ADVERTISEMENT

ಆಸ್ತಿಯನ್ನು ಬಿಟ್ಟು ಓಡುತ್ತಿರುವ ಜನ

ಗ್ರೀಸ್‌ ಆರ್ಥಿಕ ಹಿಂಜರಿತ: ಸಾಲದ ಹೊರೆ, ತೆರಿಗೆ ಭೀತಿಯಲ್ಲಿ ದೇಶವೇ ಕಂಗಾಲು

ನಿಕೊಸ್ ಕಾನ್ಸ್‌ಟೆಂಡರಾಸ್
Published 10 ನವೆಂಬರ್ 2016, 5:44 IST
Last Updated 10 ನವೆಂಬರ್ 2016, 5:44 IST
ಆಸ್ತಿಯನ್ನು ಬಿಟ್ಟು ಓಡುತ್ತಿರುವ ಜನ
ಆಸ್ತಿಯನ್ನು ಬಿಟ್ಟು ಓಡುತ್ತಿರುವ ಜನ   

ಅಥೆನ್ಸ್: ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ತ್ಯಜಿಸುವ ಸಂಬಂಧ ಅರ್ಜಿ ಸಲ್ಲಿಸುವುದಕ್ಕಾಗಿ ಗ್ರೀಸ್‌ನಾದ್ಯಂತ ನ್ಯಾಯಾಲಯಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಇವು ತಮ್ಮ ನಿಷ್ಪ್ರಯೋಜಕ ಚಿಕ್ಕಪ್ಪನೋ ಮಾವನೋ ಜೀವನವಿಡೀ ಮೋಜು ಮಾಡಿ ಕೊನೆಗಾಲದಲ್ಲಿ ಅಪಾರ ಸಾಲದ ರಾಶಿಯೊಂದಿಗೆ ನೀಡಿದ ಆಸ್ತಿಗಳಲ್ಲ; ತೀರಾ ಇತ್ತೀಚಿನವರೆಗೆ ಗ್ರೀಸ್‌ನ  ಅರ್ಥ ವ್ಯವಸ್ಥೆ ಮತ್ತು ಸಮಾಜದ ಆಧಾರ ಸ್ತಂಭವಾಗಿದ್ದ ರಿಯಲ್ ಎಸ್ಟೇಟ್ ಆಸ್ತಿಗೆ ಜನರು ಬೆನ್ನು ತಿರುಗಿಸುತ್ತಿದ್ದಾರೆ. ಬೆಳೆಯುತ್ತಿರುವ ವೈಯಕ್ತಿಕ ಸಾಲ, ಕುಸಿಯುತ್ತಿರುವ ಆದಾಯ ಮತ್ತು ಆರ್ಥಿಕ ಹಿಂಜರಿತದಿಂದ ಜರ್ಜರಿತವಾಗಿರುವ ಗ್ರೀಸ್ ತೆರಿಗೆಗಳನ್ನು ಹೆಚ್ಚಿಸುತ್ತಲೇ ಇರುವುದು ಇದಕ್ಕೆ ಕಾರಣ. ಆಸ್ತಿ ಮತ್ತು ಸುಲಭದಲ್ಲಿ ಹಣ ಮಾಡುವ ಕನಸುಗಳೆಲ್ಲವೂ ಮಹಾದುರಂತದ ಹೊರೆಯಾಗಿ ಜನರನ್ನು ಕಾಡುತ್ತಿವೆ.

ಅಂಕಿ ಅಂಶಗಳು ಸ್ಪಷ್ಟವಿವೆ. ಆಸ್ತಿ ತೆರಿಗೆ ಹೇರಲು ಆರಂಭಿಸಿ ಎರಡು ವರ್ಷದ ನಂತರ (ಆವರೆಗೆ ಸರ್ಕಾರಕ್ಕೆ ರಿಯಲ್ ಎಸ್ಟೇಟ್ ಆದಾಯ ಎಂಬುದು ಆಸ್ತಿ ವರ್ಗಾವಣೆ ತೆರಿಗೆ ಮಾತ್ರವಾಗಿತ್ತು) 2013ರಲ್ಲಿ 29,200 ಮಂದಿ ಪಿತ್ರಾರ್ಜಿತ ಆಸ್ತಿ ವಹಿಸಿಕೊಳ್ಳಲು ನಿರಾಕರಿಸಿದರು ಎಂದು ಕಾನೂನು ಸಚಿವಾಲಯದ ದಾಖಲೆಗಳು ಹೇಳುತ್ತವೆ. 2015ರಲ್ಲಿ ಈ ಸಂಖ್ಯೆ 45,627ಕ್ಕೆ ಏರಿತು. ಎರಡು ವರ್ಷದಲ್ಲಿ ಶೇ 56ರಷ್ಟು ಹೆಚ್ಚಳ. ಈ ವರ್ಷವೂ ಭಾರಿ ಸಂಖ್ಯೆಯ ಜನರು ಆಸ್ತಿ ಹಕ್ಕು ನಿರಾಕರಿಸಿದ್ದಾರೆ ಎಂಬ ವರದಿಗಳು ದೇಶದ ವಿವಿಧ ಭಾಗಗಳಿಂದ ಬರುತ್ತಿವೆ.

‘ಇದು ಅತ್ಯಂತ ವೇದನಾಮಯ. ತಂದೆ, ತಾಯಿ ಸಾಲ ಮಾಡಿದ್ದರೆ, ಮಗ ನಿರುದ್ಯೋಗಿಯಾಗಿದ್ದರೆ ಈ ಭಾರವನ್ನು ಹೊತ್ತು ಸಾಗುವುದು ಅವರಿಗೆ ಸಾಧ್ಯವಾಗುವುದಿಲ್ಲ. ಅವರು ತಮ್ಮ ಪಿತ್ರಾರ್ಜಿತ ಮನೆಯನ್ನು ಕಳೆದುಕೊಳ್ಳಬಹುದು’ ಎಂದು ವಕೀಲ ಜಿಯೊರ್‌ ಜೋಸ್ ವವ್‍ಕೆಲಟಾಸ್ ಹೇಳುತ್ತಾರೆ.
ನೋಟರಿಗಳ ಹತ್ತಿರ ಜನರೇ ಬರುತ್ತಿಲ್ಲ ಎಂಬುದು ಆಸ್ತಿಯ ಬಗ್ಗೆ ಜನರಿಗೆ ಹೇವರಿಕೆ ಇದೆ ಎಂಬುದರ ಸ್ಪಷ್ಟ ಸಂಕೇತ. ಜೀವಿಸಿರುವ ಹೆತ್ತವರು ತಮ್ಮ ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾಯಿಸಿದ 23,221 ಪ್ರಕರಣಗಳು 2014ರಲ್ಲಿ ದಾಖಲಾಗಿವೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ಅಂಕಿ ಅಂಶ ಇಲಾಖೆ ತಿಳಿಸಿದೆ. 2008ರಲ್ಲಿ ಈ ಸಂಖ್ಯೆ 90,718 ಆಗಿತ್ತು.  ಬಿಕ್ಕಟ್ಟಿನ ನಡುವೆಯೂ ಉಯಿಲು ಬರೆಯುವುದು ಅಥವಾ ಅದನ್ನು ನೋಟರಿಯಲ್ಲಿ ದೃಢೀಕರಿಸುವುದು ಕಡಿಮೆಯೇನೂ ಆಗಿಲ್ಲ. ವರ್ಷಕ್ಕೆ ಸುಮಾರು 30 ಸಾವಿರ ಉಯಿಲುಗಳು ಸಿದ್ಧವಾಗುತ್ತಿವೆ.  ಪಿತ್ರಾರ್ಜಿತ ಆಸ್ತಿಯನ್ನು ನಿರಾಕರಿಸುವುದು ಅಧಿಕೃತ ಉಯಿಲಿನಲ್ಲಿ ಪ್ರತಿಫಲಿಸಿಲ್ಲ ಎಂಬುದನ್ನು ಇದು ಸೂಚಿಸುತ್ತದೆ (ಪ್ರತಿ ವರ್ಷ ಈ ದೇಶದಲ್ಲಿ 1.2 ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ).

ಗ್ರೀಸ್‌ನಲ್ಲಿ ಆಸ್ತಿಯ ಉತ್ತರಾಧಿಕಾರದ ಹಕ್ಕು ಪಡೆದುಕೊಳ್ಳುವುದಕ್ಕೆ ಜನರಲ್ಲಿ ಅಪಾರವಾದ ಆಕಾಂಕ್ಷೆ ಇತ್ತು. ಉಯಿಲನ್ನು ತಮಗೆ ಬೇಕಾದಂತೆ ತಿದ್ದಿಕೊಂಡು ಎಂಟು ಶ್ರೀಮಂತ ವೃದ್ಧರನ್ನು ಕೊಲೆ ಮಾಡಿದ ಗುಂಪೊಂದರ ಪ್ರಕರಣ 1987ರಲ್ಲಿ ಬೆಳಕಿಗೆ ಬಂದಾಗ ಗ್ರೀಸ್‌ನ ಜನರು ಬೆಚ್ಚಿದ್ದರು. ಈ ಗ್ಯಾಂಗ್‌ನ ಮುಖ್ಯಸ್ಥ ಒಬ್ಬ ವಕೀಲನಾಗಿದ್ದ ಮತ್ತು ಆತ ಅಥೆನ್ಸ್ ಹೊರವಲಯದ ಒಂದು ಪಟ್ಟಣದ ಮೇಯರ್ ಆಗಿಯೂ ಕೆಲಸ ಮಾಡಿದ್ದ. ಆತನ ಸಹಚರರಲ್ಲಿ ಒಬ್ಬ ನೋಟರಿ ಮತ್ತು ಒಬ್ಬ ಸಮಾಧಿ ಅಗೆಯುವವನೂ ಇದ್ದರು. ಈ ಪ್ರಕರಣ ಮಾಧ್ಯಮದಲ್ಲಿ ಭಾರಿ ಪ್ರಚಾರ ಪಡೆದಿತ್ತು. ಆಸ್ತಿಯ ಉತ್ತರಾಧಿಕಾರದ ಹಕ್ಕನ್ನು ಹೊಂದುವ ಸಾಮಾನ್ಯ ಆಕಾಂಕ್ಷೆಯನ್ನು ಹಂತಕರು ಕಾರ್ಯರೂಪಕ್ಕೆ ಇಳಿಸಿದ್ದಾರೆ ಎಂದು ಜನರು ಈ ಬಗ್ಗೆ ಆಗ ಮಾತನಾಡಿಕೊಂಡಿದ್ದರು.

ADVERTISEMENT

ಆದರೆ ಇಂದು ಆಸ್ತಿಗಾಗಿ ಜನರನ್ನು ಕೊಲ್ಲುವುದಕ್ಕೆ ಮುಂದಾಗುವ ಬದಲು ಜನರು ಅದರಿಂದ ದೂರ ಓಡಿಹೋಗಲು ಯತ್ನಿಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದ ಕುಸಿತದಲ್ಲಿಯೇ ಅದರ ಕಾರಣವೂ ಇದೆ. 2004ರಿಂದ 2014ರ ಅವಧಿಯಲ್ಲಿ ವಹಿವಾಟುಗಳ ಪ್ರಮಾಣ ಶೇ 74ರಷ್ಟು ಕುಸಿದಿದೆ. ಆಸ್ತಿ ದೊರೆತರೆ ಅದನ್ನು ಮಾರಾಟ ಮಾಡಿ ಆರಾಮ ಜೀವನ ನಡೆಸಬಹುದು ಎಂದು ಒಂದು ಕಾಲದಲ್ಲಿ ಜನರು ಭಾವಿಸಿದ್ದರು. ಆದರೆ ಈಗ ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಮತ್ತು ಅದರ ಮೇಲಿನ ತೆರಿಗೆ ತಮ್ಮನ್ನು ಹಣ್ಣು ಮಾಡುತ್ತದೆ ಎಂಬ ಭೀತಿ ಜನರಲ್ಲಿದೆ. ಒಂದು ವೇಳೆ ಖರೀದಿಸಲು ಯಾರಾದರೂ ಮುಂದೆ ಬಂದರೂ ಮಾರಾಟದಿಂದ ಅಂತಹ ಲಾಭವೇನೂ ಆಗುವುದಿಲ್ಲ. ಯಾಕೆಂದರೆ 2008ಕ್ಕೆ ಹೋಲಿಸಿದರೆ ಆಸ್ತಿಯ ಬೆಲೆ ಶೇ 41ರಷ್ಟು ಕುಸಿತವಾಗಿದೆ ಎಂದು ಬ್ಯಾಂಕ್ ಆಫ್ ಗ್ರೀಸ್ ಹೇಳುತ್ತದೆ. ಮನೆಗಳ ನಿರ್ಮಾಣ ಸಂಪೂರ್ಣವಾಗಿ ನೆಲಕಚ್ಚಿದೆ. 2007ರಿಂದ 2016ರ ಅವಧಿಯಲ್ಲಿ ಮನೆ ನಿರ್ಮಾಣ ಪ್ರಮಾಣ ಶೇ 95ರಷ್ಟು ಇಳಿಕೆಯಾಗಿದೆ.

ಈ ಬಿಕ್ಕಟ್ಟಿಗೆ ಸದ್ಯಕ್ಕಂತೂ ಯಾವುದೇ ಪರಿಹಾರ ಗೋಚರಿಸುತ್ತಿಲ್ಲ. ಹಾಗಾಗಿ ಆಸ್ತಿ ಎಂದರೆ ಜನರು ಭಯಪಡುವಂತಾಗಿದೆ. ಕಳೆದ ಹಲವು ವರ್ಷಗಳ ಆರ್ಥಿಕ ಹಿನ್ನಡೆ, ಆಸ್ತಿ ಇದ್ದರೆ ಸುರಕ್ಷೆ ಎಂಬ ಸಾಂಪ್ರದಾಯಿಕ ಪರಿಕಲ್ಪನೆಯನ್ನೇ ನುಚ್ಚುನೂರಾಗಿಸಿದೆ. ಇತಿಹಾಸದ ಉದ್ದಕ್ಕೂ ಹಲವು ಯುದ್ಧಗಳು, ದಿವಾಳಿತನಗಳು ಮತ್ತು ತೀವ್ರವಾದ ಹಣದುಬ್ಬರದಿಂದಾಗಿ ಜಮೀನು ಎಂದರೆ ಸ್ವರ್ಗ ಎಂದೇ ಗ್ರೀಕರು ಭಾವಿಸಿದ್ದರು. 2014ರಲ್ಲಿ ಇಲ್ಲಿ ಸ್ವಂತ ಮನೆ ಹೊಂದಿದ್ದವರ ಪ್ರಮಾಣ ಶೇ 74ರಷ್ಟಿತ್ತು. ಇದು ಯುರೋಪ್‌ನ ಸರಾಸರಿಯಾದ ಶೇ 70ಕ್ಕಿಂತ ಹೆಚ್ಚು. ಆಗಾಗ ಆಗುತ್ತಿದ್ದ ಹಣದ ಅಪಮೌಲ್ಯ ಮತ್ತು ಎರಡನೇ ಜಾಗತಿಕ ಯುದ್ಧದ ನಂತರದಲ್ಲಿನ ತೀವ್ರ ಹಣದುಬ್ಬರದಂತಹ ಪರಿಸ್ಥಿತಿಯಲ್ಲಿ ಉಳಿತಾಯವನ್ನು ಕಳೆದುಕೊಳ್ಳುವ ಭೀತಿ ಇರುವುದರಿಂದ ಆಸ್ತಿ ಖರೀದಿಸುವಂತೆ ಕಿರಿಯ ತಲೆಮಾರಿಗೆ ಹಿರಿಯರು ಒತ್ತಡ ಹೇರುತ್ತಿದ್ದರು. ಕಷ್ಟ ಕಾರ್ಪಣ್ಯಗಳಿಂದ ಪಾರಾಗುವ ಒಂದು ಉಪಾಯವಾಗಿ ತಮ್ಮ ಮಕ್ಕಳು ಮನೆ ಖರೀದಿಸುವುದಕ್ಕೆ ಹೆತ್ತವರು ನೆರವಾಗುತ್ತಿದ್ದರು ಅಥವಾ ಏನಾದರೂ ಆಸ್ತಿ ಮಕ್ಕಳಿಗೆ ಬಿಟ್ಟು ಹೋಗಲು ಯತ್ನಿಸುತ್ತಿದ್ದರು.

‘ನಾವು ಹೊಸ ಯುಗವೊಂದಕ್ಕೆ ಪ್ರವೇಶಿಸಿದ್ದೇವೆ. ಹಿಂದೆ ಮಕ್ಕಳ ತಲೆ ಮೇಲೆ ಸೂರು ಬಿಟ್ಟು ಹೋಗಲು ಹೆತ್ತವರು ಬಯಸುತ್ತಿದ್ದರೆ ಈಗ ಮಕ್ಕಳೇ ತಮಗೆ ಆ ಹೊರೆ ಬೇಡ ಎಂದು ಹೇಳುತ್ತಿದ್ದಾರೆ’ ಎಂದು ವಕೀಲೆ ಪಾಪ್ಪಿ ಕಕೈಡಿ ಹೇಳುತ್ತಾರೆ. ಮೃತಪಟ್ಟ ಹಿರಿಯರ ಸಾಲದ ಹೊರೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆಸ್ತಿಯನ್ನು ನಿರಾಕರಿಸಿರುವ ಹಲವು ಕಕ್ಷಿದಾರರನ್ನು ಅವರು ಹೊಂದಿದ್ದಾರೆ.

ಆಸ್ತಿ ಮೌಲ್ಯ ಯಾವ ರೀತಿ ಕುಸಿದಿದೆ ಎಂಬುದಕ್ಕೆ ಭಾರಿ ಆಸ್ತಿ ಹೊಂದಿ ಅವುಗಳಿಂದ ಬರುವ ಆದಾಯದಿಂದಲೇ ಸಮಾಜ ಸೇವೆ ನಡೆಸುತ್ತಿದ್ದ ಸಂಸ್ಥೆಗಳ ಸ್ಥಿತಿ ಒಳ್ಳೆಯ ಉದಾಹರಣೆ. ವೃದ್ಧರು ಮತ್ತು ರೋಗಿಗಳಿಗೆ ಆಶ್ರಯ ಒದಗಿಸುವ ಅಥೆನ್ಸ್‌ನಲ್ಲಿರುವ ಅಸೈಲನ್ ಅನಿಯೆಟನ್ ಎಂಬ ಸಂಸ್ಥೆಯ ನಿದರ್ಶನವನ್ನೇ ಗಮನಿಸಬಹುದು. ಆಸ್ತಿಯ ಬಾಡಿಗೆ ಅಥವಾ ಅದನ್ನು ಮಾರಿ ಬಂದ ಹಣದಿಂದಲೇ ಈ ಸಂಸ್ಥೆ ನಡೆಯುತ್ತಿತ್ತು. ಈಗ ಈ ಸಂಸ್ಥೆಗೆ ಯಾವ ಆಸ್ತಿಯನ್ನೂ ಮಾರುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಂಸ್ಥೆಯ ವಶದಲ್ಲಿ 887 ಆಸ್ತಿಗಳಿದ್ದು ಅವುಗಳಲ್ಲಿ 396 ಖಾಲಿ ಬಿದ್ದಿವೆ. 2015ರಲ್ಲಿ ಸಂಸ್ಥೆಯ ಆದಾಯ 21.7 ಲಕ್ಷ ಯೂರೋಗಳಾಗಿತ್ತು (ಸುಮಾರು ₹16 ಕೋಟಿ).  ಅದರಲ್ಲಿ ಸಂಸ್ಥೆ ಸುಮಾರು 18 ಲಕ್ಷ ಯೂರೋ (ಸುಮಾರು ₹13.3 ಕೋಟಿ) ತೆರಿಗೆ ಪಾವತಿಸಬೇಕಿದೆ. ಇಷ್ಟು ತೆರಿಗೆ ಪಾವತಿಸಿದರೆ, ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ 180 ರೋಗಿಗಳನ್ನು ನೋಡಿಕೊಳ್ಳಲು ಹಣ ಎಲ್ಲಿದೆ?

ಆಸ್ತಿ ವಿಷಮಯವಾಗುತ್ತಿರುವುದರ ಚಿತ್ರಗಳು ಗ್ರೀಕ್ ಬಿಕ್ಕಟ್ಟಿನ ಸಂಗ್ರಹ ಚಿತ್ರಗಳಷ್ಟು ಸುಂದರವಾದುದಲ್ಲ- ಇವು ಮುಸುಕು ತೊಟ್ಟ ಯುವ ಜನರು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುತ್ತಿರುವ ಅಥವಾ ಉಚಿತ ಆಹಾರ ನೀಡುವ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿರುವ ಜನರ ಚಿತ್ರಗಳು– ಈ ಚಿತ್ರಗಳು ಬಿಕ್ಕಟ್ಟಿನ ಆಳ ಮತ್ತು ದುರಾಡಳಿತದ ಇತಿಹಾಸವನ್ನು ತೋರಿಸುತ್ತವೆ. ಬಹಳ ವರ್ಷಗಳವರೆಗೆ ಗ್ರೀಸ್‌ನಲ್ಲಿ ಭಾರಿ ಬೆಲೆಬಾಳುವ ಆಸ್ತಿಗಳಿಗೆ ಮಾತ್ರ ತೆರಿಗೆ ಹಾಕಲಾಗುತ್ತಿತ್ತು. ಹಾಗಾಗಿ ಬಹಳ ವರ್ಷ ಆಸ್ತಿ ತೆರಿಗೆ ಪಾವತಿಸಿಯೇ ಇಲ್ಲದ ಜನರು ಈಗ ತೆರಿಗೆ ಪಾವತಿಸಲು ಹಣವೇ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. 2010ರಲ್ಲಿ ಆಸ್ತಿ ತೆರಿಗೆಯ ಪ್ರಮಾಣ ಒಟ್ಟು ದೇಶಿ ಉತ್ಪನ್ನದ ಶೇ 0.26ರಷ್ಟಿದ್ದರೆ ಅದು ಈ ವರ್ಷ ಶೇ 2ಕ್ಕೆ ಏರಿದೆ.

‘ಗ್ರೀಕ್ ಜನರು ತಮ್ಮ ಶ್ರೀಮಂತಿಕೆ ಕಳೆದುಕೊಂಡ ಅದೇ ಕ್ಷಣದಲ್ಲಿ ಅವರು ಭಾರಿ ಶ್ರೀಮಂತರು ಎಂಬಂತೆ ಸರ್ಕಾರ ಅವರನ್ನು ನೋಡುತ್ತಿದೆ’ ಎಂದು ಗ್ರೀಕ್ ಉದ್ಯಮಗಳ ಒಕ್ಕೂಟ ಎಸ್.ಇ.ಎ ಹೇಳಿದೆ. ಆಡಳಿತಾತ್ಮಕ ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿ ಆಸ್ತಿ ನೋಂದಣಿ ಸುಗಮವಾಗಿದೆಯೇ ಎಂದು ವಿಶ್ವಬ್ಯಾಂಕ್‌ 189 ದೇಶಗಳಲ್ಲಿ ಸಮೀಕ್ಷೆ ನಡೆಸಿದೆ. ಇದರಲ್ಲಿ ಗ್ರೀಸ್‌ಗೆ 144ನೇ ಸ್ಥಾನ ನೀಡಿರುವ ವಿಶ್ವ ಬ್ಯಾಂಕ್ ಕ್ರಮದ ಬಗ್ಗೆಯೂ ಒಕ್ಕೂಟ ವಿಷಾದ ವ್ಯಕ್ತಪಡಿಸಿದೆ.

ಕಳೆದ ವರ್ಷ 22,020 ಕೋಟಿ ಯೂರೋಗಳಷ್ಟಿದ್ದ (ಸುಮಾರು ₹16.5 ಲಕ್ಷ ಕೋಟಿ) ಖಾಸಗಿ ಸಾಲ ಇಡೀ ಅರ್ಥ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಕಾಡಲಿದೆ. ಇದು ಸರ್ಕಾರದ ವರಮಾನದಲ್ಲಿಯೂ ಪ್ರತಿಫಲಿಸುತ್ತಿದೆ. ಈಗ ಪ್ರತಿಯೊಂದು ಆಸ್ತಿಯನ್ನೂ ತೆರಿಗೆಗೆ ಒಳಪಡಿಸಲಾಗಿದೆ. ಬಿಕ್ಕಟ್ಟಿನ ಅವಧಿಯಲ್ಲಿ ಅರ್ಥ ವ್ಯವಸ್ಥೆ ಶೇ 25ರಷ್ಟು ಕುಸಿದಿದೆ. ಬಹಳಷ್ಟು ಜನರು ತೆರಿಗೆ ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಸೆಪ್ಟೆಂಬರ್ ಕೊನೆಯ ಹೊತ್ತಿಗೆ ತೆರಿಗೆ ಬಾಕಿ 9300 ಕೋಟಿ ಯೂರೋಗಳಷ್ಟಿತ್ತು (ಸುಮಾರು ₹6.9 ಲಕ್ಷ ಕೋಟಿ).  ಪ್ರತಿ ತಿಂಗಳು ಇದು ನೂರು ಕೋಟಿ ಯೂರೋಗಳಷ್ಟು (ಸುಮಾರು ₹7,400 ಕೋಟಿ) ಏರಿಕೆಯಾಗುತ್ತಿದೆ. ಅಪಾರ ಪ್ರಮಾಣದ ಸಾಲದ ಹೊರೆಯಿಂದ ಹೊರಗೆ ಬರುವುದು ಗ್ರೀಕರಿಗೆ ದೊಡ್ಡ ಸವಾಲು. ಗೃಹ ಸಾಲದಲ್ಲಿ ಬಾಕಿಯ ಪ್ರಮಾಣ ಜೂನ್ ಹೊತ್ತಿಗೆ ಶೇ 31.7ರಷ್ಟಿತ್ತು. ಇದು 2008ರಲ್ಲಿ ಕೇವಲ ಶೇ 5.3ರಷ್ಟಿತ್ತು. ಮನೆ ಹೊಂದಿರುವ ಸಾವಿರಾರು ಮಂದಿ ತಮ್ಮ ಮನೆಯನ್ನು ಸಾಲ ನೀಡಿರುವವರು ಮುಟ್ಟುಗೋಲು ಹಾಕಿಕೊಳ್ಳುವ ಭೀತಿಯಲ್ಲಿದ್ದಾರೆ. ಹಾಗಾದರೆ ಇನ್ನಷ್ಟು ಮನೆಗಳು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುತ್ತವೆ. ಪರಿಣಾಮವಾಗಿ ಆಸ್ತಿ ಬೆಲೆ ಇನ್ನಷ್ಟು ತಗ್ಗುತ್ತದೆ.

ಪ್ರವಾಸೋದ್ಯಮದ ಜತೆಗೆ ಆಸ್ತಿ ಕೂಡ ಆರ್ಥಿಕ ಚೇತರಿಕೆಯ ಆಧಾರಸ್ತಂಭವಾಗಬಹುದು. ಆದರೆ ಹಾಗೆ ಆಗುತ್ತಿಲ್ಲ. ‘ಆಡಳಿತಶಾಹಿ ಸೃಷ್ಟಿಸಿರುವ ಬಿಕ್ಕಟ್ಟುಗಳು, ನಗರ ಯೋಜನೆಯ ಅಸ್ಪಷ್ಟ ನಿರ್ಬಂಧಗಳು, ಅಸಂಖ್ಯ ನಿಯಮ ಉಲ್ಲಂಘನೆಗಳು, ಭೂ ಯೋಜನೆ ಮತ್ತು ಭೂ ಬಳಕೆಯ ಬಗ್ಗೆ ಸ್ಥಿರ ಮತ್ತು ಸ್ಪಷ್ಟ ಚೌಕಟ್ಟಿನ ಕೊರತೆ ರಿಯಲ್ ಎಸ್ಟೇಟ್ ಬೇಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ’ ಎಂದು ಬ್ಯಾಂಕ್ ಆಫ್ ಗ್ರೀಸ್ ಜೂನ್‌ನಲ್ಲಿ ಹೇಳಿದೆ. ದೇಶದಲ್ಲಿ ಸಮಗ್ರ ಮತ್ತು ನಿಖರವಾದ ಆಸ್ತಿ ದಾಖಲು ವ್ಯವಸ್ಥೆಯೂ ಇಲ್ಲ ಎಂದು ಅದು ತಿಳಿಸಿದೆ.

ಆರು ವರ್ಷಗಳ ಬಿಕ್ಕಟ್ಟಿನ ಬಳಿಕವೂ ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಹಾಗಿದ್ದರೂ, ಗ್ರೀಸ್‌ನ ಎಡಪಂಥೀಯ ಸರ್ಕಾರ ಆಸ್ತಿ ಮಾರಾಟ ಮತ್ತು ಬಾಡಿಗೆಗೆ ನೀಡುವುದರ ಮೇಲೆ ಇನ್ನಷ್ಟು ವೆಚ್ಚಗಳನ್ನು ಹೇರುವ ಪ್ರಸ್ತಾವವನ್ನು ಮುಂದಿಟ್ಟಿದೆ. ‘ವಿದ್ಯುತ್ ಕ್ಷಮತೆ’ ಪ್ರಮಾಣಪತ್ರ ಮತ್ತು ಯಾವುದೇ ಅಕ್ರಮ ನಿರ್ಮಾಣ ಇಲ್ಲ ಎಂದು ಸಿವಿಲ್ ಎಂಜಿನಿಯರ್‌ನಿಂದ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ. ಇನ್ನಷ್ಟು ಇಂತಹ ತೊಡಕುಗಳು ಏನನ್ನೂ ಮಾರಲಾಗದ, ಏನನ್ನೂ ಖರೀದಿಸಲಾಗದ ಅಥವಾ ಬಾಡಿಗೆಗೆ ನೀಡಲಾಗದ ಕೊನೆಯಿಲ್ಲದ ‘ಆಸ್ತಿ ಸ್ಮಶಾನ’ವಾಗಿ ದೇಶವನ್ನು ಪರಿವರ್ತಿಸಲಿದೆ ಎಂದು ಆಸ್ತಿ ಮಾಲೀಕರ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
‘ಆಸ್ತಿ ಎಂದರೆ ಕಳವು’ ಎಂದಿದ್ದ 19ನೇ ಶತಮಾನದ ಅರಾಜಕತಾವಾದಿ ಪಿಯರ್ ಜೋಸೆಫ್ ಪ್ರೂದೊ ಈಗಿನ ಗ್ರೀಸನ್ನು ನೋಡಿದ್ದರೆ ‘ಆಸ್ತಿ ಎಂದರೆ ಸಾಲ’ ಎನ್ನುತ್ತಿದ್ದನೇನೊ.

ಲೇಖಕ ಗ್ರೀಸ್‌ನ ಕೆಥಿಮೆರಿನಿ ಎಂಬ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ
ದಿ ನ್ಯೂಯಾರ್ಕ್‌ ಟೈಮ್ಸ್‌

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.