ADVERTISEMENT

ಉಳ್ಳವರ ಆಸಕ್ತಿಯ ಆಯ್ಕೆ: ‘ಮುಕುಟ ಮನೆ’

ಸುಚೇತನಾ ನಾಯ್ಕ
Published 4 ನವೆಂಬರ್ 2014, 19:30 IST
Last Updated 4 ನವೆಂಬರ್ 2014, 19:30 IST
ಉಳ್ಳವರ ಆಸಕ್ತಿಯ ಆಯ್ಕೆ: ‘ಮುಕುಟ ಮನೆ’
ಉಳ್ಳವರ ಆಸಕ್ತಿಯ ಆಯ್ಕೆ: ‘ಮುಕುಟ ಮನೆ’   

ಈ ಮನೆ ಆ ಬೃಹತ್‌ ಕಟ್ಟಡದಲ್ಲಿನ ಎಲ್ಲ ಮನೆಗಳಿಗಿಂತಲೂ ಬಹಳ ಚಿಕ್ಕದು. ಇದರ ಜಾಗ 20- 30 ಮನೆಗಳಿಂದ ಕೂಡಿದ ಅಪಾರ್ಟ್‌ಮೆಂಟ್‌ಗಳ ತುತ್ತತುದಿ. ಒಂದರ್ಥದಲ್ಲಿ, ಇದು ಅಪಾರ್ಟ್‌ಮೆಂಟ್‌ನ ಮುಕುಟ.

ಮುಕುಟ ಎಂದ ಮೇಲೆ ಕೇಳಬೇಕೆ? ಗಾತ್ರದಲ್ಲಿ ಚಿಕ್ಕದಾದರೂ ಕೆಳಗೆ ಇರುವ ಎಲ್ಲ ಮನೆಗಳ ಬೆಲೆಯನ್ನು ಹಿಂದಿಕ್ಕಿ ‘ಅಬ್ಬಬ್ಬಾ’ ಎನ್ನುವಷ್ಟು ಇದು ದುಬಾರಿ. ಮೇಲೆ ಹೋದಷ್ಟೂ ಇದರ ಬೆಲೆ ಏರುತ್ತಲೇ ಹೋಗುತ್ತದೆ.

ಈ ‘ಮುಕುಟ ಮನೆ’ಯ ಹೆಸರೇ ಪೆಂಟ್‌ಹೌಸ್‌. ಅಪಾರ್ಟ್‌ಮೆಂಟ್‌ಗಳ ಮೇಲುಗಡೆ ಎರಡು ಅಥವಾ ನಾಲ್ಕೂ ಬದಿಗಳಲ್ಲಿ ಸೆಟ್‌ ಬ್ಯಾಕ್ ಬಿಟ್ಟು ಇದನ್ನು ನಿರ್ಮಿಸಲಾಗುವುದು. ಇದೇ ಕಾರಣಕ್ಕೆ ಉಳಿದ ಮನೆಗಳಿಗಿಂತ ಇದು ಭಿನ್ನ. ಸದ್ಯ ಮಹಾನಗರಗಳಲ್ಲಿ ಮಹಾಸ್ಥಾನ ಪಡೆದುಕೊಳ್ಳುತ್ತಿದೆ ಇದು. ಎಲ್ಲ ಅಪಾರ್ಟ್‌ಮೆಂಟ್‌ಗಳಿಗಿಂತ ಭಿನ್ನವಾಗಿರುವ ಈ ‘ಮನೆ’ ಈಗ ಬಿಲ್ಡರ್‌ಗಳ ಕೇಂದ್ರಬಿಂದುವಾಗಿಯೂ, ಕಾಲಕ್ಕೆ ತಕ್ಕಂತೆ ಐಷಾರಾಮಿ ಸೌಲಭ್ಯಗಳಿಂದ ಉಳ್ಳವರ ಆಕರ್ಷಕ ತಾಣವಾಗಿಯೂ ಹೊರಹೊಮ್ಮುತ್ತಿದೆ.

ದುಬಾರಿ ಬೆಲೆಯ ಸಾಮಗ್ರಿಗಳಿಂದ ನಳನಳಿಸುವ ಈ ಮನೆಗೆ ಈಗ ಭಾರಿ ಬೇಡಿಕೆ. ತುತ್ತ ತುದಿಯಿಂದ ಇಡೀ ನಗರದ ಚಿತ್ರಣವನ್ನು ತೆರೆದಿಡುವ ಕಾರಣಕ್ಕೂ ಇದಕ್ಕೆ ಡಿಮಾಂಡ್‌ ಹೆಚ್ಚಿದೆ. ದುಬಾರಿಯಾದರೂ ಇದರ ಪ್ರಯೋಜನ ಅರಿತಿರುವ ಹಣವಂತರು ಇದನ್ನೇ ಖರೀದಿಸಲು ಮುಂದಾಗುತ್ತಿದ್ದರೆ, ಹೊಸದಾಗಿ ಅಪಾರ್ಟ್‌ಮೆಂಟ್‌ ನಿರ್ಮಿಸಲು ಹೊರಟಿರುವವರು ಇದಕ್ಕೊಂದು ಜಾಗ ಮೀಸಲು ಇಡುತ್ತಿದ್ದಾರೆ. ಎರಡು ಮೂರು ಮಹಡಿಗಳ ಮನೆ ಇರುವವರೂ ಈಗ ಮೇಲೊಂದು ಪೆಂಟ್‌ಹೌಸ್‌ ನಿರ್ಮಿಸಿಕೊಳ್ಳುತ್ತಿರುವುದು ಇದರ ಆಕರ್ಷಣೆ ಎಂಬುದಕ್ಕೆ ಸಾಕ್ಷಿ.

ಏನಿದರ ಮಹತ್ವ?
ನಗರ ಪ್ರದೇಶಗಳಲ್ಲೀಗ ಸಂದಿಗೊಂದಿಗಳಲ್ಲೂ ಅಪಾರ್ಟ್‌ಮೆಂಟ್‌ ತಲೆ ಎತ್ತಿ ನಿಂತಿವೆ. ಇದರ ಮಧ್ಯೆ ಮನೆಯ ಮುಂದೆ ಕೈತೋಟ ಮಾಡುವುದು ಕನಸಿನ ಮಾತೇ ಸರಿ. ಒಂದು ಮನೆಗೆ ತಾಗಿಕೊಂಡೇ ಇನ್ನೊಂದು ಮನೆ ಇರುವ ಕಾರಣ ಮನೆ ಮುಂದೆ ಜಾಗವೇ ಸಿಗುವುದಿಲ್ಲ. ಜಾಗ ಇದ್ದರೂ, ಒಂದು ಚದರ ಅಡಿಗೆ ಸಾವಿರಾರು ರೂಪಾಯಿ ತೆತ್ತು ನಿವೇಶನ ಕೊಂಡಿರುವಾಗ, ಅಲ್ಲಿ ಮನೆ ಕಟ್ಟುವುದು ಬಿಟ್ಟು ಗಿಡ, ಮರ ಅಂತೆಲ್ಲ ಬೆಳೆಸುವುದು ಏಕೆ ಎಂಬ ಯೋಚನೆ ಬರುವುದು ಸಹಜ. ಒಂದಿಷ್ಟು ಜಾಗ ಇದ್ದರೆ ಅಲ್ಲೊಂದು ಚಿಕ್ಕ ಮನೆ ಕಟ್ಟಿ ಬಾಡಿಗೆ ಕೊಟ್ಟರೆ ಹೇಗೆ? ಎಂಬ ಯೋಚನೆ ಇನ್ನೊಂದೆಡೆ. ಇನ್ನು ಅಪಾರ್ಟ್‌ಮೆಂಟ್‌ ಆದರಂತೂ ಕೇಳುವುದೇ ಬೇಡ. ತಾರಸಿಯ ಮೇಲೆ ಕುಂಡದಲ್ಲಿ ಇಷ್ಟದ ಗಿಡ ಬೆಳೆಸಲು ಜಾಗ ಸಿಕ್ಕರೆ ಅದೇ ದೊಡ್ಡ ಮಾತು.

ಇನ್ನು ಗಾಳಿ, ಬೆಳಕಿನ ಮಾತೆ? ಇತ್ತ ಬದಿಯ ಕಿಟಕಿ ಪಕ್ಕದ ಮನೆಯ ಕೋಣೆಯನ್ನು ಇಣುಕಿ ಹಾಕುತ್ತಿದ್ದರೆ, ಅತ್ತ ಇರುವ ಕಿಟಕಿ ಪಕ್ಕದ ಮನೆಯ ಗೋಡೆಗೆ ತಾಗಿರುತ್ತದೆ. ಮನೆಯ ಮುಂಬಾಗಿಲು ತೆರೆದರೆ ಎದುರು ಮನೆಯ ಕಟ್ಟಡ ಕಾಣಿಸುತ್ತದೆ. ಮನೆ ಬಿಟ್ಟು ರಸ್ತೆಯ ಮೇಲೆ ಬಂದರೇನೇ ಸೂರ್ಯನ ಮುಖ ಕಾಣಲು ಸಾಧ್ಯ. ಎಷ್ಟೋ ಮನೆಗಳಲ್ಲಿ ವಾಸಿಸುವವರಿಗೆ ಈ ಭಾಗ್ಯವೂ ಇಲ್ಲ!

ಇಂಥ ಎಲ್ಲ ಸಮಸ್ಯೆಗಳಿಗೆ ‘ಗುಡ್‌ಬೈ’ ಹೇಳಲು ರೂಪುಗೊಂಡಿರುವುದೇ ಪೆಂಟ್‌ಹೌಸ್. ಅಂದರೆ ನಗರ ಪ್ರದೇಶದಲ್ಲಿ ಇದ್ದುಕೊಂಡೂ ಗಾಳಿ ಬೆಳಕು ಚೆನ್ನಾಗಿ ಬೇಕು. ದೂಳು, ಕಶ್ಮಲ ಯಾವುದೂ ಬೇಡ ಎಂದುಕೊಳ್ಳುವವರಿಗಾಗಿಯೇ ಇದೆ ಇದು.

ತುತ್ತತುದಿಯಲ್ಲಿ ಈ ‘ಮನೆ’ ನಿರ್ಮಾಣ ಆಗುವ ಕಾರಣ, ಗಾಳಿ- ಬೆಳಕಿಗೆ ಇಲ್ಲಿ ಪ್ರಾಧಾನ್ಯ ಸಿಗುತ್ತದೆ.  ಇಂತಿಷ್ಟೇ ಸೆಟ್‌ಬ್ಯಾಕ್‌ ಜಾಗ ಬಿಡಬೇಕು ಎಂದು ನಿಯಮವಿದ್ದರೂ ಬಹಳ ಅಪಾರ್ಟ್‌ಮೆಂಟ್‌ಗಳಲ್ಲಿ ಈ ನಿಯಮ ಪಾಲನೆ ತುಸು ಕಷ್ಟವೇ. ಆದರೆ ಪೆಂಟ್‌ಹೌಸ್‌ ವಿಷಯ ಹಾಗಲ್ಲ. ಇಲ್ಲಿ ಸೆಟ್‌ಬ್ಯಾಕ್‌ಗಳೂ ಇದ್ದೇ ಇರುತ್ತದೆ. ಅದಕ್ಕಾಗಿಯೇ ಬೇಕಾದಷ್ಟು ಅನುಕೂಲ ಕಲ್ಪಿಸಿಕೊಳ್ಳಲೂ ಜಾಗ ಸಿಗುತ್ತದೆ. ಇಷ್ಟೆಲ್ಲ ಸೌಲಭ್ಯ ಸಿಗುವಾಗ ಒಂದಿಷ್ಟು ಹೆಚ್ಚು ಹಣ ಕೊಟ್ಟರೇನು.

ಅದೇನೂ ವ್ಯರ್ಥವಲ್ಲ ಎಂದು ಯೋಚಿಸುವವರಗೂ ಕೊರತೆ ಇಲ್ಲ. ಇನ್ನು, ಸ್ವಂತಕ್ಕಾಗಿ ಪೆಂಟ್‌ಹೌಸ್‌ ನಿರ್ಮಾಣ ಮಾಡಿಕೊಳ್ಳುವವರು ಈ ಮನೆಯ ಮೇಲೆಯೇ ಮಹಡಿ ನಿರ್ಮಿಸಿ ಡ್ಯೂಪ್ಲೆಕ್ಸ್‌ ಮನೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಬೇಕಾಗಿರುವ ಸೌಲಭ್ಯಗಳ ಜೊತೆಜೊತೆಗೇ ಈಜುಕೊಳಕ್ಕೂ ಇಲ್ಲಿ ಅವಕಾಶ ಸಿಗುತ್ತದೆ!

ಪೆಂಟ್‌ಹೌಸ್‌ ಮೂಲ ನ್ಯೂಯಾರ್ಕ್
ಅಂದ ಹಾಗೆ, ಪೆಂಟ್‌ಹೌಸ್‌ ಇಂದು, ನಿನ್ನೆ ಬಂದ ಕಲ್ಪನೆಯಲ್ಲ. 1920ರ ದಶಕದಲ್ಲಿ ಇದು ಮೊದಲು ಹುಟ್ಟು ಪಡೆದದ್ದು ಅಪಾರ್ಟ್‌ಮೆಂಟ್‌ ನಗರಿ ಎಂದೇ ಪ್ರಸಿದ್ಧಿಯಾಗಿರುವ ಅಮೆರಿಕದ ನ್ಯೂಯಾರ್ಕ್‌ನಲ್ಲಿ. ಆಗ ಅದಕ್ಕಿದ್ದ ಹೆಸರು ‘ದಿ ರೋರಿಂಗ್‌ ಟ್ವೆಂಟೀಸ್‌’!

ಅಪಾರ್ಟ್‌ಮೆಂಟ್‌ ಕೆಳಭಾಗದಲ್ಲೆಲ್ಲ ಜಾಗ ಇಲ್ಲದ್ದನ್ನು ನೋಡಿ, ತುತ್ತ ತುದಿಯಲ್ಲಿ ಇಂಥದ್ದೊಂದು ಕಟ್ಟಡ ನಿರ್ಮಾಣ ಮಾಡುವ ಯೋಚನೆ ಬಂದು ಅಲ್ಲಿ ಇದನ್ನು ಆರಂಭಿಸಲಾಯಿತು.

ಕೆಳಭಾಗದಲ್ಲಿ ಎಲ್ಲೂ ಇಲ್ಲದ ರೀತಿಯಲ್ಲಿ ನಾಲ್ಕೂ ಕಡೆ ಸೆಟ್‌ಬ್ಯಾಕ್‌ ಬಿಟ್ಟು ಇದನ್ನು ನಿರ್ಮಿಸಲಾಯಿತು, 20 ಮಹಡಿ ಅಪಾರ್ಟ್‌ಮೆಂಟ್‌ ಇರುವಾಗ 21ನೇ ಮಹಡಿಯಲ್ಲಿ ಈ ಮನೆ ಇದ್ದರೆ ಅದಕ್ಕೂ, ಇದಕ್ಕೂ ವ್ಯತ್ಯಾಸ ಏನು ಎಂದುಕೊಂಡ ಬಿಲ್ಡರ್‌ಗಳು ಇದಕ್ಕೊಂದು ಹೊಸ ರೂಪ ನೀಡುವ ಪ್ರಯತ್ನದಲ್ಲಿ ತೊಡಗಿದರು. ಕೆಳಭಾಗದಲ್ಲಿ ಇರುವ ಎಲ್ಲ ಮನೆಗಳಿಗಿಂತ ಭಿನ್ನವಾಗಿ ಇದರ ಒಳಾಂಗಣ ವಿನ್ಯಾಸ ಮಾಡಿದರು. ದುಬಾರಿಯಾಗಿರುವ ಸಾಮಗ್ರಿಗಳು ಮನೆ ಸೇರಿದವು. ಅಲ್ಲಿಯೇ ಈಜುಕೊಳ ನಿರ್ಮಿಸಿದರು. ಹೀಗೆ ತಮಗೆ ಅನಿಸಿದ ಒಂದೊಂದು ರೂಪು ನೀಡುತ್ತಾ ಹೋದರು. ಇದಕ್ಕೆ ಅಲಂಕಾರ ಹೆಚ್ಚಾದಂತೆ ಬೇಡಿಕೆ ಹೆಚ್ಚಿತು, ಬೆಲೆ ದುಪ್ಪಟ್ಟು-, ಮೂರು ಪಟ್ಟು ಹೆಚ್ಚಿತು.

ಈ ಪೆಂಟ್‌ ಹೌಸ್‌ ಮೋಹ ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಅಲ್ಲಿರುವ ಸಿರಿವಂತರೆಲ್ಲ ತಮಗೆ ಇದೇ ಮನೆ ಬೇಕೆಂದು ಪಟ್ಟು ಹಿಡಿಯತೊಡಗಿದರು. ಹೀಗೆ ಅಲ್ಲಿಂದ ಆರಂಭಗೊಂಡ ಈ ’ರೋರಿಂಗ್‌ ಟ್ವೆಂಟೀಸ್‌’, ಪೆಂಟ್‌ಹೌಸ್‌ ಹೆಸರಿನಲ್ಲಿ ಜಗತ್ಪ್ರಸಿದ್ಧಿ ಹೊಂದಿದೆ.

ಕೊಳ್ಳುವಾಗ ಹುಷಾರು
ಪೆಂಟ್‌ಹೌಸ್‌ ನಿರ್ಮಾಣದ ಹಿಂದೆ ಕೆಲವು ಕಟ್ಟಡ ಮಾಲೀಕರ ಚಾಲಾಕಿತನವೂ ಇದೆ. ಇಂತಿಷ್ಟೇ ಮಹಡಿಯ ಮನೆ ಕಟ್ಟಬೇಕು ಎಂದು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ನಿಯಮ ಇರುತ್ತದೆ. ಒಂದು ಪ್ರದೇಶದಲ್ಲಿ ಮೂರು ಮಹಡಿಯ ಮನೆ ಕಟ್ಟಬೇಕು ಎಂದು ನಿಯಮ ಇದೆ ಎಂದಿಟ್ಟುಕೊಳ್ಳಿ. ಆಗ ಮನೆಯ ಮಾಲೀಕರು ಮೂರು ಮಹಡಿಯ ಜೊತೆ ಒಂದು ಸ್ಟೋರ್‌ ರೂಂಗೆ ಅನುಮತಿ ಪಡೆದುಕೊಳ್ಳುತ್ತಾರೆ. ಮೂರು ಮಹಡಿಯೇನೋ ಕಟ್ಟುತ್ತಾರೆ. ಆದರೆ ಸ್ಟೋರ್‌ ರೂಂ ಜಾಗದಲ್ಲಿ ಪೆಂಟ್‌ಹೌಸ್‌ ನಿರ್ಮಾಣವಾಗುತ್ತದೆ!

ಕಾಗದ ಪತ್ರದಲ್ಲಿ ಅದು ಸ್ಟೋರ್‌ ರೂಂ. ಆದರೆ ನಿಜವಾಗಿ ಅದು ಪೆಂಟ್‌ಹೌಸ್‌. ಈ ರೀತಿಯಾಗಿ ಕಾನೂನು ಬಾಹಿರವಾಗಿ ಪೆಂಟ್‌ಹೌಸ್‌ಗಳೂ ಸಾಕಷ್ಟು ಕಾಣಬರುತ್ತವೆ. ಆದ್ದರಿಂದ ಪೆಂಟ್‌ಹೌಸ್‌ ಖರೀದಿ ಮಾಡುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಇದನ್ನು ಕಾನೂನುಬದ್ಧವಾಗಿ ನಿರ್ಮಿಸಲಾಗಿದೆಯೇ ಅಥವಾ ಇದರಲ್ಲಿ ಗೋಲ್‌ಮಾಲ್‌ ಇದೆಯೇ ಎಂಬುದನ್ನು ಮೊದಲು ಪರಿಶೀಲನೆ ಮಾಡಿ ಖಾತರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ, ಯಾರಾದರೂ ದೂರು ದಾಖಲಿಸಿದರೆ, ಈ ‘ಕನಸಿನ ಮನೆ’ಯನ್ನು ಕೆಡುವಬೇಕಾದ ಸಂದರ್ಭಗಳೂ ಬರಬಹುದು. ಇಂತಹ ಅನೇಕ ಘಟನೆಗಳು ಈಗಾಗಲೇ ನಡೆದಿರುವುದೂ ಇದೆ.

ಯೋಚಿಸಿ ಹೆಜ್ಜೆ ಇಡಿ
ಸ್ವಂತ ಅಪಾರ್ಟ್‌ಮೆಂಟ್‌ ಇದ್ದು, ಅಲ್ಲಿ ಪೆಂಟ್‌ಹೌಸ್‌ ನಿರ್ಮಿಸಿಕೊಳ್ಳುವ ಯೋಚನೆ ಇದ್ದರೆ, ಮೊದಲು ತಜ್ಞರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ. ಏಕೆಂದರೆ ಮೊದಲೇ ಹೇಳಿದಂತೆ ಇದು ಅಪಾರ್ಟ್‌ಮೆಂಟ್‌ಗಳ ತುತ್ತ ತುದಿಯಲ್ಲಿ ಇರುವ ಮನೆ. ಆದ್ದರಿಂದ ಇಂಥದ್ದೊಂದು ಮನೆಯ ಭಾರವನ್ನು ಹೊರವಷ್ಟು ತಾಕತ್ತು ಕೆಳಗಿರುವ ಮನೆಗೆ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ ಎನ್ನುವುದು ತಜ್ಞ ಆರ್ಕಿಟೆಕ್ಟ್‌ಗಳ ಕಿವಿಮಾತು.

‘ಸಾಮಾನ್ಯವಾಗಿ ನೀರಿನ ಟ್ಯಾಂಕ್‌ ಮನೆಯ ಮೇಲೆ ಇಡುತ್ತೇವೆ. ಅಲ್ಲಿ ಮನೆ ಕಟ್ಟಿಕೊಂಡರೆ ಟ್ಯಾಂಕ್‌ ಎಲ್ಲಿಡುವುದು ಎಂದು ನನ್ನ ಬಳಿ ಅನೇಕ ಮಂದಿ ಪ್ರಶ್ನೆ ಕೇಳುತ್ತಾರೆ. ಆದರೆ ಇದೊಂದು ಸಮಸ್ಯೆಯೇ ಅಲ್ಲ. ಏಕೆಂದರೆ ಮಹಡಿಯ ಮೇಲೆ ಪೆಂಟ್‌ಹೌಸ್‌ ನಿರ್ಮಾಣ ಮಾಡಿ ಅದನ್ನು ಮಾರಿಯೋ, ಬಾಡಿಗೆ ಕೊಟ್ಟೋ ಹೆಚ್ಚು ಹಣ ಪಡೆಯುವ ಸಾಧ್ಯತೆ ಇರುವಾಗ ಅಲ್ಲಿ ನೀರಿನ ಟ್ಯಾಂಕ್‌ ಇಟ್ಟು ನಷ್ಟ ಮಾಡಿಕೊಳ್ಳುವುದಿಲ್ಲ. ಈಗ ನೆಲಮಟ್ಟಕ್ಕಿಂತ ಕೆಳಗೆ ಸಂಪ್‌ ಟ್ಯಾಂಕ್‌ಗಳನ್ನೇ ಕಟ್ಟುವುದು ರೂಢಿ. ಆದ್ದರಿಂದ ಟ್ಯಾಂಕ್‌ ಯೋಚನೆ ಬಿಟ್ಟು ಮನೆ ಕಟ್ಟುವ ಯೋಚನೆ ಮಾಡಿದರೆ ಉತ್ತಮ’ ಎನ್ನುವುದು ಆರ್ಕಿಟೆಕ್ಟ್‌ ದಿನೇಶ್‌ ಅವರ ಸಲಹೆ.

ಒಟ್ಟಿನಲ್ಲಿ ಸಾಕಷ್ಟು ಅನುಕೂಲ ಇರುವ ಈ ‘ಪೆಂಟ್‌ಹೌಸ್‌’ ಅನ್ನು ಕಾಸಿದ್ದರೆ ಕೊಳ್ಳಬಹುದು, ಇಲ್ಲವೇ ಇರುವ ಅಪಾರ್ಟ್‌ಮೆಂಟ್‌ನಲ್ಲಿಯೇ ಕಟ್ಟಿಸಿ ಆನಂದಿಸಬಹುದು.

ನೇರ ಲಿಫ್ಟ್ ಸೌಕರ್ಯ

ದುಬೈನಲ್ಲಿ ಪೆಂಟ್‌ಹೌಸನ್ನು ಸಾಮಾನ್ಯವಾಗಿ 20 ಮಹಡಿಗಳಿಗಿಂತ ಹೆಚ್ಚಿಗೆ ಮಹಡಿ ಇರುವ ಅಪಾರ್ಟ್‌ಮೆಂಟ್‌ಗಳಲ್ಲಿ ಮಾತ್ರ ಕಟ್ಟಲಾಗುತ್ತದೆ. ಏಕೆಂದರೆ ಇಲ್ಲಿ ಸಾಮಾನ್ಯವಾಗಿ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿ 20 ಮಹಡಿ ಇದ್ದೇ ಇರುತ್ತದೆ.

ಲಿಫ್ಟ್ ಸೌಲಭ್ಯ ಕೂಡ ನೇರವಾಗಿ ನೆಲಮಹಡಿಯಿಂದ ಪೆಂಟ್‌ಹೌಸ್‌ಗೆ ಕಲ್ಪಿಸಲಾಗುತ್ತದೆ. ಮಹಡಿ ಎಷ್ಟೇ ಇದ್ದರೂ ಲಿಫ್ಟ್‌ ನಡುವೆ ನಿಲ್ಲುವುದಿಲ್ಲ. ಅಷ್ಟರಮಟ್ಟಿಗೆ ಇದಕ್ಕೆ ವಿಶೇಷ ಸೌಕರ್ಯಗಳು ದುಬೈನಲ್ಲಿ ಕಾಣಬಹುದು. ಹಾಗೆನೇ ಹೊರಗಡೆಯಿಂದ ಒಂದೇ ಮನೆ ರೀತಿ ಕಂಡರೂ ಡ್ಯೂಪ್ಲೆಕ್ಸ್‌ ಮನೆಗಳು ಇಲ್ಲಿಯ ಪೆಂಟ್‌ಹೌಸ್‌ನಲ್ಲಿ ಹೆಚ್ಚು. ನಾಲ್ಕು ಮನೆಗಳನ್ನೂ ಕಟ್ಟಿಕೊಳ್ಳುವವರು ಇಲ್ಲಿದ್ದಾರೆ. ಇಷ್ಟೆಲ್ಲ ಸೌಲಭ್ಯ ಇರುವ ಕಾರಣದಿಂದಲೇ ಇದಕ್ಕೆ ಚದರ ಅಡಿಗೆ ನಾಲ್ಕೈದು ಪಟ್ಟು ಹೆಚ್ಚಿನ ದರ. ಮಹಡಿ ಹೆಚ್ಚಿದಂತೆ ದರವೂ ಅಷ್ಟೇ ಹೆಚ್ಚು.
ಮೊಹಮ್ಮದ್‌ ಮಸ್ತಫಾ, ಎಂಸ್ಕ್ವೇರ್‌ ಕನ್ಸಲ್ಟೆಂಟ್‌, ದುಬೈ

‘ಅರಮನೆಯ ಅಂತಃಪುರ’

ಇದನ್ನು ಅರಮನೆಯಲ್ಲಿ ರಾಣಿಯರು ವಾಸಿಸುವ ಅಂತಃಪುರ ಎಂದೇ ಹೇಳಬಹುದು. ಏಕೆಂದರೆ ಅಂತಃಪುರ ಸಾಮಾನ್ಯವಾಗಿ ಅರಮನೆಯ ಮೇಲುಗಡೆ ಕಟ್ಟಲಾಗುತ್ತಿತ್ತು. ಇದು ಕೂಡ ಅಷ್ಟೇ ರಾಜಭೋಗದಿಂದ ಕೂಡಿರುತ್ತದೆ.

ತಂಪಾಗಿರುವ ವಾತಾವರಣದ ಜೊತೆಗೆ ಗೌಜಿ, ಗಲಾಟೆಯಿಂದ ದೂರ ಉಳಿಯಬೇಕೆನ್ನುವವರಿಗೆ ಇದು ಹೇಳಿ ಮಾಡಿಸಿದ ಜಾಗ. ಇದರಿಂದಾಗಿಯೇ ಪೆಂಟ್‌ಹೌಸ್‌ಗೆ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆ ಹೆಚ್ಚಿದಂತೆಲ್ಲ ಇಲ್ಲಿ ದುಬಾರಿ ಬೆಲೆಯ ನಿರ್ಮಾಣ ಸಾಮಗ್ರಿಗಳನ್ನೇ ಬಳಸಲಾಗುತ್ತಿದೆ.

ಅನುಕೂಲಕ್ಕೆ ತಕ್ಕಂತೆ, ಖರ್ಚು ಮಾಡುವ ತಾಕತ್ತಿಗೆ ಅನುಗುಣವಾಗಿ ಮನೆಯ ವಿನ್ಯಾಸದಲ್ಲಿಯೂ ಸಾಕಷ್ಟು ನವೀನ ಸೌಕರ್ಯಗಳನ್ನು ಅಳವಡಿಸಿಕೊಳ್ಳಬಹುದು. ಐಷಾರಾಮಿಯಾಗಿ ಬದುಕುವ ಇಚ್ಛೆ ಇರುವವರು ಅವರ ಕನಸಿನ ಮನೆಯನ್ನು ಪೆಂಟ್‌ಹೌಸ್‌ನಲ್ಲಿಯೇ ಸಾಕಾರಗೊಳಿಸಬಹುದು.
ಅರುಣ್‌ ಕುಮಾರ್ ಆರ್‌.ಟಿ., ಕ್ರೀಯೇಟಿವ್‌ ಕನ್ಸಲ್ಟೆಂಟ್‌, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.