ADVERTISEMENT

ದುಬೈನಲ್ಲಿ ಭಾರತೀಯ ಹೂಡಿಕೆದಾರರ ಮೇಲುಗೈ

ಸುರೇಖಾ ಹೆಗಡೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಹಾರ್ಟ್‌ಲ್ಯಾಂಡ್‌ ವಿಲ್ಲಾ ನೋಟ
ಹಾರ್ಟ್‌ಲ್ಯಾಂಡ್‌ ವಿಲ್ಲಾ ನೋಟ   

ಒಮನ್‌ ಪೌರತ್ವ ಹೊಂದಿರುವ ಭಾರತೀಯ ಮೂಲದ ಪಿಎನ್‌ಸಿ ಮೆನನ್‌ ಹುಟ್ಟುಹಾಕಿದ ಸಂಸ್ಥೆ ಶೋಭಾ ಗ್ರೂಪ್‌. ಶೋಭಾ ಲಿಮಿಟೆಡ್‌ ಎಂದು ಹೆಸರು ಬದಲಾಯಿಸಿಕೊಂಡಿರುವ ಸಂಸ್ಥೆ ಓಮನ್‌, ದುಬೈ ಹಾಗೂ ಭಾರತದ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಪಾರಮ್ಯ ಮೆರೆದಿದೆ. ಕೇವಲ 7 ಡಾಲರ್‌ ಹಣವನ್ನಿಟ್ಟುಕೊಂಡು ಒಮನ್‌ಗೆ ತೆರಳಿ ಒಳಾಂಗಣ ವಿನ್ಯಾಸದಲ್ಲಿ ತೊಡಗಿಕೊಂಡ ಮೆನನ್‌ ನಂತರದ ದಿನಗಳಲ್ಲಿ ಬೆಂಗಳೂರಿಗೆ ವಾಪಸಾಗಿ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಭಾರತದಲ್ಲಿ ಈಗಾಗಲೇ ಹೆಸರು ಮಾಡಿರುವ ‘ಶೋಭಾ’ ದುಬೈನಲ್ಲಿಯೂ ಪ್ರಮುಖ ರಿಯಲ್‌ ಎಸ್ಟೇಟ್‌ ಕಂಪೆನಿಯಾಗಿ ಗುರುತಿಸಿಕೊಂಡಿದೆ.

ದುಬೈ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತೀಯರಿಗೆ ಯಾವ್ಯಾವ ಅವಕಾಶಗಳಿವೆ, ಆಸ್ತಿ ಖರೀದಿಸಲು ದುಬೈ ಸರ್ಕಾರದ ನೀತಿಗಳೇನು ಎನ್ನುವ  ಮಾಹಿತಿ ನೀಡಲು ಶೋಭಾ ಗ್ರೂಪ್‌ ದುಬೈನ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಸಚ್‌ದೇವ್‌ ಬೆಂಗಳೂರಿಗೆ ಬಂದಿದ್ದರು. ಅವರೊಂದಿಗೆ ‘ಮೆಟ್ರೊ’ ನಡೆಸಿದ ಮಾತುಕತೆ ವಿವರ ಇಲ್ಲಿದೆ.

*ದುಬೈನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮದ ಸ್ಥಿತಿಗತಿ ಹೇಗಿದೆ?
ದುಬೈ ವೈಭವಯುತ ಜೀವನಶೈಲಿಗೆ ಹೆಸರುವಾಸಿ. ಅಲ್ಲದೆ ಭಾರತೀಯರಿಗೆ ಇನ್ನೊಂದು ಮನೆ ದುಬೈ ಎನ್ನುವ ಬಾಂಧವ್ಯ ಬೆಳೆದಿದೆ.  ಇತ್ತೀಚೆಗೆ ಎರಡೂ ದೇಶಗಳ ನಡುವೆ ಸಂಬಂಧ ಉತ್ತಮವಾಗಿದೆ.  ಅನೇಕರು ದುಬೈನ ರಿಯಲ್‌ ಎಸ್ಟೇಟ್‌ನಲ್ಲಿ ಹಣ ಹೂಡಲು ಮನಸ್ಸುಮಾಡುತ್ತಿದ್ದಾರೆ.   ದುಬೈ ರಿಯಲ್‌ ಎಸ್ಟೇಟ್‌ನ ಶೇ 25ರಷ್ಟು ಹೂಡಿಕೆ ಭಾರತೀಯರಿಂದಲೇ ಆಗುತ್ತಿದೆ. ಲಕ್ಷುರಿ ಹಾಗೂ ಸೂಪರ್‌ ಲಕ್ಷುರಿಗೆ ಹೆಚ್ಚು ಆದ್ಯತೆ ನೀಡುವ ದುಬೈನಲ್ಲಿ ಸದ್ಯದಲ್ಲೇ ಮಧ್ಯಮ ವರ್ಗದವರಿಗೂ ಸಹಾಯವಾಗುವಂತೆ ಕೈಗೆಟುಕುವ ಬೆಲೆಯಲ್ಲಿ ಮನೆ ನಿರ್ಮಾಣ ಮಾಡುವ ಯೋಜನೆ ಪ್ರಾರಂಭವಾಗಲಿದೆ.

*ಭಾರತೀಯರು ಯಾಕೆ ದುಬೈನಲ್ಲಿ ಹೂಡಿಕೆ ಮಾಡಬೇಕು?
ಪ್ರಪಂಚದಲ್ಲಿಯೇ ಹೆಚ್ಚು ಶ್ರೀಮಂತರಿರುವ ದೇಶ ಭಾರತ. ಎಲ್ಲರೂ ಹಣವನ್ನು ಲಾಭದಾಯಕವಾಗಿ ಹೂಡಿಕೆ ಮಾಡುವ ಬಗೆಗೆ ಯೋಚಿಸುತ್ತಾರೆ. ಇತ್ತೀಚೆಗೆ ಹೂಡಿಕೆ ವಿಷಯದಲ್ಲಿ ಅನೇಕರ ಚಿತ್ತ ರಿಯಲ್‌ ಎಸ್ಟೇಟ್‌ ಕ್ಷೇತ್ರದತ್ತ ಹರಿದಿದೆ. ದುಬೈನಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ಭಾರತೀಯ ಮನಸ್ಥಿತಿಗೆ ಒಪ್ಪುವ ಎಲ್ಲವೂ ಅಲ್ಲಿದ್ದು ಅನೇಕರು ದುಬೈಅನ್ನು ಎರಡನೇ ಮನೆ ಎಂದೇ ಭಾವಿಸಿದ್ದಾರೆ. ಸರ್ಕಾರವೂ ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸಿದ್ದಲ್ಲದೆ ಅವುಗಳು ಹೆಚ್ಚು ಲಾಭದಾಯಕವಾಗಿವೆ. ಅನೇಕ ವಿಷಯಗಳಿಗೆ ಹೋಲಿಸಿದರೆ ಬೆಂಗಳೂರಿನ ರಿಯಲ್‌ ಎಸ್ಟೇಟ್‌ಗಿಂತ ದುಬೈ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಹೆಚ್ಚು ಲಾಭದಾಯಕ.

*ಭಾರತದಲ್ಲಾದ ನೋಟು ರದ್ದತಿ ಪ್ರಕ್ರಿಯೆ ದುಬೈ ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆಯೇ?
ಖಚಿತವಾಗಿ ಹೌದು ಎನ್ನಲಾರೆ. ಆದರೆ ನೋಟು ರದ್ದತಿ ಅತ್ಯುತ್ತಮ ತೀರ್ಮಾನ ಎನ್ನುವುದು ನನ್ನ ಭಾವನೆ. ಇದರಿಂದ ಕಪ್ಪು ಹಣ ಬಿಳಿಯಾಯಿತು. ಬ್ಯಾಂಕ್‌ಗಳಲ್ಲಿ ಹಣ ತುಂಬಿದವು. ಬ್ಯಾಂಕ್‌ನಲ್ಲಿ ಹಣವನ್ನು ಹಾಗೇ ಇಟ್ಟುಕೊಳ್ಳಲು ಯಾರೂ ಮನಸ್ಸು ಮಾಡುವುದಿಲ್ಲ.

*ಯಾವ ಬಗೆಯ ಆಸ್ತಿ ಖರೀದಿಯಲ್ಲಿ ಜನರ ಆಸಕ್ತಿ ಹೆಚ್ಚಿದೆ?
ಅಪಾರ್ಟ್‌ಮೆಂಟ್‌, ವಿಲ್ಲಾ, ಟೌನ್‌ ಹೌಸ್‌ಗಳ ಖರೀದಿಯಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಆಸ್ತಿ ಖರೀದಿಸಿ ಸ್ವಂತವಾಗಿ ಮನೆಕಟ್ಟುವವರಿಗೂ ಸರಳ ನಿಯಮಗಳಿವೆ. ಹೀಗಾಗಿ ನಿವೇಶನ ಖರೀದಿಸುವವರೂ ಹೆಚ್ಚಿದ್ದಾರೆ. ಇನ್ನು ಅಡುಗೆಮನೆ ವಿಷಯದಲ್ಲಿ ಓಪನ್‌ ಹಾಗೂ ಕ್ಲೋಸ್ಡ್‌ ಕಿಚನ್‌ಗೆ ಬೇಡಿಕೆ ಇದೆ.

*ಯಾವ ಶೈಲಿಯ ಮನೆಗಳಿಗೆ ದುಬೈನಲ್ಲಿ ಹೆಚ್ಚು ಬೇಡಿಕೆ ಇದೆ?
ದುಬೈನಲ್ಲಿ ಅರೆಬಿಕ್‌ ಹಾಗೂ ಮಾಡರ್ನ್‌ ಶೈಲಿಯನ್ನು ಮಾತ್ರ ಅನುಸರಿಸಲಾಗುತ್ತದೆ.

*ದುಬೈನಲ್ಲಿ ಕಾರ್ಮಿಕರ ಸಮಸ್ಯೆ ಇದೆಯೇ?
ಇಲ್ಲವೇ ಇಲ್ಲ. ಅಲ್ಲಿ ಕಾರ್ಮಿಕ ಕ್ಯಾಂಪ್‌ಗಳಿರುತ್ತವೆ. ಪಾಕಿಸ್ತಾನ, ಇಂಡಿಯಾ, ಚೀನಾ ಮುಂತಾದ ದೇಶಗಳಿಂದ ಬಂದಿರುವ ಕಾರ್ಮಿಕರಿಗೆ ದುಬೈ ಸರ್ಕಾರದ ನಿಯಮಗಳ ಪ್ರಕಾರ ಸಂಬಳ ನೀಡಲಾಗುತ್ತದೆ. ಹೀಗಾಗಿ  ಯಾವುದೇ ಸಮಸ್ಯೆಯ ಮಾತಿಲ್ಲ.

* ದುಬೈನಲ್ಲಿ  ‘ಶೋಭಾ’ ಯೋಜನೆಗಳು ಯಾವುವು?
‘ಶೋಭಾ ಹಾರ್ಟ್‌ಲ್ಯಾಂಡ್‌’ ಸಂಪೂರ್ಣವಾಗಿ ‘ಶೋಭಾ ಗ್ರೂಪ್‌’ ನಿಯಂತ್ರಣದಲ್ಲಿದೆ. ಇನ್ನು ‘ಮೈದಾನ್‌ ಶೋಭಾ’ ಎನ್ನುವ ಯೋಜನೆಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿದ್ದೇವೆ. ಸದ್ಯದಲ್ಲೇ ಕೈಗೆಟುಕುವ ಬೆಲೆಯಲ್ಲಿ ಮನೆ ನಿರ್ಮಾಣ ಯೋಜನೆಯನ್ನೂ ಜಾರಿಗೊಳಿಸಲಿದ್ದೇವೆ. 

ದುಬೈ ವೈಶಿಷ್ಟ್ಯ
*ಭೌಗೋಳಿಕವಾಗಿ ಎಲ್ಲ ದೇಶಗಳಿಗೂ ಸಾಮೀಪ್ಯ ಹೊಂದಿದೆ
* ವೈಭವೋಪೇತ ಜೀವನ ಶೈಲಿ
* ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರ ಪರವಾದ ಸರ್ಕಾರದ ಸರಳ ನಿಯಮಗಳು
* ಆಸ್ತಿ ನೋಂದಣಿ ಪ್ರಕ್ರಿಯೆ ತೀರಾ ಸುಲಭ
* ಆರ್‌ಬಿಐ ಹಣ ರವಾನೆ ಯೋಜನೆಯಡಿ ವರ್ಷದಲ್ಲಿ ದಂಪತಿಯು ಕಾನೂನುಬದ್ಧವಾಗಿ 3.4 ಕೋಟಿಯಷ್ಟು ಹಣವನ್ನು ದುಬೈಗೆ ಕಳುಹಿಸಬಹುದು.
* ದುಬೈನಲ್ಲಿ ವಾರ್ಷಿಕವಾಗಿ ಶೇ 20–ಶೇ 30 ರಷ್ಟು ಬಂಡವಾಳದ ಮೌಲ್ಯ ಏರಿಕೆ ಕಾಣುತ್ತಿದೆ.
* ದುಬೈನಲ್ಲಿ ಮನೆ ಖರೀದಿ ಮಾಡುವ ಗ್ರಾಹಕನಿಗೆ (ಭಾರತೀಯನೇ ಆದರೂ) ಅಲ್ಲಿನ ಬ್ಯಾಂಕ್ ಶೇ 50ರಷ್ಟು ಗೃಹಸಾಲ ನೀಡುತ್ತದೆ. ಅದಕ್ಕೆ ಶೇ 3.99ರಿಂದ ಶೇ 4ರಷ್ಟು ಬಡ್ಡಿ ಇರುತ್ತದೆ.
* 2016ರಲ್ಲಿ ಕೇವಲ ಭಾರತೀಯರು ದುಬೈ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಿರುವ ಹಣ 12ಶತಕೋಟಿ ಅರಬ್‌ ಎಮಿರೇಟ್ಸ್‌ ದಿನಾರ್‌ (ಎಇಡಿ). ಅಂದರೆ ಅಂದಾಜು ₹ 22ಸಾವಿರ ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT