ADVERTISEMENT

ಅರಣ್ಯ ಅತಿಕ್ರಮಣ ತಡೆಗೆ ಸರ್ಕಾರ ಮುಂದಾಗಲೇಬೇಕು

​ಪ್ರಜಾವಾಣಿ ವಾರ್ತೆ
Published 25 ಜೂನ್ 2017, 20:00 IST
Last Updated 25 ಜೂನ್ 2017, 20:00 IST
ಅರಣ್ಯ ಅತಿಕ್ರಮಣ ತಡೆಗೆ ಸರ್ಕಾರ ಮುಂದಾಗಲೇಬೇಕು
ಅರಣ್ಯ ಅತಿಕ್ರಮಣ ತಡೆಗೆ ಸರ್ಕಾರ ಮುಂದಾಗಲೇಬೇಕು   

ನಮ್ಮ ರಾಜ್ಯದಲ್ಲಿ 1995– 2014ರ ಅವಧಿಯಲ್ಲಿ ಅರಣ್ಯ ಅತಿಕ್ರಮಣ 42 ಸಾವಿರ ಎಕರೆಯಿಂದ 2 ಲಕ್ಷ ಎಕರೆಗೆ ಏರಿದೆ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಬಹಿರಂಗಪಡಿಸಿದೆ. ಇದರಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ. ಆದರೆ ಆತಂಕಪಡಲು ಬಹಳಷ್ಟು ಕಾರಣಗಳಿವೆ.

ಅರಣ್ಯವನ್ನು ಸಂರಕ್ಷಿಸಬೇಕಾದ ನಮ್ಮ  ಸರ್ಕಾರಗಳೇ ಅರಣ್ಯಕ್ಕೆ ಅತಿ ದೊಡ್ಡ ಕಂಟಕವಾಗಿವೆ. ಅಭಿವೃದ್ಧಿ ಹೆಸರಿನಲ್ಲಿ, ಅರಣ್ಯವಾಸಿಗಳ ಬದುಕಿನ ಹೆಸರಿನಲ್ಲಿ ಅರಣ್ಯ ನಾಶ ಎಗ್ಗಿಲ್ಲದೆ ನಡೆಯುತ್ತಿರುವುದೇ ಸರ್ಕಾರಗಳ ಅರಣ್ಯ ವಿರೋಧಿ ನೀತಿಗಳಿಂದಾಗಿ. ಸಾಲದ್ದಕ್ಕೆ ರಾಜಕೀಯ ಲಾಭಕ್ಕಾಗಿ, ಮತದ ಆಸೆಗಾಗಿ ರಾಜಕಾರಣಿಗಳು, ಜನಪ್ರತಿನಿಧಿಗಳು ಅರಣ್ಯ ಒತ್ತುವರಿಗೆ ಕುಮ್ಮಕ್ಕು ಕೊಡುತ್ತಲೇ ಬಂದಿದ್ದಾರೆ.

ಅಧಿಕಾರಿಗಳು ಇದನ್ನು ತಡೆಯುವ ಧೈರ್ಯ ಮಾಡುತ್ತಿಲ್ಲ. ಸಂರಕ್ಷಿತ ಅರಣ್ಯಗಳ ರಕ್ಷಕರಿಗೆ ಅಗತ್ಯಕ್ಕೆ ತಕ್ಕಷ್ಟು ಸುಸಜ್ಜಿತ ಆಯುಧಗಳು, ಇತರ ಸಾಧನಗಳನ್ನು ಪೂರೈಸುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಕೆಳಹಂತದ ಸಿಬ್ಬಂದಿ ಭರ್ತಿ ಕಾರ್ಯ ಕಾಲಕಾಲಕ್ಕೆ ನಡೆಯುತ್ತಿಲ್ಲ. ಅರಣ್ಯ ಭೂಮಿ ಒತ್ತುವರಿ ಸಕ್ರಮಕ್ಕೆ ಒತ್ತಾಯ ಹೆಚ್ಚುತ್ತಲೇ ಇದೆ.

ADVERTISEMENT

‘ಅರಣ್ಯ ಇಲಾಖೆಯವರು ಸಸಿ ನೆಟ್ಟರೆ ಕಿತ್ತು ಹಾಕಿ’ ಎಂದು ಸರ್ಕಾರದ ಜವಾಬ್ದಾರಿಯುತ ಸಚಿವರೊಬ್ಬರು ಹೇಳುತ್ತಾರೆ. 10.12 ಲಕ್ಷ ಹೆಕ್ಟೇರ್‌ನಷ್ಟು ವಿಸ್ತಾರವಾಗಿರುವ ಡೀಮ್ಡ್‌ ಅರಣ್ಯ ಪಟ್ಟಿಯಿಂದ 5 ಲಕ್ಷ ಹೆಕ್ಟೇರ್ ಭೂಮಿ ಹೊರಗಿಡುವುದು ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಸಚಿವ ಸಂಪುಟ ಈಚೆಗೆ ನಿರ್ಧಾರ ತೆಗೆದುಕೊಂಡಿದೆ.

ಇವೆಲ್ಲ ಏನನ್ನು ಸೂಚಿಸುತ್ತವೆ? ಅರಣ್ಯದ ಬಗ್ಗೆ ನಮಗಿರುವ ನಿರ್ಲಕ್ಷ್ಯವನ್ನು. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ದೇಶದ ಭೂಭಾಗದಲ್ಲಿ ಶೇ 33ರಷ್ಟು ಅರಣ್ಯ ಇರಬೇಕು. ಆದರೆ ನಮ್ಮ ರಾಜ್ಯದಲ್ಲಿ ಇದು ಶೇ 19ರ ಆಸುಪಾಸಿನಲ್ಲಿದೆ. ಈಗೇನಾದರೂ ಅರಣ್ಯಗಳು ಇವೆ ಎಂದರೆ ಅದು ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಾತ್ರ.

ವಸ್ತುಸ್ಥಿತಿ ಹೀಗಿರುವಾಗ ಅರಣ್ಯ ವಿಸ್ತರಿಸುವ ಕೆಲಸ ಆಗಬೇಕಾಗಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಇವನ್ನೆಲ್ಲ ನೋಡಿದರೆ ಅರಣ್ಯವನ್ನು ಉಳಿಸುವುದು, ಬೆಳೆಸುವುದು ಯಾರಿಗೂ ಬೇಕಾಗಿಲ್ಲವೇನೋ ಎಂಬ ಅನುಮಾನ ಬರುತ್ತದೆ.   

ಅರಣ್ಯವನ್ನೇ ದೇವರೆಂದು ಪೂಜಿಸಿಕೊಂಡು ತಲೆತಲಾಂತರದಿಂದ ಕಾಪಾಡಿಕೊಂಡು ಬಂದ ಆದಿವಾಸಿಗಳು, ಕಾಡಿನಲ್ಲಿಯೇ ವಾಸ ಮಾಡುವ ಜನರಿಂದ ಅರಣ್ಯಕ್ಕೆ ಧಕ್ಕೆಯಾಗಿದ್ದು ಕಡಿಮೆ. ಆದರೆ ಬಲಾಢ್ಯರು, ಪ್ರಭಾವಿಗಳು ಕಾಡು ಕಡಿದು ಜಮೀನು, ತೋಟ ವಿಸ್ತರಿಸಿಕೊಂಡಿದ್ದಾರೆ. ತಮ್ಮ ಈ ಅಕ್ರಮವನ್ನು ಮುಚ್ಚಿ ಹಾಕಿ ಸಕ್ರಮಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.

ಬಹಳಷ್ಟು ಸಂದರ್ಭಗಳಲ್ಲಿ ಯಶಸ್ವಿಯೂ ಆಗಿದ್ದಾರೆ. ರಾಜ್ಯದ ಆರು ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತಮುತ್ತ ವಿಹಾರಧಾಮಗಳು,  ಹೋಮ್‌ ಸ್ಟೇಗಳನ್ನು ತೆರೆದು ಅರಣ್ಯ ನಾಶಕ್ಕೆ ಕಾರಣರಾದವರು ಪ್ರಭಾವಿಗಳೇ ಹೊರತು ಸಾಮಾನ್ಯ ಜನರಲ್ಲ. 44 ವಿಹಾರಧಾಮಗಳಿಗೆ ಅರಣ್ಯ ಇಲಾಖೆಯ ಅನುಮತಿಯೂ ಇಲ್ಲ. ಆದರೂ ಅವುಗಳನ್ನು ಮುಚ್ಚಿಸುವ ಧೈರ್ಯ ಯಾರಿಗೂ ಇಲ್ಲ. ಹೀಗಾಗಿ ಅವುಗಳ ಅಸ್ತಿತ್ವಕ್ಕೇನೂ ಧಕ್ಕೆಯಾಗಿಲ್ಲ.

ಅರಣ್ಯಗಳು ಕಿರಿದಾದಷ್ಟೂ ಮನುಷ್ಯ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚುತ್ತ ಹೋಗುತ್ತದೆ. ರಾಜ್ಯದ ವಿವಿಧೆಡೆ ಆನೆಗಳ ಹಾವಳಿ ಹೆಚ್ಚುತ್ತಿರುವುದು, ಹುಲಿ– ಚಿರತೆಗಳೆಲ್ಲ ನಾಡಿಗೆ ನುಗ್ಗುತ್ತಿರುವುದು ಇದೇ ಕಾರಣಕ್ಕಾಗಿ. ಹೀಗಾಗಿಯೇ ಮನುಷ್ಯರ ಮೇಲೆ ಪ್ರಾಣಿಗಳ ದಾಳಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅರಣ್ಯ ನಾಶದಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮ ಕೂಡ ಅಷ್ಟಿಷ್ಟಲ್ಲ.

ಮಳೆ ಮತ್ತು ಹವಾಮಾನ ವೈಪರೀತ್ಯದಿಂದ  ನಿರಂತರ ಬರಗಾಲ ಎದುರಿಸುತ್ತಿದ್ದೇವೆ, ಮಳೆ ಕಡಿಮೆಯಾಗುತ್ತಿದೆ. ಆದರೂ ಬುದ್ಧಿ ಕಲಿತುಕೊಳ್ಳಲು ಯಾರೂ ತಯಾರಿಲ್ಲ. ಇದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ. ಇಷ್ಟು ದಿನ ಅರಣ್ಯವನ್ನು ಹಾಳು ಮಾಡಿದ್ದು ಸಾಕು. ಇದ್ದಷ್ಟು ಅರಣ್ಯವನ್ನಾದರೂ ಕಾಪಾಡುವ ಪಣ ತೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.