ADVERTISEMENT

‘ಅಚ್ಛೇ ದಿನ್’ ಹಿತಾನುಭವ ಕಾಣಿಸಲಿಲ್ಲ, ಅಲ್ಲವೇ?

ಯೋಗೇಂದ್ರ ಯಾದವ್
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಉಪ ಚುನಾವಣೆ ಫಲಿತಾಂಶ ಬಿಜೆಪಿಗೆ ಖಂಡಿತವಾಗಿಯೂ ಕೆಟ್ಟಸುದ್ದಿ ಹೊತ್ತು ತಂದಿದೆ. ಆದರೆ ಇದು ಕಾಂಗ್ರೆಸ್‌ ಮತ್ತು ಇತರ ಪ್ರಮುಖ ಪ್ರತಿಪಕ್ಷಗಳಿಗೆ ಒಳ್ಳೆಯ ಸುದ್ದಿ ತಂದಿದೆಯೇ ಎಂಬುದನ್ನು ನಾನರಿಯೆ. ಬಿಜೆಪಿ ಪಾಲಿಗಂತೂ ಇದು ತಲೆನೋವು ತರುವ ವಿಚಾರ. ಈ ಉಪ ಚುನಾವಣೆಯ ಫಲಿತಾಂಶ ಹಿಂದಿನ ಕೆಲವು ಉಪ ಚುನಾವಣೆಗಳು ನೀಡಿದ ಸಂದೇಶಕ್ಕೆ ಪುಷ್ಟಿ ನೀಡಿವೆ. ಆದರೆ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳಿಗೆ ದೊರೆತಿರುವ ಸಂದೇಶ ಇಂಥದ್ದೇ ಎಂದು ಹೇಳಲಾಗದು.

‘ಇವೆಲ್ಲ ಸ್ಥಳೀಯ ಮಟ್ಟದಲ್ಲಿ ನಡೆದ ಉಪ ಚುನಾವಣೆಗಳು. ಇಲ್ಲಿ ಬರುವ ಫಲಿತಾಂಶ ಆಧರಿಸಿ ರಾಷ್ಟ್ರಮಟ್ಟದಲ್ಲಿ ಬೀಸುತ್ತಿರುವ ಗಾಳಿ ಕೂಡ ಇದೇ ರೀತಿ ಇರುತ್ತದೆ ಎನ್ನಲಾಗದು’ ಎಂಬ ನೆಪವನ್ನು ಬಿಜೆಪಿ ಮುಂದಿಡಲಾಗದು. ಉಪ ಚುನಾವಣೆಗಳಲ್ಲಿ ರಾಷ್ಟ್ರಮಟ್ಟದ ವಿಚಾರಗಳಿಗಿಂತ, ಸ್ಥಳೀಯ ವಿಚಾರಗಳಿಗೆ ಹೆಚ್ಚಿನ ಆದ್ಯತೆ ದೊರೆತಿರುತ್ತದೆ ಎಂಬುದು ನಿಜ. ಆದರೆ, ಈ ಬಾರಿಯ ಉಪ ಚುನಾವಣೆಯಲ್ಲಿ ಅಂದಾಜು 50 ಕ್ಷೇತ್ರಗಳಿಗೆ ಕೆಲವೇ ವಾರಗಳ ಅವಧಿಯಲ್ಲಿ ಚುನಾವಣೆ ನಡೆಯಿತು. ಇವುಗಳಲ್ಲಿ ಹೆಚ್ಚಿನ ಕ್ಷೇತ್ರಗಳು ಬಿಜೆಪಿ ವಶದಲ್ಲಿ ಇದ್ದವು. ಈ ಎಲ್ಲ ಕ್ಷೇತ್ರಗಳು ಕಂಡಿರುವ ಫಲಿತಾಂಶ ಬಿಜೆಪಿಗೆ ಆಗಿರುವ ಹಿನ್ನಡೆಯಲ್ಲದೆ ಬೇರೇನೂ ಅಲ್ಲ. ಇದು ಕೇವಲ ಕಾಕತಾಳೀಯ ಆಗಿರಲಾರದು.

ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾದ ಗಾಳಿ ಈ ಕ್ಷೇತ್ರಗಳಲ್ಲಿ ಬೀಸಿದೆ ಎನ್ನಲು ಕೂಡ ಆಧಾರಗಳಿಲ್ಲ. ಉಪ ಚುನಾವಣೆಗಳಲ್ಲಿ ಸಾಮಾನ್ಯವಾಗಿ, ಆಯಾ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಒಳ್ಳೆಯ ಸಾಧನೆ ತೋರುತ್ತದೆ. ಆಡಳಿತಾರೂಢ ಪಕ್ಷಗಳು ಸಾಮಾನ್ಯವಾಗಿ ಆಡಳಿತ ಯಂತ್ರ ಬಳಸಿ ‘ಅದು–ಇದು’ ಹಂಚಿಕೆ ಮಾಡುತ್ತವೆ. ಅಲ್ಲದೆ, ಉಳಿದಿರುವ ಅವಧಿಯಲ್ಲಿ ಆಡಳಿತಾರೂಢ ಪಕ್ಷದಿಂದ ಒಳ್ಳೆಯ ಯೋಜನೆಗಳನ್ನು ಪಡೆಯೋಣ ಎಂಬ ಹಂಬಲವೂ ಜನರಲ್ಲಿ ಇರುತ್ತದೆ. ಹಾಗಾಗಿ, ಉಪ ಚುನಾವಣೆಯ ಫಲಿತಾಂಶ ಆಧರಿಸಿ, ವಿಧಾನಸಭಾ ಚುನಾವಣೆಗಳ ಫಲಿತಾಂಶ ಊಹಿಸಲಾಗದು.

ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಆಡಳಿತಾರೂಢ ಪಕ್ಷದ ಪರ ಅಲೆ ಬೀಸಿರುವುದು ಹಲವೆಡೆ ಕಾಣುತ್ತದೆ. ಉತ್ತರಾಖಂಡ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ತೋರಿದ ಉತ್ತಮ ಸಾಧನೆಗೆ, ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಅಧಿಕಾರವನ್ನು ಚೆನ್ನಾಗಿ ಬಳಸಿಕೊಂಡಿದ್ದೂ ಒಂದು ಕಾರಣ. ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ ತೋರಿದ ಉತ್ತಮ ಸಾಧನೆ ಕೂಡ ಆಡಳಿತ ಪಕ್ಷದ ಶಕ್ತಿಯನ್ನು ತೋರಿಸುತ್ತದೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ತೋರಿದ ಅದ್ಭುತ ಸಾಧನೆಗೆ, ಈ ಬಾರಿಯ ಉಪ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವುದು ಪ್ರಮುಖ ಕಾರಣ. ಹಾಗೆಯೇ ತನ್ನ ಶಕ್ತಿವರ್ಧನೆಗೆ ಎಸ್‌ಪಿ ಕೂಡ ಕೆಲಸ ಮಾಡಿತ್ತು. ಕಳೆದ ಬಾರಿ ವಿಧಾನಸಭಾ ಚುನಾವಣೆ ಮತ್ತು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ತೋರಿದ್ದಕ್ಕಿಂತ ಉತ್ತಮ ಸಾಧನೆಯನ್ನು ಎಸ್‌ಪಿ ತೋರಿದೆ. ಬಿಹಾರದಲ್ಲಿ ಬಂದ ಫಲಿತಾಂಶಕ್ಕೆ, ಅಲ್ಲಿ ನಡೆದ ಚುನಾವಣಾ ಪೂರ್ವ ಮೈತ್ರಿಕೂಟದ ತಂತ್ರಗಾರಿಕೆಯೇ ಮುಖ್ಯ ಕಾರಣ.

ಇವೆಲ್ಲ ರಾಜ್ಯ ಮಟ್ಟದಲ್ಲಿ ಜನ ವ್ಯಕ್ತಪಡಿಸಿದ ಒಲವುಗಳು. ಇದನ್ನು ಆಧರಿಸಿ ರಾಷ್ಟ್ರ ರಾಜಕಾರಣದ ಬಗ್ಗೆ ತೀರ್ಪು ನೀಡುವಾಗ ಎಚ್ಚರಿಕೆ ಇರಬೇಕು. ಆಡಳಿತ ಪಕ್ಷಕ್ಕೆ ಇರುವ ಅನುಕೂಲದ ಲಾಭ ಬಿಜೆಪಿಗೆ ಗುಜರಾತ್‌ ಮತ್ತು ರಾಜಸ್ತಾನದಲ್ಲಿ ದೊರೆತಿಲ್ಲ. ಇದು ಆ ಪಕ್ಷಕ್ಕೆ ಸಮಸ್ಯೆ ತರಬಹುದಾದ ವಿಚಾರ. ಕೇಂದ್ರ ಮತ್ತು ರಾಜ್ಯಗಳೆರಡನ್ನೂ ಆಳುತ್ತಿರುವ ಬಿಜೆಪಿ, ರಾಜಸ್ತಾನ ಮತ್ತು ಗುಜರಾತ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಹಾಗಾಗಿ, ಉಪ ಚುನಾವಣೆ ಫಲಿತಾಂಶವನ್ನು ಕೇವಲ ಆಯಾ ರಾಜ್ಯಕ್ಕೆ ಸೀಮಿತ ಸಂಗತಿ ಎನ್ನಲು ಬಿಜೆಪಿಯಿಂದ ಸಾಧ್ಯವಿಲ್ಲ. ಬಿಜೆಪಿಯೇತರ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲೂ ಬಿಜೆಪಿಗೆ ಹೇಳಿಕೊಳ್ಳುವ ಫಲಿತಾಂಶ ದೊರೆತಿಲ್ಲ. ಪಶ್ಚಿಮ ಬಂಗಾಳದಲ್ಲಿ ಒಂದು ಕ್ಷೇತ್ರ ಗೆದ್ದುಕೊಂಡರೂ, ಅಸ್ಸಾಂನಲ್ಲಿ ಇತ್ತೀಚೆಗೆ ಪಡೆದ ಮುನ್ನಡೆ ಕಾಯ್ದುಕೊಳ್ಳಲು ಆಗಿಲ್ಲ.

ಇದೊಂದು ಪ್ರಶ್ನೆಯನ್ನು ಕೇಳದಿರಲು ಸಾಧ್ಯವಾಗುತ್ತಿಲ್ಲ: ಈ ಉಪ ಚುನಾವಣೆಗಳಲ್ಲಿ ರಾಷ್ಟ್ರೀಯ ಮಟ್ಟದ ಒಂದು ಗಾಳಿ ಇತ್ತಾ? ಈ ಪ್ರಶ್ನೆಗೆ ಉತ್ತರ ನೀಡುವಾಗ ಕೂಡ ಎಚ್ಚರಿಕೆ, ಸಂಯಮ ಬೇಕು. ಉಪ ಚುನಾವಣೆಗಳು ಬದಿಗಿರಲಿ, ರಾಜ್ಯಗಳ ವಿಧಾನಸಭೆಗೆ ನಡೆಯುವ ಚುನಾವಣೆ ಆಧರಿಸಿಯೂ ರಾಷ್ಟ್ರಮಟ್ಟದ ‘ಟ್ರೆಂಡ್‌’ ಹೇಗಿದೆ ಎಂದು ಊಹಿಸುವುದು ಸುಲಭವಲ್ಲ. ಎರಡು ದಶಕಗಳ ಅವಧಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳು ಒಂದು ಬಗೆಯ ಸ್ವಾಯತ್ತತೆ ಪಡೆದುಕೊಂಡು, ರಾಷ್ಟ್ರ­ಮಟ್ಟದ ‘ಟ್ರೆಂಡ್‌’ ಊಹಿಸಲು ಅವಕಾಶ ಕೊಟ್ಟಿಲ್ಲ. ಈ ವಾದ ಬಳಸಿ, ಉಪ ಚುನಾವಣೆ ಫಲಿತಾಂಶದ ಮೇಲಿನ ಜನರ ಗಮನವನ್ನು ಇನ್ನೊಂದೆಡೆ ತಿರುಗಿಸಬಹುದು.

ಆದರೆ ರಾಜ್ಯ ರಾಜಕೀಯದ ಸ್ವಾಯತ್ತ ಸ್ಥಾನವನ್ನು ಕಸಿಯಲು ‘ಮೋದಿ ಅಲೆಗೆ’ ಸಾಧ್ಯವಾಗಿಲ್ಲ ಎಂಬುದನ್ನು ಉಪ ಚುನಾವಣಾ ಫಲಿತಾಂಶ ಸಾರಿ ಹೇಳಿದೆ. ಲೋಕಸಭಾ ಚುನಾವಣೆಯಲ್ಲಿ ತಾನು ಸಾಧಿಸಿದ ದಿಗ್ವಿಜ­ಯದ ಕಾರಣ, ಕನಿಷ್ಠ ಒಂದು ವರ್ಷದವರೆಗೆ ತನ್ನ ಬಲ ಎಲ್ಲ ರಾಜ್ಯಗಳಲ್ಲಿ ದೊಡ್ಡ ಪ್ರಮಾ­ಣದಲ್ಲೇ ಇರುತ್ತದೆ ಎಂದು ಬಿಜೆಪಿ ನಿರೀಕ್ಷಿಸಿತ್ತು. ಆದರೆ ಹಾಗೆ ಆಗಿಲ್ಲ.

ಲೋಕಸಭಾ ಚುನಾವಣೆ ವೇಳೆ ಕಂಡ ‘ಮೋದಿ ಅಲೆ’ ಹಿಮ್ಮುಖವಾಗಿ ಚಲಿಸುತ್ತಿ­ದೆಯಾ? ಈ ಪ್ರಶ್ನೆಗೆ ‘ಹೌದು’ ಎಂಬ ಉತ್ತರ ನೀಡುವುದು ಈಗ ಆಗಲಿಕ್ಕಿಲ್ಲ. ಮುಂಬರುವ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಫಲಿತಾಂಶ ಬರುವವರೆಗೆ ನಾವು ಕಾಯಬೇಕು. ಅದು ಕೂಡ ನಿಖರ ಉತ್ತರ ನೀಡಲಿದೆ ಎಂದು ಖಚಿತವಾಗಿ ಹೇಳಲಾಗದು. ಆದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಒಂದು ಪಕ್ಷ ಉಪ ಚುನಾವಣೆಗಳಲ್ಲಿ ಈ ಪರಿಯ ಹಿನ್ನಡೆ ಸಾಧಿಸಿದ್ದು ನನಗೆ ನೆನಪಿಗೆ ಬರುತ್ತಿಲ್ಲ. 1980, 1984ರಲ್ಲಿ ಕಾಂಗ್ರೆಸ್‌ಗೆ ದೊರೆತ ಲೋಕಸಭಾ ಚುನಾವಣೆ ಗೆಲುವು, 1989ರಲ್ಲಿ ಜನತಾದಳ ಗೆಲುವು ಸಾಧಿಸಿದ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಈ ಪಕ್ಷಗಳು ಭರ್ಜರಿ ಗೆಲುವು ಕಂಡವು.

‘ಅಚ್ಛೇ ದಿನ್’ ಪದಗುಚ್ಛ ನೀಡುವ ಹಿತಾನುಭವದಲ್ಲಿ ಭಾರತೀಯರೆಲ್ಲ ತೇಲುತ್ತಿ­ದ್ದರೆ, ಬಿಜೆಪಿಗೆ ಇಂಥ ಫಲಿತಾಂಶ ದೊರೆಯು­ತ್ತಿರಲಿಲ್ಲ. ಬಿಜೆಪಿ ಲೆಕ್ಕಾಚಾರ ಎಲ್ಲೋ ತಪ್ಪಾಗಿದೆ. ಈ ಹಿನ್ನಡೆಯಿಂದ ಬಿಜೆಪಿ ಯಾವ ಪಾಠ ಕಲಿಯಬಹುದು?
‘ಲವ್ ಜಿಹಾದ್’ನಂಥ ವಿಚಾರಗಳನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದು ಜನರಿಗೆ ಸರಿಬರಲಿಲ್ಲ. ಹಾಗಾಗಿ ಮುಂದೆ ಅಭಿವೃದ್ಧಿ ಕುರಿತು ಗಮನಹರಿಸುತ್ತೇವೆ ಎಂದು ಬಿಜೆಪಿಯವರು ಹೇಳಬಹುದೇ? ಅಥವಾ ಜನರ ಧ್ರುವೀಕರಣ ದೊಡ್ಡ ಮಟ್ಟದಲ್ಲಿ ಆಗಲೇ ಇಲ್ಲ ಎನ್ನಬಹುದೇ? ಈ ಫಲಿತಾಂಶ ಗಮನಿಸಿ, ದೆಹಲಿಯಲ್ಲಿ ಸರ್ಕಾರ ರಚಿಸುವ ಯತ್ನದಿಂದ ಬಿಜೆಪಿ ಹಿಂದೆ ಸರಿಯುತ್ತದೆಯೇ? ಅಥವಾ ಚುನಾವಣೆ ನಡೆದರೆ, ಗೆಲ್ಲುವ ಅವಕಾಶ ಕಡಿಮೆ ಎಂದು ಭಾವಿಸಿ, ಹೇಗಾದರೂ ಮಾಡಿ ಸರ್ಕಾರ ರಚಿಸುವ ಕಸರತ್ತಿಗೆ ಮುಂದಾಗಲಿದೆಯೇ?

ಈ ಎಲ್ಲ ಪ್ರಶ್ನೆಗಳಿಗೆ ಭವಿಷ್ಯದ ರಾಜಕಾರಣ ಹೇಗಿರುತ್ತದೆ ಎಂಬುದೇ ಉತ್ತರ ನೀಡಲಿದೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.