗಲಿವೆ. ಸಾಲದ ಕಂತು (ಇಎಂಐ) ಸಹ ಕಡಿಮೆ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆರ್‌ಇಐ ಬಡ್ಡಿದರ ಕಡಿಮೆ ಘೋಷಿಸಿದ ಬೆನ್ನಿಗೇ ಬಡ್ಡಿದರ ಕಡಿತ ಮಾಡಬೇಕು ಎಂದು ರಿಯಲ್‌ ಎಸ್ಟೇಟ್ ಅಭಿವೃದ್ಧಿಯ ಉದ್ಯಮ ವಲಯವೂ ಸರ್ಕಾರದ ಗಮನ ಸೆಳೆಯುತ್ತಲೆ ಇತ್ತು.

ಆರ್‌ಬಿಐ, ಬಡ್ಡಿದರ ಕಡಿತ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯ, ಸಾಲದ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ತಗ್ಗಿಸಿತು. ಯುನೈಟೆಡ್‌ ಬ್ಯಾಂಕಿನ ಸಾಲದ ಮೇಲಿನ ಬಡ್ಡಿದರ ಶೇ 10.25ರಷ್ಟಿದ್ದುದು ಈಗ ಶೇ 10ಕ್ಕೆ ಇಳಿಯಿತು. ಇದರಿಂದ ಆ ಬ್ಯಾಂಕ್‌ನ ಗೃಹಸಾಲ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಸಮಾನ ಮಾಸಿಕ ಕಂತು (ಇಎಂಐ) ಕಡಿಮೆಯಾದವು. ಆರ್‌ಬಿಐ ನೀಡಿದ ಬಡ್ಡಿ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ದಾಟಿಸುವುದಾಗಿ ಘೋಷಿಸಿದ ಯೂನಿಯನ್ ಬ್ಯಾಂಕ್‌ ಆಫ್ ಇಂಡಿಯಾ ಸಹ, ಸಾಲ ಮತ್ತು ಠೇವಣಿ ಬಡ್ಡಿದರವನ್ನು ತಗ್ಗಿಸಿದೆ.

ವಿಜಯ ಬ್ಯಾಂಕ್‌ ಠೇವಣಿಗಳ ಮೇಲಿನ ಬಡ್ಡಿದರವನ್ನಷ್ಟೇ ಕಡಿಮೆ ಮಾಡಿದೆ. ಆದರೆ, ಸಾಲಗಳ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಕರ್ನಾಟಕದ್ದೇ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು( ಎಸ್‌ಬಿಎಂ)  ತಕ್ಷಣಕ್ಕೆ ಬಡ್ಡಿದರ ಕಡಿತ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ. ಒಟ್ಟಿನಲ್ಲಿ ಸದ್ಯ ಚಾಲ್ತಿಯಲ್ಲಿರುವ  4ನೇ ತ್ರೈಮಾಸಿಕದಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಂಡು ಬಡ್ಡಿದರ ಕಡಿತ ವಿಚಾರ ಪ್ರಕಟಿಸಲಾಗುವುದು ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಶರದ್‌ ಶರ್ಮಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಟ್ಟ ಉಳಿದ ಬ್ಯಾಂಕ್‌ಗಳು  ಈ ವಿಚಾರವಾಗಿ ಜ. 25ರವರೆಗೂ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.

ಇದು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ರಿಯಲ್‌ ಎಸ್ಟೇಟ್‌ ಉದ್ಯಮವನ್ನು ಗೊಂದಲದಲ್ಲಿ ಕೆಡವಿದೆ. ಬಡ್ಡಿದರ ತಗ್ಗಿದರೆ ಗ್ರಾಹಕರು ಮನೆಗಳ ಖರೀದಿಗೆ ಮುಂದಾಗಲಿದ್ದಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ರಿಯಲ್ ಎಸ್ಟೇಟ್‌ ಕಂಪೆನಿಗಳು ನಿರಾಶೆಗೆ ಒಳಗಾಗುವಂತೆ ಮಾಡಿದೆ. ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದವರೂ ಸಹ ಆರ್‌ಬಿಐ ಬಡ್ಡಿದರವನ್ನು ಶೇ 0.25ರಷ್ಟು ಕಡಿತ ಮಾಡುತ್ತಿದ್ದಂತೆಯೇ ಖುಷಿಯಾಗಿದ್ದರು. ಗೃಹಸಾಲದ ಬಡ್ಡಿದರವೂ ಶೇ 0.25ರಷ್ಟು ತಗ್ಗುತ್ತದೆ. ಇದು ಬಹಳ ಅಲ್ಪ ಪ್ರಮಾಣದ್ದೇ ಆಗಿದ್ದರೂ 25- 30 ವರ್ಷಗಳ ದೀರ್ಘಾವಧಿ ಲೆಕ್ಕದಲ್ಲಿ ಗಣನೀಯ ಪ್ರಮಾಣದಷ್ಟು ದೊಡ್ಡ ಮೊತ್ತವೇ ಆಗಿರುತ್ತದೆ ಎಂದು ಅಂದಾಜು ಮಾಡಿಕೊಂಡಿದ್ದರು.

25 ವರ್ಷಗಳ ಅವಧಿಗೆ ಶೇ 10.25ರ ಬಡ್ಡಿದರಲ್ಲಿ ₨25 ಲಕ್ಷ ಗೃಹಸಾಲ ಪಡೆದರೆ ₨23,160 ಸಮಾನ ಮಾಸಿಕ ಕಂತು (ಇಎಂಐ) ಬರುತ್ತದೆ. ಬಡ್ಡಿದರ ಕಡಿಮೆಯಾದರೆ ಅಂದರೆ, ಶೇ 10ಕ್ಕೆ ಇಳಿದರೆ ಇಎಂಐ ₨22,718ಕ್ಕೆ ತಗ್ಗುತ್ತದೆ. ಬಡ್ಡಿ ಪಾವತಿಯಲ್ಲಿ ಅವಧಿ ಕೊನೆಗೆ ಏನಿಲ್ಲವೆಂದರೂ ₨11050 ಉಳಿತಾಯವಾಗುತ್ತದೆ. ಹಾಗಾಗಿ, ಗೃಹಸಾಲ ಪಡೆಯಲು ಬಯಸುವವರು ಬ್ಯಾಂಕ್‌ಗಳು ಯಾವಾಗ ಬಡ್ಡಿದರ ತಗ್ಗಿಸುತ್ತವೆಯೋ ಎಂಬ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.