ADVERTISEMENT

ಒಲವಿನ ಬಣ್ಣದ ಹುಡುಕಾಟ

ದಿಕ್ಸೂಚಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2016, 19:30 IST
Last Updated 24 ಮಾರ್ಚ್ 2016, 19:30 IST
ಒಲವಿನ ಬಣ್ಣದ ಹುಡುಕಾಟ
ಒಲವಿನ ಬಣ್ಣದ ಹುಡುಕಾಟ   

ಮನೆ ನಮ್ಮ ಅಭಿರುಚಿಯ ಪ್ರತಿಫಲನವಾದ್ದರಿಂದ ಅದಕ್ಕೆ ಬಳಸುವ ಬಣ್ಣದ ಬಗ್ಗೆಯೂ ಯೋಚಿಸಲೇಬೇಕು. ಯಾವುದೋ ಬಣ್ಣ ಬಳಸಿ ಮನೆಯ ಅಂದ ಹಾಳು ಮಾಡಿಕೊಳ್ಳುವ ಬದಲು ವೈಜ್ಞಾನಿಕವಾಗಿ ಬಣ್ಣ ಆರಿಸಿದರೆ ಮನೆಯ ಸೊಗಸನ್ನು ಇಮ್ಮಡಿಗೊಳಿಸಬಹುದು ಎನ್ನುತ್ತಾರೆ ಡಿಬಿಎನ್ ಮೂರ್ತಿ.

ಮನೆಯ ವಿನ್ಯಾಸಕ್ಕೆ ಕೊಟ್ಟ ಆದ್ಯತೆಯನ್ನೇ ಅದರ ಬಣ್ಣಕ್ಕೂ ಕೊಡಬೇಕು. ಮನೆಯ ಸೌಂದರ್ಯದಲ್ಲಿ ಬಣ್ಣದ್ದೇ ಹೆಚ್ಚಿನ ಪಾಲು. ಜೊತೆಗೆ ಮನೆಗೆ ಆಯ್ಕೆ ಮಾಡುವ ಬಣ್ಣಗಳು ನಿಮ್ಮ ಅಭಿರುಚಿ ಹಾಗೂ ಶೈಲಿಯ ವ್ಯಾಖ್ಯಾನವೂ ಆದ್ದರಿಂದ ಬಣ್ಣಗಳನ್ನು ಬುದ್ಧಿವಂತಿಕೆಯಿಂದ ಆರಿಸಬೇಕು.

ಈಗಂತೂ ­ಮಾರುಕಟ್ಟೆಯಲ್ಲಿ  ಸಾಕೆನಿಸುವಷ್ಟು ಬ್ರ್ಯಾಂಡ್‌ಗಳು ಹಾಗೂ ಶೇಡ್‌ಗಳ ಆಯ್ಕೆಗಳಿವೆ. ಅದರಲ್ಲಿ ನಿಮ್ಮ ಮನೆಗೆ ಹೊಂದುವಂಥದ್ದರ ಬಗ್ಗೆ ಸ್ಪಷ್ಟ ನಿಲುವಿರಬೇಕು. ಕಾಲದೊಂದಿಗೆ ಬದಲಾಗುತ್ತಿರುವ ಬಣ್ಣಗಳ ಟ್ರೆಂಡ್‌ ಕುರಿತು ಅಪ್‌ಡೇಟ್ ಆಗಿದ್ದರೆ ಒಳಿತು. ಈ ವಿಷಯದಲ್ಲಿ ಗೊಂದಲವಿದ್ದರೆ ಯಾವ ಬಣ್ಣ ಟ್ರೆಂಡ್‌ನಲ್ಲಿದೆ ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಆನ್‌ಲೈನ್ ತಾಣಗಳನ್ನು ಅಥವಾ ಪ್ರತಿಷ್ಠಿತ ಇಂಟೀರಿಯರ್ ನಿಯತಕಾಲಿಕೆಗಳನ್ನು ಒಮ್ಮೆ ನೋಡಬಹುದು.

ಗಮನಿಸಬೇಕಾದ ಅಂಶಗಳು
ಒಂದು ಸಣ್ಣ ಸಂಶೋಧನೆ ಯಾವುದೇ ವಿಷಯದ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರಲು  ಸಹಾಯ ಮಾಡುತ್ತದೆ. ಅದನ್ನು ಬಣ್ಣಕ್ಕೂ ಹೋಲಿಸಿಕೊಳ್ಳಬಹುದು. ಈಗಂತೂ ಇಡೀ ಮನೆಗೆ ಒಂದೇ ಬಣ್ಣ ಬಳಸುವ ರೂಢಿ ಇಲ್ಲ. ಒಂದೊಂದು ಕೋಣೆಗೆ ಒಂದೊಂದು ಬಣ್ಣ ಬಳಸುತ್ತಾರೆ. ಆದ್ದರಿಂದ ಮನೆಯ ಯಾವ ಕೋಣೆಗೆ ಯಾವ ಬಣ್ಣ ಚೆಂದ ಎಂಬುದನ್ನು ಯೋಚಿಸಿ.

ಉದಾಹರಣೆಗೆ, ಒಂದು ಕೋಣೆಗೆ ಗಾಢ ಬಣ್ಣ ಬಳಸಲು ಬಯಸಿದರೆ, ಅದಕ್ಕೆ ಕೆಂಪು ಅಥವಾ ನೇರಳೆ ಬಣ್ಣ ಪ್ರಯತ್ನಿಸಬಹುದು ಅಥವಾ ಗಾಢವೂ ಅಲ್ಲದ ತೀರಾ ತಿಳಿಯೂ ಅಲ್ಲದ ಮಧ್ಯಮ ರೀತಿಯ ಬಣ್ಣ ಬೇಕೆಂದು ನೋಡುತ್ತಿದ್ದರೆ ಬಿಳಿ ಅಥವಾ ಹಳದಿ ಉತ್ತಮ ಆಯ್ಕೆಯಾಗಬಲ್ಲದು. ಈ ಬಣ್ಣಕ್ಕೆ ಹೊಂದುವ ಪೀಠೋಪಕರಣವನ್ನೂ ಹೊಂದಿಸಿಕೊಂಡರೆ ಕೋಣೆ  ಅತಿ ಸುಂದರವಾಗಿ ಕಾಣುತ್ತದೆ.

ಬಣ್ಣದ ಆಯ್ಕೆಗೆ ಮುನ್ನ ಯಾವ ಕೋಣೆಗೆ ಅದನ್ನು ಬಳಸುತ್ತೀರಿ ಎಂಬುದರ ಬಗೆಗೂ ಗಮನವಿರಬೇಕು. ಉದಾಹರಣೆಗೆ, ಬೆಡ್‌ರೂಂ ಬೇರೆಲ್ಲಾ ಕೋಣೆಗಳಿಗಿಂತ ಹಿತ ಮತ್ತು ಶಾಂತವಾಗಿರಬೇಕು. ಅದಕ್ಕೆ ಮಧ್ಯಮ ಬಣ್ಣವೇ ಸೂಕ್ತ ಎಂಬುದರಲ್ಲಿ ಎರಡು ಮಾತಿಲ್ಲ.

ವಿನ್ಯಾಸದೊಂದಿಗೆ ಬಣ್ಣ ರೂಮಿನಲ್ಲಿನ ಬೆಳಕಿನ ವ್ಯವಸ್ಥೆಗೂ ಪೂರಕವಾಗಿರಬೇಕು. ಬೆಳಕು ನೈಸರ್ಗಿಕ ಅಥವಾ ಕೃತಕ ಯಾವುದೇ ಆಗಿರಲಿ, ಬಣ್ಣದ ಮೆರುಗನ್ನು ಎತ್ತಿತೋರಿಸಬೇಕು. ಹಗಲಿನ ಹೊತ್ತಿನಲ್ಲಿ ನೈಸರ್ಗಿಕ ಬೆಳಕಿನಲ್ಲಿ ಬಣ್ಣಗಳ ನಿಜ ನೋಟ ಕಾಣಬಹುದು. ಕೃತಕ ಬೆಳಕಿನ ವ್ಯವಸ್ಥೆಯಲ್ಲಾದರೆ ಪ್ರಕಾಶಮಾನ ದೀಪಗಳು ಬೆಚ್ಚಗಿನ ಭಾವ ತಂದರೆ, ಫ್ಲೋರೊಸೆಂಟ್ ದೀಪಗಳು ಶಾಂತ ವಾತಾವರಣ ಮೂಡಿಸಬಲ್ಲವು. ಆದ್ದರಿಂದ ಕೋಣೆಯ ದಿಕ್ಕು, ಅಲ್ಲಿನ ಬೆಳಕಿನ ವ್ಯವಸ್ಥೆಯನ್ನು ಅವಲಂಬಿಸಿ ಬಣ್ಣಆರಿಸಬೇಕು.

ನಿಮಗೆ ಒಂದು ಬಣ್ಣ ಇಷ್ಟವಿದ್ದು, ಅದನ್ನು ಈ ಮುನ್ನ ಮನೆಗೆ ಬಳಸಲು ಸಾಧ್ಯವಾಗದೆ ಇದ್ದರೆ, ಮನೆಯ ಒಂದು ಭಾಗದಲ್ಲಿ ಪ್ರಯತ್ನಿಸಿ ನೋಡಿ, ಚೆಂದ ಕಂಡರೆ ಮುಂದುವರೆಸಬಹುದು. ಆದರೆ ಅದು ಮನೆಯ ಪೀಠೋಪಕರಣಗಳು, ಶೇಡ್‌, ಕಿಟಕಿ ಪರದೆ ಮತ್ತು ಮನೆಯ ಪ್ರತಿ ಅಂಶಕ್ಕೂ ಪೂರಕವಾಗಿರಬೇಕಷ್ಟೆ.

ಆಯ್ಕೆ ಸರಿಯಿರಲಿ
ಬಣ್ಣದ ವಿಷಯದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾದ ಮತ್ತೊಂದು ಅಂಶ ಹಣ. ಅದರಲ್ಲೂ ಪ್ರತಿ ಮೂರರಿಂದ ನಾಲ್ಕು ವರ್ಷ ಮನೆಗೆ ಮರು ಬಣ್ಣ ಮಾಡಿಸುವ ಯೋಚನೆಯಿದ್ದರೆ, ಬಜೆಟ್ ಪ್ರಮುಖವಾಗುತ್ತದೆ. ಆದ್ದರಿಂದ ಇದಕ್ಕೆ  ವೈಯಕ್ತಿಕವಾಗಿ ವೃತ್ತಿಪರರ ಸಲಹೆ ಪಡೆಯಬೇಕು.

ವೃತ್ತಿಪರರು ಮತ್ತು ಒಳಾಂಗಣ ವಿನ್ಯಾಸಕರು ನಿಮ್ಮ ಆಲೋಚನೆ, ಬಜೆಟ್‌ ಹಾಗೂ ಮನೆಯ ಅವಶ್ಯಕತೆಗೆ ತಕ್ಕಂತೆ ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ. ಈಗಂತೂ ಬಣ್ಣಗಳ ಉತ್ತಮ ಆಯ್ಕೆಗೆಂದೇ ‘ವರ್ಚುಯಲ್ ಟೂರ್’ ಕೂಡ ಲಭ್ಯವಿದೆ. ಇದು ಪ್ರಾಯೋಗಿಕವಾಗಿ ಬಣ್ಣವನ್ನು ಆರಿಸಲು ನೆರವಾಗುತ್ತದೆ.

ಮನೆಯ ಹೊರಾಂಗಣಕ್ಕೆ ಬಣ್ಣವನ್ನು ಆಯ್ಕೆ ಮಾಡುವಾಗ ಬಣ್ಣ ಹವಾಮಾನದ ಬದಲಾವಣೆಗೆ ಬಹುಕಾಲ ಉಳಿಯುವಂಥದ್ದೇ ಎಂಬ ಪ್ರಶ್ನೆ ಮುಖ್ಯವಾಗಿರಬೇಕು. ಹೊರಗಿನ  ಬಣ್ಣ ಕಣ್ಣು ಕೋರೈಸುವಂತಿರಬಾರದು. ಅದು ಇಡೀ ಮನೆಯ ಅಂದವನ್ನೇ ಹಾಳುಗೆಡವಬಹುದು. ಆದ್ದರಿಂದ ಮನೆಯ ಅಂದ ಹಾಗೂ ಚೌಕಟ್ಟನ್ನ ಎತ್ತಿತೋರಿಸುವಂಥ ಬಣ್ಣವಿದ್ದರೆ ಚೆನ್ನ.

ಇದಕ್ಕೆಂದೇ ಹೆಚ್ಚಿನ ಮಂದಿ ಸೂರ್ಯನ ಹಳದಿ ಬಣ್ಣವನ್ನು ಬಳಸುತ್ತಿದ್ದಾರೆ. ಬಣ್ಣಗಳ ಆಯ್ಕೆ ಮಾತ್ರವಲ್ಲ, ಅದನ್ನು  ನಿರ್ವಹಿಸುವ ಮಂದಿಯ ಆಯ್ಕೆಯಲ್ಲೂ ಎಚ್ಚರವಾಗಿರಬೇಕು. ಆಗ ನಿಮ್ಮ ಆಯ್ಕೆ, ಆದ್ಯತೆ ಹಾಗೂ ಹಣಕ್ಕೂ ಬೆಲೆ.

ಸುಂದರ ಬಣ್ಣಗಳಿಂದ ಸುಂದರ ಮನೆಹೊರತರುವುದಷ್ಟೇ ಉದ್ದೇಶವಾಗಿರದೆ ನಿಮ್ಮ ಆಲೋಚನೆ ಹಾಗೂ ಅಭಿರುಚಿಯ ಪ್ರತಿಬಿಂಬವಾಗಿಯೂ ಮನೆಯನ್ನು ನೋಡಿದರೆ ಅದಕ್ಕೆ ಬಣ್ಣಗಳಿಂದ ಬೇರೆಯದೇ ಆಯಾಮ ಮೂಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT