ADVERTISEMENT

ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳ ನಿಗ್ರಹಕ್ಕೆ ಜಾಗೃತಿ ಮೂಡಿಸಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST
ಆತ್ಮಹತ್ಯೆ ಪ್ರವೃತ್ತಿ  ಹೆಚ್ಚಳ ನಿಗ್ರಹಕ್ಕೆ  ಜಾಗೃತಿ ಮೂಡಿಸಿ
ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳ ನಿಗ್ರಹಕ್ಕೆ ಜಾಗೃತಿ ಮೂಡಿಸಿ   

ರಾಷ್ಟ್ರದಲ್ಲಿ 2004ರಿಂದ 2014ರವರಗಿನ ಅವಧಿಯ ಒಂದು ದಶಕದಲ್ಲಿ ಆತ್ಮಹತ್ಯೆ ಪ್ರಮಾಣ ಶೇ 15.8ರಷ್ಟು ಏರಿಕೆ ಕಂಡಿದೆ ಎಂಬುದು ಆತಂಕಕಾರಿ.  ಕುಟುಂಬ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡುವಂತಹ ಸಾಂಸ್ಕೃತಿಕ ಪರಂಪರೆ ಹೊಂದಿದ ರಾಷ್ಟ್ರ ಭಾರತ.  ಆದರೆ ಆತ್ಮಹತ್ಯೆ ಪ್ರಕರಣಗಳಿಗೆ ಕುಟುಂಬ ಸಮಸ್ಯೆಗಳೇ ಮುಖ್ಯ ಕಾರಣವಾಗುತ್ತಿರುವುದು ವಿಪರ್ಯಾಸ. 

ಮೆಟ್ರೊ ನಗರಗಳಲ್ಲಿ ಶೇ 34ರಷ್ಟು ಆತ್ಮಹತ್ಯೆಗಳಿಗೆ ದಾಂಪತ್ಯಕ್ಕೆ ಸಂಬಂಧಪಡದಂತಹ  ಕೌಟುಂಬಿಕ ವಿಚಾರಗಳು ಕಾರಣವಾಗುತ್ತಿವೆ  ಎಂಬ ಅಂಶ ಕಳವಳಕಾರಿಯಾದುದು. ವಿವಾಹ ಸಂಬಂಧಿ ಕಾರಣಗಳಿಂದ ಆತ್ಮಹತ್ಯೆಗೆ ಶರಣಾದವರು  ಶೇ 5.3ರಷ್ಟು ಮಂದಿ. 

ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿಯಾಗಿದೆ ಬೆಂಗಳೂರು. ಹಾಗೆಯೇ ರಾಷ್ಟ್ರದ ವಾಣಿಜ್ಯ ರಾಜಧಾನಿಯಾಗಿದೆ ಮುಂಬೈ. ಈ ಎರಡೂ ನಗರಗಳಿಗೆ ಉದ್ಯೋಗವನ್ನು ಅರಸಿಕೊಂಡು ವಲಸೆ ಬರುವವರ ಸಂಖ್ಯೆಯೂ ಹೆಚ್ಚು.ಹೀಗಾಗಿ, ಈ ಎರಡೂ ನಗರಗಳಲ್ಲಿ ನಿರುದ್ಯೋಗ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಹೆಚ್ಚಿದೆ. ಬರಗಾಲ, ಕೃಷಿ ಬಿಕ್ಕಟ್ಟು, ಸಾಲಗಳ ಹೊರೆ, ನಿರುದ್ಯೋಗ ಸಮಸ್ಯೆಗಳಿಂದಾಗಿ  ಉದ್ಯೋಗ ಅರಸಿ ಮುಂಬೈ ಹಾಗೂ ಬೆಂಗಳೂರುಗಳಂತಹ ದೊಡ್ಡ ನಗರಗಳಿಗೆ ದೊಡ್ಡ ಕನಸು ಹೊತ್ತುಕೊಂಡು ಜನ ವಲಸೆ ಬರುತ್ತಾರೆ. ಆದರೆ ನಿರೀಕ್ಷೆಗೆ ತಕ್ಕಂತೆ ಸರಿಯಾದ ಉದ್ಯೋಗ ಲಭ್ಯವಾಗದೆ ಕನಸು ಭಗ್ನಗೊಂಡಾಗ  ಆತ್ಮಹತ್ಯೆ ಮಾಡಿಕೊಳ್ಳುವಂತಹ  ಹತಾಶ ಸ್ಥಿತಿ ತಲುಪುತ್ತಾರೆ ಎನ್ನುವುದು ವಿಷಾದನೀಯ.

ಆತ್ಮಹತ್ಯೆ ಪಿಡುಗು ಇಂದು  ಭಾರತವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ.  ಸಮಾಜದಲ್ಲಿ ನಿರೀಕ್ಷೆಗಳು ಹೆಚ್ಚುತ್ತಿರುವಂತೆಯೇ ಈ ಪಿಡುಗೂ ಹೆಚ್ಚಾಗುವ ಭೀತಿ ಇದ್ದೇ ಇದೆ.  ಸಾಮಾಜಿಕ ಮೌಲ್ಯಗಳಲ್ಲಿ ಪಲ್ಲಟ, ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಒತ್ತಡಗಳು, ಪಾರಂಪರಿಕವಾಗಿ ಇದ್ದಂತಹ ಬೆಂಬಲ ವ್ಯವಸ್ಥೆಯ ವಿನಾಶ  ಇತ್ಯಾದಿ ಬೆಳವಣಿಗೆಗಳು ಸೃಷ್ಟಿಸುವ ಅಭದ್ರತೆ, ಒತ್ತಡಗಳ ನಿರ್ವಹಣೆಯಲ್ಲಿ ವಿಫಲರಾಗುವವರು ಆತ್ಮಹತ್ಯೆಗೆ ಮುಂದಾಗುವ ಸಾಧ್ಯತೆಗಳು ಹೆಚ್ಚು. ಆದರೆ ಈ ಸಮಸ್ಯೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದಿರುವುದು ದುರದೃಷ್ಟಕರ.

ಹೀಗಾಗಿ ಸಮಾಜ ಈ ವಿಚಾರದಲ್ಲಿ ಹೆಚ್ಚು ಸಂವೇದನಾಶೀಲವಾಗಬೇಕಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡುವುದು ಅವಶ್ಯ. ಬಹಳ ಸಂದರ್ಭಗಳಲ್ಲಿ ಆತ್ಮಹತ್ಯೆಯ ವಿಫಲ ಯತ್ನವನ್ನು, ಗಮನಸೆಳೆಯಲು ವ್ಯಕ್ತಿ ನಡೆಸಿದ ನಾಟಕ ಎಂದು ಕಡೆಗಣಿಸಿಬಿಡಲಾಗುತ್ತದೆ. ಆದರೆ ಇಂತಹ ವಿಚಾರಗಳಲ್ಲಿ ಉದಾಸೀನ ಅಥವಾ ಲಘು ಧೋರಣೆ ಸಲ್ಲದು. 

ಅಂತಹ ವ್ಯಕ್ತಿಗಳಿಗೆ ವೃತ್ತಿಪರ ಮಾನಸಿಕ ತಜ್ಞರ ಆಪ್ತ ಸಲಹೆ ಅವಶ್ಯವಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ವ್ಯಕ್ತಿಯಲ್ಲಿ  ಆತ್ಮಸ್ಥೈರ್ಯ ತುಂಬುವ ಕಾರ್ಯ ಮುಖ್ಯವಾದುದು. ಈ ನಿಟ್ಟಿನಲ್ಲಿ  ಕೌಟುಂಬಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ  ಹೆಚ್ಚಿನ ಪ್ರಯತ್ನಗಳು ಅಗತ್ಯ.  ಈ ಬಗ್ಗೆ ಅರಿವು ಮೂಡಿಸುವ  ಕ್ರಮಗಳು ಶಿಕ್ಷಣ ವ್ಯವಸ್ಥೆಯಲ್ಲೂ ಅಂತರ್ಗತವಾಗಬೇಕು.

ಆತ್ಮಹತ್ಯೆ ಕುರಿತಾದ ಕಳಂಕ ಅಥವಾ ಸಾಮಾಜಿಕ ಅಸ್ಪೃಶ್ಯತೆಯ ಭಾವನೆ ದೂರವಾಗಬೇಕು. ಮಾನಸಿಕ ಆರೋಗ್ಯ ಸಮಸ್ಯೆಯಾಗಿ ಇದನ್ನು ಪರಿಗಣಿಸುವುದು ಮುಖ್ಯ. 

ಆತ್ಮಹತ್ಯೆ ಯತ್ನವನ್ನು ಈಗ ಅಪರಾಧವಾಗಿ ಪರಿಗಣಿಸುವುದಿಲ್ಲ. ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಕೈಗೊಂಡ ಕ್ರಮ ದೊಡ್ಡ ಹೆಜ್ಜೆ ಎಂದೇ ಹೇಳಬೇಕು.

ಇದರ ಜೊತೆಗೇ ಆತ್ಮಹತ್ಯೆ ತಡೆಗೆ ಮಾನಸಿಕ ಆರೋಗ್ಯ ಸೌಲಭ್ಯಗಳು ಹೆಚ್ಚಾಗುವಂತಹ ಕ್ರಮಗಳನ್ನೂ ಕೈಗೊಳ್ಳಬೇಕು.ಬದುಕಿನ ಎಂತಹ ಕಠಿಣ ಸಂದರ್ಭಗಳಲ್ಲಿಯೂ ಎದೆಗುಂದದೆ, ಹತಾಶರಾಗದೆ ಜೀವನವನ್ನು ನಡೆಸುವಂತಹ ಜೀವನ ಕೌಶಲಗಳನ್ನು  ಬಾಲ್ಯದಿಂದಲೇ ಕಲಿಸುವಂತಹ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.