ADVERTISEMENT

ಅಧಿಕಾರಿಗಳು ಕಾನೂನಿಗೆ ಅತೀತರೆ?

​ಪ್ರಜಾವಾಣಿ ವಾರ್ತೆ
Published 9 ಜುಲೈ 2014, 19:30 IST
Last Updated 9 ಜುಲೈ 2014, 19:30 IST

ಸರ್ಕಾರದ ವಿವಿಧ ಇಲಾಖೆಗಳ ಆಯಕಟ್ಟಿನ ಜಾಗಗಳಲ್ಲಿ ಕುಳಿತು ಕಾರ್ಯ ನಿರ್ವಹಿಸುವ ಅಧಿಕಾರಿಗಳೇ ನೀತಿ–ನಿಯಮಗಳನ್ನು ಗಾಳಿಗೆ ತೂರಿದರೆ ನೆಲದ ಕಾನೂನಿಗೆ ಕಿಮ್ಮತ್ತು ಹೇಗೆ ಉಳಿದೀತು? ಕಟ್ಟಳೆಗಳನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತವರೇ ನಿಯಮಗಳ ಉಲ್ಲಂಘನೆಗೆ ಮುಂದಾಗುವುದು ‘ಬೇಲಿ ಎದ್ದು ಹೊಲ ಮೇಯ್ದಂತೆ’ಯೇ ಸರಿ.

ಗಡುವಿ­ನೊಳಗೆ ಆಸ್ತಿ ವಿವರ ಸಲ್ಲಿಸದ ರಾಜ್ಯದ 243 ಅಧಿಕಾರಿಗಳ ನಡೆ, ಈ ನಾಣ್ಣುಡಿಗೆ ನಿದರ್ಶನವಾಗಿ ನಿಲ್ಲುತ್ತದೆ. ಅಧಿಕಾರಿಗಳು ತಮ್ಮ ಸ್ಥಿರಾಸ್ತಿ ವಿವರ­ಗಳನ್ನು ಪ್ರತೀ ವರ್ಷ ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.  ಐಎಎಸ್ ಶ್ರೇಣಿಯ ಅಧಿಕಾರಿಗಳು ಡಿಸೆಂಬರ್ ಅಂತ್ಯದೊಳಗೆ ಹಾಗೂ ಕೆಎಎಸ್‌ ಅಧಿಕಾರಿಗಳು ಮಾರ್ಚ್‌ ಒಳಗೆ ವಿವರ ನೀಡಬೇಕು.

ಆದರೆ ಈ ಗಡುವು ಮುಗಿದು ಹಲವು ತಿಂಗಳಾದರೂ ಆಸ್ತಿ ವಿವರ ಸಲ್ಲಿಸಿಲ್ಲ ಎಂಬು­ದನ್ನು ಬರೀ ಉದಾಸೀನ ಅಂತ ಪರಿಗಣಿಸಲಾಗದು. ಈ ಯಾದಿ­ಯಲ್ಲಿ ಐಎಎಸ್, ಎಪಿಎಸ್, ಐಎಫ್ಎಸ್‌ ಅಧಿಕಾರಿಗಳೂ ಇದ್ದಾರೆ. ಇವರ ಸಂಖ್ಯೆ ಕಡಿಮೆ. ಆದರೆ ಕೆಎಎಸ್‌ ಶ್ರೇಣಿಯ 285 ಅಧಿಕಾರಿಗಳಲ್ಲಿ 184 ಮಂದಿ ಆಸ್ತಿ ವಿವರ ಸಲ್ಲಿಸದೆ, ತಾವು ಕಾನೂನಿಗೆ ಅತೀತರು ಎಂಬಂತೆ ನಡೆದು­ಕೊಂಡಿ­­ದ್ದಾರೆ. ಇದು ಉದ್ದೇಶಪೂರ್ವಕವೂ ಆಗಿರಬಹುದು. ವ್ಯವಸ್ಥೆಯ ವೈಫಲ್ಯವೂ ಹೌದು. ಅಧಿಕಾರಿಗಳ ಈ ಧೋರಣೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಭ್ರಷ್ಟಾಚಾರ ಎಂಬುದು ನಮ್ಮ ಎಲ್ಲ ಯೋಜನೆ, ಜನಪರ ಕಾರ್ಯ­ಕ್ರಮ­ಗಳನ್ನು ನುಂಗಿ ನೊಣೆಯುತ್ತಿದೆ. ಲಂಚಗುಳಿತನಕ್ಕೆ  ಲಗಾಮು ಹಾಕಿ, ಆಡಳಿತ­ದಲ್ಲಿ ಪಾರದರ್ಶಕತೆ ತರಲು ಆಸ್ತಿ ವಿವರ ಸಲ್ಲಿಕೆಯಂತಹ ಉಪಕ್ರಮ­ಗಳು ಸ್ವಲ್ಪಮಟ್ಟಿಗಾದರೂ ನೆರವಾಗಬಹುದು. ಅದನ್ನೂ ಉಲ್ಲಂಘಿ­ಸುವ ಪ್ರಯತ್ನ­ಗಳಿಗೆ ಎಳ್ಳಷ್ಟೂ ಅವಕಾಶ ನೀಡಬಾರದು. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ– 1966ರ ಪ್ರಕಾರ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ. ನಿಯಮ ಉಲ್ಲಂಘಿಸಿದವರಿಗೆ ನೋಟಿಸ್‌ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ­ಯಲ್ಲಿ ತಿಳಿಸಿದ್ದಾರೆ. ಕೇವಲ ನೋಟಿಸ್ ನೀಡಿದರೆ ಸಾಲದು.

ಈ ಲೋಪ, ಸೇವಾ ವರದಿಯಲ್ಲಿ ದಾಖಲಾಗಬೇಕು. ವೇತನಬಡ್ತಿ (ಇನ್‌ಕ್ರಿಮೆಂಟ್‌) ಕಡಿತ, ವಾಗ್ದಂಡನೆ ಅಂತಹ ಕ್ರಮಗಳಿಗೆ  ನಿಯಮಗಳಲ್ಲಿ ಅವಕಾಶ ಇದೆ. ಯಾವುದೇ ಮುಲಾಜಿ­ಲ್ಲದೆ ದಂಡಾಸ್ತ್ರ ಬಳಸಬೇಕು. ಯಾವುದೋ ಕೆಲಸಕ್ಕೆಂದು ಬರುವ ಜನ­ಸಾಮಾನ್ಯ­ರಿಗೆ ಸಣ್ಣಪುಟ್ಟ ಅರೆಕೊರೆಗಳ ನೆಪದಲ್ಲಿ ಕೊಕ್ಕೆ ಹಾಕುವ ಅಧಿಕಾರಿ­ಗಳು, ಸೇವಾ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂ­ಘಿ­ಸಿಯೂ ಬಡ್ತಿ, ಸಂಬಳ–ಸವಲತ್ತುಗಳನ್ನು ಅನುಭವಿಸುವುದು ಯಾವ ನ್ಯಾಯ? ‘ಕಾನೂನಿನ ದೃಷ್ಟಿಯಲ್ಲಿ ತಪ್ಪಿತಸ್ಥರಾದ ಇಂತಹ ಅಧಿಕಾರಿ­ಗಳಿಂದ ಬರುವ ನೋಟಿಸ್‌­ಗಳಿಗೆ ಜನಸಾಮಾನ್ಯರು ಬೆಲೆ ಕೊಡಬೇಕೆ’ ಎಂದು ಹಿರಿಯ ಶಾಸಕ ರಮೇಶಕುಮಾರ್‌ ಕೇಳಿರುವ ಪ್ರಶ್ನೆ ಸರಿ­ಯಾಗಿಯೇ ಇದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಅಧಿಕಾರಿಗಳಲ್ಲಿ ಅನೇಕರು ಆಸ್ತಿ ವಿವರ ಸಲ್ಲಿಸಿರಲಿಲ್ಲ ಎಂಬ ಅಂಶ ಬಯ­ಲಾಗಿದೆ. ಅಕ್ರಮ ಗಳಿಕೆಯನ್ನು ಮುಚ್ಚಿಡುವ ಸಲುವಾಗಿಯೇ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸುತ್ತಿಲ್ಲ ಎಂಬ ಅನುಮಾನ­ಗಳನ್ನು ಇಂತಹ ಅಂಶಗಳು ಬಲಗೊಳಿ­ಸು­ತ್ತವೆ. ಇಂತಹವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸ­ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.