ADVERTISEMENT

ಬಚ್ಚಲಿನ ಒಳಹೊರಗೆ...

ವಾಸ್ತು ಪ್ರಕಾರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2015, 19:52 IST
Last Updated 24 ಡಿಸೆಂಬರ್ 2015, 19:52 IST

ಮನೆಯಲ್ಲಿರುವ ಕೆಲವು ಸಂಗತಿಗಳ ಬಗ್ಗೆ ಮತ್ತೆ ಮತ್ತೆ ಮಾತನಾಡುತ್ತೇವೆಂದರೆ, ಅದು ಆ ಸಂಗತಿಗಿರುವ ಪ್ರಾಮುಖ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ– ಬಚ್ಚಲು ಮನೆ! 

ಬಚ್ಚಲು ಮನೆ ಎನ್ನುವುದು ಯಃಕಶ್ಚಿತ್ ಸಂಗತಿಯಾಗಿ ಈಗ ಉಳಿದಿಲ್ಲ. ಅಡುಗೆ ಕೋಣೆ ಅಥವಾ ಮಲಗುವ ಕೋಣೆಗೆ ನೀಡಿದಷ್ಟೇ ಮಹತ್ವವನ್ನು ಬಚ್ಚಲು ಮನೆಗೂ ನೀಡಲಾಗುತ್ತಿದೆ. ಮೈಮನಸ್ಸಿನ ಕೊಳೆಯನ್ನು ತೊಳೆದುಕೊಂಡು ಹಗುರಾಗುವ ಈ ಜಾಗ ಹೆಚ್ಚು ಅನುಕೂಲಕರವಾಗಿ ಇರಬೇಕು ಎನ್ನುವುದು ಮನೆಮಂದಿಗೂ ತಿಳಿದಿದೆ, ಅದು ವಾಸ್ತುಶಿಲ್ಪಿಗಳ ಪಾಲಿಗೂ ಆದ್ಯತೆಯ ವಿಷಯವಾಗಿದೆ. ಆ ಕಾರಣದಿಂದಲೇ ಬಚ್ಚಲು ಮನೆಯ ವಿನ್ಯಾಸ ಆಧುನಿಕ ಸಂದರ್ಭದಲ್ಲಿ ದುಬಾರಿ ಬಾಬತ್ತಾಗಿಯೂ ಪರಿಣಮಿಸಿದೆ.

ಬಾತ್‌ರೂಂ ನಿರ್ಮಾಣ ಕುರಿತಂತೆ ವಾಸ್ತುತಜ್ಞರು ಹಲವು ಕಟ್ಟಿನಿಟ್ಟಿನ ಸೂತ್ರಗಳನ್ನು ರೂಪಿಸಿದ್ದಾರೆ. ಅವುಗಳಲ್ಲಿನ ಪ್ರಾಥಮಿಕ ಸೂತ್ರ, ಶೌಚಗೃಹ ದೇವಮೂಲೆಯಲ್ಲಿ ಇರಬಾರದು ಎನ್ನುವುದು. ಮನೆಯ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ಸ್ನಾನದ ಕೋಣೆ ಇದ್ದರೆ ಒಳ್ಳೆಯದು.

ವಾಸ್ತು ತಜ್ಞರ ಪ್ರಕಾರ ಸ್ನಾನದ ಕೋಣೆ ಮೈಮನಗಳ ನಿರ್ಮಲತೆಗೆ ಸಂಬಂಧಿಸಿದ ಸಂಗತಿ ಮಾತ್ರವಲ್ಲ; ಅದು ಮನೆಯ ಆರ್ಥಿಕ ಸ್ವಾಸ್ಥ್ಯಕ್ಕೂ ಸಂಬಂಧಿಸಿದ್ದು. ಸರಿ ಯಾದ ದಿಕ್ಕು ಹಾಗೂ ಜಾಗದಲ್ಲಿ ಬಾತ್‌ರೂಂ ಇದ್ದರೆ ಸಕಾರಾತ್ಮಕ ಫಲಗಳು ದೊರೆಯುವಂತೆ, ದಿಕ್ಕು ತಪ್ಪಿದಾಗ ನಕಾರಾತ್ಮಕ ಪರಿಣಾಮಗಳೂ ಉಂಟಾಗುತ್ತವಂತೆ.

ಉತ್ತರ ಅಥವಾ ವಾಯುವ್ಯದಲ್ಲಿ ಇರುವ ಬಾತ್‌ರೂಂ ಹಣಕಾಸು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಒಳ್ಳೆಯ ಫಲಗಳನ್ನು ನೀಡುವಂತೆ- ದಕ್ಷಿಣ, ಆಗ್ನೇಯ ದಿಕ್ಕುಗಳಲ್ಲಿನ ಸ್ನಾನದ ಕೋಣೆ ವಿರುದ್ಧ ಫಲಗಳನ್ನು ನೀಡುತ್ತದಂತೆ. ನೈರುತ್ಯ ದಿಕ್ಕಿನಲ್ಲಿಯೂ ಶೌಚಗೃಹ ಬೇಡ ಎನ್ನುವುದು ತಜ್ಞರ ಸಲಹೆ. ಇಂಥ ಬಾತ್‌ರೂಂಗಳು ನಕಾರಾತ್ಮಕ ಶಕ್ತಿಗಳ ಪ್ರವೇಶಕ್ಕೆ ಎಡೆ ಮಾಡಿ ಕೊಡುತ್ತವಂತೆ.

ಜಾಗದ ಮಿಗಿತಾಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಕೆಲವರು ಮೆಟ್ಟಿಲುಗಳ ಕೆಳಗೆ ಶೌಚಗೃಹಗಳನ್ನು ನಿರ್ಮಿಸುತ್ತಾರೆ. ಇಂಥ ನಿರ್ಮಾಣಗಳನ್ನು ವಾಸ್ತು ಅನುಮೋದಿಸುವುದಿಲ್ಲ. ಮೆಟ್ಟಿಲುಗಳ ಕೆಳಗಿನ ಭಾಗ ಮುಕ್ತವಾಗಿದ್ದರೇನೇ ಚೆಂದ!

ಅಂತೆಯೇ ಅಡುಗೆಮನೆಗೆ ಹೊಂದಿಕೊಂಡಂತೆಯೂ ಬಾತ್‌ರೂಂ ಬೇಡ. ಅದು ವಾಸ್ತುಶಾಸ್ತ್ರದ ದೃಷ್ಟಿಯಿಂದ ಮಾತ್ರವಲ್ಲ, ಔಚಿತ್ಯದ ಪ್ರಜ್ಞೆಯಿಂದಲೂ ಸರಿಯಾದ ಯೋಚನೆಯಲ್ಲ. ದೇವರಕೋಣೆಗೆ ಹೊಂದಿಕೊಂಡಂತೆಯೂ ಸ್ನಾನದ ಕೋಣೆ ಇರುವುದು ಬೇಡ.

ಬಾತ್‌ರೂಂಗಳ ಒಳಾಂಗಣದ ಬಗ್ಗೆಯೂ ಕೆಲವು ಸೂಚನೆಗಳಿವೆ. ಕೋಣೆ ಸಾಕಷ್ಟು ವಿಶಾಲವಾಗಿದ್ದು, ಬಟ್ಟೆ ಬದಲಿಸಲು ಜಾಗ ಇದೆ ಎಂದುಕೊಳ್ಳಿ. ಅಂಥ ಜಾಗ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇದ್ದರೆ ಚಂದ. ಇನ್ನೂ ಜಾಗ ಉಳಿದು, ಬಟ್ಟೆ ಒಗೆಯುವ ಯಂತ್ರಕ್ಕೂ ಬಾತ್ ರೂಂನಲ್ಲಿಯೇ ಜಾಗ ಕಲ್ಪಿಸುವುದಾದರೆ, ವಾಯುವ್ಯ ಅಥವಾ ಆಗ್ನೇಯ ದಿಕ್ಕನ್ನು ಬಳಸಿಕೊಳ್ಳಬಹುದು. ಹಾಗೆಯೇ ಸ್ನಾನದ ಕೋಣೆಗಳಲ್ಲಿನ ಕನ್ನಡಿಯನ್ನು ಪೂರ್ವ, ಇಲ್ಲವೇ ಉತ್ತರದ ಗೋಡೆಗಳಿಗೆ ತೂಗುಹಾಕಬಹುದು.

ಇತ್ತೀಚಿನ ದಿನಗಳಲ್ಲಂತೂ ಕೋಣೆ ಗೊಂದರಂತೆ ಬಾತ್‌ರೂಂಗಳನ್ನು ರೂಪಿಸಿಕೊಳ್ಳುವ ರೂಢಿಯಿದೆ. ಅನುಕೂಲದ ದೃಷ್ಟಿಯಿಂದ ಇದು ಒಳ್ಳೆಯದು. ಆದರೆ, ಕೆಲವು ಮನೆಗಳಲ್ಲಿ ಬೇಕಾಗಿಯೋ ಬೇಡವಾಗಿಯೋ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಇದರಿಂದಾಗಿ ಮನೆಯ ನಿರ್ಮಾಣದ ಬಜೆಟ್ ಹೆಚ್ಚುತ್ತದೆ.

ನಂತರದ ದಿನಗಳಲ್ಲಿ ಅವುಗಳ ನಿರ್ವಹಣೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ಮನೆಯ ಎಲ್ಲೆಡೆ ಬಾತ್‌ರೂಂಗಳು ಕಾಣಿಸುವುದು ಸೌಂದರ್ಯದ ದೃಷ್ಟಿಯಿಂದಲೂ ಸಮರ್ಪಕವಾದುದಲ್ಲ. ಹಾಗಾಗಿ, ನಮ್ಮ ಅಗತ್ಯಗಳ ಬಗ್ಗೆ ಸ್ಪಷ್ಟನೆ ಇರುವುದು ಅಗತ್ಯ.

ಶೌಚಾಲಯಗಳ ನಿರ್ಮಾಣದ ಸಂದರ್ಭದಲ್ಲಿ ಹೆಚ್ಚು ಗಮನ ಕೊಡಬೇಕಾದ ಮತ್ತೊಂದು ಸಂಗತಿ ಗಾಳಿಬೆಳಕಿನದು. ಗಾಳಿಬೆಳಕು ಸರಾಗವಾಗಿ ಇದ್ದಷ್ಟೂ ಬಾತ್‌ರೂಂ ಹೆಚ್ಚು ಸಹನೀಯ ಎನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.