ADVERTISEMENT

ಪೂರ್ವ ಪಾಕ್‌ಗೆ ಇಂದಿರಾ ಗಾಂಧಿ ಸೇನೆ ನುಗ್ಗಿಸಲು ಕಾರಣ ಈ ಹೆಣ್ಮಕ್ಕಳ ಬಿಸಿಯುಸಿರು

ಘನಶ್ಯಾಮ ಡಿ.ಎಂ.
Published 16 ಡಿಸೆಂಬರ್ 2019, 5:00 IST
Last Updated 16 ಡಿಸೆಂಬರ್ 2019, 5:00 IST
ಬಾಂಗ್ಲಾದ ಕಣ್ಣೀರು...	 ಚಿತ್ರ: ರಘು ಪೈ, ಕೃಪೆ: magnumphotos.com
ಬಾಂಗ್ಲಾದ ಕಣ್ಣೀರು... ಚಿತ್ರ: ರಘು ಪೈ, ಕೃಪೆ: magnumphotos.com   

‘ನಮ್ಮ ನೆರೆಮನೆಗೆ ದುಷ್ಟರು ನುಗ್ಗಿ ಹೆಣ್ಮಕ್ಕಳನ್ನು ಹೊತ್ತೊಯ್ದರೆ, ಅತ್ಯಾಚಾರ ಮಾಡಿದರೆ ನಾನು ಸುಮ್ಮನೆ ಕೈಕಟ್ಟಿಕೊಂಡು ನೋಡುತ್ತಿರಲಾರೆ...’

–1971ರಲ್ಲಿ ಬಾಂಗ್ಲಾದೇಶಕ್ಕೆ ನುಗ್ಗಲು ಸೇನೆಗೆ ಆದೇಶ ಕೊಟ್ಟ ಅಂದಿನ ಪ್ರಧಾನಿ ಇಂದಿರಾಗಾಂಧಿ ಹೇಳಿದ್ದ ಮಾತಿದು. ಈ ಮಾತು ಹೇಳುವಾಗ ಅವರು ಭಾರತದ ಪ್ರಧಾನಿಯಷ್ಟೇ ಆಗಿರಲಿಲ್ಲ. ಈ ಮಾತು ಒಬ್ಬ ಮಹಿಳೆಯ ಸಂವೇದನೆಯನ್ನೂ ಬಿಂಬಿಸಿತ್ತು.
ಇಂದಿರಾಗಾಂಧಿ ಈ ಮಾತು ಹೇಳಲು ಕಾರಣವಿತ್ತು.

ಮಾರ್ಚ್‌ 27, 1971ರಲ್ಲಿ ಜನರಲ್ ಟಿಕ್ಕಾ ಖಾನ್ ‘ಆಪರೇಷನ್ ಸರ್ಚ್‌ಲೈಟ್’ ಕಾರ್ಯಾಚರಣೆಯನ್ನು ಅಂದಿನ ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾ) ಆರಂಭಿಸಿದರು. ಪಾಕಿಸ್ತಾನಿ ಸೈನಿಕರು ಎಸಗಿದ ಕ್ರೌರ್ಯಕ್ಕೆ ಭಾಷೆ ಕೇವಲ ನೆಪವಾಗಿತ್ತು.

ADVERTISEMENT

ಈ ಅನಾಗರಿಕರಿಗೆ ನಾಗರಿಕತೆ ಮತ್ತು ದೇಶಭಕ್ತಿ ಕಲಿಸಬೇಕಿದೆ’ ಎಂಬ ಜನರಲ್ ಟಿಕ್ಕಾ ಖಾನ್‌ರ ಖಾಸಗಿ ಮಾತು ಪಾಕಿಸ್ತಾನಿ ಸೈನಿಕರಿಗೆ ಬಂಗಾಳಿ ಭಾಷಿಕರ ಮೇಲೆ ಎಷ್ಟು ಸಿಟ್ಟಿತ್ತು ಎಂಬುದರ ನಿಜ ವ್ಯಾಖ್ಯಾನ.

ಬಂಗಾಳಿ ಭಾಷಿಕರಿಗೆ ನಾಗರಿಕತೆ ಕಲಿಸಲು ಪಾಕ್ ಸೈನಿಕರು ಅತ್ಯಾಚಾರವನ್ನೇ ಅಸ್ತ್ರವನ್ನಾಗಿ ಆರಿಸಿಕೊಂಡರು. ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ಕುಟುಂಬದ ಎಲ್ಲ ಸದಸ್ಯರ ಎದುರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅಪಹರಿಸುತ್ತಿದ್ದರು. ಅಪಹೃತ ಮಹಿಳೆಯರನ್ನು ಇರಿಸಲೆಂದೇ ಶಿಬಿರಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿಯೂ ವಿಚಾರಣೆ ನೆಪದಲ್ಲಿ ಅತ್ಯಾಚಾರದ ಅಸ್ತ್ರವೇ ಪ್ರಯೋಗವಾಗುತ್ತಿತ್ತು. ಬೀದಿಯಲ್ಲಿ ಯೋಧರ ಬೂಟುಗಾಲಿನ ಸದ್ದು ಕೇಳಿದರೂ ಬಂಗಾಳಿ ಭಾಷಿಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕ್ರೂರವಾಗಿತ್ತು ಅಂದಿನ ಸನ್ನಿವೇಶ.

ಡಿಸೆಂಬರ್ 16, 1971ರಲ್ಲಿ ಭಾರತ ಸೇನೆ ಬಾಂಗ್ಲಾದೇಶವನ್ನು ವಿಮುಕ್ತಿಗೊಳಿಸಿ, ಪಾಕ್ ಸೈನಿಕರನ್ನು ಹೊರ ಹಾಕಿತು. ಆದರೆ, ಮಾರ್ಚ್‌ನಿಂದ ಡಿಸೆಂಬರ್‌ವರೆಗೆ, ಅಂದರೆ ಸುಮಾರು 9 ತಿಂಗಳ ಅವಧಿಯಲ್ಲಿ ಚಿತ್ರಹಿಂಸೆ ಅನುಭವಿಸಿದ್ದ ಮಹಿಳೆಯರ ಸ್ಥಿತಿ ನಂತರ ಮತ್ತಷ್ಟು ಬಿಗಡಾಯಿತು.

ಈ ಅವಧಿಯಲ್ಲಿ ಬಾಂಗ್ಲಾದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರ ಸಂಖ್ಯೆ 4 ಲಕ್ಷ. ಪಾಕ್‌ ಸೇನೆ ಕಾಲ್ತೆಗೆಯುವ ವೇಳೆಯಲ್ಲಿ ಅಲ್ಲಿ ಸುಮಾರು 2.50 ಲಕ್ಷ ಗರ್ಭಿಣಿಯರಿದ್ದರು. ಬಾಂಗ್ಲಾ ವಿಮೋಚನೆಯ ನಂತರ 1.70 ಲಕ್ಷ ಮಹಿಳೆಯರು ಗರ್ಭಪಾತ ಮಾಡಿಸಿಕೊಂಡರು. ಅತ್ಯಾಚಾರದ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ (ಪುರುಷರೂ ಸೇರಿ) 2 ಲಕ್ಷಕ್ಕೂ ಹೆಚ್ಚು. ಅತ್ಯಾಚಾರಕ್ಕೊಳಗಾದ ಮಹಿಳೆಯರು ಹೆತ್ತ ಮಕ್ಕಳ ಸಂಖ್ಯೆ ಸುಮಾರು 30 ಸಾವಿರ.

ಬಾಂಗ್ಲಾ ವಿಮೋಚನೆಯ ನಂತರ ಅತ್ಯಾಚಾರದಿಂದ ಗರ್ಭಿಣಿಯರಾದ ಮಹಿಳೆಯರು ಮತ್ತು ಅವರು ಹೆತ್ತ ಮಕ್ಕಳನ್ನು ನಿರ್ವಹಿಸುವುದೇ ಹೊಸ ಸರ್ಕಾರಕ್ಕೆ ದೊಡ್ಡ ಸವಾಲಾಯಿತು. ಇಂಥ ಮಹಿಳೆಯರನ್ನು ಕುಟುಂಬಗಳಿಂದ ಹೊರಗೆ ಹಾಕಲಾಗಿತ್ತು. ಅವರನ್ನು ಕುಟುಂಬ ಗೌರವಕ್ಕೆ ಕಪ್ಪುಚುಕ್ಕೆ ಎಂಬಂತೆ ಕಾಣಲಾಗುತ್ತಿತ್ತು. ಇಂಥ ತಾಯಂದಿರು ತಾವು ಹೆತ್ತ ಮಕ್ಕಳನ್ನು ತಮ್ಮ ಮಕ್ಕಳೆಂದು ಒಪ್ಪಿಕೊಳ್ಳುತ್ತಿರಲಿಲ್ಲ.

‘ಈ ಮಗುವಿನ ಮುಖ ನೋಡಿದರೆ ನನ್ನ ಬಾಳು ಹಾಳು ಮಾಡಿದವರ ನೆನಪಾಗುತ್ತೆ. ಇದನ್ನು ತೆಗೆದುಕೊಂಡು ಹೋಗಿ’ ಎಂದು ಅಧಿಕಾರಿಗಳ ಎದುರು ಮಕ್ಕಳನ್ನು ಮಲಗಿಸಿ ಬರುತ್ತಿದ್ದರು.

ಬಾಂಗ್ಲಾ ಸರ್ಕಾರ 18ನೇ ಫೆಬ್ರುವರಿ, 1972ರಲ್ಲಿ ‘ಮಹಿಳಾ ಪುನರ್ವಸತಿ ಮಂಡಳಿ’ಯನ್ನು ಮಹಿಳೆಯರ ಆರೋಗ್ಯ ಕಾಪಾಡಲು ಮತ್ತು ಮಕ್ಕಳನ್ನು ದತ್ತು ಕೊಡಲು ಮುಂದಾಯಿತು. ಆದರೆ ಅಲ್ಲಿನ ಸರ್ಕಾರಕ್ಕೂ ಪಾಕ್‌ನ ದೌರ್ಜನ್ಯದ ಪ್ರತೀಕದಂತಿರುವ ಮಕ್ಕಳು ತನ್ನ ದೇಶದಲ್ಲಿ ಉಳಿಯುವುದು ಬೇಕಿರಲಿಲ್ಲ. ಇಂಥ ಮಕ್ಕಳನ್ನು ‘ಕೊಳಕು ರಕ್ತದ ಪ್ರತೀಕಗಳು’ ಎಂದೇ ಅಧಿಕಾರಸ್ಥರು ಹೀಯಾಳಿಸುತ್ತಿದ್ದರು.

ಬಹುತೇಕ ಮಕ್ಕಳನ್ನು ನೆದರ್‌ಲೆಂಡ್ ಮತ್ತು ಕೆನಡಾ ದೇಶಗಳ ಮಕ್ಕಳಿಲ್ಲದ ದಂಪತಿಗಳು ದತ್ತು ಪಡೆದರು. ತಮ್ಮ ದೇಶದಲ್ಲಿ ಹುಟ್ಟಿ, ಪರದೇಶದಲ್ಲಿ ಬೆಳೆದ ಇಂಥ ಮಕ್ಕಳನ್ನು ಹುಡುಕುವ ಪ್ರಯತ್ನವನ್ನು 2008ರಲ್ಲಿ ಬಾಂಗ್ಲಾದೇಶದ ಕೆಲ ಪತ್ರಕರ್ತರು ಮಾಡಿದರು. ಆಗ್ಗೆ ಸುಮಾರು 36 ವರ್ಷ ವಯಸ್ಸಾಗಿದ್ದ ಈ ‘ಯುದ್ಧದ ಮಕ್ಕಳ’ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ...?

‘ನಾವು ಹುಟ್ಟಿದ್ದು ಬಾಂಗ್ಲಾದಲ್ಲಿ ಅಂತ ಗೊತ್ತು. ಆದರೆ ಹೆತ್ತ ತಾಯಿಗೂ ನಾವು ಬೇಡವಾದೆವು. ಯಾರೋ, ಯಾರ ಮೇಲೋ ಸೇಡು ತೀರಿಸಿಕೊಳ್ಳಲು ಹೊರಟಿದ್ದಕ್ಕೆ ನಾವು ಹುಟ್ಟ ಬೇಕಾಯಿತು. ಬೇಡ, ದಯವಿಟ್ಟು ಬಾಲ್ಯದ ದಿನಗಳನ್ನು ನೆನಪಿಸಬೇಡಿ...’ ಯುದ್ಧದ ಮಕ್ಕಳಿಗೆ ಬಾಲ್ಯ ಎನ್ನುವುದು ಇಂದಿಗೂ ಕಾಡುವ ದುಸ್ವಪ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.