ADVERTISEMENT

ಭವಿಷ್ಯದ ಆಶಾಕಿರಣ ‘ನಿವೇಶನ’

ಸುಚೇತನಾ ನಾಯ್ಕ
Published 7 ಅಕ್ಟೋಬರ್ 2014, 19:30 IST
Last Updated 7 ಅಕ್ಟೋಬರ್ 2014, 19:30 IST

ಮಗು ಹುಟ್ಟುತ್ತಿದ್ದಂತೆ ಈಗಿನ ಪೋಷಕರಿಗೆ ಅವರ ಭವಿಷ್ಯದ ಚಿಂತೆ ಆರಂಭ. ಅವರ ಶಿಕ್ಷಣ, ಉನ್ನತ ವ್ಯಾಸಂಗ, ಮದುವೆ ಹೀಗೆ ಎಲ್ಲದಕ್ಕೂ ಒಂದಿಷ್ಟು ‘ಕೂಡಿಡುವ’ ಯೋಚನೆ ಆಗಿಂದಲೇ ಆರಂಭವಾಗುತ್ತದೆ. ಚಿನ್ನ- ಬೆಳ್ಳಿ, ಷೇರು, ಬ್ಯಾಂಕ್‌ನಲ್ಲಿ ಠೇವಣಿ, ವಿವಿಧ ಪಾಲಿಸಿ ಅಂತೆಲ್ಲಾ ಮಾರ್ಗ ಕಂಡುಕೊಳ್ಳುವುದು ಸಾಮಾನ್ಯ. ಆದರೆ ಕೈಯಲ್ಲಿ ಸ್ವಲ್ಪ ದುಡ್ಡಿದ್ದರೆ ಎಲ್ಲಿಯಾದರೂ ಸರಿ ಒಂದು ನಿವೇಶನ ಖರೀದಿ ಮಾಡಿದರೆ ಭವಿಷ್ಯದಲ್ಲಿ ಅದಕ್ಕಿಂತ ದೊಡ್ಡ ‘ಆಸ್ತಿ’ ಮತ್ತೊಂದಿಲ್ಲ. ನಿವೇಶನಗಳ ಬೆಲೆ ಇತ್ತೀಚೆಗಂತೂ ಇಳಿಮುಖವಾದ ದಾಖಲೆಯೇ ಇಲ್ಲ, ಏನಿದ್ದರೂ ಏರುಮುಖವಾಗಿಯೇ ಇವೆ. ಹಾಗಾಗಿ ಒಳ್ಳೆ ಬೆಲೆ ಬಂದಾಗ ಮಾರಿದರೆ ದೊಡ್ಡ ಲಾಭ, ಮನೆ ಕಟ್ಟಿ ವಾಸಿಸಿದರೂ ಲಾಭ, ಇಲ್ಲವೇ ಬಾಡಿಗೆಗೆ ನೀಡಿ ಸಂಪಾದನೆ ಮಾಡಿದರೂ ಲಾಭ. ಹಾಗೆಯೇ, ನಿವೇಶನ ಖರೀದಿಗೆ ಮುನ್ನ ಒಂದಿಷ್ಟು ಜಾಗ್ರತೆಯೂ ಅಗತ್ಯ.

‘ಮಗಳು ಹುಟ್ಟಿದಾಗಲೇ ಹೇಳಿದೆ, ಚಿನ್ನಾಭರಣಗಳ ಮೇಲೋ, ಷೇರು, ಪಾಲಿಸಿ ಅಂತಾನೋ ಇಲ್ಲವೇ ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲೋ ಒಂದಿಷ್ಟು ಕೂಡಿಡಿ ಎಂದು. ಮಗಳು ವಯಸ್ಸಿಗೆ ಬಂದಾಗ ಇವೆಲ್ಲ ಬೇಕಾಗುತ್ತದೆ ಎಂದಿದ್ದೆ. ಎಲ್ಲಿ ಕೇಳ್ತೀರಾ ನೀವು’ ಎಂದು ಹೆಂಡತಿಯೊಬ್ಬಳು ಅಲ್ಲಿ ಗಂಡನನ್ನು ತಿವಿಯುತ್ತಿದ್ದಳು. ‘ನಿಮ್ ಬುದ್ಧೀಗಿಷ್ಟು, ಈ ಸಹೋದರ ಗೌಡ್ರನ್ನ ನೋಡಿ ಕಲೀರಿ. ಇಬ್ಬರಿಗೂ ಒಂದಿಷ್ಟೂ ದುಶ್ಚಟ ಇಲ್ಲ. ಎಂಥ ಬುದ್ಧಿವಂತರು. 15-20 ವರ್ಷಗಳ ಹಿಂದೆಯೇ ಎಂಥ ಯೋಜನೆ ಮಾಡಿ ಮಕ್ಕಳಿಗಾಗಿ ಹಣ ಕೂಡಿಟ್ಟಿದ್ದಾರೆ ನೋಡಿ, ನೀವೂ ಇದ್ದೀರಾ...’ ಎಂದು ಇನ್ನೊಬ್ಬಳು ಪತಿಪರಮೇಶನನ್ನು ಮೂದಿಸುತ್ತಿದ್ದಳು.

‘ನೀನು ಸರಿ ಇದ್ದರೆ ಎಲ್ಲ ಸರಿ ಇರ್ತಾ ಇತ್ತು. ನಿನ್ ಮಾತು ಕೇಳಿ ಷೇರಿನಲ್ಲಿ ದುಡ್ಡು ತೊಡಗಿಸಿ ಮುಳುಗಿ ಹೋದೆ. ನಿನ್ ಮಾತು ಕೇಳದಿದ್ರೆ ಇವತ್ತು ನಾನೂ ಹೀಗೆ ಝೂಂ ಅಂತಾ ಇರ್ತಾ ಇದ್ದೆ’ ಎಂದು ಪತಿರಾಯನೊಬ್ಬ ಹೆಂಡತಿಗೆ ಮಾತಿನ ಚಾಟಿ ಏಟು ಬೀಸುತ್ತಿದ್ದ...

ಇವರೂ ಸೇರಿದಂತೆ ಅನೇಕ ಮಂದಿ ಅಂದು ರಾಮೇಗೌಡ, ಸೋಮೇಗೌಡ ಅವಳಿ ಸಹೋದರರ ಹೆಣ್ಣುಮಕ್ಕಳ ಮದುವೆಯ ದಿನದ ಭರ್ಜರಿ ಮಂಟಪ, ಬಾಯಲ್ಲಿ ನೀರೂರಿಸುವಷ್ಟು ಭಕ್ಷ್ಯ, ಭೋಜನ, ವಧು-ವರರ ಮೈಮೇಲಿರುವ ಚಿನ್ನಾಭರಣ ಎಲ್ಲ ನೋಡಿ ಕರಗಿಹೋಗಿದ್ದರು. ಆಳಿಯಂದಿರಿಗಾಗಿ ಹೊಸ ಮಾಡೆಲ್ ಕಾರು ಖರೀದಿ ಬೇರೆ. ಇನ್ನು ಕೇಳಬೇಕೆ? ‘ಮಾಡಿದರೆ ಇಂಥ  ಮದುವೆ ಮಾಡಿಸಬೇಕು’ ಎಂದೆಲ್ಲ ಹಲವರು ಶಹಭಾಸ್‌ಗಿರಿ ಕೊಟ್ಟರೆ, ತಮಗೆ ಈ ‘ಭಾಗ್ಯ’ ಇಲ್ಲ ಎಂದುಕೊಂಡು ಅಸೂಯೆ ಪಟ್ಟುಕೊಂಡವರು ಇನ್ನೆಷ್ಟು ಮಂದಿಯೋ!

ಒಂದೇ ರೂಪ, ಒಂದೇ ತೆರನಾದ ಗುಣ ಹೊಂದಿರುವ ಈ ಅವಳಿ ಸಹೋದರರೂ ತಮ್ಮ ಮಕ್ಕಳ ಮದುವೆಯನ್ನು ಕಣ್ತುಂಬಿಸಿಕೊಂಡು, ಶಹಬಾಸ್‌ಗಿರಿಗೆ ಉಬ್ಬಿ, ಮಕ್ಕಳು ಹುಟ್ಟಿದಾಗಲೇ ಮಾಡಿರುವ ಉಳಿತಾಯದ ಬಗ್ಗೆ ಪರಸ್ಪರ ಬೆನ್ನುತಟ್ಟಿಕೊಳ್ಳುತ್ತಾ ಮನೆಗೆ ಹೋದರು.
ಹೆಣ್ಣುಮಕ್ಕಳ ಮದುವೆಯೇನೋ ಆಯಿತು. ಪಿಯುಸಿ ಮುಗಿಸಿದ ಮಗನಿಗೆ ಉನ್ನತ ವಿದ್ಯಾಭ್ಯಾಸ ಮಾಡಿಸಬೇಕಲ್ಲ. ಈಗ ಶುರುವಾಯಿತು ರಾಮೇಗೌಡನಿಗೆ ಚಿಂತೆ. ಮಗಳ ಮದುವೆ, ಅಳಿಯನಿಗೆ ಉಡುಗೊರೆ ಎಲ್ಲದಕ್ಕೂ ರಾಮೇಗೌಡ ಮಾಡಿದ ಪ್ಲ್ಯಾನ್‌ಗಳು ಯಶಸ್ವಿಯಾಗಿದ್ದವು.  ಆದರೆ ಅತ್ತ ಮದುವೆ ಮುಗಿಯುತ್ತಿದ್ದಂತೇ, ಇತ್ತ ಹಣ ಖರ್ಚಾಗಿ ಹೋಗಿದೆ. ಮಗನಿಗೆ ಎಂಬಿಬಿಎಸ್ ಓದಿಸಲು ಲಕ್ಷಾಂತರ ರೂಪಾಯಿ ಒಟ್ಟು ಮಾಡುವುದು ಹೇಗೆ ಎಂಬ ಚಿಂತೆ ಶುರು. ಮಗನಿಗೆ ಯಾವುದೋ ಒಂದು ಡಿಗ್ರಿ ಮಾಡಿಸಿ ಎಲ್ಲಿಯಾದರೂ ಒಂದು ನೌಕರಿಗೆ ಸೇರಿಸಿರಾಯಿತು ಎಂದುಕೊಂಡು ಅದಕ್ಕಷ್ಟೇ ದುಡ್ಡು ಹೊಂದಿಸಿಕೊಂಡಿದ್ದ ಅವನಿಗೆ ಮಗ ಎಂಬಿಬಿಎಸ್ ಇಲ್ಲವೇ ಎಂಜಿನಿಯರಿಂಗೇ ಓದುವುದಾಗಿ ಪಟ್ಟುಹಿಡಿದಾಗ ಆಕಾಶ ಕಳಚಿಬಿದ್ದಂತಾಯಿತು.

ಆದರೆ ಹಣ ಉಳಿಸುವುದರಲ್ಲಿ ಅಣ್ಣನಷ್ಟೇ ಜಾಣ್ಮೆ ತೋರಿದ್ದ ಭೀಮೇಗೌಡ ಮಾತ್ರ ನಿಶ್ಚಿಂತೆ. ತನ್ನ ಮಗನ ಎಂಎಂಬಿಎಸ್ ಕೋರ್ಸ್‌ಗೆ ಶುಲ್ಕ ಕೊಟ್ಟ ಆತ, ಅಣ್ಣನ ಕಷ್ಟ ನೋಡಲಾಗದೇ ಅವನ ಮಗನ ಶುಲ್ಕವನ್ನೂ ತಾನೇ ಭರ್ತಿ ಮಾಡಿದ. ಮಗ ನೌಕರಿಗೆ ಹೋದ ಮೇಲೆ ಹಣ ತೀರಿಸುವುದಾಗಿ ಅಣ್ಣ ಆಶ್ವಾಸನೆ ಕೊಟ್ಟ. ಇಬ್ಬರು ಮಕ್ಕಳೂ ಎಂಬಿಬಿಎಸ್ ಮುಗಿಸುವ ಹಂತದಲ್ಲಿದ್ದಾರೆ. ಮಗ ನೌಕರಿಗೆ ಸೇರಿ ತಮ್ಮನ ಸಾಲ ಯಾವಾಗ ತೀರಿಸುವೆನೋ ಎಂಬ ಚಿಂತೆಯಲ್ಲಿ ರಾಮೇಗೌಡ ಇದ್ದರೆ, ಸೋಮೇಗೌಡ ಮಾತ್ರ ಡಾಕ್ಟರ್ ಮಗನಿಗೆ ದೊಡ್ಡ ಪ್ರಮಾಣದ ಕ್ಲಿನಿಕ್ ಕಟ್ಟಿಸುವ ತಯಾರಿ ನಡೆಸಿದ್ದಾನೆ, 20 ವರ್ಷಗಳ ಹಿಂದೆ ತಮ್ಮನ ಮಾತು ಕೇಳದ ತಪ್ಪಿಗೆ ರಾಮೇಗೌಡ ಹಳಹಳಿಸುತ್ತಿದ್ದಾನೆ.

ರಾಮೇಗೌಡ ಮಾಡಿದ ತಪ್ಪು ಇಷ್ಟೇ. ಬೆಂಗಳೂರು ಹೊರವಲಯದಲ್ಲಿ ನಿವೇಶನ ಖರೀದಿಗೆ ಹಿಂದೇಟು ಹಾಕಿದ್ದು! ಸಂಪೂರ್ಣ ಕಾಡು, ಮುಳ್ಳು- ಕಂಟಿಯಿಂದ ಕೂಡಿರುವ ಜಾಗ ಅದು, ಅಲ್ಲಿ ನಿವೇಶನಕ್ಕೆಲ್ಲ ದುಡ್ಡು ಹಾಕಿ ಪಶ್ಚಾತ್ತಾಪ ಪಡಬೇಡ ಎಂದು ತಮ್ಮನಿಗೆ ಆಗ ಬುದ್ಧಿನೂ ಹೇಳಿದ್ದ ರಾಮೇಗೌಡ. ಆದರೆ ಅಣ್ಣನ ಮಾತು ಕೇಳದಿದ್ದ ಸೋಮೇಗೌಡ, 20/30 ಅಡಿ ಹಾಗೂ 30/40 ಅಡಿ ಉದ್ದ ಅಗಲದ ನಿವೇಶನಗಳನ್ನು ತಲಾ ₨1 ಹಾಗೂ ₨2 ಲಕ್ಷಕ್ಕೆ ಖರೀದಿ ಮಾಡಿದ್ದ. ಕೆಲ ವರ್ಷಗಳ ಹಿಂದೆ ಊರ ಹೊರಗಿದ್ದ ಈ ಜಾಗ, ಬೆಂಗಳೂರಿನ ವ್ಯಾಪ್ತಿ ವಿಸ್ತಾರಗೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ಮೇಲೆ ಅದರ ವ್ಯಾಪ್ತಿಗೆ ಒಳಪಟ್ಟಿದೆ. ನಿವೇಶನಕ್ಕೀಗ ಕೋಟ್ಯಂತರ ರೂಪಾಯಿ ಬೆಲೆ! ಒಂದು ನಿವೇಶನ ಮಾರಿ ತನ್ನ ಹಾಗೂ ಅಣ್ಣನ ಮಗನ ಎಂಬಿಬಿಎಸ್ ಶುಲ್ಕ ಕಟ್ಟಿ, ಇನ್ನೊಂದು ಸೈಟ್‌ನಲ್ಲಿ ಮಿಕ್ಕ ಹಣದಲ್ಲಿ ಕ್ಲಿನಿಕ್ ತೆರೆಯುತ್ತಿದ್ದಾನೆ ಭೀಮೇಗೌಡ.

ಇದುವೇ ನಿವೇಶನ ಎಂಬ ಆಸ್ತಿಗೆ, ಹೂಡಿಕೆಗೆ ಇರುವ ಮಹತ್ವ!
ಹಾಗೆಂದು ಇದು ಬೆಂಗಳೂರು ಅಥವಾ ಅದರ ಆಸುಪಾಸಿನವರ ಕಥೆ ಮಾತ್ರವಲ್ಲ ಅಥವಾ 15-20 ವರ್ಷಗಳ ಹಿಂದೆ ನಿವೇಶನ ಖರೀದಿ ಮಾಡಿಟ್ಟುಕೊಂಡವರ ಜೀವನಗಾಥೆಯೂ ಅಲ್ಲ. ಈಗ ನಗರ ಪ್ರದೇಶ, ಅಷ್ಟೇ ಏಕೆ ಚಿಕ್ಕಪುಟ್ಟ ಪಟ್ಟಣಗಳಲ್ಲೂ ನಿವೇಶನದ ಬೆಲೆ ಏರುತ್ತಿರುವಷ್ಟು ವೇಗದಲ್ಲಿ ಮತ್ತಾವ ಬೆಲೆಯೂ ಏರುತ್ತಿಲ್ಲ ಎನ್ನುವುದು ರಿಯಲ್ ಎಸ್ಟೇಟ್ ಉದ್ಯಮಿಗಳ ಮಾತು. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಹೀಗೆ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ನಿವೇಶನಗಳ ಬೆಲೆ ಮಾತ್ರ ಗಗನಕ್ಕೇರುತ್ತಿವೆ ಎನ್ನುವ ದಿನಗಳು ಇವಲ್ಲ. ಇಲ್ಲಿನ ಬೆಲೆ ಒಂದು ವರ್ಷಕ್ಕೆ 3-4 ಪಟ್ಟು ಮೇಲೇರಿದರೆ, ಪಟ್ಟಣ, ನಗರ ಪ್ರದೇಶಗಳಲ್ಲಿ ಅದರ ಬೆಲೆ 2-3 ಪಟ್ಟು ಎನ್ನುವ ವ್ಯತ್ಯಾಸ ಬಿಟ್ಟರೆ ನಿವೇಶನಕ್ಕಿರುವಷ್ಟು ಆದ್ಯತೆ ಚಿನ್ನ-ಬೆಳ್ಳಿ,  ಪಾಲಿಸಿ, ಬ್ಯಾಂಕಿನಲ್ಲಿ ಠೇವಣಿ ಅಥವಾ ಷೇರು ಇತ್ಯಾದಿಗಳಲ್ಲಿ ಇಲ್ಲ. ಚಿನ್ನ- ಬೆಳ್ಳಿ, ಬ್ಯಾಂಕ್‌ನಲ್ಲಿ ಠೇವಣಿಗಳೆಲ್ಲ ತಾತ್ಕಾಲಿಕವಾಗಿ ಸಹಾಯಕ್ಕೆ ಬರುವುದರಲ್ಲಿ ಸಂದೇಹವಿಲ್ಲವಾದರೂ ದೀರ್ಘಾವಧಿಯ ಯೋಚನೆ ಮಾಡುವುದಾದರೆ ನಿವೇಶನದ ಮೇಲೆ ಹೂಡಿಕೆಗೆ ಸರಿಸಾಟಿ ಇಲ್ಲ.

ಇದೇ ಕಾರಣದಿಂದ ನಿವೇಶನದ ಮೇಲೆ ಹೂಡಿಕೆ ಮಾಡುವವರು ಈಗ ‘ಬುದ್ಧಿವಂತರು’ ಎನಿಸಿಕೊಂಡಿದ್ದಾರೆ. ಕೈಯಲ್ಲಿ ಒಂದಿಷ್ಟು ದುಡ್ಡು ಇದ್ದಾಗ ಅದನ್ನು ಖರೀದಿಸಿಟ್ಟುಕೊಂಡರೆ ಸ್ವಂತ ಮನೆ ಕಟ್ಟಿಕೊಳ್ಳಬಹುದು, ಬೇಡವಾದರೆ ಅದರ ಬೆಲೆ ಗಗನಮುಖಿಯಾದಾಗ ಮಾರಬಹುದು, ಅದೂ ಬೇಡವೆಂದರೆ ಮನೆ ಕಟ್ಟಿಸಿ ಬಾಡಿಗೆಗೆ ಕೊಡಬಹುದು. ಇವೆಲ್ಲ ಸೌಲಭ್ಯ ಬಹುಶಃ ಇನ್ನಾವುದರಲ್ಲೂ ಇಲ್ಲ ಎನ್ನುವುದು ನಿವೇಶನ ಖರೀದಿ ಮಾಡುತ್ತಿರುವವರ ಅನಿಸಿಕೆಗಳು. ನಿವೇಶನದ ಬದಲು ಅದಕ್ಕಿಂತ ಕಡಿಮೆ ದರದಲ್ಲಿ ಸಿಗುವ ಫ್ಲ್ಯಾಟ್‌ಗಳ ಮೇಲೂ ಹೂಡಿಕೆ ಸಲ್ಲಿಸಬಹುದು. ಆದರೆ ನಿವೇಶನಗಳಿಗೆ ಹೋಲಿಸಿದರೆ  ಫ್ಲ್ಯಾಟ್‌ಗಳಿಗೆ ಸೀಮಿತ ದರ ವ್ಯವಸ್ಥೆ ಇರುತ್ತದೆ.  ಅಷ್ಟೇ ಅಲ್ಲದೇ, ನಮಗೆ ಬೇಕಾದ ಅಗತ್ಯಗಳನ್ನು ಪೂರೈಸುವ ಫ್ಲ್ಯಾಟ್ ದೊರಕದೇ ಇರಬಹುದು. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ಧರ್ಮೀಯರು ನಂಬುತ್ತಿರುವ ವಾಸ್ತುವಿಗೆ ಸಮನಾದ ಅಪಾರ್ಟ್‌ಮೆಂಟ್ ದೊರಕದೇ ಇರಬಹುದು. ಆದ್ದರಿಂದ ನಿವೇಶನ ಖರೀದಿ ಮಾಡಿಟ್ಟುಕೊಂಡರೆ ಇದಾವುದರ ಚಿಂತೆ ಇರುವುದಿಲ್ಲ.

ನಿವೇಶನ ಎಲ್ಲಿ ಸೂಕ್ತ?
ಸರಿ, ನಿವೇಶನವನ್ನೇನೋ ತೆಗೆದುಕೊಳ್ಳುವ ಮನಸ್ಸು ಮಾಡಿಯಾಗಿದೆ. ಅದಕ್ಕಾಗಿ ಒಂದಿಷ್ಟು ಹಣವೂ ಕೈಯಲ್ಲಿ ಇದೆ. ಆದರೆ ಖರೀದಿ ಮಾಡುವುದು ಯಾವ ಜಾಗದಲ್ಲಿ ಎನ್ನುವ ಯೋಚನೆ ಆರಂಭವಾಗುತ್ತದೆ. ಊರು, ಪಟ್ಟಣ, ನಗರ ಯಾವುದೇ ಇರಲಿ. ನಿವೇಶನದ ಆಯ್ಕೆ ಬಂದಾಗ ಮೊದಲು ಪ್ರಾಶಸ್ತ್ಯ ನೀಡಬೇಕಾದುದು ಅಲ್ಲಿ ನೀರು, ವಿದ್ಯುತ್ ಸರಬರಾಜು ಸರಿಯಾಗಿ ಇದೆಯೇ, ಮಾರುಕಟ್ಟೆಗೆ ಸಮೀಪದಲ್ಲಿದೆಯೇ ಹಾಗೂ ಶಾಲಾ- ಕಾಲೇಜು ಇತ್ಯಾದಿಗಳನ್ನು ಸುಲಭದಲ್ಲಿ ತಲುಪಬಹುದೇ ಎಂಬುದನ್ನು. ಜಮೀನು ಖರೀದಿ ಮಾಡುವಾಗ ಇವೆಲ್ಲ ಅನುಕೂಲಗಳು ಇಲ್ಲದೇ ಹೋದರೂ ಅಲ್ಲಿ ಮುಂದೊಂದು ದಿನ (ನಿವೇಶನ ಮಾರುವ ಅಥವಾ ಅಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ) ಇವೆಲ್ಲ ಅನುಕೂಲಗಳು ಆಗಬಹುದೇ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬೇಸಿಕ್ ಸೆಪ್ಟಿಕ್ ಟ್ಯಾಂಕ್, ಒಳಚರಂಡಿ ವ್ಯವಸ್ಥೆ ಇದೆಯೇ, ನೈಸರ್ಗಿಕವಾಗಿ ನೆಲ ಅಗೆಯಲು ಸಮಸ್ಯೆ ಇಲ್ಲವೇ ಎಂಬುದನ್ನೂ ಗಮನಿಸಬೇಕು. ಇಂಥ ಜಮೀನು ಕಡಿಮೆ ಬೆಲೆಯಲ್ಲಿ ಹಲವು ಕಡೆ ಸಿಗುತ್ತದೆ. ಇದು ಸ್ಪರ್ಧಾತ್ಮಕ ಯುಗ ನೋಡಿ. ಅದಕ್ಕೆ ಲ್ಯಾಂಡ್ ಡೆವಲಪರ್ಸ್‌ಗಳು ಕೂಡ ಪೈಪೋಟಿಗೆ ಬಿದ್ದು ನಿವೇಶನ ಹಂಚಿಕೆ ಮಾಡುತ್ತಿರುತ್ತಾರೆ. ಅಂಥ ಸ್ಥಳವನ್ನು ನೋಡಿಕೊಳ್ಳುವುದು ಒಳಿತು.

ಇವೆಲ್ಲ ಅನುಕೂಲಗಳು ಇರುವ ಪ್ರದೇಶ ಸಿಕ್ಕಿಬಿಟ್ಟಿತು ಎಂಬ ಖುಷಿಯ ಭರದಲ್ಲಿ ಒಮ್ಮಿಂದೊಮ್ಮೆಲೇ ಆ ಜಮೀನು ಖರೀದಿ ಮಾಡಲು ಮುಂದಾಗುವುದು ಸರಿಯಲ್ಲ. ಏಕೆಂದರೆ ಸ್ವಲ್ಪ ಎಡವಟ್ಟಾದರೂ ಅದರಿಂದ ಕಾನೂನು ತೊಡಕಾಗಿ ಕೋರ್ಟ್‌ಗೆ ಅಲೆದಾಡಬೇಕಾದೀತು.
ನಿವೇಶನ ಅಭಿವೃದ್ಧಿ ಮಾಡಹೊರಟಿರುವವರು ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿದ್ದಾರೆಯೇ, ಅಂತಹ ನಿವೇಶನ ‘ಕ್ಲಿಯರ್ ಟೈಟಲ್’ ಹೊಂದಿದೆಯೇ, ಒತ್ತುವರಿ ಮುಕ್ತವಾಗಿದೆಯೇ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕಾನೂನು ತೊಡಕು ಉಂಟಾಗುವುದಿಲ್ಲವೇ ಎಂಬುದನ್ನು ಮೊದಲು ಗಮನಿಸಿಯೇ ನಿವೇಶನ ಖರೀದಿಸಬೇಕು.

ಆನಂತರದ ಕೆಲಸ, ನಿವೇನವು ಕೃಷಿ ಜಮೀನೇ ಅಥವಾ ಕೃಷಿಯೇತರದ್ದೇ ಎಂದು ತಿಳಿದುಕೊಳ್ಳುವುದು. ಏಕೆಂದರೆ ಕೃಷಿ ಜಮೀನಿನಲ್ಲಿ ಕೃಷಿಯೇತರ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಒಂದು ವೇಳೆ ಅದು ಕೃಷಿಯೇತರವಾಗಿ ಪರಿವರ್ತನೆ ಹೊಂದಿದ್ದರೂ ಅದರಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಸಂಬಂಧಿತ ಅಧಿಕಾರಿಗಳ (ಸ್ಥಳೀಯಾಡಳಿತ) ಅನುಮೋದನೆ ಅಗತ್ಯವಾಗಿ ಇರಬೇಕು.

ವಯಸ್ಸಾದಾಗ ಆಧಾರ

ADVERTISEMENT

ನಿವೇಶನದ ಮೇಲೆ ಹೂಡಿಕೆ ಮಾಡುವುದು ಸರ್ಕಾರಿ ಉದ್ಯೋಗಿಗಳಿಗಿಂತಲೂ ಖಾಸಗಿ ಕೆಲಸದಲ್ಲಿ ಇರುವವರಿಗೆ ತೀರಾ ಅತ್ಯಗತ್ಯ. ಏಕೆಂದರೆ ಭವಿಷ್ಯದಲ್ಲಿ ಸರ್ಕಾರಿ ನೌಕರರಂತೆ ಅವರಿಗೆ ಪಿಂಚಣಿ ಸೌಲಭ್ಯ ಇತ್ಯಾದಿಗಳು ಇರುವುದಿಲ್ಲ. ಆದ್ದರಿಂದ ಕೈಯಲ್ಲಿ ದುಡ್ಡು ಇರುವಾಗಲೇ ನಿವೇಶನ ಕೊಂಡುಕೊಂಡರೆ ವಯಸ್ಸಾದಾಗ ಅದನ್ನು ಮಾರಿ ಲಾಭ ಪಡೆಯಬಹುದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಚಿಕ್ಕ ನಿವೇಶನದಲ್ಲಿಯೇ ಒಂದಿಷ್ಟು ಅಪಾರ್ಟ್‌ಮೆಂಟ್ ಕಟ್ಟಿಸಿದರೂ ಕೈತುಂಬ ಬಾಡಿಗೆ ಸಿಗುತ್ತದೆ. ಬ್ಯಾಂಕ್‌ನಿಂದ ಸಾಲ ಮಾಡಿ ಅಪಾರ್ಟ್‌ಮೆಂಟ್ ಕಟ್ಟಿಸಿದರೂ ಮಹಾನಗರಗಳಲ್ಲಿ ಅದೂ ಲಾಭವೇ. ಆದರೆ ಬಾಡಿಗೆ ಹಣ ಹೆಚ್ಚಿಗೆ ಬರದಿದ್ದ ನಗರ, ಪಟ್ಟಣ ಪ್ರದೇಶಗಳಲ್ಲಿ ನಿವೇಶನ ಇದ್ದರೆ, ಬ್ಯಾಂಕ್ ಸಾಲ ಮಾಡಿ ಬಾಡಿಗೆ ಹಣ ಬಡ್ಡಿಗೆ ಕಟ್ಟುವ ಬದಲು, ಖುದ್ದು ವಾಸ ಮಾಡುವುದು ಇಲ್ಲವೇ ನಿವೇಶನ ಮಾರಿ ತಾವು ಕೊಟ್ಟ ಹಣಕ್ಕಿಂತ 3-4 ಪಟ್ಟು ಹೆಚ್ಚಿಗೆ ಹಣ ಪಡೆದುಕೊಳ್ಳುವುದು ಒಳಿತು.
ಹರೀಶ್ ಭಟ್ಟ, ಶಿರಸಿ
ಕಾರ್ಮಿಕ ಗುತ್ತಿಗೆದಾರರು

ಅನುಮೋದನೆ ಇದ್ದರೂ ಖರೀದಿಗೆ ಧಾವಂತ ಸಲ್ಲ. ಏಕೆಂದರೆ ಆ ಜಮೀನು ಅಥವಾ ನಿವೇಶನ ಇತರ ಅಭಿವೃದ್ಧಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ಇದರ ಅರ್ಥ, ಆ ನಿವೇಶನ ಇರುವ ಪ್ರದೇಶದಲ್ಲಿ ಸರ್ಕಾರಿ ಕಟ್ಟಡ ನಿರ್ಮಿಸಲು ಉದ್ದೇಶಿಸಿರಬಹುದು ಅಥವಾ ಹೆದ್ದಾರಿ ನಿರ್ಮಾಣಕ್ಕೆ ಆ ಜಾಗ ಮೀಸಲು ಇಟ್ಟಿರಬಹುದು. ಇಂಥ ಮೀಸಲು ಪ್ರದೇಶವನ್ನು ಮಾರಿ ಕೈತೊಳೆದುಕೊಳ್ಳುವವರ ಬಗ್ಗೆಯೂ ಯೋಚನೆ ಮಾಡುವುದು ಅಗತ್ಯವಾಗಿದೆ. ಅಷ್ಟೇ ಅಲ್ಲದೇ, ಆ ಜಮೀನಿನಲ್ಲಿ ಹೈ ಟೆನ್ಷನ್ ಕೇಬಲ್ ಹಾದು ಹೋಗುವುದೇ ಎಂದು ಗಮನಿಸಬೇಕು. ಏಕೆಂದರೆ ಇಂಥ ಪ್ರದೇಶ ಕೂಡ ನಿರ್ಬಂಧಿತವಾದುದು. ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ಅಥವಾ ಜಮೀನು ಖರೀದಿ ಮಾಡುವಾಗ ಎದುರಾಗುವ ಕಷ್ಟ. ಒಂದು ವೇಳೆ ಇಲ್ಲಿ ವಿದ್ಯುದೀಕರಣ ಯೋಜನೆ ನಡೆಯುವಂತಿದ್ದು ಆ ಜಮೀನನ್ನೇ ನಾದರೂ ಖರೀದಿ ಮಾಡಿದ್ದೇ ಆದಲ್ಲಿ, ಆ ನಿವೇಶನದ ಬದಲು ಸರ್ಕಾರದಿಂದ  ಎಷ್ಟೋ ಬಾರಿ ಪರ್ಯಾಯ ಜಮೀನು ಕೂಡ ದೊರಕದೇ ಇರುವ ಸಾಧ್ಯತೆಗಳಿವೆ.

ಇವಾವುದೇ ಸಮಸ್ಯೆ ನಿಮ್ಮನ್ನು ಕಾಡಬಾರದು ಎಂದರೆ ಉತ್ತಮ ಹಿನ್ನೆಲೆಯುಳ್ಳ ಭೂ ಅಭಿವೃದ್ಧಿದಾರರಿಂದ ನಿವೇಶನ ಖರೀದಿ ಮಾಡಬೇಕು. ಇಂತಹ ನಿವೇಶನದ ಖರೀದಿಗೆ ಮುನ್ನ ರಿಯಲ್ ಎಸ್ಟೇಟ್ ಸಲಹೆಗಾರರ ನೆರವು ಪಡೆದುಕೊಳ್ಳುವುದೂ ಉತ್ತಮ. ಇಲ್ಲವೇ ಸಂಬಂಧಿಸಿದ ಇಲಾಖೆಗಳೊಂದಿಗೆ ದಾಖಲೆಗಳ ಸಾಚಾತನದ ಬಗ್ಗೆ ಪರಿಶೀಲನೆ ಮಾಡಿಕೊಳ್ಳುವುದು ಒಳಿತು.

ಏನೇನು ಗಮನಿಸಬೇಕು?
ಯಾವುದೇ ಜಮೀನು ಅಥವಾ ನಿವೇಶನ ಖರೀದಿ ಮಾಡುವ ಮುನ್ನ ಜಮೀನಿನ ಪಹಣಿ ಪತ್ರ, ಕಂದಾಯ ನಕ್ಷೆ, ಜಮೀನಿನ ಮಾಲೀಕತ್ವದ ಕುರಿತಾಗಿ ಕನಿಷ್ಠ 30 ವರ್ಷಗಳ ಹಿಂದಿನ ದಾಖಲೆ ಪರಿಶೀಲಿಸಿಕೊಳ್ಳಬೇಕು. ವಿದ್ಯುತ್, ನೀರು, ಆಸ್ತಿ ತೆರಿಗೆ ಪಾವತಿ ಮಾಡಿರುವ ದಾಖಲೆ, ಜಮೀನಿನ ಋಣಭಾರ ಪತ್ರ ಸಾಲದತ್ತ (ಮಾರ್ಟಗೇಜ್ ಡೀಡ್) ಗಮನ ಕೊಡಬೇಕು. ಹೊಸ ನಿವೇಶನ ಆಗಿದ್ದಲ್ಲಿ ಅನುಮೋದಿಸಿರುವ ಯೋಜನಾ ನಕ್ಷೆ (ಮಾಸ್ಟರ್ ಪ್ಲ್ಯಾನ್), ಅಲ್ಲಿ ಕಟ್ಟಡ ನಿರ್ಮಾಣ ಆಗುವುದಿದ್ದರೆ ಅದರ ಕಟ್ಟಡಾ ನಕ್ಷೆ, ಬಿಲ್ಟಪ್ ಏರಿಯಾ, ಕಾರ್ಪೆಟ್ ಏರಿಯಾ, ಸ್ವಾಧೀನ ಹಸ್ತಾಂತರ ದಾಖಲೆ, ವಿದ್ಯುತ್, ನೀರು, ಚರಂಡಿ, ರಸ್ತೆಗಳ ಕುರಿತಾಗಿ ಇರುವ ಸೂಕ್ತ ದಾಖಲೆ, ಪಾರ್ಕಿಂಗ್ ವ್ಯವಸ್ಥೆಯ ಮಾಹಿತಿ ಇರುವ ದಾಖಲೆ ಇತ್ಯಾದಿಗಳತ್ತ ಗಮನ ಇರಲಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಒಂದೇ ನಿವೇಶನವನ್ನು ಹಲವರಿಗೆ ಮಾರಾಟ ಮಾಡಿ ವಂಚನೆ ನಡೆಸುವ ಘಟನೆ ಆಗ್ಗಾಗ್ಗೆ ನಡೆಯುತ್ತಲೇ ಇರುತ್ತದೆ. ಆದ್ದರಿಂದ ನಿವೇಶನ ಖರೀದಿಗೂ ಮುನ್ನ ಅತ್ಯಂತ ಜಾಗರೂಕರಾಗಿದ್ದು ತಜ್ಞರ ಸಲಹೆ ಪಡೆದುಕೊಳ್ಳಬೇಕು.

ಇವೆಲ್ಲ ದಾಖಲೆಗಳು ಅತ್ಯಗತ್ಯವಾದರೂ ಮೊದಲು ಮಾರಾಟಗಾರನ ಸಾಚಾತನವನ್ನೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಖರೀದಿ ಮಾಡಹೊರಟಿರುವ ಜಮೀನು ಮಾರಾಟಗಾರನ ಹೆಸರಿನಲ್ಲಿ ನೋಂದಣಿ ಆಗಿರಬೇಕು. ಆತನಿಗೆ ಅದನ್ನು ಮಾರಾಟ ಮಾಡುವ ಹಕ್ಕು ಇರಬೇಕು. ಅಂದರೆ ಅವನ ಹೆಸರಿನಲ್ಲಿ ಹಕ್ಕುಪತ್ರ (ಟೈಟಲ್ ಡೀಡ್) ಇರಬೇಕು. ಆ ನಿವೇಶನದ ಮೇಲೆ ಹಿಂದೆ ಯಾರಾದರೂ ಸಾಲ ಪಡೆದುಕೊಂಡಿರುವ ಸಾಧ್ಯತೆಗಳು ಇರುತ್ತವೆ. ಒಂದು ವೇಳೆ ಸಾಲ ಪೂರ್ಣವಾಗಿ ಪಾವತಿಯಾಗದಿದ್ದಲ್ಲಿ ಸಾಲದ ಹೊರೆ ಖರೀದಿದಾರನ ತಲೆ ಮೇಲೆ ಬರಬಹುದು. ಆದ್ದರಿಂದ ಸಂಪೂರ್ಣ ಸಾಲ ಪಾವತಿಸಿ ಆಗಿದೆಯೇ ಎಂಬುದನ್ನೂ ತಿಳಿದುಕೊಳ್ಳಬೇಕು.

ಮಾರಾಟ ಮಾಡುವ ನಿವೇಶನ ಯಾರಿಗೆ ಸೇರಿದ್ದು (ಉದಾ: ಸೊಸೈಟಿ, ಬಿಲ್ಡರ್, ಅಭಿವೃದ್ಧಿ ಪ್ರಾಧಿಕಾರ, ಗೃಹ ನಿರ್ಮಾಣ ಮಂಡಳಿ ಇತ್ಯಾದಿ) ಎಂಬ ಬಗ್ಗೆ ಖರೀದಿದಾರ ಮಾರಾಟಗಾರನಿಂದ ವಿಕ್ರಯ ಪತ್ರ (ಸೇಲ್ ಡೀಡ್) ಪಡೆದುಕೊಳ್ಳಬೇಕು. ನಿವೇಶನ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದ್ದರೆ, ಕಾಲಕ್ಕನುಸಾರವಾಗಿ ಆ ನಿವೇಶನದ ತೆರಿಗೆ ಪಾವತಿಯಾಗಿರುವ ಬಗ್ಗೆ ಮಾರಾಟಗಾರನಿಂದ ದಾಖಲೆ ಪಡೆದುಕೊಳ್ಳಬೇಕು. ಈ ರೀತಿ ಯಾವುದೇ ಶುಲ್ಕ ಬಾಕಿ ಇಲ್ಲ ಎಂಬುದನ್ನು ಆಯಾ ನಿವೇಶನ ವ್ಯಾಪ್ತಿಯ ಉಪ ನೋಂದಣಾಧಿಕಾರಿಗಳಿಂದ ಋಣಭಾರ ಪ್ರಮಾಣ ಪತ್ರ (ಎನ್‌ಕಂಬರೆನ್ಸ್ ಸರ್ಟಿಫಿಕೇಟ್) ಪಡೆದುಕೊಳ್ಳುವ ಅವಕಾಶ ಕಾನೂನಿನಲ್ಲಿ ಇದೆ. ನೀವು ಎಷ್ಟು ಅಳತೆಯ ಜಮೀನು ಖರೀದಿ ಮಾಡಿದ್ದೀರಿ ಎಂಬುದನ್ನು ಅದರ ಹಣ ಪಾವತಿ ಮಾಡುವ ಮುನ್ನ ಸರ್ವೇಯರ್ ಮೂಲಕ ಅಳತೆ ಮಾಡಿಸಿಕೊಳ್ಳುವುದು ಉತ್ತಮ. ಸರ್ವೆ ಇಲಾಖೆಯಿಂದ ನಕ್ಷೆ ಪಡೆದುಕೊಂಡೂ ಅದನ್ನು ಅಳತೆ ಮಾಡಬಹುದು.

ಇವೆಲ್ಲ ಸರಿಯಾದ ದಾಖಲೆಗಳು ಸಿಕ್ಕ ಮೇಲೆ ನಿವೇಶನ ಖರೀದಿಗೆ ಒಪ್ಪಿ ಹಣಕಾಸಿಗೆ ಸಂಬಂಧಿಸಿದ ಮಾತುಕತೆಯೂ ಆಯಿತು ಎಂದಿಟ್ಟುಕೊಳ್ಳಿ. ಆ ನಂತರ ಮಾರಾಟಗಾರರೊಂದಿಗೆ ಖರೀದಿದಾರ ನಿಗದಿತ ಸ್ಟ್ಯಾಂಪ್ ಪೇಪರ್ ಮೇಲೆ ಕರಾರು ಸಿದ್ಧಪಡಿಸಿಕೊಳ್ಳಬೇಕು. ಇದರಿಂದ ಹಣಕ್ಕೆ ಸಂಬಂಧಿಸಿದಂತೆ ತಗಾದೆ ಬರಲಾರದು. ಅಷ್ಟೇ ಅಲ್ಲದೇ ಮುದ್ರಾಂಕ ಶುಲ್ಕ ಪಾವತಿಸಿದ ಮೇಲೆ ಭೂ ದಾಖಲೆಗಳಿಗೆ ಅಧಿಕೃತವಾಗಿ ಮಾನ್ಯತೆಯೂ ಸಿಗುತ್ತದೆ. ಕೊನೆಯಲ್ಲಿ ಇರುವುದು ನಿವೇಶನ ನೋಂದಣಿ ಮಾಡಿಕೊಳ್ಳುವುದು. ಇದನ್ನು ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಾಡಲಾಗುತ್ತದೆ. ಮೊದಲು ಸ್ಟ್ಯಾಂಪ್ ಪೇಪರ್ ಮೇಲೆ ಕರಡುಪ್ರತಿ ಸಿದ್ಧಪಡಿಸಿ ರಿಜಿಸ್ಟ್ರಾರ್ ಕಚೇರಿಯಲ್ಲಿ ನೀಡಿದರೆ  ನಾಲ್ಕು ತಿಂಗಳಿನಲ್ಲಿ ನಿವೇಶನ ಖರೀದಿಗಾರನ ಹೆಸರಿನಲ್ಲಿ ನೋಂದಣಿಯಾಗುತ್ತದೆ.

ಮರಳು, ಜೆಲ್ಲಿಗೂ ಇರಲಿ ಜಾಗ
ಹಿಂದಾದರೆ ಒಂದಿಷ್ಟು ಸಾವಿರದಲ್ಲಿ ಪ್ರಾಥಮಿಕ ಶಾಲೆಯಿಂದ ಕಾಲೇಜಿನ ವಿದ್ಯಾಭ್ಯಾಸವೂ ಮುಗಿಯುತ್ತಿತ್ತು. ಆದರೆ ಇಂದಿನ ಶಿಕ್ಷಣ ದುಬಾರಿ. ಆದ್ದರಿಂದ ಉಳಿದೆಲ್ಲ ಹೂಡಿಕೆಗಿಂತ ದೀರ್ಘಾವಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ನಿವೇಶನದ ಮೇಲಿನ ಹೂಡಿಕೆಯೇ ಉತ್ತಮ. ಇದು ಮಕ್ಕಳ ಭವಿಷ್ಯದ ಮಾತಾಯಿತು. ಆದರೆ ನಿವೇಶನದಲ್ಲಿ ಕೆಲ ವರ್ಷಗಳಲ್ಲಿ ನೀವೇ ಮನೆ ಕಟ್ಟಿಕೊಳ್ಳುವ ಯೋಚನೆ ಇದ್ದರೆ ಅಲ್ಲಿಯೇ ಚಿಕ್ಕ ಶೆಡ್ ಕಟ್ಟಿಕೊಂಡು ಮನೆಗಳಿಗೆ ಅಗತ್ಯವಾಗಿ ಬೇಕಾಗುವ ಜೆಲ್ಲಿಕಲ್ಲು, ಮರಳು ಇತ್ಯಾದಿಗಳನ್ನು ಶೇಖರಿಸಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಇದರ ಬೆಲೆ ಕೂಡ ನಿವೇಶನದ ಬೆಲೆಯಂತೆಯೇ ಗಗನಮುಖಿ ಆಗುತ್ತಿದೆ. ಆದ್ದರಿಂದ ನಿವೇಶನ ಕಡಿಮೆಗೆ ಸಿಕ್ಕರೂ, ಮನೆ ಕಟ್ಟುವ ಸಾಮಗ್ರಿಗಳ ಬೆಲೆ ತೆರಲು ಹೆಣಗಾಟ ನಡೆಸುವುದು ತಪ್ಪುತ್ತದೆ
-ಶಿವಾನಂದ  ಶೆಟ್ಟರ್, ಉದ್ಯಮಿ

ಸಾಲ ಸಿಗುತ್ತದೆಯೆ?
ಇವೆಲ್ಲ ಕೈಯಲ್ಲಿ ದುಡ್ಡಿದ್ದವರ ಮಾತಾಯಿತು. ಆದರೆ ಬ್ಯಾಂಕಿನಲ್ಲಿ ಸಾಲ ಮಾಡಿ ನಿವೇಶನ ಖರೀದಿ ಮಾಡುವವ ಏನು ಮಾಡಬೇಕು ಎಂಬುದು ಈಗಿರುವ ಪ್ರಶ್ನೆ. ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕ್‌ಗಳು ನಿವೇಶನದ ಮೇಲೆ ಸಾಲ ಕೊಡುವುದಿಲ್ಲ. ಗೃಹ ಸಾಲ ಕೊಡುವುದು ಮನೆ/ ಅಪಾರ್ಟ್‌ಮೆಂಟ್ ಖರೀದಿಗೆ ಮಾತ್ರ. ಆದರೆ ಈಚೆಗೆ ನಿವೇಶನದ ಮೇಲೆ ಸಾಲ ಕೊಡಲು ಕೆಲವು ಬ್ಯಾಂಕ್‌ಗಳು ಮುಂದೆ ಬಂದಿವೆ. ಆದರೆ ಸುಮ್ಮನೇ ಸಾಲ ಕೊಡುವುದಿಲ್ಲ. ಅದಕ್ಕೆ ಷರತ್ತೂ ಇದೆ. ಅದೇನೆಂದರೆ ಇಂತಿಷ್ಟೇ ಅವಧಿಯಲ್ಲಿ ಆ ನಿವೇಶನದಲ್ಲಿ ಮನೆ ಕಟ್ಟಲೇಬೇಕು ಎನ್ನುವುದು. ಮನೆ ಕಟ್ಟುವುದಾಗಿ ಹೇಳಿ ಸಾಲ ಪಡೆದು ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ನಿವೇಶನ ಹರಾಜು ಆಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

ಅಂದ ಹಾಗೆ ಕೃಷಿ ಭೂಮಿ ಖರೀದಿಗೆ ಸಾಲ ಸಿಗುವುದಿಲ್ಲ. ಅದೇನಿದ್ದರೂ ಅಲ್ಲಿ ಮನೆ ಕಟ್ಟಬೇಕು ಎಂಬ ಷರತ್ತಿನೊಂದಿಗೆ ಮಾತ್ರ. ಅಭಿವೃದ್ಧಿ ಪ್ರಾಧಿಕಾರ, ಗೃಹ ಮಂಡಳಿ ಸೇರಿದಂತೆ ಸರ್ಕಾರಿ ಸಂಸ್ಥೆಗಳಿಂದ ನಿವೇಶನ ಖರೀದಿ ಮಾಡುವುದಾದರೆ ಬ್ಯಾಂಕ್‌ನವರೂ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅರ್ಥಾತ್ ಅಲ್ಲಿ ದಾಖಲೆಪತ್ರ ಪರಿಶೀಲನೆ ಮಾಡುವುದೆಲ್ಲ ಸುಲಭವಾಗಿ ನಡೆಯುವ ಕಾರಣ ಖರೀದಿ ಮಾಡುವವರಿಗೂ ಹೆಚ್ಚಿನ ತಲೆನೋವಾಗು ವುದಿಲ್ಲ. ಆದರೆ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡುವಾಗ ಮಾತ್ರ ಬ್ಯಾಂಕ್‌ನಿಂದ ಸಾಲ ಪಡೆಯಲು ಹೆಚ್ಚಿನ ಸಮಯ ಹಿಡಿಯುತ್ತದೆ.

ನಿವೇಶನದ ಮೇಲೆ ಸಾಲ ನೀಡುವಾಗ ಬ್ಯಾಂಕ್‌ಗಳು ಆಸ್ತಿಯನ್ನು ಅಡಮಾನ ಇಟ್ಟುಕೊಳ್ಳುತ್ತವೆ. ಅಂದರೆ ನಿವೇಶನದ ಮೂಲ ದಾಖಲೆಗಳನ್ನು ಬ್ಯಾಂಕ್ ವಶಕ್ಕೆ ಒಪ್ಪಿಸಬೇಕು, ಕೆಲವೊಮ್ಮೆ ಜಮೀನಿನ ಬಗ್ಗೆ ಸಂದೇಹವಿದ್ದಲ್ಲಿ, ಇದಕ್ಕಿಂತ ಹೆಚ್ಚಿನ ದಾಖಲೆಗಳನ್ನೂ ಬ್ಯಾಂಕ್‌ಗಳು ಕೇಳಬಹುದು. ನಿವೇಶನದ ಹಕ್ಕನ್ನು ಮಾರಾಟಗಾರ ಖರೀದಿದಾರನಿಗೆ ಒಪ್ಪಿಸಿದರೆ ಮಾತ್ರ ಬ್ಯಾಂಕ್ ಖರೀದಿದಾರನಿಗೆ ಸಾಲದ ಮೊತ್ತ ಇರುವ ಚೆಕ್ ನೀಡುತ್ತದೆ, ಇಲ್ಲದೇ ಹೋದರೆ ಸಾಲ ಸಿಗುವುದು ಮಾರಾಟಗಾರನಿಗೇ ಹೊರತು ಖರೀದಿದಾರನಿಗೆ ಅಲ್ಲ. ಹಾಗೆಯೇ, ನಿವೇಶನ ಖರೀದಿ ಮಾಡಿ ಒಂದು ವರ್ಷಕ್ಕಿಂತ ಹೆಚ್ಚಾಗಿದ್ದರೆ ಅಂತಹ ನಿವೇಶನಗಳಿಗೆ ‘ನಿವೇಶನ ಸಾಲ’ ಬ್ಯಾಂಕ್ ನೀಡುವುದಿಲ್ಲ.

ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳಲೂ ಬ್ಯಾಂಕ್‌ನಿಂದ ಗೃಹ ಸಾಲ ಪಡೆಯುವವರು ಹೆಚ್ಚಿಗೆ ಇದ್ದಾರೆ. ಆದರೆ ನಿವೇಶನ ಎಂದಿಗೂ ’ಗೃಹ’ ಆಗಲಾರದು. ಆದ್ದರಿಂದ ನಿವೇಶನ ಸಾಲ ಪಡೆದುಕೊಂಡರೆ ಅದಕ್ಕೆ ತೆರಿಗೆ ವಿನಾಯಿತಿ ಇಲ್ಲ, ಅದಕ್ಕೆ ಕಟ್ಟುವ ಬಡ್ಡಿಗೂ ವಿನಾಯಿತಿ ದಕ್ಕದು. ಆದರೆ ಇದೇ ಸಾಲವನ್ನು ಮನೆ ಕಟ್ಟಲು ಆರಂಭಿಸಿ ಗೃಹ ಸಾಲ ಎಂದು ಪರಿವರ್ತಿಸಿಕೊಂಡದ್ದೇ ಆದಲ್ಲಿ ಆದಾಯ ತೆರಿಗೆ ಕಾಯ್ದೆ ಪ್ರಕಾರ ತೆರಿಗೆಯ ಲಾಭ ಪಡೆಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.