ADVERTISEMENT

ಸಮಾನತೆ

​ಪ್ರಜಾವಾಣಿ ವಾರ್ತೆ
Published 14 ಮೇ 2015, 19:30 IST
Last Updated 14 ಮೇ 2015, 19:30 IST

ಸೌರಮಂಡಲದ ಕೇಂದ್ರದಲ್ಲಿ ಸೂರ್ಯನಿರುವಂತೆ ಜೈನದರ್ಶನದ ಕೇಂದ್ರದಲ್ಲಿ ಅಹಿಂಸೆಯಿದೆ. ಯಾರೂ ದುಃಖವನ್ನು ಬಯಸುವುದಿಲ್ಲ; ಯಾರಿಗೂ ದುಃಖವನ್ನು ಉಂಟು ಮಾಡಬೇಡ. ಇದೇ ಅಹಿಂಸೆ. ಇದರ ಸುತ್ತ ಜೈನ ತತ್ತ್ವಗಳೂ ವಿಚಾರಗಳೂ ಸುತ್ತುತ್ತವೆ. ಅಹಿಂಸೆಗೂ ಸಮಾನತೆಗೂ ಪರಸ್ಪರ ಸಂಬಂಧವಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆಲ್ಲರು ಸಮಾನರು. ಆದ್ದರಿಂದಲೇ ಶ್ರೀಸಾಮಾನ್ಯನ ಮತಕ್ಕೂ (ವೋಟ್‌) ರಾಷ್ಟ್ರಪತಿಯ ಮತಕ್ಕೂ ಸಮಾನವಾದ ಮೌಲ್ಯ. ಯಾವ ರೀತಿಯ ಹೆಚ್ಚು ಕಡಿಮೆಯೂ ಇಲ್ಲ. ಇದೇ ಪ್ರಕಾರ ಜೈನದರ್ಶನದಲ್ಲಿ ತಾತ್ವಿಕವಾಗಿ ಒಂದು ಆನೆಯ ಹಾಗೂ ಒಂದು ಕೀಟದ ಆತ್ಮಗಳೆರಡೂ ಸಮಾನವಾಗಿವೆ. ಆನೆಯ ಶರೀರ ಸ್ಥೂಲ, ಕೀಟದ್ದು ಸೂಕ್ಷ್ಮ. ಶರೀರದ ಗಾತ್ರದಲ್ಲಿ ಭೇದವಿದ್ದರೂ ಆತ್ಮನ ಸ್ವರೂಪದಲ್ಲಿ ಭೇದವಿಲ್ಲ. ಯಾರು ಶರೀರ, ಇಂದ್ರಿಯ, ಬಣ್ಣ, ಜಾತಿ ಇತ್ಯಾದಿ ಬಾಹ್ಯ ಭೇದಗಳನ್ನು ನೋಡಿ ಆಂತರಿಕ ಸಮಾನತೆಯನ್ನು ಅಲಕ್ಷಿಸುವರೋ ಅವರು ಅಹಿಂಸಕರಾಗುವುದಿಲ್ಲ. ಯಾರು ಬಾಹ್ಯ ಭೇದವನ್ನು ಮೀರಿ ಆಂತರಿಕ ಸಮಾನತೆಯನ್ನು  ಕಾಣುತ್ತಾರೋ, ಅವರು ಮಾತ್ರ ಅಹಿಂಸಕರು.

ಯಾವನು ಆಂತರಿಕ ಸಮಾನತೆಯನ್ನು ಪರಿಗಣಿಸುವುದಿಲ್ಲವೋ ಅವನು ತಾನು ಉಚ್ಚ, ಮತ್ತೊಬ್ಬ ನೀಚನೆಂದು ತಿಳಿಯುತ್ತಾನೆ ಅಥವಾ ತನ್ನನ್ನು ಕನಿಷ್ಠವೆಂದು ಮತ್ತೊಬ್ಬನನ್ನು ಶ್ರೇಷ್ಠನೆಂದು ಪರಿಭಾವಿಸುತ್ತಾನೆ. ಅವನು ಇನ್ನೊಬ್ಬನನ್ನು ಕಂಡು ಅಸಹ್ಯ ಪಡುತ್ತಾನೆ, ಇಲ್ಲವೆ ಇನ್ನೊಬ್ಬನಿಂದ ತಾನು ಅಸಹ್ಯಕ್ಕೆ ತುತ್ತಾದೆನೆಂದು ಭಾವಿಸುತ್ತಾನೆ. ಅವನು ಇನ್ನೊಬ್ಬನನ್ನು ಹೆದರಿಸುತ್ತಾನೆ. ಇಲ್ಲವೆ ಇನ್ನೊಬ್ಬನಿಂದ ಹೆದರಿಕೆಗೆ ಒಳಗಾಗುತ್ತಾನೆ. ಅವನು ಅಹಂಭಾವ ಅಥವಾ ಹೀನಭಾವದ ಮನೋವೃತ್ತಿಯಿಂದ ವಿಷಮತೆಯನ್ನು ಹುಟ್ಟುಹಾಕುತ್ತಾನೆ. 

ಎಲ್ಲಿ ವಿಷಮತೆಯೋ ಅಲ್ಲಿ ದಿಟವಾಗಿ ಹಿಂಸೆಯಾಗುವುದು. ವ್ಯಾವಹಾರಿಕವಾಗಿ ಸಮಾನತೆ ಎಷ್ಟಿರುವುದೋ ಅಷ್ಟು ಪ್ರೀತಿ ಸೌಹಾರ್ದ ಹೆಚ್ಚುವುವು. ಅಲ್ಲದೆ ಎಷ್ಟರಮಟ್ಟಿಗೆ ವ್ಯವಸ್ಥೆಗಳು ಉತ್ತಮ ರೀತಿಯಲ್ಲಿ ಜರುಗುವುವು. ಅಷ್ಟರ ಮಟ್ಟಿಗೆ ಹಿಂಸೆ ಕಡಿಮೆಯಾಗುವುದು. ಆದ್ದರಿಂದ ಅಹಿಂಸೆಗಾಗಿ ಸಮಾನತೆಯನ್ನು ಪಾಲಿಸುವುದು ಮತ್ತು ಸಮಾನತೆಗಾಗಿ ಅಹಿಂಸೆಯನ್ನು ಅರಿಯುವುದು ಅನಿವಾರ್ಯ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.