ADVERTISEMENT

ಅಮೃತವಾಕ್ಕು

ಎಸ್.ಜಿ.ಸಿದ್ದರಾಮಯ್ಯ
Published 20 ಏಪ್ರಿಲ್ 2015, 18:26 IST
Last Updated 20 ಏಪ್ರಿಲ್ 2015, 18:26 IST

ಅಪರಿಗ್ರಹ ತತ್ವ
ನಾವು ತಿನ್ನುವ ಅನ್ನದಲ್ಲಿ ವಿಷ ಬೆರೆತಿರುವುದು ಸರ್ವಸಾಮಾನ್ಯ ಸಂಗತಿಯಾಗಿರುವಂತೆ ನಮ್ಮ ಜೀವನ ಶೈಲಿಯಲ್ಲಿ ಲಂಚವೆಂಬುದು ಸರ್ವಮಾನ್ಯವಾದ ರೀತಿಯಲ್ಲಿ ಬೆರೆತು ಹೋಗಿದೆ. ಇದು ಜಾಗತಿಕ ಸಮಸ್ಯೆ. ಲಂಚಬಡುಕರು ಮತ್ತು ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವವರು ಲಂಚದ ವಿರುದ್ಧ ಮಾತನಾಡುತ್ತಿರುವುದು ವಿಪರ್ಯಾಸ. ವ್ಯಕ್ತಿಯ ಬಾಳಿನಲ್ಲಿ ಸತ್ಯ ಶುದ್ಧ ನಡೆ ಬದುಕಾಗದ ಹೊರತು ಆಡುವ ನುಡಿಗೆ ಬೆಲೆ ಇರುವುದಿಲ್ಲ. ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಶರಣರು ನಡೆಯೊಳಗಾಗಿ ನುಡಿದವರು. ಅವರ ಬಾಳಿನಲ್ಲಿ ಕಾಯಕವೆಂದರೆ ಬರೀ ಹೊಟ್ಟೆಹೊರೆಯುವ ದಗದವಲ್ಲ, ಲೋಭದ ದಂದೆಯೂ ಅಲ್ಲ; ಅದೊಂದು ಸತ್ಯಶುದ್ಧ ಜೀವನ ಮಾರ್ಗ.

ಹನ್ನೆರಡನೇ ಶತಮಾನದ ಶರಣರ ಬಳಗದಲ್ಲಿ ಸತ್ಯಕ್ಕನೆಂಬ ಒಬ್ಬ ಶರಣೆ ಇದ್ದಳು. ಅವಳು ವೃತ್ತಿಯಲ್ಲಿ ಜಾಡಮಾಲಿ. ಜಾಡಮಾಲಿಗಳ ಬದುಕೆಂದರೆ ಅದು ಎಲ್ಲ ಕಾಲಕ್ಕೂ ಒಂದೇ; ಆರಕ್ಕೆ ಏರದ ಮೂರಕ್ಕೆ ಮುಟ್ಟದ ಒಂದು ಎರಡರ ನಡುವಿನ ನರಕ. ಆದರೆ ಸತ್ಯಕ್ಕನಿಗೆ ತನ್ನ ಕಾಯಕದ ಬಗ್ಗೆ ಅವಮಾನವಾಗಲಿ ತಿರಸ್ಕಾರ ಭಾವವಾಗಲಿ ಇರಲಿಲ್ಲ. ಅವಳು ಹೇಳುತ್ತಾಳೆ– ‘ಲಂಚವಂಚನಕ್ಕೆ ಕೈಯಾನದ ಭಾಷೆ। ಬಟ್ಟೆಯಲ್ಲಿ ಹೊನ್ನವಸ್ತ್ರ ಬಿದ್ದಿದ್ದರೆ ನಾನು ಕೈಮುಟ್ಟಿ ಎತ್ತಿದೆನಾದರೆ। ನಿಮ್ಮಾಣೆ ನಿಮ್ಮ ಪ್ರಮಥರಾಣೆ। ಅದೇನು ಕಾರಣವೆಂದರೆ ನೀವಿಕ್ಕಿದ ಭಿಕ್ಷದಲ್ಪಿಪ್ಪೆನಾಗಿ। ಇಂತಲ್ಲದೆ ನಾನು ಅಳಿಮನವ ಮಾಡಿದೆನಾದರೆ। ನೀನಾಗಲೇ ಎನ್ನ ನರಕದಲ್ಲಿ ಅದ್ದಿ ಎದ್ದು ಹೋಗಾ ಶಂಭುಜಕ್ಕೇಶ್ವರಾ– ಎಂದು ದೇವರಿಗೇ ಸವಾಲು ಹಾಕುತ್ತಾಳೆ. ಈ ವಚನ ಅವಳ ಅಂತರಂಗ ಬಹಿರಂಗಗಳ ಆತ್ಮಸಂಗದ ನುಡಿದೀವಿಗೆ. ಈ ವಚನಕ್ಕೆ ವಿವರಣೆಯ ಅಗತ್ಯವಿಲ್ಲ. ಕಾರಣ ಅವಳ ನಡೆಯಷ್ಟೇ ಸರಳ ನೇರ ಅವಳ ನುಡಿ.

ಲಂಚ ನಿರ್ಮೂಲನದ ಬಗ್ಗೆ ವೇದಿಕೆಯ ಮೇಲೆ ಬಡಬಡಿಸುವ ಜನ ಸತ್ಯಕ್ಕನ ಈ ವಚನದ ಓದಿಗೆ ಒಮ್ಮೆ ಒಳಮನ ತೆರೆಯಬೇಕು ಲಂಚ ನಿರ್ಮೂಲನದ ಮೂಲ ಎಲ್ಲಿದೆ ಎಂಬುದು ಅರಿವಿಗೆ ಬರುತ್ತದೆ. ಸತ್ಯಕ್ಕ ಅರಿವಿನೆಚ್ಚರದಲ್ಲಿ ಬಾಳಿ ಬದುಕಿದ ಸತ್ಯ ಶುದ್ಧ ಕಾಯಕ ಜೀವಿ. ಅವಳಿಗೆ ಅಧ್ಯಾತ್ಮವೆಂಬುದು ಹೊರಗಿನ ತಾತ್ವಿಕತೆಯ ಸರಕಲ್ಲ ಅದು ಅಂತರಂಗದ ಅರಿವಿನ ಬೆಳಗು. ಅವಳ ದೃಷ್ಟಿಯಲ್ಲಿ ದೇವರು ಹೊರಗಿರುವ ಬೊಂಬೆಯಲ್ಲ, ಅರಿವೇ ಗುರುವಾಗಿ ಒಳಗಿನೊಳಗೆ ಎಚ್ಚರವಿದ್ದು ನಡೆನುಡಿಯನ್ನು ತಿದ್ದುವವನು. ಆಧ್ಯಾತ್ಮವೆಂಬುದು ಬಾಳಿನಲ್ಲಿ ತಾನು ಮಾಡುವ ಕಾಯಕದೊಳಗಿನ ಕಾಯಧರ್ಮ. ಇಂಥ ನೈತಿಕ ಎಚ್ಚರದ ಶರಣರು ಮನುಷ್ಯರಿಗೇನು ದೇವರಿಗೇ ಸವಾಲು ಹಾಕಿ ಬಾಳಿದ್ದಾರೆ. ಮಂತ್ರ ಭಿನ್ನವಾಯಿತ್ತೆಂದು ಕಂಥೆಯ ಬಿಡುವರೆ ಅರಿವುಳ್ಳವರು? ಈ ಭಾಷೆಹೀನರಿಗೇಕೆ ಶಂಭುಜಕ್ಕೇಶ್ವರನು? ಎನ್ನುತ್ತಾಳೆ ಸತ್ಯಕ್ಕ. ಅಧ್ಯಾತ್ಮವೆಂಬುದು ಆಕಾಶದಲ್ಲಿ ಹುಡುಕಿದರೆ ಸಿಕ್ಕುವುದಲ್ಲ; ಬಾಳಿನ ನಡೆನುಡಿಯಲ್ಲಿ ಅರಿವಿನ ಬೆಳಕಾಗಿರುವುದು.
(ಲೇಖಕರು ಕವಿ, ಚಿಂತಕ ಹಾಗೂ ಅನುಭಾವಿ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವವರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT