ADVERTISEMENT

ಆಧಾರ್‌ಗೆ ಪಡಿತರ ತಳಕು ಗೊಂದಲವನ್ನು ನಿವಾರಿಸಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:30 IST
Last Updated 27 ಅಕ್ಟೋಬರ್ 2017, 19:30 IST
ಆಧಾರ್‌ಗೆ ಪಡಿತರ ತಳಕು ಗೊಂದಲವನ್ನು ನಿವಾರಿಸಿ
ಆಧಾರ್‌ಗೆ ಪಡಿತರ ತಳಕು ಗೊಂದಲವನ್ನು ನಿವಾರಿಸಿ   

ಬಡವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಪಡಿತರ ಪೂರೈಸುವುದು ಸರ್ಕಾರಗಳ ಕರ್ತವ್ಯವೇ ಹೊರತು, ಅದು ಬಡಜನರ ಬಗ್ಗೆ ತೋರಿಸುವ ಔದಾರ್ಯವೂ ಅಲ್ಲ, ಅವರಿಗೆ ನೀಡುವ ಭಿಕ್ಷೆಯೂ ಅಲ್ಲ. ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬುದು ಇದರ ಹಿಂದಿನ ಉದ್ದೇಶ. ಈ ಕಾರಣಕ್ಕಾಗಿಯೇ ನಮ್ಮಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಮೊದಲಿನಿಂದಲೂ ಮಹತ್ವ. ಆದರೆ ಇತ್ತೀಚಿನ ದಿನಗಳಲ್ಲಿ ‘ಆಧಾರ್‌ ಸಂಖ್ಯೆ ಇಲ್ಲದಿದ್ದರೆ ಪಡಿತರವೂ ಇಲ್ಲ’ ಎಂಬ ಷರತ್ತನ್ನು ಬಡ ಫಲಾನುಭವಿಗಳ ಮೇಲೆ ರಾಜ್ಯ ಸರ್ಕಾರಗಳು ಹೇರುತ್ತಿವೆ. ಏಕೆಂದರೆ ಪಡಿತರ ಚೀಟಿ ವಿತರಣೆ, ಕೇಂದ್ರದಿಂದ ಬಿಡುಗಡೆಯಾದ ಆಹಾರ ಪದಾರ್ಥಗಳ ಸಮರ್ಪಕ ಹಂಚಿಕೆಯು ರಾಜ್ಯಗಳ ವ್ಯಾಪ್ತಿಗೆ ಸೇರಿದ್ದು. 

ನಮ್ಮ ರಾಜ್ಯದ ವಿಷಯಕ್ಕೆ ಬಂದರೆ, ‘ಅಂತ್ಯೋದಯ ಕಾರ್ಡ್‌ಗೆ ಆಧಾರ್‌ ಜೋಡಿಸಿಲ್ಲ ಎಂಬ ಕಾರಣಕ್ಕಾಗಿ ಗೋಕರ್ಣದ ಕುಟುಂಬವೊಂದಕ್ಕೆ 8 ತಿಂಗಳಿಂದ ಪಡಿತರ ನೀಡಿಲ್ಲ; ಹೀಗಾಗಿ ಆ ಕುಟುಂಬದ ಮೂವರು ಹಸಿವಿನಿಂದ ಮೃತಪಟ್ಟಿದ್ದಾರೆ’ ಎಂದು ‘ಆಹಾರ ಹಕ್ಕಿಗಾಗಿ’ ಆಂದೋಲನದ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಆಧಾರ್‌ ಸಂಖ್ಯೆ ಜೋಡಿಸದೇ ಇದ್ದಿದ್ದರಿಂದ ಪಡಿತರ ಆಹಾರ ಸಿಗದೆ ಜಾರ್ಖಂಡ್‌ನಲ್ಲಿ 11 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಳು ಎಂದು ವರದಿಯಾದ ನಂತರ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಂತಿದೆ. ಪಡಿತರ ಚೀಟಿಗೆ ಆಧಾರ್‌ ಜೋಡಿಸಿಲ್ಲ ಎಂಬ ನೆಪದಲ್ಲಿ ಪಡಿತರ ನಿರಾಕರಿಸಬಾರದು ಎಂದು ಎಲ್ಲ ರಾಜ್ಯಗಳಿಗೆ ತಾಕೀತು ಮಾಡಿದೆ. ಅದೇ ರೀತಿ ಆಧಾರ್ ಇಲ್ಲ ಎಂಬ ಕಾರಣಕ್ಕೆ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಹೆಸರನ್ನು ತೆಗೆಯುವುದೂ ತಪ್ಪು ಎಂದು ರಾಜ್ಯಗಳ ಕಿವಿ ಹಿಂಡಿದೆ. ಆಧಾರ್‌ಗೆ ನೋಂದಣಿ ಮಾಡಿಸಿಕೊಳ್ಳಲು ಮತ್ತು ಪಡಿತರ ಚೀಟಿಗೆ ಜೋಡಿಸಲು ಅಗತ್ಯ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದೆ. ಇಂತಹ ಆದೇಶವೊಂದರ ಅಗತ್ಯ ಇತ್ತು.

ಆಧಾರ್– ಪಡಿತರ ಜೋಡಣೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಡಿಸೆಂಬರ್‌ 31ರ ಗಡುವು ನೀಡಿದ್ದರೂ ಅನೇಕ ರಾಜ್ಯಗಳು ಆತುರ ತೋರಿಸುತ್ತಿವೆ. ಈಗೇನೋ ಈ ಗಡುವನ್ನು ಮುಂದಿನ ಮಾರ್ಚ್‌ 31ರ ವರೆಗೂ ವಿಸ್ತರಿಸುವುದಾಗಿ ಸರ್ಕಾರವೇ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆಧಾರ್‌ ಕಾಯ್ದೆಯ ಕಲಂ 7ರ ಪ್ರಕಾರ, ‘ಸರ್ಕಾರದ ಬೊಕ್ಕಸದಿಂದ ಸಹಾಯಧನ ನೀಡುವ ಯೋಜನೆಗಳಲ್ಲಿ ಆಧಾರ್‌ ಕಡ್ಡಾಯ ಮಾಡಬಹುದು. ಆದರೆ ಫಲಾನುಭವಿಯ ಬಳಿ ಆಧಾರ್‌ ಸಂಖ್ಯೆ ಇಲ್ಲದಿದ್ದರೆ ಅದನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೂ ಪರ್ಯಾಯ ಗುರುತಿನ ಚೀಟಿಗಳನ್ನು ಪರಿಗಣಿಸಿ ಸೌಲಭ್ಯ ಮುಂದುವರಿಸಬೇಕು’. ಆದ್ದರಿಂದ ಸರ್ಕಾರಗಳೇ ಈ ಕಾಯ್ದೆಯನ್ನು ಉಲ್ಲಂಘಿಸಲು ಹೋಗಬಾರದು.

ADVERTISEMENT

ನಮಗೆ ಬೇಕೋ, ಬೇಡವೋ; ಆಧಾರ್‌ ಸಂಖ್ಯೆ ನಮ್ಮ ನಿತ್ಯ ಬದುಕನ್ನು ಆವರಿಸಿಕೊಳ್ಳುತ್ತಿದೆ. ಸರ್ಕಾರದಿಂದ ಸಿಗುವ ಆರ್ಥಿಕ ಸೌಲಭ್ಯಗಳಷ್ಟೇ ಅಲ್ಲದೆ ಇತರ ಅನೇಕ ಸೌಕರ್ಯ, ಸೇವೆಗಳಿಗೂ ಆಧಾರ್‌ ಸಂಖ್ಯೆಯನ್ನು ಜೋಡಿಸಲೇ ಬೇಕು ಎಂಬ ಅನಿವಾರ್ಯವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಸೃಷ್ಟಿಸಿವೆ. ದಿನಕ್ಕೊಂದೊಂದು ಹೊಸ ಯೋಜನೆ, ಸೇವೆಗೆ ಆಧಾರ್‌ ಜೋಡಣೆಯನ್ನು ಕಡ್ಡಾಯ ಮಾಡುತ್ತ ಹೊರಟಿವೆ. 2009ರಲ್ಲಿ ಯುಪಿಎ ಸರ್ಕಾರ ಇದ್ದಾಗ ಐಚ್ಛಿಕ ಎಂದು ಜಾರಿಗೆ ಬಂದ ಆಧಾರ್‌ನ ಬಾಹುಗಳು ಈಗಂತೂ ವಿಸ್ತರಿಸುತ್ತಲೇ ಇವೆ.

ಶಿಷ್ಯವೇತನ ವಿತರಣೆ, ಶಾಲೆ ಸೇರ್ಪಡೆ, ಬಿಸಿಯೂಟ, ಕೃಷಿ ವಿಮೆ, ರೈತರಿಗೆ ವಿವಿಧ ಸೌಲಭ್ಯಗಳು, ಪೌಷ್ಟಿಕ ಆಹಾರ ವಿತರಣೆ ಯೋಜನೆಗಳು, ಗ್ರಾಮೀಣ ಉದ್ಯೋಗ ಖಾತರಿ, ಉಚಿತವಾಗಿ ಎಚ್‌ಐವಿ ಮಾತ್ರೆ ಪೂರೈಕೆ, ಮೊಬೈಲ್‌, ಬ್ಯಾಂಕ್‌ ಖಾತೆ, ಪ್ಯಾನ್‌... ಹೀಗೆ ನಾನಾ ಸೇವೆ, ಸೌಲಭ್ಯಕ್ಕೆ ಆಧಾರ್‌ ಸಂಖ್ಯೆಯನ್ನು ತಳಕು ಹಾಕಲಾಗುತ್ತಿದೆ. ಆಧಾರ್‌ ಜೋಡಣೆಯಿಂದಾಗಿ ನಕಲಿ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗಿದ್ದು, ಬೊಕ್ಕಸಕ್ಕೆ ₹ 55 ಸಾವಿರ ಕೋಟಿಗೂ ಹೆಚ್ಚು ಉಳಿತಾಯವಾಗಿದೆ ಎಂಬುದು ಸರ್ಕಾರದ ಸಮರ್ಥನೆ. ಅದರಲ್ಲಿ ಸತ್ಯಾಂಶ ಇರಬಹುದು. ಆದರೆ ಪಡಿತರ ಸಿಗದೆ ಹಸಿವಿನಿಂದ ಒಂದೇ ಒಂದು ಸಾವು ಸಂಭವಿಸಿದರೂ ಈ ಸಮರ್ಥನೆಗೆ ಅರ್ಥವೇ ಇರುವುದಿಲ್ಲ. ಆದ್ದರಿಂದ, ವಿವಿಧ ಸೌಲಭ್ಯಗಳ ಪ್ರಯೋಜನ ಪಡೆಯಲು ಆಧಾರ್‌ ಸಂಖ್ಯೆಗೆ ಫಲಾನುಭವಿಯ ಮಾಹಿತಿ ಜೋಡಿಸುವ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಇರುವ ಗೊಂದಲಗಳನ್ನು ನಿವಾರಿಸುವುದು ಸರ್ಕಾರದ ಹೊಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.