ADVERTISEMENT

ಒಳಮೀಸಲಾತಿ ಜಂಜಡ: ಕಾಂಗ್ರೆಸ್‌ಗೆ ‘ಎಡಗೈ’ ಏಟು

ಉದಯಕುಮಾರ್ ಎನ್.
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿನ್ನಡೆಗೆ ದಲಿತ ಎಡಗೈ ಪಂಗಡದ ‘ಒಳಗುದ್ದು’ ಕೂಡ ಕೊಡುಗೆ ನೀಡಿದೆಯೇ? ಈ ಸಾಧ್ಯತೆಯೇ ಹೆಚ್ಚು. ದಲಿತರ ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿಲ್ಲ ಎಂದು ಸಿಟ್ಟಾಗಿರುವ ಎಡಗೈ ಪಂಗಡದ ಮುಖಂಡರು ಕಾಂಗ್ರೆಸ್‌ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದರು. ಈ ಅಂಶ ಚುನಾವಣೆಯಲ್ಲಿ  ಪ್ರತಿಕೂಲವಾಗಿ ಪರಿಣಮಿಸಿದಂತೆ ಕಾಣುತ್ತಿದೆ.

ಪರಿಶಿಷ್ಟ ಜಾತಿಯಲ್ಲಿರುವ ಒಳಪಂಗಡಗಳ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನಿಗದಿಯಾಗಬೇಕೆಂಬ ಬೇಡಿಕೆ ದಶಕಗಳಷ್ಟು ಹಳೆಯದು. ಆಂಧ್ರಪ್ರದೇಶದಲ್ಲಿ ಎಡಗೈ ಮತ್ತು ಬಲಗೈ ದಲಿತರ ನಡುವೆ ಈ ವಿಚಾರದಲ್ಲಿ ಬಿರುಕು ಮೂಡಿದ ಬಳಿಕ ಕರ್ನಾಟದಲ್ಲಿಯೂ ಈ ಬಿರುಕು ಹೆಚ್ಚತೊಡಗಿತು. ದಲಿತರ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿರುವ ವರದಿಯ ಅಂಶಗಳನ್ನು ಜಾರಿಗೆ ತರಲು ಕೇಂದ್ರಕ್ಕೆ ಶಿಫಾರಸು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಟ್ಟಿ ನಿಲುವು ತಳೆಯಲಿಲ್ಲ ಎಂಬ ಸಿಟ್ಟು ಎಡಗೈ ಪಂಗಡದವರಿಗಿದೆ.

ಇದರೊಂದಿಗೆ ಎಡಗೈ ಒಳಪಂಗಡಕ್ಕೆ ನೀಡುವ ಟಿಕೆಟ್‌ಗಳ ಸಂಖ್ಯೆಗೂ ಕತ್ತರಿ ಬಿದ್ದದ್ದು ಈ ಪಂಗಡದ ಮುಖಂಡರನ್ನು ಕೆರಳಿಸಿತು. ಅದರ ಪರಿಣಾಮ ಎಂಬಂತೆ ‘ಮಾದಿಗರಿಗೆ ಅನ್ಯಾಯ ಮಾಡಿದ ಪಕ್ಷಗಳ ವಿರುದ್ಧ ‘ನೋಟಾ’ ಚಲಾಯಿಸಿ’ ಎಂಬ ಕರೆಯುಳ್ಳ ಪೂರ್ಣಪುಟದ ಜಾಹೀರಾತು ದಿನಪತ್ರಿಕೆಗಳಲ್ಲಿ ರಾರಾಜಿಸಿತು. ಈ ಜಾಹೀರಾತನ್ನು ‘ಮಾದಿಗ ಮೀಸಲಾತಿ ಹೋರಾಟ ಪರಿಷತ್‌’ ನೀಡಿತ್ತು. ಸದಾಶಿವ ಆಯೋಗದ ವರದಿ ಜಾರಿ ಪ್ರಕ್ರಿಯೆಗೆ ಅಡ್ಡಗಾಲು ಹಾಕಿರುವ ಮುಖಂಡರನ್ನು ಸೋಲಿಸುವಂತೆಯೂ ಕರೆ ಕೊಟ್ಟಿತ್ತು.

ADVERTISEMENT

ಇಷ್ಟೇ ಅಲ್ಲ, ಚಾಮುಂಡೇಶ್ವರಿ, ಬಾದಾಮಿ, ಕನಕಪುರ, ಕನಕಗಿರಿ, ಕುಡಚಿ, ಮಳವಳ್ಳಿ, ಟಿ. ನರಸೀಪುರ, ಕೊರಟಗೆರೆ, ಚಿತ್ತಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವ ಛಾತಿಯುಳ್ಳವರಿಗೆ ಮತ ಚಲಾಯಿಸುವಂತೆಯೂ ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗೆ ಮತ ನೀಡುವಂತೆಯೂ ಕರೆ ನೀಡಿತ್ತು. ಅಂದರೆ ಈ ಪಂಗಡದ ಆಕ್ರೋಶಕ್ಕೆ ಪ್ರಧಾನವಾಗಿ ತುತ್ತಾದದ್ದು ಕಾಂಗ್ರೆಸ್‌ ಎಂಬುದು ನಿಚ್ಚಳ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೋಲಿನ ಅಂತರ ಹೆಚ್ಚಲು ಮತ್ತು ಬಾದಾಮಿ ಕ್ಷೇತ್ರದಲ್ಲಿ ಗೆಲುವಿನ ಗೆರೆ ಕಿರಿದಾಗಲು ಮಾದಿಗ ಮೀಸಲಾತಿ ಹೋರಾಟ ಪರಿಷತ್ತಿನ ಕರೆ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಗೆಲುವಿನ ಅಂತರಕ್ಕಿಂತ ‘ನೋಟಾ’ ಮತಗಳ ಸಂಖ್ಯೆ ಹೆಚ್ಚು ಎಂಬುದನ್ನೂ ಈ ನೆಲೆಯಲ್ಲಿ ಪರಿಭಾವಿಸಬಹುದಾಗಿದೆ. ಕೆಲವು ಕ್ಷೇತ್ರಗಳಲ್ಲಿ ಕರಪತ್ರಗಳನ್ನೂ ಹಂಚಿ ‘ಇಂಥವರನ್ನು ಸೋಲಿಸಿ’ ಎನ್ನುವ ಮಟ್ಟಿಗೆ ಈ ಒಳಪಂಗಡದ ಮುಖಂಡರು ಜಿದ್ದಿಗೆ ಬಿದ್ದು ಕೆಲಸ ಮಾಡಿದ್ದಾರೆ.

ನಮ್ಮ ಚುನಾವಣಾ ರಾಜಕಾರಣದಲ್ಲಿ ವೋಟ್ ಬ್ಯಾಂಕುಗಳನ್ನು ಕುರಿತ ಚರ್ಚೆ ಬಹುಪಾಲು ದಲಿತ ಮತ್ತು ಅಲ್ಪಸಂಖ್ಯಾತ ಮತದಾರರ ಸುತ್ತಲೇ ನಡೆಯುತ್ತಾ ಬಂದಿದೆ. ಆದರೆ ದಲಿತರನ್ನು ಇಂದು ಯಾವುದೇ ಪಕ್ಷ ತಮ್ಮ ಭದ್ರ ವೋಟ್‌ ಬ್ಯಾಂಕ್‌ ಎಂದು ಪರಿಗಣಿಸುವ ಸ್ಥಿತಿಯಲ್ಲಿ ಇಲ್ಲ. ಆ ಮಟ್ಟಿಗಿನ ಎಚ್ಚರ ಈ ಸಮುದಾಯದಲ್ಲಿ ಮೂಡಿದೆ. ರಾಜ್ಯದ ಸುಮಾರು 120 ವಿಧಾನಸಭಾ ಕ್ಷೇತ್ರಗಳಲ್ಲಿ ಎಡಗೈ ಒಳಪಂಗಡದ ಜನಸಂಖ್ಯೆಯು ಬಲಗೈನವರಿಗಿಂತ ಹೆಚ್ಚಿದೆ. ಆದರೆ ಮೀಸಲು ಕ್ಷೇತ್ರಗಳಲ್ಲಿ ಪ್ರಧಾನ ಪಕ್ಷಗಳಿಂದ ಅವರಿಗೆ ದೊರೆಯುತ್ತಿರುವ ಟಿಕೆಟ್‌ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಕಡಿಮೆಯಾಗುತ್ತಾ ಬರುತ್ತಿದೆ ಎಂಬ ಮಾತಿದೆ. ಎಡಗೈ ಒಳಪಂಗಡದ ಜನಸಂಖ್ಯೆ ಬಲಗೈ ಪಂಗಡಕ್ಕಿಂತ ಹೆಚ್ಚಿದ್ದರೂ ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಗೈ ಪಂಗಡ ಮುಂದಿದೆ. ಇದು ಟಿಕೆಟ್‌ ಪಡೆಯುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಿದೆಯೋ ಅದೇ ರೀತಿ ಗೆಲುವಿನಲ್ಲೂ ಮುಖ್ಯ ಪಾತ್ರ ವಹಿಸುತ್ತಿದೆ.

ಎಡಗೈ ಸಮುದಾಯದ ಮತ ಕ್ರೋಡೀಕರಣಕ್ಕೆ ಬಿಜೆಪಿ ವ್ಯವಸ್ಥಿತ ಪ್ರಯತ್ನ ನಡೆಸಿರುವುದು ಕಣ್ಣಿಗೆ ಕಾಣುವಂತಿದ್ದರೂ ಕಾಂಗ್ರೆಸ್‌ ಎಚ್ಚೆತ್ತುಕೊಳ್ಳಲಿಲ್ಲ. ಸದಾಶಿವ ಆಯೋಗದ ಸಲಹೆಗಳ ಜಾರಿಗೆ ಶಿಫಾರಸು ಮಾಡುವ ಮೂಲಕ ಆ ಇಡೀ ಸಮುದಾಯವನ್ನು ಒಲಿಸಿಕೊಳ್ಳುವ ಅವಕಾಶ ಕಾಂಗ್ರೆಸ್‌ಗೆ ಇತ್ತು. ಆದರೆ ಅದನ್ನು ಆ ಪಕ್ಷ ತಾನಾಗಿಯೇ ಕೈಚೆಲ್ಲಿತು ಎಂಬ ಅಭಿಪ್ರಾಯ ದಲಿತ ಚಿಂತಕರ ವಲಯದಲ್ಲಿ ಇದೆ. ಕಾಂಗ್ರೆಸ್ಸಿನ ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಸಚಿವ ಎಚ್‌. ಆಂಜನೇಯ ಅವರು ಎಡಗೈ ಪಂಗಡಕ್ಕೆ ಸೇರಿದವರಾದರೂ ಅವರ ಸಂಘಟನಾ ಸಾಮರ್ಥ್ಯ ಒಂದು ಪ್ರದೇಶಕ್ಕಷ್ಟೇ ಸೀಮಿತ. ಆಂಜನೇಯ ಅವರು ಹೊಳಲ್ಕೆರೆ ಕ್ಷೇತ್ರದಲ್ಲಿ ಸೋಲು ಅನುಭವಿಸಿರುವುದನ್ನು ನೋಡಿದರೆ ಅವರ ಆ ಸೀಮಿತ ಸಾಮರ್ಥ್ಯದ ಬಗೆಗೂ ಅನುಮಾನ ಮೂಡುತ್ತದೆ.

ಬೋವಿ ಮತ್ತು ಲಂಬಾಣಿಯಂಥ ಸ್ಪೃಶ್ಯ ಪರಿಶಿಷ್ಟ ಸಮುದಾಯಗಳಿಗೆ ಬಿಜೆಪಿ ಮಣೆ ಹಾಕುತ್ತಾ ಬಂದಿದೆ ಮತ್ತು ಈ ಸಮುದಾಯಗಳ ಮುಖಂಡರು ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿಬರುತ್ತಿದ್ದಾರೆ. ಬಿಜೆಪಿಯ ಈ ‘ಮೇಲ್ಪಂಕ್ತಿ’ಯನ್ನು ಅನುಕರಿಸಲು ಮುಂದಾಗಿ ಕಾಂಗ್ರೆಸ್‌ ತಮಗೆ ಅನ್ಯಾಯ ಎಸಗಿದೆ ಎಂಬುದು ಎಡಗೈ ಮುಖಂಡರ ಆಕ್ರೋಶ. ಈ ಸಿಟ್ಟು, ಮತಯಂತ್ರದ ಗುಂಡಿ ಒತ್ತುವ ಸಂದರ್ಭದಲ್ಲಿ ಕೆಲಸ ಮಾಡದಿರುತ್ತದೆಯೇ!

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.