ADVERTISEMENT

ಕನಸಿನ ಅರಮನೆಗೆ ಎಷ್ಟೊಂದು ದಾರಿ?

ಸುಶೀಲಾ ಡೋಣೂರ
Published 23 ಸೆಪ್ಟೆಂಬರ್ 2014, 19:30 IST
Last Updated 23 ಸೆಪ್ಟೆಂಬರ್ 2014, 19:30 IST

‘ಬೆಚ್ಚನೆಯ ಮನೆ ಇರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ'... ಎನ್ನುವುದು ಎಲ್ಲಾ ಕಾಲದ, ಎಲ್ಲಾ ವರ್ಗದ ಜನರ ನೆಚ್ಚಿನ ಗಾದೆ. ಮಧ್ಯಮ ವರ್ಗದ ಪಾಲಿಗಂತೂ ‘ಬೆಚ್ಚನೆಯ ಒಂದು ಮನೆ’ ಎಂದಿನ ಕನಸು. ಆದರೆ ಹಾಗೆ ಪುಟ್ಟ ಬೆಚ್ಚನೆಯ ಮನೆಯೊಂದನ್ನು ಮಾಡಿಕೊಳ್ಳುವುದೇನು ಸುಲಭವೇ? ಬ್ಯಾಂಕುಗಳ ಕೃಪಾಕಟಾಕ್ಷವಿಲ್ಲದೇ ಮಧ್ಯಮ ವರ್ಗದ ಜನರ ಮನೆಯ ಕನಸಿಗೆ ಬೆಲೆಯಿಲ್ಲ. ಬ್ಯಾಂಕಿನ ದಾರಿ ಕೆಲವರಿಗೆ ಸುಲಭವೆನಿಸಿದರೂ, ಇನ್ನೂ ಕೆಲವರಿಗೆ ಅದಿನ್ನೂ ದುರ್ಗಮ ಹಾದಿಯೇ.

ಸುಲಭವಾಗಿದೆ ದಾರಿ
ಇದೇ ಒಂದು ದಶಕದ ಹಿಂದೆ ‘ಮನೆ’ ಕನಸಿನ ಮಾತೇ ಆಗಿತ್ತು. ತಿಂಗಳು ತಿಂಗಳು ಕೈತುಂಬ ಸಂಬಳ ಬರುವವರಿಗೂ ಸಾಲ ಸಿಗುವುದು ಕಠಿಣವಾಗಿತ್ತು. ತಿಂಗಳುಗಟ್ಟಲೇ ಓಡಾಡಬೇಕು. ಒಂದರ ಮೇಲೆ ಒಂದು ದಾಖಲೆ ಪತ್ರಗಳನ್ನು ಹೊಂದಿಸುವುದರಲ್ಲಿಯೇ ಸುಸ್ತು. ಪಡೆದ ಸಾಲಕ್ಕಿಂತ ಕಟ್ಟಬೇಕಾದ ಬಡ್ಡಿಯ ಪಾಲೇ ಅಧಿಕವಾಗುತ್ತಿತ್ತು. ನಿಗದಿತ ಅವಧಿಗೂ ಮುನ್ನ ಸಾಲ ಮರುಪಾವತಿ ಬಯಸಿದರೆ ಅದಕ್ಕೂ ಹೆಚ್ಚುವರಿ ದಂಡ ಬೀಳುವ ಭಯವಿತ್ತು.

ಆದರೆ ಈಗ ಹಾಗೇನಿಲ್ಲ. ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ಗೃಹಸಾಲ ನೀತಿಯಲ್ಲಿ ಸ್ವಲ್ಪಮಟ್ಟಿಗೆ ಸಡಿಲಿಕೆ ಮಾಡಿ ಬದಲಾವಣೆ ತಂದಿವೆ.

ಅನುಕೂಲ ಹಲವು
ಗೃಹಸಾಲದ ಮೊದಲ ಅನುಕೂಲವೆಂದರೆ ಮಾಸಿಕ ಕಂತು ಮತ್ತು ಬಡ್ಡಿ ಮೇಲೆ ತೆರಿಗೆ ವಿನಾಯ್ತಿ ದೊರಕುತ್ತದೆ. ಆದರೆ ನಿವೇಶನ ಖರೀದಿಸಲು ಪಡೆದ ಸಾಲಕ್ಕೆ ಈ ತೆರಿಗೆ ವಿನಾಯಿತಿ ಸೌಲಭ್ಯ ಇರುವುದಿಲ್ಲ. ಅಲ್ಲದೇ, ಗೃಹಸಾಲಕ್ಕೂ ನಿವೇಶನ ಸಾಲಕ್ಕೂ ಪ್ರತ್ಯೇಕ ಬಡ್ಡಿದರ ವಿಧಿಸಲಾಗುತ್ತದೆ.
ಈಗ ಅವಧಿಗೂ ಮುನ್ನ ಗೃಹಸಾಲ ಮುಕ್ತಾಯಗೊಳಿಸಲು ಬಯಸಿದಲ್ಲಿ ಯಾವುದೇ ಹೆಚ್ಚುವರಿ ದಂಡವೂ ಇಲ್ಲ. ಆದಾಗ್ಯೂ ತೆರಿಗೆದಾರರು ಸೇವಾವಧಿಯಲ್ಲಿ ಇರುವಾಗ ಯಾವುದೇ ಮೂಲದಿಂದ ದೊಡ್ಡ ಮೊತ್ತದ ಹಣ ಬಂದಲ್ಲಿ ಅದನ್ನು ಗೃಹಸಾಲಕ್ಕೆ ಪಾವತಿಸದೇ ಬ್ಯಾಂಕಿನಲ್ಲಿ ಠೇವಣಿ ಇಡುವುದೇ ಉತ್ತಮ. ಆಗ ಗೃಹಸಾಲ ಪಾವತಿಯಿಂದ ಸಿಗುವ ತೆರಿಗೆ ವಿನಾಯಿತಿಯೂ ಸಿಗುತ್ತದೆ, ಠೇವಣಿ ಹಣದಿಂದ ಬಡ್ಡಿಯೂ ಬರುತ್ತದೆ.

ಕೆಲವು ಸಂಸ್ಥೆಗಳು/ಕಂಪೆನಿಗಳು ಕಡಿಮೆ ಬಡ್ಡಿದರದಲ್ಲಿ ತಮ್ಮ ನೌಕರರಿಗೆ ಗೃಹ ಸಾಲ ನೀಡುತ್ತವೆ. ಅಂತಹ ಅವಕಾಶಗಳಿದ್ದರೆ ಅಲ್ಲಿಯೇ ಸಾಲ ಪಡೆಯುವುದು ಉತ್ತಮ.

ಅರಿವು ಅಗತ್ಯ
ಕೇಂದ್ರ ಬಜೆಟ್ ನಂತರ ಕಳೆದ ಒಂದು ವರ್ಷದ ಅವಧಿಯಲ್ಲಿ ಗೃಹ ಸಾಲ ಬಡ್ಡಿದರದಲ್ಲಿ ಏರುಪೇರಾಗಿದ್ದು, ಗ್ರಾಹಕರಿಗೆ ಯಾವ ಬ್ಯಾಂಕಿಗೆ ಹೋಗುವುದು, ಯಾರನ್ನು ನಂಬುವುದು ಎಂಬ ಬಗ್ಗೆ ಗೊಂದಲ ಮೂಡಿದೆ. ಆದರೆ ಈ ಬಗ್ಗೆ ಆರ್ಥಿಕ ತಜ್ಞರನ್ನು ಸಂಪರ್ಕಿಸುವುದು, ಈಗಾಗಲೇ ಗೃಹಸಾಲ ಮಾಡಿದವರಲ್ಲಿ ವಿಚಾರಿಸುವುದು ಹಾಗೂ ಅದಕ್ಕೆಂದೇ ಇರುವ ಕನ್ಸಲ್ಟೆಂಟ್‌ಗಳನ್ನು ಕಾಣುವುದು ಉತ್ತಮ. ಸಾಲದ ಅರ್ಜಿಗೆ ಸಹಿ ಹಾಕುವ ಮುನ್ನ ಆ ಸುದೀರ್ಘ ಮಾಹಿತಿಯನ್ನು ಒಮ್ಮೆ ಸಂಪೂರ್ಣವಾಗಿ ಓದುವುದು ಹಾಗೂ ಅರ್ಥವಾಗದ ವಿಚಾರವನ್ನು ತಿಳಿದವರಲ್ಲಿ ಕೇಳುವುದನ್ನು ಮರೆಯಬಾರದು.
ಭಾರತೀಯ ರಿಸರ್ವ್ ಬ್ಯಾಂಕ್ ಕಾಲ ಕಾಲಕ್ಕೆ ತನ್ನ ನಿಯಮಗಳಲ್ಲಿ ಬದಲಾವಣೆ ತರುತ್ತಿರುತ್ತದೆ. ಇದು ಹೆಚ್ಚಿನ ಸಾಲಗಾರರಿಗೆ ಗೊತ್ತೇ ಆಗುವುದಿಲ್ಲ. ಆರ್‌ಬಿಐ ನೀತಿಯ ಬದಲಾವಣೆಗಳು ಹಾಗೂ ಅದರಿಂದ ಆಗಬಹುದಾದ ಲಾಭ, ನಷ್ಟದ ಬಗ್ಗೆ ತಿಳಿದುಕೊಳ್ಳಬೇಕು.

ಕೆಲವು ಬ್ಯಾಂಕುಗಳು ಮೊದಲ ವರ್ಷ ಮಾತ್ರ ಕಡಿಮೆ ಬಡ್ಡಿ ವಿಧಿಸಿ ನಂತರದ ವರ್ಷಗಳಿಗೆ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಈ ಬಗ್ಗೆ ಸವಿವರ ಮಾಹಿತಿ ಪಡೆಯುವುದು ಮುಖ್ಯ. ಸಾಲದ ಖಾತೆಗೆ ಆಗಾಗ ಡೆಬಿಟ್ ಬೀಳುತ್ತಿರಬಹುದು. ಸಾಲದ ಖಾತೆಯ ಸ್ಟೇಟ್‌ಮೆಂಟ್ ಪಡೆದು ಈ ಬಗ್ಗೆ ವಿಚಾರಿಸುತ್ತ ಇರಬೇಕು.

ಬಾಂಕುಗಳು ಈಗ ಸಾಲ ನೀಡಲು ಹೆಚ್ಚು ಉತ್ಸಾಹ ತೋರುತ್ತಿರುವುದೇನೊ ನಿಜ. ಬಡ್ಡಿಯಿಂದ ಬ್ಯಾಂಕಿಗೆ ಲಾಭವಿದೆ. ಆದರೆ ಗ್ರಾಹಕರು ತಮ್ಮ ಇತಿ–ಮಿತಿಯನ್ನು ಅರಿತುಕೊಂಡು ಸಾಲಕ್ಕೆ ಮುಂದಾಗಬೇಕು. ಪ್ರೀತಿಯ ಮನೆ ನೆಮ್ಮದಿಯನ್ನು ಕಿತ್ತುಕೊಳ್ಳುವಂತಾಗಬಾರದು.

ಸಾಲಕ್ಕೆ ಏಜೆನ್ಸಿ ನೆರವು!
ಮನೆ ಕೊಳ್ಳಬೇಕು ಎಂದೆನಿಸಿದಾಗ ಸ್ನೇಹಿತನ ಸಹಾಯದಿಂದ ಖಾಸಗಿ ಏಜೆನ್ಸಿಯೊಂದರ ಮಾಹಿತಿ ಸಿಕ್ಕಿತು. ನಾನು ಒಂದೇ ಒಂದು ಸಲ ಅವರಿಗೆ ಫೋನ್ ಮಾಡಿದ್ದು. ನಂತರದ್ದೆಲ್ಲ ಅವರದೇ ಕೆಲಸ. ಅವರೇ ಬಂದು ಭೇಟಿಯಾದರು, ಮಾಹಿತಿಯನ್ನು ವಿವರಿಸಿದರು, ನಿಯಮಗಳನ್ನೆಲ್ಲ ಓದಿ, ವಿವರಿಸಿದರು. ಅಗತ್ಯ ದಾಖಲೆಗಳನ್ನೆಲ್ಲ ಪಡೆದುಕೊಂಡು ಹೋದರು. ಬಹುತೇಕ ಮಾತುಕತೆಗಳೆಲ್ಲ ಮೆಕ್ ಡೊನಾಲ್ಡ್‌ನಲ್ಲೇ ನಡೆಯುತ್ತಿತ್ತು. ಅವರು ಕೇಳಿದ ದಾಖಲೆಗಳನ್ನು ಹೊಂದಿಸಿ ಕೊಡುವುದಷ್ಟೇ ನಮ್ಮ ಕೆಲಸ.

ಆದರೆ ಇಂತಹ ವ್ಯವಹಾರ ಮಾಡುವಾಗ ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮುನ್ನ ನಾವೂ ಒಮ್ಮೆ ಸಂಪೂರ್ಣವಾಗಿ ಓದಿಕೊಳ್ಳಬೇಕು. ಏಜೆಂಟರು ಸುಳ್ಳು ಹೇಳುವ ಅಥವಾ ಕೆಲವು ಅಂಶಗಳನ್ನು ಮುಚ್ಚಿಡುವ ಅಪಾಯವೂ ಇರುತ್ತದೆ. ಏಜೆನ್ಸಿಯವರೊಂದಿಗೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಬಾರದು. ಹಣಕಾಸಿನ ವ್ಯವಹಾರವೆಲ್ಲ ಚೆಕ್ ಮುಖಾಂತರವೇ ನಡೆಯಬೇಕು.

ಅಲ್ಲದೇ ಏಜೆನ್ಸಿಗೆ ಗ್ರಾಹಕರು ಯಾವುದೇ ರೀತಿಯ ಹೆಚ್ಚುವರಿ ಶುಲ್ಕಗಳನ್ನು ನೀಡಬೇಕಿಲ್ಲ. ಅವರು ತಮ್ಮ ಸೇವೆಗೆ ಬ್ಯಾಂಕಿನಿಂದಲೇ ಶುಲ್ಕ ಪಡೆಯುತ್ತಾರೆ. ಬ್ಯಾಂಕಿನ ಮುಖವೇ ನೋಡದೇ ಹಣ ಕ್ರೆಡಿಟ್ ಆಯಿತು. ಮನೆ ಖರೀದಿಸಿಯೂ ಆಯಿತು. ಈಗ 25 ವರ್ಷದ ಕಂತಿನ ಅವಧಿಯನ್ನು 10 ವರ್ಷಕ್ಕೆ ಇಳಿಸಿಕೊಂಡಿದ್ದೇನೆ. ಸ್ವಂತ ಮನೆ ಎಂಬ ನೆಮ್ಮದಿಯೂ ಇದೆ.
ವಿಜಯ್ ಕುಮಾರ್, ಕೀ ಅಕೌಂಟ್ ಮ್ಯಾನೇಜರ್

ಖಾಸಗಿ ಬ್ಯಾಂಕ್‌ ನೆರವು

ADVERTISEMENT

ಇದು ನನ್ನ ಅನುಭವದ ಮಾತು. ಇಂತಹ ಸಾಲಕ್ಕೆ ಖಾಸಗಿ ಬ್ಯಾಂಕೇ ಉತ್ತಮ ಬಡ್ಡಿಯಲ್ಲಿ ಅಷ್ಟಿಷ್ಟು ವ್ಯತ್ಯಾಸವಿರಬಹುದು. ಆದರೆ ಪ್ರಕ್ರಿಯೆ ಸುಲಭ. ಕಿರಿಕಿರಿ ಇರದು.
2010ರಲ್ಲಿ ರಾಜಾಜಿನಗರದಲ್ಲಿ ಮನೆ ಕೊಳ್ಳಲು ನಿರ್ಧರಿಸಿದಾಗ ನನಗೆ ₨30 ಲಕ್ಷದ ಅಗತ್ಯವಿತ್ತು. ಕೇಂದ್ರ ಸರ್ಕಾರಿ ಸ್ವಾಮ್ಯದ ದೊಡ್ಡ ಹೆಸರಿನ ಬ್ಯಾಂಕಿಗೆ ಎಡತಾಕಿ ಬಂದೆ, ಸರಿಯಾಗಿ ಮಾಹಿತಿಯೂ ಸಿಗಲಿಲ್ಲ. ಪ್ರತಿದಿನ ‘ನಾಳೆ ಬಾ’ ಎನ್ನುವ ಉತ್ತರವೇ ಸಿಗುತ್ತಿತ್ತು.

‘ಸರ್ಕಾರಿ ಬ್ಯಾಂಕುಗಳಿಗೆ ಹೋದರೆ ಓಡಾಡಿಯೇ ಸುಸ್ತಾಗಬೇಕಾಗುತ್ತದೆ. ಖಾಸಗಿ ಬ್ಯಾಂಕಿನಲ್ಲಿ ಪ್ರಯತ್ನಿಸು’ ಎಂದು ಸ್ನೇಹಿತರು ಸಲಹೆ ನೀಡಿದ್ದರು. ಅಂತೆಯೇ ಖಾಸಗಿ ಬ್ಯಾಂಕಿಗೆ ಹೋದೆ. ಅಂದುಕೊಂಡಂತೆ ಒಂದು ತಿಂಗಳ ಅವಧಿಯಲ್ಲಿ ಸಾಲದ ಮೊತ್ತ ಕೈ ಸೇರಿತು. ಅಗತ್ಯ ದಾಖಲೆಗಳನ್ನೆಲ್ಲ ಒದಗಿಸಿದಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಬಹುದು. ತಿಂಗಳು–ತಿಂಗಳು ಸರಿಯಾಗಿ ಇಎಂಐ ಕಟ್ಟುತ್ತ ಹೋದರೆ ನಮಗೇ ಒಳ್ಳೆಯದು.
ಗೋಪಾಲಕೃಷ್ಣ ಮನುವಾಚಾರ್ಯ

ಕನಸಿಗೆ ಬೆಲೆ ಕಟ್ಟಬೇಕಾದಾಗ...

1996–97ರ ಸಮಯವದು. ಬಹಳ ದಿನಗಳ ಕನಸಿಗೆ ಗರಿ ಮೂಡಿದ ಗಳಿಗೆ. ಎಷ್ಟೊ ವರ್ಷಗಳಿಂದ ಸ್ವಂತ ಮನೆಯ ಕನಸು ಕಾಣುತ್ತಿದ್ದೆ. ಆದರೆ ಅದನ್ನು ವಾಸ್ತವಕ್ಕೆ ತರಬೇಕಾದ ಸಮಯ ಬಂದಾಗ ದಾರಿ ಬಹಳ ಕಠಿಣವಾಗಿತ್ತು.

ಆಗೆಲ್ಲ ಮನೆ ಕಟ್ಟುವುದು ಇಷ್ಟು ಸುಲಭವಾಗಿರಲಿಲ್ಲ. ವೃತ್ತಿಯಲ್ಲಿ ಶಿಕ್ಷಕಿ ಆಗಿದ್ದ ನನಗೆ ಮನೆ–ಶಾಲೆಯೇ ಪ್ರಪಂಚ. ಹೀಗಾಗಿ ಸ್ವಂತ ಮನೆಯ ಆಸೆಗೆ ಬೆಲೆ ಕಟ್ಟುವುದು ಪ್ರಯಾಸ ಎನಿಸಿತು. ಮಗ ಸಂತೋಷ ಮತ್ತು ಮಗಳು ಮೇಘನಾ ಇನ್ನೂ ಓದುತ್ತಿದ್ದರು. ಅವರ ಶಿಕ್ಷಣ, ಮದುವೆ ಅನ್ನುವಂತಹ ಜವಾಬ್ದಾರಿಗಳು ಕಣ್ಮುಂದೆ ಬಂದಾಗ ಸ್ವಂತ ಮನೆಯ ಕನಸು ಕ್ಷಣ ಹಿಂದೆ ಸರಿದದ್ದೂ ಉಂಟು. ಆದರೆ ಅತ್ತ ಬಾಡಿಗೆ, ಇತ್ತ ತೆರಿಗೆ ಕಟ್ಟುವ ಹಣ ಉಳಿತಾಯ ಆಗುವುದಲ್ಲ ಎನ್ನುವ ಕಾರಣಕ್ಕೆ ಮನೆ ಕಟ್ಟುವ ಕೆಲಸಕ್ಕೆ ಕೈ ಹಾಕಿದೆ.

ಕಾರ್ಪೊರೇಷನ್ ಬ್ಯಾಂಕಿನಲ್ಲಿ ಸಾಲ ಪಡೆಯುವುದೆಂದು ನಿರ್ಧಾರವಾಯಿತು. ಬ್ಯಾಂಕಿನ ಸಿಬ್ಬಂದಿಯೊಬ್ಬರು ನನ್ನ ಸ್ನೇಹಿತೆಯೇ. ಸಾಕಷ್ಟು ಸಹಾಯ ಮಾಡಿದರು. ಅಷ್ಟಕ್ಕೂ ನನಗೆ ಸಿಕ್ಕಿದ್ದು ₨3 ಲಕ್ಷ. ನಾನು ಬ್ಯಾಂಕಿಗೆ ಕಟ್ಟಿದ ಒಟ್ಟು ಮೊತ್ತ ₨5.5 ಲಕ್ಷ. ಆಗ ಬಡ್ಡಿದರ ಶೇ 13ರಷ್ಟಿತ್ತು. ಆಗಿನ ನಿಯಮ ಈಗಿನಷ್ಟು ಜನಸ್ನೇಹಿ ಆಗಿರಲಿಲ್ಲ. ಅಲ್ಲದೇ ಆಗ ಗೃಹಸಾಲದಲ್ಲಿ ನಿವೇಶನವನ್ನೂ ಸೇರಿಸಿ ಕೊಡುತ್ತಿರಲಿಲ್ಲ. ಸ್ವಂತ ಹಣದಲ್ಲಿಯೇ ನಿವೇಶನ ಕೊಳ್ಳಬೇಕಿತ್ತು. ಆ ಒಂದು ವರ್ಷದ ಕಷ್ಟ ಈಗಿನ ನೆಮ್ಮದಿಯ ಮುಂದೆ ಏನೂ ಅಲ್ಲ.

ಲಕ್ಷ್ಮಿ ಪಿ. ವನಿರೆ, ನಿವೃತ್ತ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.