ADVERTISEMENT

ಪ್ರಗತಿಗೆ ಹಾನಿಯಾದೀತು ಜಾಗೃತೆ..

ಎಸ್.ನರೇಂದ್ರ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಪ್ರಗತಿಗೆ ಹಾನಿಯಾದೀತು ಜಾಗೃತೆ..
ಪ್ರಗತಿಗೆ ಹಾನಿಯಾದೀತು ಜಾಗೃತೆ..   

ರಾಜ್ಯ ಸರ್ಕಾರವು ವಿಳಂಬವಾಗಿ ಮತ್ತು ಒಲ್ಲದ ಮನಸ್ಸಿನಿಂದ ‘ಕರ್ನಾಟಕ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ’ (ಕೆರೇರಾ) ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತು (10-07-17). ಕೇಂದ್ರ ಸರ್ಕಾರ ರೇರಾ ಜಾರಿಗೆ ತಂದು ಸುಮಾರು ಒಂದು ವರ್ಷ ಕಳೆದ ನಂತರ ರಾಜ್ಯ ಸರ್ಕಾರದ ಅಧಿಸೂಚನೆ ಹೊರಬಿತ್ತು. ಜಮೀನು ಅಥವಾ ಭೂಮಿಯ ಬಳಕೆ ವಿಚಾರ ರಾಜ್ಯಗಳ ವ್ಯಾಪ್ತಿಗೆ ಬರುವುದರಿಂದ ಎಲ್ಲ ರಾಜ್ಯಗಳು 2017ರ ಜುಲೈ ಒಳಗಾಗಿ ತಮ್ಮದೇ ಆದ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲೇಬೇಕಾಗಿತ್ತು.

500 ಚದರ ಮೀಟರ್‌ (5,382 ಚದರ ಅಡಿ) ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಜಮೀನಿನಲ್ಲಿ ಕೈಗೊಳ್ಳುವ ಕಟ್ಟಡ ನಿರ್ಮಾಣ ಯೋಜನೆಗಳು ಅಥವಾ ಎಂಟು ಹಾಗೂ ಅದಕ್ಕಿಂತ ಹೆಚ್ಚು ಅಪಾರ್ಟ್‌ಮೆಂಟ್‌ಗಳು ರೇರಾ ವ್ಯಾಪ್ತಿಗೆ ಬರುತ್ತವೆ. ಈ ಯೋಜನೆಗಳನ್ನು ರಾಜ್ಯಗಳು ಸ್ಥಾಪಿಸಿರುವ ನಿಯಂತ್ರಣ ಪ್ರಾಧಿಕಾರಗಳಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಆದರೆ, ನೋಂದಣಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

ವಿಯಾಯ್ತಿ ವಿಚಾರ

ADVERTISEMENT

1. 2017ರ ಮೇ ತಿಂಗಳಿಗಿಂತಲೂ ಮೊದಲು ವಾಸ್ತವ್ಯ ಪ್ರಮಾಣಪತ್ರ ಪಡೆದಿರುವ (ಒಸಿ) ವಸತಿ/ವಾಣಿಜ್ಯ ಉದ್ದೇಶದ ಯೋಜನೆಗಳು, 2017ರ ಮೇ 1ರ ನಂತರ ವಾಸ್ತವ್ಯ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿರುವ ಮತ್ತು ನಿಗದಿತ 90 ದಿನಗಳ ಅವಧಿಯೊಳಗೆ, ಅಂದರೆ 2017ರ ಜುಲೈ 31ರ ಒಳಗಾಗಿ ಒಸಿ ಪಡೆದಿರುವ ಯೋಜನೆಗಳಿಗೆ ಕೆರೇರಾದಿಂದ ವಿನಾಯಿತಿ ಇದೆ.

2. ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಯೋಜನಾ ನಕ್ಷೆಯಂತೆ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿದ್ದರೆ, ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ 60ರಷ್ಟು ಅಪಾರ್ಟ್‌ಮೆಂಟ್‌ಗಳು/ಮನೆಗಳು/ನಿವೇಶನಗಳ ಮಾರಾಟ ಪ್ರಕ್ರಿಯೆಯನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿದ್ದರೆ, ಅಂತಹ ಯೋಜನೆಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

3. ಫ್ಲ್ಯಾಟ್‌ಗಳನ್ನು ಪಡೆದಿರುವವರೇ ಸದಸ್ಯರಾಗಿರುವ ನೋಂದಾಯಿತ ಒಕ್ಕೂಟಗಳಿಗೆ ಹಸ್ತಾಂತರ ಮಾಡಿರುವ ಅಪಾರ್ಟ್‌ಮೆಂಟ್‌ಗಳು ಮತ್ತು ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ನಿವೇಶನ, ರಸ್ತೆ, ಚರಂಡಿ ಸೇರಿದಂತೆ ಇತರೆ ಸೌಕರ್ಯಗಳ ನಿರ್ವಹಣೆಯನ್ನು ಯೋಜನಾ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಿರುವ ಲೇಔಟ್‌ಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

ನೋಂದಣಿ ಕಡ್ಡಾಯ

ಕೆರೇರಾ ಅಡಿಯಲ್ಲಿ ಎಲ್ಲ ಬಿಲ್ಡರ್‌ಗಳು ಮತ್ತು ಮಧ್ಯವರ್ತಿಗಳು ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆಗಳು ಮತ್ತು ಹೊಸದಾಗಿ ಆರಂಭಿಸುವ ಯೋಜನೆಗಳನ್ನು rera.karnataka.gov.in ಎಂಬ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರವು 2017ರ ಜುಲೈ ತಿಂಗಳ ಕೊನೆಯ ವಾರದಿಂದಷ್ಟೇ ಈ ಪೋರ್ಟಲ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಿತ್ತು. ನಂತರದಲ್ಲಿ ಗಡುವನ್ನು 2017ರ ಆಗಸ್ಟ್‌ 31ರವರೆಗೆ ವಿಸ್ತರಿಸಿತ್ತು.

ತಾಂತ್ರಿಕ ಮತ್ತು ಸಾಫ್ಟ್‌ವೇರ್‌ ದೋಷಗಳ ಕಾರಣಕ್ಕೆ ಮತ್ತು ಬಿಲ್ಡರ್‌ಗಳು ದೊಡ್ಡ ಪ್ರಮಾಣದಲ್ಲಿ ದತ್ತಾಂಶಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವಾಗ ಪದೇಪದೇ ಸರ್ವರ್‌ ಸಮಸ್ಯೆ ಎದುರಾಗಿದ್ದರಿಂದ ಗಡುವನ್ನು ವಿಸ್ತರಿಸಲಾಗಿತ್ತು.

ಆದರೆ, ಈ ಅವಧಿಯಲ್ಲಿ ಪೋರ್ಟಲ್‌ನಲ್ಲಿ ನೋಂದಣಿಯಾದ ಯೋಜನೆಗಳ ಅಂಕಿ ಅಂಶಗಳು ಗಾಬರಿ ಹುಟ್ಟಿಸುತ್ತವೆ. ಇದುವರೆಗೆ ಬಿಲ್ಡರ್‌ಗಳು ಕೇವಲ 1,450 ಯೋಜನೆಗಳನ್ನು ನೋಂದಾಯಿಸಿದ್ದರೆ, ಏಜೆಂಟ್‌ಗಳು ನೋಂದಣಿ ಮಾಡಿರುವ ಯೋಜನೆಗಳ ಸಂಖ್ಯೆ ಬರೀ 600!

ಕರ್ನಾಟದಾದ್ಯಂತ ಸುಮಾರು 60 ಸಾವಿರ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ. ಆಗಸ್ಟ್‌ 31ರ ಒಳಗಾಗಿ ಕನಿಷ್ಠ 6,000 ಏಜೆಂಟ್‌ಗಳು ತಮ್ಮ ಯೋಜನೆಯ ವಿವರಗಳನ್ನು ಪೋರ್ಟಲ್‌ನಲ್ಲಿ ಹಾಕುವುದರ ಜೊತೆಗೆ ಅವುಗಳನ್ನು ನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೆ ಅದು ಆಗಿಲ್ಲ.

ಸಮಸ್ಯೆಗಳ ಸರಮಾಲೆ

ರೇರಾ ಪೋರ್ಟಲ್‌ನ ಸರ್ವರ್‌ನ ತೊಂದರೆಯಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಯೋಜನೆಗೆ ಸಂಬಂಧಿಸಿದ ದತ್ತಾಂಶಗಳನ್ನು ಬಿಲ್ಡರ್‌ಗಳು ವೆಬ್‌ಸೈಟ್‌ಗೆ ತುಂಬುವಾಗ ಸಮಸ್ಯೆ ಎದುರಿಸಬೇಕಾಯಿತು.

ಇದಲ್ಲದೇ, ಅಧಿಕಾರಶಾಹಿಯ ವಿಳಂಬ ಧೋರಣೆಯಿಂದಾಗಿ ಹಲವು ನಿರ್ಮಾಣ ಯೋಜನೆಗಳಿಗೆ ಬಿಲ್ಡರ್‌ಗಳು ಅನುಮತಿ ಪಡೆಯಲು ತಡವಾಗಿದೆ. ಹಣಕ್ಕಾಗಿ ಬೇಡಿಕೆ ಇಡುವುದು ಮತ್ತು ಟಿಡಿಆರ್‌ಗೆ ಸಂಬಂಧಿಸಿದ ನೀತಿಯ ಕುರಿತು ಸರ್ಕಾರ ಸೃಷ್ಟಿಸಿದ ಗೊಂದಲ, ಅಕ್ರಮ–ಸಕ್ರಮ ಯೋಜನೆಯಲ್ಲಿನ ವಿಳಂಬ, ಬಿ–ಖಾತೆ ಸಮಸ್ಯೆಗಳಿಂದಾಗಿಯೂ ಬಿಲ್ಡರ್‌ಗಳು ಮತ್ತು ಏಜೆಂಟ್‌ಗಳಿಗೆ ನಿಗದಿತ ಅವಧಿಯೊಳಗೆ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಲು ಸಾಧ್ಯವಾಗಿಲ್ಲ.

ಸೆ.1ರ ನಂತರ ಪೋರ್ಟಲ್‌ನಲ್ಲಿ ಯೋಜನೆಗಳನ್ನು ನೋಂದಣಿ ಮಾಡುವವರಿಗೆ ಗರಿಷ್ಠ ₹10 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಕೆರೇರಾ ಆಗಸ್ಟ್‌ 28ರಂದು ಪ್ರಕಟಣೆ ಹೊರಡಿಸಿದೆ. ಕೆರೇರಾ ಅಡಿಯಲ್ಲಿ ನೋಂದಣಿ ಮಾಡದ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಅವಕಾಶವೂ ಇಲ್ಲ ಎಂದು ಸ್ಪಷ್ಟಪಡಿಸಿದೆ.

ನಿಯಮ ಉಲ್ಲಂಘಿಸುವವರಿಗೆ ಒಟ್ಟು ಯೋಜನಾ ವೆಚ್ಚದ ಶೇ.10ರಷ್ಟು ಮೊತ್ತವನ್ನು ದಂಡ ಹಾಕಲು ಮತ್ತು ಬಿಲ್ಡರ್‌ಗಳಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸುವುದಕ್ಕೂ ಕಾಯ್ದೆಯಲ್ಲಿ ಅವಕಾಶ ಇದೆ. ಯೋಜನೆಗಳಿಗೆ ನೀಡಿದ ಅನುಮತಿಯನ್ನು ರದ್ದುಪಡಿಸುವುದು, ಬಿಲ್ಡರ್‌ಗಳಿಗೆ ನೀಡಲಾಗಿರುವ ಶಿಕ್ಷೆಯ ವಿವರಗಳನ್ನು ಬೇರೆ ರಾಜ್ಯಗಳ ರೇರಾ ಪ್ರಾಧಿಕಾರಗಳೊಂದಿಗೆ ಹಂಚುವುದರ ಜೊತೆಗೆ ಸಾರ್ವಜನಿಕವಾಗಿ ಪ್ರದರ್ಶಿಸುವ ಆಯ್ಕೆಗಳನ್ನೂ ರೇರಾ ಕಾಯ್ದೆ ಪ್ರಾಧಿಕಾರಕ್ಕೆ ಒದಗಿಸುತ್ತದೆ.

ಈ ಕಾಯ್ದೆಯಲ್ಲಿನ ದಂಡ ವಿಧಿಸುವ ನಿಯಮಗಳು ಕಠಿಣವಾಗಿವೆ. ಆದರೆ ಕಾಯ್ದೆಯಡಿ ಅನುಮತಿ ಪಡೆಯಲು ಯತ್ನಿಸುವ ಬಿಲ್ಡರ್‌ಗಳು ಅಧಿಕಾರಶಾಹಿಯ ನಿಧಾನ ಧೋರಣೆಯಿಂದ ಎದುರಿಸುವ ಸಮಸ್ಯೆಗಳಿಗೆ ಯಾರು ಹೊಣೆ? ವಿಳಂಬಕ್ಕೆ ಅಧಿಕಾರಶಾಹಿಯನ್ನು ಜವಾಬ್ದಾರರನ್ನಾಗಿಸದೇ ಎಲ್ಲ ತಪ್ಪನ್ನೂ ಬಿಲ್ಡರ್‌ಗಳ ಮೇಲೆಯೇ ಕಟ್ಟುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಎದುರಾಗಿದೆ.

ಅರ್ಥ ವ್ಯವಸ್ಥೆಗೆ ಧಕ್ಕೆ

ರಿಯಲ್‌ ಎಸ್ಟೇಟ್‌ ಎಂಬುದು ಅತ್ಯಂತ ಮಹತ್ವದ ಕ್ಷೇತ್ರ. 130 ಕೈಗಾರಿಕೆಗಳೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಪರ್ಕ ಹೊಂದಿರುವ ಈ ವಲಯವು ಉದ್ಯೋಗ, ಆದಾಯ, ಉಳಿತಾಯ ಮತ್ತು ಬಂಡವಾಳ ಹೂಡಿಕೆಯ ಮೇಲೆ ಗಣನೀಯವಾಗಿ ಪ್ರಭಾವ ಬೀರುತ್ತದೆ. ರೇರಾ ಕಾಯ್ದೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸದೇ ಇದ್ದಲ್ಲಿ, ಇದು ರಾಜ್ಯದ ಅರ್ಥವ್ಯವಸ್ಥೆಗೆ ಹಾನಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ನೋಟು ರದ್ದತಿ ನೀಡಿದ ಆಘಾತದಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ರಿಯಲ್‌ ಎಸ್ಟೇಟ್‌ ವಲಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈಗ ರೇರಾದಿಂದ ಅದು ಮತ್ತೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

2016ರ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್‌–ಡಿಸೆಂಬರ್‌) ನೋಟು ರದ್ದತಿ ಇಡೀ ವಲಯವನ್ನು ಬಾಧಿಸಿತ್ತು. 2017ರ ಆರ್ಥಿಕ ವರ್ಷದ ಮೊದಲೆರಡು ತ್ರೈಮಾಸಿಕದಲ್ಲಿ ಜಿಎಸ್‌ಟಿಯು ಕಟ್ಟಡ ನಿರ್ಮಾಣ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು (ಕಟ್ಟಡ ನಿರ್ಮಾಣದಲ್ಲಿ ಬಳಸುವ ವಸ್ತುಗಳು, ಫ್ಲ್ಯಾಟ್‌ಗಳು ಮತ್ತು ಪೂರ್ಣಗೊಂಡ ಯೋಜನೆಗಳ ಮೇಲೆ ನಿಗದಿಪಡಿಸಬೇಕಾದ ದರಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ). ಈಗ ಕೆರೇರಾವು ಈ ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನು ಅಧಃಪತನದತ್ತ ಕೊಂಡೊಯ್ಯುವ ಲಕ್ಷಣಗಳು ಕಾಣಿಸುತ್ತಿವೆ.

ಅಪಾರ್ಟ್‌ಮೆಂಟ್‌ನ ಮೌಲ್ಯದ ಶೇ 10ಕ್ಕಿಂತ ಹೆಚ್ಚು ಮೊತ್ತವನ್ನು ಪಡೆದು ಬಿಲ್ಡರ್‌ಗಳು ಗ್ರಾಹಕರೊಂದಿಗೆ ಮಾಡುವ ಮಾರಾಟ ಒಪ್ಪಂದದ (ಅಗ್ರಿಮೆಂಟ್ ಟು ಸೇಲ್‌–ಎಟಿಎಸ್‌) ನೋಂದಣಿಗೆ ಸಂಬಂಧಿಸಿದ ವಿಚಾರ‌ದ ಬಗ್ಗೆ ಕೆರೇರಾ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.

ಒಂದು ವೇಳೆ, ಈ ಒಪ್ಪಂದವನ್ನು ಅಪಾರ್ಟ್‌ಮೆಂಟ್‌ನ ಶೇ 10ರಷ್ಟು ಮೌಲ್ಯಕ್ಕೆ ನಿಗದಿಪಡಿಸಿದ್ದೇ ಆದರೆ, ಬಿಲ್ಡರ್‌ಗಳಿಗೆ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಶೇ 10ರಷ್ಟು ಹಣ ಪಾವತಿಸಿದ ಗ್ರಾಹಕರು ನಂತರ ಉಳಿದ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಅಥವಾ ತಲೆಮರೆಸಿಕೊಂಡಲ್ಲಿ ಬಿಲ್ಡರ್‌ಗಳ ಮುಂದೆ ಬೇರೆ ಯಾವುದೇ ಆಯ್ಕೆಗಳಿರುವುದಿಲ್ಲ.

ವ್ಯವಸ್ಥಿತ ಜಾರಿ ಅಗತ್ಯ

ಬೆಂಗಳೂರಿನ ಪುಟ್ಟ ಕಚೇರಿಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಇಟ್ಟುಕೊಂಡು ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ವಿವಿಧ ಇಲಾಖೆಗಳ ಮೂಲಕ ರಾಜ್ಯದಾದ್ಯಂತ ಪ್ರಗತಿಯಲ್ಲಿರುವ, ಒಪ್ಪಿಗೆ ಪಡೆದಿರುವ ಯೋಜನೆಗಳ ಸಂಪೂರ್ಣ ಮಾಹಿತಿಗಳನ್ನು ಕಲೆ ಹಾಕಲು ಮತ್ತು ಎಲ್ಲ ಬಿಲ್ಡರ್‌ಗಳು ಈ ಕಾಯ್ದೆಯನ್ನು ಅನುಸರಿಸುವಂತೆ ಮಾಡಲು ಅದು ಸಿದ್ಧತೆ ನಡೆಸಬೇಕಿದೆ.

ಇದಕ್ಕೆ ದೊಡ್ಡ ಕಾರ್ಯ ಪಡೆ, ರಾಜಕೀಯ ಮತ್ತು ಅಧಿಕಾರಶಾಹಿ ಇಚ್ಛಾಶಕ್ತಿಯ ಅಗತ್ಯವಿದೆ. ಕಾಯ್ದೆಯ ಅನುಷ್ಠಾನಕ್ಕಾಗಿ ಜಿಲ್ಲೆಗಳ ಪ್ರಧಾನ ಕೇಂದ್ರಗಳಲ್ಲಿರುವ ಕೆರೇರಾದ ನೋಡಲ್‌ ಕಚೇರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಇಲ್ಲದೇ ಇದ್ದರೆ ಇದೊಂದು ಭಾರಿ ದೊಡ್ಡ ವೈಫಲ್ಯವಾಗಲಿದೆ ಮತ್ತು ಅರ್ಥವ್ಯವಸ್ಥೆಗೂ ಹಾನಿಮಾಡಲಿದೆ. ⇒v

⇒(ಲೇಖಕರು ಆರ್ಥಿಕ ತಜ್ಞ)

***

ರೇರಾ ಪರಿಣಾಮ

ಸಾಕಷ್ಟು ಸಿದ್ಧತೆ ಮಾಡಿಕೊಳ್ಳದೇ ಕಾಯ್ದೆಯನ್ನು ಜಾರಿ ಮಾಡಿರುವುದರ ಪರಿಣಾಮ ಈಗಾಗಲೇ ಗೋಚರಿಸಲು ಆರಂಭವಾಗಿದೆ. 2016ಕ್ಕೆ ಹೋಲಿಸಿದರೆ 2017ರ ಜನವರಿಯಿಂದ ಜೂನ್‌ವರೆಗೆ ಬೆಂಗಳೂರಿನಲ್ಲಿ ಹೊಸದಾಗಿ ಆರಂಭಿಸಲಾಗಿರುವ ಕಟ್ಟಡ ನಿರ್ಮಾಣ ಯೋಜನೆಗಳ ಪ್ರಮಾಣ ಶೇ 23ರಷ್ಟು ಕುಂಠಿತಗೊಂಡಿದೆ (13,400 ಯೋಜನೆ ಆರಂಭಿಸಲಾಗಿದೆ). ಆಗಸ್ಟ್‌ ವೇಳೆಗೆ ಫ್ಲ್ಯಾಟ್‌ಗಳ ಮಾರಾಟ ಪ್ರಮಾಣದಲ್ಲಿ ದಿಢೀರನೆ ಶೇ 19ರಷ್ಟು ಕುಸಿತವಾಗಿದೆ. ಮೂರು ವರ್ಷಗಳಲ್ಲಿ ಸುಮಾರು 1.5 ಲಕ್ಷ ಫ್ಲ್ಯಾಟ್‌ಗಳು ಮಾರಾಟವಾಗದೇ ಉಳಿದಿವೆ.

***

ದಾರಿತಪ್ಪಿಸುವ ಹೇಳಿಕೆ

'ಬಹುತೇಕ ಪೂರ್ಣಗೊಂಡಿರುವ ಕಟ್ಟಡ ನಿರ್ಮಾಣ ಯೋಜನೆಗಳು ಅಥವಾ ಈಗಾಗಲೇ ಆರಂಭಗೊಂಡಿರುವ ಯೋಜನೆಗಳನ್ನು ನಾವು ಮುಟ್ಟುವುದಕ್ಕೆ ಹೋಗುವುದಿಲ್ಲ. ತುಂಬಾ ವಿಳಂಬವಾಗಿರುವ ಯೋಜನೆಗಳನ್ನು ಮಾತ್ರ ರೇರಾ ಅಡಿ ಪರಿಗಣಿಸುತ್ತೇವೆ’ ಎಂದು ಕೆರೇರಾ ಅಧ್ಯಕ್ಷ ಕಪಿಲ್‌ ಮೋಹನ್‌ ಈಚೆಗೆ ಕಾರ್ಯಗಾರವೊಂದರಲ್ಲಿ ಹೇಳಿಕೆ ನೀಡಿರುವುದನ್ನು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಹೇಳಿಕೆಯನ್ನು ಅವರೇ ನೀಡಿದ್ದಾರೆ ಎಂದರೆ ಅದು ನಿಜಕ್ಕೂ ದಾರಿತಪ್ಪಿಸುವಂತಹದ್ದು. ಅವರ ಹೇಳಿಕೆ ತಪ್ಪಾಗಿ ವರದಿ ಆಗಿರುವ ಸಾಧ್ಯತೆಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.