ADVERTISEMENT

ನಿರ್ಮಾಣ ಕ್ಷೇತ್ರದಲ್ಲಿ ಬೆಲೆ ಏರಿಕೆ ತಲ್ಲಣ

ವಿದ್ಯಾಶ್ರೀ ಎಸ್.
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ನಿರ್ಮಾಣ ಕ್ಷೇತ್ರದಲ್ಲಿ ಬೆಲೆ ಏರಿಕೆ ತಲ್ಲಣ
ನಿರ್ಮಾಣ ಕ್ಷೇತ್ರದಲ್ಲಿ ಬೆಲೆ ಏರಿಕೆ ತಲ್ಲಣ   
ಕಟ್ಟಡ ನಿರ್ಮಾಣದ ಕನಸು ಹೊತ್ತಿದ್ದ ಎಷ್ಟೋ ಮಂದಿಗೆ ಕಟ್ಟಡ ಪರಿಕರಗಳ ಬೆಲೆ ಏರಿಕೆ ದೊಡ್ಡ ಶಾಕ್‌ ನೀಡಿದೆ. ತೆರಿಗೆ, ಪೆಟ್ರೋಲ್‌ ಬೆಲೆ ಹೆಚ್ಚಾದಾಗಲೆಲ್ಲ ದರ ಏರಿಕೆಯಾಗುತ್ತಿದ್ದುದ್ದು ಸಾಮಾನ್ಯ. ಆದರೆ ಈ ಬಾರಿ ಅದ್ಯಾವ ಕಾರಣವೂ ಇಲ್ಲದೆ   ಒಮ್ಮೆಲೇ ಸಿಮೆಂಟ್‌, ಇಟ್ಟಿಗೆ, ಕಬ್ಬಿಣ, ಮರಗಳ ಬೆಲೆಯನ್ನು ಶೇ. 25ರಿಂದ ಶೇ. 30ರಷ್ಟು ಏರಿದೆ.  
 
ಇದೇ ಮೊದಲ ಬಾರಿಗೆ ಅಬ್ಬಾ ಎನ್ನುವಷ್ಟು ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಹೆಚ್ಚಿದ್ದು, ಮೇ ತಿಂಗಳಿನಲ್ಲಿ ರೇರಾ ಕಾಯಿದೆ ಅನುಷ್ಠಾನ ಆಗುತ್ತಿರುವುದರಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೂ ಪೆಟ್ಟು ಬೀಳುವ ಸಂಭವವಿದೆ ಎನ್ನಲಾಗುತ್ತಿದೆ.  
 
ಈಗಾಗಲೇ ಕಟ್ಟಡ ನಿರ್ಮಾಣ ಮಾಡುತ್ತಿರುವವರು ಅದನ್ನು ಅರ್ಧಕ್ಕೆ ನಿಲ್ಲಿಸಲಾಗದೆ ಪರದಾಡುತ್ತಿದ್ದರೆ, ಕಟ್ಟಡ ನಿರ್ಮಾಣ ಯೋಜನೆ ಹಾಕಿಕೊಂಡವರು, ಇನ್ನು ಸ್ವಲ್ಪ ದಿನ ಕಾದು ನೋಡೋಣ, ಬೆಲೆ ಕಡಿಮೆಯಾಗಬಹುದು ಎಂಬ ಮನಸ್ಥಿತಿಗೆ ಬಂದಿದ್ದಾರೆ. 
 
‘ಮನೆಗೆ ಸಾಲ ಪಡೆಯಲು ಸಿಮೆಂಟ್‌, ಮರಳು, ಕಬ್ಬಿಣ ಇತರ ವಸ್ತುಗಳ ಅಂದಾಜು ಧಾರಣೆ ಪಟ್ಟಿಯನ್ನು ಬ್ಯಾಂಕಿಗೆ ಕೊಟ್ಟಿದ್ದೆವು.  ಅಂದಾಜು ವೆಚ್ಚಕ್ಕೆ ತಕ್ಕಂತೆ ಸಾಲ ಮಂಜೂರಾಗುತ್ತದೆ. ಈಗ ದರ ಏರಿಕೆಯಿಂದಾಗಿ ಮನೆ ಪೂರ್ಣಗೊಳಿಸುವುದೇ ಚಿಂತೆಯಾಗಿದೆ’ ಎನ್ನುತ್ತಾರೆ ಕಸ್ತೂರಿ ನಗರ ನಿವಾಸಿ ರಾಧಾ.
 
ಬೆಲೆ ಏರಿಕೆಯಿಂದಾಗಿ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಆಗುತ್ತಿರುವ ತಲ್ಲಣಗಳ ಬಗ್ಗೆ ಕ್ರೆಡಾಯ್‌ ನಿರ್ದೇಶಕ ಸುರೇಶ್‌ ಹರಿ ವಿವರಿಸುವುದು ಹೀಗೆ...
 
‘ಸಿಮೆಂಟ್‌ ಬೆಲೆಯನ್ನು ಕಳೆದ ಒಂದು ವರ್ಷದಿಂದ ವಿಪರೀತ ಎನ್ನುವಷ್ಟು ಏರಿಕೆ ಮಾಡುತ್ತಲೇ ಇದ್ದಾರೆ. ಉತ್ಪಾದನೆ ಕಡಿಮೆ ಮಾಡಿ ದರವನ್ನು ಹೆಚ್ಚಿಸುತ್ತಿದ್ದಾರೆ.  ಈ ಕುರಿತು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದೇವೆ. 
 
‘ಬೇಡಿಕೆ ಹೆಚ್ಚಿದ್ದಾಗ ದರ ಹೆಚ್ಚು ಮಾಡುವುದು ಸಾಮಾನ್ಯ. ಡಿಸೆಂಬರ್‌ ತಿಂಗಳಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಚುರುಕಾಗಿರುವುದಿಲ್ಲ. ಯಾವ ಯೋಜನೆಗಳನ್ನು ಆರಂಭಿಸುವುದಿಲ್ಲ.

ಸಂಕ್ರಾಂತಿ ನಂತರ ರಿಯಾಯಿತಿಗಳನ್ನು ನೀಡುತ್ತೇವೆ. ನಂತರ ಸ್ವಲ್ಪ ಚುರುಕುಗೊಳ್ಳುತ್ತದೆ. ಕಳೆದ ಡಿಸೆಂಬರ್‌ನಲ್ಲಿ ನೋಟು ಅಮಾನ್ಯೀಕರಣಗೊಂಡಿತ್ತು. ವ್ಯಾಪಾರ ತೀರಾ ಕುಸಿತಗೊಂಡ ಸಮಯವದು.

ಆ ವೇಳೆಯೇ ಕಬ್ಬಿಣ, ಸಿಮೆಂಟ್‌ ಬೆಲೆಯನ್ನು ಶೇ 25ರಷ್ಟು ಹೆಚ್ಚಿಸಿದ್ದರು. ಮೇ ತಿಂಗಳಿನಲ್ಲಿ ರೇರಾ ಕಾಯಿದೆ ಅನುಷ್ಠಾನವಾಗಲಿದೆ. ಇದರಿಂದ ನಾವು ಹಲವು ನಿಯಮಗಳಿಗೆ ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ.

ಗ್ರಾಹಕರ ಬಳಿ ‘ಪರಿಕರಗಳ ಬೆಲೆ ಏರಿದೆ, ಹೀಗಾಗಿ ಹೆಚ್ಚು ದುಡ್ಡು ಕೊಡಿ’ ಎಂದು ಕೇಳುವುದಕ್ಕೆ ಆಗುವುದಿಲ್ಲ. ಇಂತಿಷ್ಟೇ ಅವಧಿಯಲ್ಲಿ ಕೆಲಸ ಮುಗಿಸಿಕೊಡಬೇಕು. ಇಲ್ಲದಿದ್ದರೆ ನಾವು ದಂಡ ತೆರಬೇಕಾಗುತ್ತದೆ.
 
‘ಹೀಗೆಲ್ಲಾ ನಿಯಮಗಳಿದ್ದಾಗ ಜನರಿಗೆ ರಿಯಾಯಿತಿಗಳನ್ನು ನೀಡಲು ಆಗುವುದಿಲ್ಲ. ಎರಡು ವರ್ಷಗಳ ಪ್ರಾಜೆಕ್ಟ್‌ಗಳು ಮೂರು ವರ್ಷ ತೆಗೆದುಕೊಳ್ಳುತ್ತದೆ ಎಂದು ಮೊದಲೇ ಹೇಳಿಬಿಡಬೇಕಾಗುತ್ತದೆ. ಏಕೆಂದರೆ ಸರಿಯಾದ ಸಮಯಕ್ಕೆ ಕೊಡಲು ಆಗದಿದ್ದರೆ ನಾವೇ ತೊಂದರೆ ಅನುಭವಿಸಬೇಕು. ಇದೇ ರೀತಿ ಮರದ ದರ ಕೂಡ ಹೆಚ್ಚುತ್ತಿದೆ. ಒಂದು ಲೋಡ್‌್ ಮರದ ಬೆಲೆ ರೂಪಾಯಿ ₹ 35 ಸಾವಿರ ಇದೆ. ಇಷ್ಟು ದುಡ್ಡು ಕೊಟ್ಟರೂ ಶುದ್ಧ ಮರ ಸಿಗುತ್ತಿಲ್ಲ. 
 
‘ಮುಂದಿನ ಮೂರು ತಿಂಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಬಹುದೆಂಬ ಅನುಮಾನವಿದೆ. ಹೀಗೆ ಹೆಚ್ಚುತ್ತಿದ್ದರೆ ಸರಿಯಾದ ಸಮಯಕ್ಕೆ ಪ್ರಾಜೆಕ್ಟ್‌ಗಳನ್ನು ಮುಗಿಸಿ ಕೊಡಲು ಆಗುವುದಿಲ್ಲ. ನಾಲ್ಕು ವರ್ಷಗಳ ಹಿಂದೆ ಹೀಗೆ ಸಿಮೆಂಟ್‌ ಕಂಪೆನಿ ಅವರು ದರ ಹೆಚ್ಚು ಮಾಡಿದ್ದಕ್ಕೆ ಕೇಂದ್ರ ಸರ್ಕಾರ ದಂಡವನ್ನು ಹಾಕಿತ್ತು.  ನೈಸರ್ಗಿಕ ಸಂಪನ್ಮೂಲಗಳಿಂದ ಸಿಮೆಂಟ್‌ ತಯಾರಿಸಲಾಗುತ್ತದೆ. ಸಂಪನ್ಮೂಲಗಳಿವೆ ಅದರ ಬಳಕೆ ಸರಿಯಾಗಿ ಆಗುತ್ತಿಲ್ಲ‘.
 
ಬೆಲೆ ಏರಿಕೆಯ ಬಿಸಿ ಸಿಮೆಂಟ್‌ ವಿತರಕರಿಗೂ ತಟ್ಟಿದೆ. ಗ್ರಾಹಕರು ಮತ್ತು ಸಿಮೆಂಟ್‌ ಕಂಪೆನಿಗಳ ನಡುವೆ ಏಗುವಂತಹ ಪರಿಸ್ಥಿತಿ ಅವರದು. ‘ಸಿಮೆಂಟ್‌ ಕಂಪೆನಿಯವರು ಇದಕ್ಕಿದ್ದಂತೆ ಇಂತಿಷ್ಟು ದಿನ ಎಂದು ರಜೆ ಘೋಷಿಸಿಕೊಳ್ಳುತ್ತಾರೆ.  

ಆ ವೇಳೆಯಲ್ಲಿ ಡೀಲರ್‌ಗಳಿಗೆ ಸಿಮೆಂಟ್‌ ಪೂರೈಕೆಯಾಗುವುದಿಲ್ಲ. ಆಗ ಹಳೆ ಸಂಗ್ರಹಗಳನ್ನು ನಾವು ಮಾರಾಟ ಮಾಡಬೇಕು. ನಂತರ ಹೊಸ ದರ ನಿಗದಿಯಾದ ಮೇಲೆ ಮಾರಾಟ ಕಡಿಮೆಯಾಗಿದೆ’ ಎನ್ನುತ್ತಾರೆ ಸಿಮೆಂಟ್‌ ವಿತರಕ ಮುರಳಿ ಕೃಷ್ಣ.
 
‘ಈಗಿನ ಬೆಲೆಗೆ ಗ್ರಾಹಕರಿಗೆ ಒಂದು ಸಾವಿರ ಮೂಟೆಯ ಮೇಲೆ 50 ಸಾವಿರ ರೂಪಾಯಿಯಷ್ಟು ಹೆಚ್ಚಿನ ಹೊರೆ ಬೀಳುತ್ತದೆ’ ಎಂದು ಅವರು ವಿವರಿಸುತ್ತಾರೆ.
‘ಮೂರು ತಿಂಗಳಿನಿಂದ ಇಟ್ಟಿಗೆ ಬೆಲೆ  ಒಂದು ರೂಪಾಯಿ ಹೆಚ್ಚಾಗಿದೆ. ಇಟ್ಟಿಗೆ ತಯಾರಿಕೆಗೆ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆಯೂ ಅಧಿಕವಾಗಿದೆ. ನಿಗದಿತ ಬಜೆಟ್‌ನಲ್ಲಿ ಮನೆ ನಿರ್ಮಿಸಬೇಕು ಎಂದುಕೊಂಡವರಿಗೆ ಇದರಿಂದ ತೊಂದರೆಯಾಗಿದೆ’ ಎನ್ನುತ್ತಾರೆ ಇಟ್ಟಿಗೆ ವ್ಯಾಪಾರಿ ವಿಜಯಕುಮಾರ್‌.
 
‘ಹೀಗೆ ದಿಢೀರನೇ ದರ ಹೆಚ್ಚು ಮಾಡುವುದರಿಂದ ಗ್ರಾಹಕರು ನಮ್ಮ ಮೇಲೆಯೇ ಅನುಮಾನ ಪಡುತ್ತಾರೆ’ ಎನ್ನುತ್ತಾರೆ ಕಬ್ಬಿಣ ವಿತರಕ ಮನು. ‘ವಾಣಿಜ್ಯ ಕಟ್ಟಡ ನಿರ್ಮಿಸುವವರಿಗಾದರೆ ದರ ಏರಿಕೆಯ ಬಗ್ಗೆ ತಿಳಿದಿರುತ್ತದೆ. ಅದೇ ಕಡಿಮೆ ಹಣದಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಬೇಕು ಎಂದುಕೊಳ್ಳುವವರಿಗೆ ಅವರ ಬಜೆಟ್‌ ಮೀರಿ ಹಣ ಖರ್ಚಾಗುತ್ತಿದೆ ಎನಿಸಿದಾಗ ನಾವೇ ಹೆಚ್ಚು ವಸೂಲಿ ಮಾಡುತ್ತಿದ್ದೇವೆ ಎಂದುಕೊಳ್ಳುತ್ತಾರೆ’ ಎನ್ನುತ್ತಾರೆ ಅವರು. 
 
‘ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ಕಟ್ಟಡ ನಿರ್ಮಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಕಂಪೆನಿ. ದರವನ್ನು ಇಷ್ಟೇ ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂಬ ನಿಯಮವಿಲ್ಲ. ಮತ್ತೆ ನಮ್ಮ ಸಂಘಟನೆ ಕೂಡ ಇಲ್ಲ. ಹಾಗಾಗಿ ಒಗ್ಗಟ್ಟಾಗಿ ಯಾರೂ ಅವರನ್ನು ಪ್ರಶ್ನಿಸುತ್ತಿಲ್ಲ. ಇದೇ ಕಾರಣಕ್ಕೆ ಮನಸ್ಸಿಗೆ ಬಂದಂತೆ ಹಣ ಏರಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.