ADVERTISEMENT

ಕಚೇರಿ ಸ್ಥಳಾವಕಾಶ ವಹಿವಾಟು ಏರುಗತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಕಚೇರಿ ಸ್ಥಳಾವಕಾಶ ವಹಿವಾಟು ಏರುಗತಿಯಲ್ಲಿ
ಕಚೇರಿ ಸ್ಥಳಾವಕಾಶ ವಹಿವಾಟು ಏರುಗತಿಯಲ್ಲಿ   

ಬೆಂಗಳೂರಿನ ‘ಆಫೀಸ್‌ ಪ್ರಾಪರ್ಟಿ ಮಾರುಕಟ್ಟೆ’ ಕಳೆದ ಐದು ವರ್ಷಗಳಿಗೆ ಹೋಲಿಸಿದರೆ 2016ರಲ್ಲಿ ಹೆಚ್ಚು ಪ್ರಗತಿ ಕಂಡಿದೆ. 2016ರಲ್ಲಿ 1.14 ಕೋಟಿ ಚದರ ಅಡಿಗೂ ಅಧಿಕ ಜಾಗದ ವ್ಯಾಪಾರ ವಹಿವಾಟು ನಡೆದಿದೆ. 

2015ಕ್ಕೆ  ಹೋಲಿಸಿದರೆ ಶೇ12ರಷ್ಟು ವಹಿವಾಟು ಹೆಚ್ಚಳವಾಗಿದೆ ಎಂದು ನೈಟ್‌ ಫ್ರಾಂಕ್‌ ರಿಯಲ್‌ ಎಸ್ಟೇಟ್‌ ಸಂಸ್ಥೆ ನಡೆಸಿದ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಬೆಂಗಳೂರಿನ ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ 2016ನೇ ವರ್ಷ  ಗಮನರ್ಹ ಬದಲಾವಣೆ ತಂದಿದೆ. ನೋಟು ರದ್ದತಿಗೂ ಮುನ್ನ ಹಾಗೂ ನಂತರದಲ್ಲಿ ಕಚೇರಿ ಸ್ಥಳಾವಕಾಶದ ವ್ಯಾಪಾರ ವಹಿವಾಟಿನ  ಏರಿಳಿತದ ಬಗ್ಗೆ ಮಾಹಿತಿ ವರದಿಯಲ್ಲಿದೆ.
 
2016ರ ದ್ವಿತೀಯಾರ್ಧದಲ್ಲಿ ಬೆಂಗಳೂರಿನಲ್ಲಿ ಕಚೇರಿ ಪ್ರಾಪರ್ಟಿ ಕ್ಷೇತ್ರ ಒಂದರಲ್ಲಿಯೇ 53 ಲಕ್ಷ ಚದರ ಅಡಿ ವಹಿವಾಟು ನಡೆದಿದ್ದು, ನಂತರದಲ್ಲಿ 3 ಲಕ್ಷ ಚದರ ಅಡಿ ಮಾರಾಟವಾಗಿದೆ.
 
ಕಚೇರಿ ಜಾಗಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಸತಿ ಜಾಗಗಳ ಮೌಲ್ಯ ತಕ್ಕ ಮಟ್ಟಿಗೆ ಕುಸಿತ ಕಂಡಿದೆ. 2016ರ ದ್ವಿತೀಯಾರ್ಧದ ನಂತರ ಹೊಸ ವಸತಿ ಸಮುಚ್ಚಯಗಳ ಬೇಡಿಕೆ ಶೇ 45ರಷ್ಟು ಇಳಿಕೆ ಕಂಡುಬಂದಿತ್ತು. 
 
2016ರ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ, ಅಂದರೆ ನೋಟು ರದ್ದತಿಯ ಪರಿಣಾಮ ರಿಯಲ್‌ ಎಸ್ಟೇಟ್‌ ಮೇಲೆ ಗಣನೀಯವಾಗಿ ಆಗಿರುವುದು ಕಂಡು ಬಂದಿದೆ. ಈ ಅವಧಿಯಲ್ಲಿ ಹೊಸದಾಗಿ ಆರಂಭವಾಗುವ ಮತ್ತು ಮಾರಾಟ ಮಾಡುವ ವಸತಿ ಸಮುಚ್ಚಯಗಳ ವಹಿವಾಟು ಶೇ 65 ಮತ್ತು ಶೇ45 ರಷ್ಟು ಇಳಿಕೆ ಕಂಡಿದೆ.
 
‘ಬೆಂಗಳೂರಿನಲ್ಲಿ ಐಟಿ ಮತ್ತು ಐಟಿ  ಆಧಾರಿತ ಸೇವಾ ವಲಯಗಳಲ್ಲಿ ಕಚೇರಿ ಮಾರುಕಟ್ಟೆಗೆ ಬೇಡಿಕೆ ಹೆಚ್ಚಿದೆ. ಈ ವಲಯವು ರಿಯಲ್‌ ಎಸ್ಟೇಟ್‌ (ಆಫೀಸ್‌ ಪ್ರಾಪರ್ಟಿ) ಮಾರುಕಟ್ಟೆಗೆ ಆಧಾರ ಸ್ಥಂಭವಾಗಿದೆ’ ಎನ್ನುತ್ತಾರೆ  ನೈಟ್‌ ಫ್ರಾಂಕ್‌ ದಕ್ಷಿಣ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಸತೀಶ್‌ ಬಿ.ಎನ್‌.
 
ಇತರೆ ನಗರಗಳ ರಿಯಲ್ ಎಸ್ಟೇಟ್‌ ಬೆಳವಣಿಗೆಯು ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಸ್ಪರ್ಧೆಗೆ ಕಾರಣವಾಗುತ್ತಿದೆ. ಹೈದರಾಬಾದ್‌ನಲ್ಲಿ ಖಾಲಿ ಜಾಗಗಳ ಬೆಲೆ ಕುಸಿತವಾಗುತ್ತಿದೆ. ಅದು ಶೇ ಆರರಷ್ಟು ಎಂದು ಅಂದಾಜಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
 
‘ಐಟಿ ಮತ್ತು ಐಟಿ ಆಧಾರಿತ ಸೇವಾ ವಲಯಗಳು ಒಟ್ಟು ರಿಯಲ್‌ ಎಸ್ಟೇಟ್‌  ವಹಿವಾಟಿನಲ್ಲಿ ಮುಂಚೂಣಿಯಲ್ಲಿವೆ. 2016ರ ದ್ವಿತೀಯಾರ್ಧದಲ್ಲಿ ಶೇ62, 2015ರ ದ್ವಿತೀಯಾರ್ಧದಲ್ಲಿ ಶೇ70ರಷ್ಟು ವಹಿವಾಟು ನಡೆದಿದೆ’ ಎಂದು ಸತೀಶ್‌ ಮಾಹಿತಿ ನೀಡುತ್ತಾರೆ. 
 
ಹೊರ ವರ್ತುಲ ರಸ್ತೆ ಸಮೀಪ  ಕಚೇರಿ ಅಥವಾ ಗೃಹೇತರ ಬಳಕೆಗಾಗಿ ಜಾಗದ ಬೇಡಿಕೆಯಲ್ಲೂ ಇಳಿಕೆಯಾಗಿರುವುದನ್ನು ಗುರುತಿಸಬಹುದು. ಆದರೆ ವೈಟ್‌ಫೀಲ್ಡ್‌ ಸೇರಿದಂತೆ ಕೆಲವೆಡೆ ಬೇಡಿಕೆ ಕಡಿಮೆ ಆಗಿಲ್ಲ.
 
ಈ ನಡುವೆ ಕಚೇರಿ ಅಥವಾ ವಾಣಿಜ್ಯ ಬಳಕೆಯ ಜಾಗದ ಬಾಡಿಗೆ ದರದಲ್ಲಿಯೂ ಹೆಚ್ಚಳವಾಗಿದೆ. 2015 ಮತ್ತು 2016ರ ದ್ವಿತೀಯಾರ್ಧದ ವೇಳೆಗೆ ಬಾಡಿಗೆ ದರವನ್ನು ಪರಿಶೀಲಿಸಿದಾಗ ಶೇ 12ರಷ್ಟು ಹೆಚ್ಚಳವಾಗಿದೆ.
 
ಉದಾಹರಣೆಗೆ 2015ರಲ್ಲಿ ಒಂದು ಚದರ ಅಡಿಗೆ ₹51.5 ಇದ್ದ ಬಾಡಿಗೆಯೂ 2016ರ ದ್ವಿತೀಯಾರ್ಧದ ವೇಳೆಗೆ ಅದು ₹57.8ಕ್ಕೆ ಹೆಚ್ಚಳ ಆಗಿದೆ. 
ವಿವಿಧ ಕಂಪೆನಿಗಳಿಗೆ ಬೇಕಾದ ಕಡೆಗಳಲ್ಲಿ ಅಗತ್ಯವಿರುವಷ್ಟು ಜಾಗ ದೊರೆಯುತ್ತಿಲ್ಲ ಎಂಬ ಸಮಸ್ಯೆ ಇನ್ನೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.