ADVERTISEMENT

ಟಿವಿ, ಫ್ರಿಜ್, ಫ್ಯಾನ್‌, ಎ.ಸಿ ಇಲ್ಲದ ಮನೆ!

ಗಣೇಶ ಅಮಿನಗಡ
Published 20 ಜನವರಿ 2015, 19:30 IST
Last Updated 20 ಜನವರಿ 2015, 19:30 IST

ಆ ಮನೆಯಲ್ಲಿ ಪೀಠೋಪರಕಣಗಳಿಲ್ಲ, ಟಿವಿ ಇಲ್ಲ, ತಂಗಳ ಪೆಟ್ಟಿಗೆ (ಫ್ರಿಜ್) ಇಲ್ಲ, ವಾಷಿಂಗ್‌ ಮೆಷಿನ್‌ ಇಲ್ಲ. ಫ್ಯಾನುಗಳೂ ಇಲ್ಲ, ಎ.ಸಿ ಮಾತಂತೂ ಇಲ್ಲವೇ ಇಲ್ಲ...

ಹೀಗೆ, ‘ಇಲ್ಲ’ ಎಂಬುದೇ ಹೆಚ್ಚಾಗಿರುವ ಈ ಮನೆ ಇರುವುದು ಮೈಸೂರಿನ ಕುವೆಂಪು ನಗರದ ಇಸ್ಕಾನ್‌ ಮಂದಿರದ ಹತ್ತಿರ.
‘ನಾವು ಮೊದಲು ಬಾಡಿಗೆ ಮನೆಯಲ್ಲಿದ್ದೆವು. ದೊಡ್ಡ ಸೈಟಲ್ಲಿ ಕಟ್ಟಿಸಿದ್ದರೂ ಆ ಬಾಡಿಗೆ ಮನೆಯಲ್ಲಿಯೂ ಗಾಳಿ, ಬೆಳಕಿನ ಸಮಸ್ಯೆ ಇತ್ತು. ಅದಕ್ಕಾಗಿಯೇ ನಾವು ಕಟ್ಟಿಸಿಕೊಳ್ಳುವ ಸ್ವಂತ ಮನೆಯಲ್ಲಿ ಗಾಳಿ, ನೈಸರ್ಗಿಕ ಬೆಳಕು ಚೆನ್ನಾಗಿ ಹರಿದು ಬರುವಂತಿರಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಅದರಂತೆಯೇ ಮನೆ ನಿರ್ಮಿಸಿಕೊಂಡೆ’ ಎನ್ನುತ್ತಾ ನೆಮ್ಮದಿ ಭಾವ ಸೂಸುತ್ತಾರೆ ಮೈಸೂರಿನಲ್ಲಿರುವ ಇನ್‌ಫೊಸಿಸ್‌ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ಜನಾರ್ದನ್ ಚನ್ನಗಿರಿ.

‘ಮೈಸೂರಿನಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಬಿರು ಬಿಸಿಲು ದಿನಗಳು, ತಾಪಮಾನ ಹೆಚ್ಚುತ್ತಲೇ ಇದೆ. ಫ್ಯಾನ್‌ ಹಾಕಿಕೊಳ್ಳದೇ ಮನೆಯೊಳಗೆ ಇರುವುದಕ್ಕೇ ಆಗುವುದಿಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಹಾಗಾಗಿ ನನ್ನ ಬಹಳಷ್ಟು ಗೆಳೆಯರು ಎ.ಸಿ ಮೊರೆ ಹೋಗಿದ್ದಾರೆ. ಆದರೆ, ನಮ್ಮ ಮನೆಯಲ್ಲಿ ಫ್ಯಾನು ಕೂಡಾ ಇರಬಾರದು.

ಕೃತಕವಾಗಿ ತಂಪುಗೊಳಿಸುವ ವ್ಯವಸ್ಥೆಯೇ ಇರಬಾರದು ಎಂದುಕೊಂಡೆ. ಅದೇ ದಿಕ್ಕಿನಲ್ಲಿ ಯೋಚಿಸುತ್ತಾ, ಹುಡುಕಾಟ ನಡೆಸುತ್ತಾ, ಅಂತರ್ಜಾಲ ಶೋಧಿಸುತ್ತಾ ಪರಿಸರ ಸ್ನೇಹಿ ಮನೆಯ ಕನಸು ಕಂಡೆ. ಅದೇ ರೀತಿಯ ಮನೆಯನ್ನು ಕೊನೆಗೂ ಕಟ್ಟಿಸಿಕೊಂಡೆ. ತಂಪು ಗಾಳಿ, ನೈಸರ್ಗಿಕ ಬೆಳಕಷ್ಟೇ ಅಲ್ಲ, ಈ ನಮ್ಮ ಮನೆಯಲ್ಲಿ ಸೌರಶಕ್ತಿಯ ಸದ್ಬಳಕೆಯೂ ಆಗುತ್ತಿದೆ’.

ಪವನ ರಾಯ ತಾಜಾ ಗಾಳಿ  ತಂದೊಪ್ಪಿಸಿದರೆ, ರವಿತೇಜ ಬೆಳಕು, ಶಾಖ ಎರಡನ್ನೂ ನೀಡುತ್ತಿದ್ದಾನೆ, ಸೌರಶಕ್ತಿ ಫಲಕದಿಂದಲೇ ವಿದ್ಯುತ್‌  ಪಡೆಯುತ್ತಿದ್ದೇವೆ. ಹೀಗೆ ನೈಸರ್ಗಿಕ ಮೂಲದ ಸಂಪನ್ಮೂಲಗಳನ್ನೆಲ್ಲಾ ಸಮರ್ಪಕವಾಗಿ ಬಳಸುತ್ತಿರುವುದರಿಂದ ಈಗ ತಿಂಗಳ ಖರ್ಚಿನಲ್ಲಿ ಸಾಕಷ್ಟು ಉಳಿತಾಯವೂ ಆಗುತ್ತಿದೆ’ ಎಂದು ತಮ್ಮ ಇಡೀ ಮನೆಯ ಒಳಗುಟ್ಟನ್ನು ಬಹಿರಂಗಪಡಿಸಿದರು.
40 ಅಡಿ ಅಗಲ ಹಾಗೂ 60 ಅಡಿ ಉದ್ದದ ನಿವೇಶನದಲ್ಲಿ ಕಾಂಕ್ರೀಟ್ ಕಟ್ಟಡದ ಮನೆ ಕಟ್ಟಿಸದೆ ಜೇಡಿಮಣ್ಣಿನಲ್ಲಿ ಅಚ್ಚು ಹಾಕಿ ಬೆಂಕಿಯಲ್ಲಿ ಬೇಯಿಸಿದ ಟೊಳ್ಳು (ಹ್ಯಾಲೊ ಕ್ಲೆ ಬ್ರಿಕ್ಸ್) ಆದರೆ ಬಹಳ ಸದೃಢವಾದ ಇಟ್ಟಿಗೆಗಳನ್ನು ಬಳಸಿಯೇ ಪರಿಸರ ಸ್ನೇಹಿ ಮನೆಯನ್ನು ಕಟ್ಟಿಸಿದ್ದಾರೆ.

ಕಾಂಕ್ರೀಟ್‌ ಕಟ್ಟಡದಿಂದ ತಾಪಮಾನ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಈ ಮನೆಗೆ ಪ್ಲಾಸ್ಟರಿಂಗ್ ಮಾಡಿಲ್ಲ. ಅಡುಗೆ ಕೋಣೆ, ಸ್ನಾನದ ಮನೆಗೆ ಮಾತ್ರ ಅಂದರೆ, ನೀರಿನ ಬಳಕೆ ಇರುವಲ್ಲಿ ಮಾತ್ರವೇ ಪ್ಲಾಸ್ಟರಿಂಗ್‌ ಮಾಡಿಸಲಾಗಿದೆ.

ತಾರಸಿಗೂ ಕಡಿಮೆ ಸಿಮೆಂಟ್‌ ಬಳಸಲಾಗಿದೆ. ಅದು ಹಳೆಕಾಲದ ಮದ್ರಾಸ್‌ ತಾರಸಿ ರೀತಿಯಲ್ಲೇ ಕಾಣುತ್ತದೆ. ಇದರಿಂದ ಶೇ 30–40ರಷ್ಟು ಸಿಮೆಂಟ್‌ ಉಳಿತಾಯವಾಗಿದೆ.

ಮುಖ್ಯವಾಗಿ ಮನೆಯಲ್ಲಿ ಕರ್ಟನ್‌ ಹಾಕಿಕೊಂಡಿಲ್ಲ. ‘ಪರದೆಗಳು, ಗೋಡೆಗಳು ಕಡಿಮೆ ಇರಬೇಕು. ದೊಡ್ಡ ಮನೆಯಾದಾಗ ಕರ್ಟನ್, ಗೋಡೆ ಹೆಚ್ಚಿದಷ್ಟೂ ದೂರ ಆಗುತ್ತೇವೆ ಎಂದು ಅನ್ನಿಸುತ್ತದೆ. ಇದರೊಂದಿಗೆ ದೊಡ್ಡ ಅಡುಗೆ ಮನೆ ಬೇಕಿತ್ತು.

ಇದರಲ್ಲಿ ಡೈನಿಂಗ್‌ ಟೇಬಲ್‌ ಇಲ್ಲ. ಅಡುಗೆ ಮನೆಯಲ್ಲಿಯೇ ನೆಲದ ಮೇಲೆಯೇ ಕುಳಿತು ಊಟ ಮಾಡುತ್ತೇವೆ. 8-10 ಜನರು ಒಟ್ಟಿಗೇ ವೃತ್ತಾಕಾರದಲ್ಲಿ ಕುಳಿತು ಊಟ ಮಾಡಬಹುದಾದಷ್ಟು ಜಾಗ ಇದೆ’ ಎನ್ನುತ್ತಾರೆ ಜನಾರ್ದನ್ ಅವರ ಪತ್ನಿ ವಿನಯಾ.
ಅಡುಗೆ ಮನೆಯಲ್ಲಿ ಪಾತ್ರೆ, ತರಕಾರಿ ತೊಳೆದ ನೀರು ಮನೆ ಮುಂದಿನ ಉದ್ಯಾನಕ್ಕೆ ಹರಿದು ಹೋಗುವಂತೆ ಮಾಡಲಾಗಿದೆ. ಮನೆ ಹಿಂದೆ ಪುಟ್ಟ ಉದ್ಯಾನವಿದ್ದು, ಬಾಳೆ, ವೀಳ್ಯದೆಲೆ ಗಿಡಗಳಿವೆ.

ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆಯೂ ಇದ್ದು, ಮೊದಲ ಹಂತದಲ್ಲಿ ಮನೆಯ ಮೇಲ್ಭಾಗದ ತೊಟ್ಟಿಯಲ್ಲಿ ಹಾಗೂ ನೆಲದಡಿಯ ನೀರಿನ ತೊಟ್ಟಿಯಲ್ಲಿ ಶೇಖರವಾಗುತ್ತದೆ. ಇದರಿಂದ ಕುಡಿಯಲು ಹಾಗೂ ಅಡುಗೆ ಕೆಲಸಕ್ಕೆ ಮಳೆ ನೀರು ಸಾಕಾಗುತ್ತದೆ.

ಇದರೊಂದಿಗೆ ಮನೆಯ ಆಕರ್ಷಣೆ ಎಂದರೆ, ಮನೆಯೊಳಗಿರುವ ಮೆಟ್ಟಿಲುಗಳನ್ನು ಹತ್ತಿ ಮೇಲ್ಗಡೆ ಹೋಗುವಾಗ ಪಕ್ಕದಲ್ಲಿ ಪೂರ್ಣ ಪ್ರಮಾಣದ ಗೋಡೆ ಬಳಸಿಲ್ಲ. ಅದು ಷೋಕೇಸ್‌ ಆಗಿ, ಪುಸ್ತಕ ರ್‌್ಯಾಕ್‌ ಆಗಿಯೂ ಬಳಕೆಯಾಗುತ್ತಿದೆ. ಇದರ ಕೆಳಗೆ ಕುಳಿತು ಓದಬಹುದಾದ ಕಟ್ಟೆಯೂ ಇದೆ.

ಇನ್ನು ತಾರಸಿಗೆ ಸಣ್ಣ ಸಣ್ಣ ಕಮಾನು ಆಕಾರದ (ಜಾರ್ಕ್ ಆರ್ಚ್‌) ಟೈಲ್ಸ್‌ ಬಳಸಿದ್ದರಿಂದ ಕಾಂಕ್ರೀಟ್‌ ಹಾಗೂ ಸ್ಟೀಲ್‌ ಬಳಕೆ ಕಡಿಮೆಯಾಗಿದೆ. ಪ್ಲಾಸ್ಟರಿಂಗ್ ಕೂಡಾ ಮಾಡಿಲ್ಲ. ‘ಕಮಾನು ರೀತಿಯಲ್ಲಿ ಇವು ಇರುವುದರಿಂದ ವೆಂಟಿಲೇಟರ್‌ ಆಗಿಯೂ ಬಳಕೆಯಾಗುತ್ತವೆ. ಕಾಂಕ್ರೀಟ್‌ ಕಟ್ಟಡಗಳ ಮನೆಗಳಿಗಿಂತ ಶೆ 10ರಿಂದ 20ರಷ್ಟು ಉಳಿತಾಯವಾಗುತ್ತದೆ’ ಎನ್ನುತ್ತಾರೆ ದಿವ್ಯಾ.
ಹೀಗೆ, ವಿದ್ಯುತ್ ಉಳಿಸುವ ವಿಧಾನದ ಜತೆಗೆ, ಜೀವನ ಶೈಲಿಯನ್ನೂ ಆಯ್ಕೆ ಮಾಡಿಕೊಳ್ಳುವುದು ಕೂಡಾ ಪರಿಸರಸ್ನೇಹಿ ಮನೆಯಾಗಲು ಸಾಧ್ಯವಾಗುತ್ತದೆ.

ಭಿನ್ನ ವಿನ್ಯಾಸ: ಕಡಿಮೆ ಜನವಿದ್ದಾಗ ಜಾಗ ಚಿಕ್ಕದಾಗಿರುವ ಮನೆಯಂ ತೆಯೂ, ಹೆಚ್ಚು ಜನರು ಇದ್ದಾಗ ಬಹಳ ವಿಸ್ತಾರವಾದ ಮನೆಯಂ ತೆಯೂ ಕಾಣುವಂ ತಿರಬೇಕು ಎಂದೇ ಈ ಮನೆಯನ್ನು ಬಹಳ ಭಿನ್ನವಾಗಿ ಸಜ್ಜುಗೊಳಿ ಸಿದ್ದೇವೆ’ ಎನ್ನುತ್ತಾರೆ ಈ ಮನೆಯನ್ನು ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ವಿ.ಆರ್‌.ದಿವ್ಯಾ.

8 ಇಂಚು ಅಗಲ ಹಾಗೂ 16 ಇಂಚು ಉದ್ದದ ಜೇಡಿಮಣ್ಣಿನ ಟೊಳ್ಳು ಇಟ್ಟಿಗೆಗಳನ್ನು ಬಳಸಿಯೇ ಮನೆ ಕಟ್ಟಲು ಸಲಹೆ ನೀಡಲಾಗಿದೆ.  ಇದರಿಂದ ಇಟ್ಟಿಗೆಗಳು ಶಾಖ ಹೀರಿ ಬೇಸಿಗೆಯಲ್ಲಿ ಮನೆಯೊಳಗೆ ತಂಪು ಉಂಟು ಮಾಡುತ್ತವೆ. ವರ್ಷದ ಎಲ್ಲ ದಿನಗಳಲ್ಲಿಯೂ ಸಾಂಪ್ರದಾಯಿಕ ಶೈಲಿ ಮನೆಗಳಿಗಿಂತ ಈ ಪರಿಸರ ಸ್ನೇಹಿ ಮನೆಯೊಳಗಿನ ತಾಪಮಾನ 2–3 ಡಿಗ್ರಿ ಕಡಿಮೆಯೇ ಇರುತ್ತದೆ. ಚಳಿಗಾಲದಲ್ಲಿ ಹೊರಗಿನ ಕೊರೆಯುವ ಚಳಿ ಒಳಗೆ ಪ್ರವೇಶಿ ಸದಂತೆ ಈ ಟೊಳ್ಳಿಟ್ಟಿ  ಗೋಡೆಗಳು ಮನೆಯ ಒಳಭಾಗವನ್ನು ಬೆಚ್ಚಗೆ ಇರಿಸುತ್ತವೆ ಎಂದು ವಿವರಿಸುತ್ತಾರೆ ದಿವ್ಯಾ.

ಟೊಳ್ಳಾಗಿರುವುದರಿಂದ ಈ ಇಟ್ಟಿಗೆಗಳ ಒಳಭಾಗದಲ್ಲೇ ವಿದ್ಯುತ್‌ ವೈರಿಂಗ್‌ ಮಾಡಲಾಗಿದೆ. ಹಾಗಾಗಿ, ವಿದ್ಯುತ್‌ ಕೊಳವೆ ಮಾರ್ಗಳನ್ನು ಅಳವಡಿಸಲು ಗೋಡೆ ಒಡೆಯಬೇಕಾದ ಪ್ರಮೇಯವೇ ಬರಲಿಲ್ಲ ಎನ್ನುತ್ತಾರೆ ಈ ವಾಸ್ತುಶಿಲ್ಪಿ.

ನೆಲಕ್ಕೆ ಮಧುರೈ ಬಳಿಯ ಆತುಗುಂಡಿ ಟೈಲ್ಸ್‌ ಬಳಸಲಾಗಿದೆ. ಹಳದಿ, ನೀಲಿ ಹಾಗೂ ಕೆಂಪು ಟೈಲ್ಸ್ ಬಳಸಿ ನೆಲವನ್ನು ಚಿತ್ತಾರಗೊಳಿ ಸಲಾಗಿದೆ. ಮನೆಯೊಳಗೇ ಜಗುಲಿ ಇದ್ದ ಹಾಗೆ ಇರಲೆಂದು ಸೆಂಟ್ರಲ್‌ ಕೋರ್ಟ್‌ ಯಾರ್ಡ್‌ ಇದ್ದು, ಆಕರ್ಷಣೆ ಹೆಚ್ಚಿಸಿದೆ. ಇಲ್ಲಿ ನೆಲದಿಂದಲೇ ಗಿಡ ನೆಡಬಹುದು. ಗಿಡಗಳಿಗೆ ಸೂರ್ಯನ ಬೆಳಕು ಹಾಗೂ ಗಾಳಿ ಬರಲು ಗಾಜು ಇಟ್ಟಿಗೆ (ಗ್ಲಾಸ್‌ ಬಾಕ್ಸ್‌) ಬಳಸಿದ್ದಾರೆ. ಇದಕ್ಕೆ ಹತ್ತಿರದಲ್ಲೇ ಫ್ರೆಂಚ್‌ ವಿಂಡೊ ಇದೆ. ಬಿದಿರಿನ ಹೆಣಿಗೆಯಿಂದ ಮಾಡಿದ ಬಾಗಿಲುಗಳವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.