ADVERTISEMENT

ಆಸ್ಪತ್ರೆಯಲ್ಲಿ ಹಸುಳೆಗಳ ಸಾವು ವೈದ್ಯಕೀಯ ಪ್ರಮಾದ ಅಕ್ಷಮ್ಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2017, 19:30 IST
Last Updated 13 ಆಗಸ್ಟ್ 2017, 19:30 IST
ಆಸ್ಪತ್ರೆಯಲ್ಲಿ ಹಸುಳೆಗಳ ಸಾವು ವೈದ್ಯಕೀಯ ಪ್ರಮಾದ ಅಕ್ಷಮ್ಯ
ಆಸ್ಪತ್ರೆಯಲ್ಲಿ ಹಸುಳೆಗಳ ಸಾವು ವೈದ್ಯಕೀಯ ಪ್ರಮಾದ ಅಕ್ಷಮ್ಯ   

ಉತ್ತರಪ್ರದೇಶದ ಗೋರಖಪುರದಲ್ಲಿನ ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಐದು ದಿನಗಳಲ್ಲಿ 60ಕ್ಕೂ ಹೆಚ್ಚು ಹಸುಳೆಗಳು ಅಸುನೀಗಿರುವುದು ಆಘಾತಕಾರಿ. ಈ ಆಸ್ಪತ್ರೆ ಇರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕ್ಷೇತ್ರದಲ್ಲಿ. ಅವರು ಎರಡು ದಶಕಗಳಿಂದ ಅಲ್ಲಿನ ಸಂಸದ. ಅಲ್ಲಿಯೇ ಆರೋಗ್ಯ ಸೇವೆ ಇಷ್ಟೊಂದು ಹೀನಾಯ ಸ್ಥಿತಿಯಲ್ಲಿದೆ ಎಂದರೆ ಆ ರಾಜ್ಯದ ಇನ್ನಿತರ ಕಡೆಗಳಲ್ಲಿ ಹೇಗಿರಬಹುದು? ಊಹಿಸಿಕೊಂಡರೇ ಭಯವಾಗುತ್ತದೆ. ಅದೇನು ಆಸ್ಪತ್ರೆಯೋ ಅಥವಾ ಕಸಾಯಿಖಾನೆಯೋ ಎಂಬ ಅನುಮಾನ ಬರುತ್ತದೆ. ಇಂತಹ ಮಹಾ ದುರಂತಗಳು, ಈಗಾಗಲೇ ಪಾತಾಳಕ್ಕೆ ಕುಸಿದಿರುವ ಸರ್ಕಾರಿ ಆರೋಗ್ಯ ಸೇವೆಯ ವಿಶ್ವಾಸಾರ್ಹತೆಗೇ ಧಕ್ಕೆ ತರುತ್ತವೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಪನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅಲ್ಪಾವಧಿಯಲ್ಲಿಯೇ ಅಸಹಜ ರೀತಿಯಲ್ಲಿ ಶಿಶುಗಳು ಸಾಯುತ್ತಿವೆ ಎಂದು ಗೊತ್ತಾದರೂ ಗಮನ ಕೊಡದ ಹೃದಯಹೀನರು ಯಾರೇ ಇದ್ದರೂ ಕ್ಷಮೆಗೆ ಅರ್ಹರಲ್ಲ. ಅವರ ನಿರ್ಲಕ್ಷ್ಯ ಕೊಲೆಗೆ ಸಮ. ಇದಕ್ಕಾಗಿ ತಕ್ಕ ಶಿಕ್ಷೆ ಆಗಲೇಬೇಕು.

ಇಷ್ಟೆಲ್ಲ ಮಹಾ ಅನಾಹುತ ನಡೆದ ನಂತರವೂ ಸರ್ಕಾರದ ಬಳಿ ಸರಿಯಾದ ಅಂಕಿಅಂಶ, ಮಾಹಿತಿ ಇಲ್ಲ ಎನ್ನುವುದೇ ಆಶ್ಚರ್ಯದ ಸಂಗತಿ. ಜಿಲ್ಲಾಧಿಕಾರಿ ಪ್ರಕಾರ 48 ಗಂಟೆಗಳಲ್ಲಿ 60 ಮಕ್ಕಳು ಸತ್ತಿವೆ; ಆದರೆ ಅದಕ್ಕೆ ಆಮ್ಲಜನಕದ ಕೊರತೆ ಕಾರಣವಲ್ಲ. ಜಿಲ್ಲಾ ಪೊಲೀಸ್‌ ಮುಖ್ಯಸ್ಥರ ವರದಿ ಪ್ರಕಾರ ಆಮ್ಲಜನಕ ಕೊರತೆಯಿಂದ 21 ಮಕ್ಕಳು ಸತ್ತಿವೆ. ಆದರೆ ಆರೋಗ್ಯ ಮಂತ್ರಿ ಹೇಳುತ್ತಿರುವುದು, ‘ವಿವಿಧ ರೋಗಗಳಿಂದ ಬಳಲುತ್ತಿದ್ದ 60 ಮಕ್ಕಳು ಆ. 7ರಿಂದ ಈಚೆಗೆ ಮೃತಪಟ್ಟಿವೆ’ ಎಂದು. ಆ. 9 ರಂದು ಆ ಆಸ್ಪತ್ರೆಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಸಭೆ ನಡೆಸಿದ್ದರು. ಆಗ ‘ಮಿದುಳು ಜ್ವರ ಮತ್ತು ಡೆಂಗಿ ಹೆಚ್ಚುತ್ತಿರುವುದನ್ನು ಮಾತ್ರ ತಮ್ಮ ಗಮನಕ್ಕೆ ತರಲಾಯಿತು; ಸಿಲಿಂಡರ್‌ ಕೊರತೆ ಚರ್ಚೆಗೇ ಬರಲಿಲ್ಲ’ ಎಂದು ಅವರು ಈಗ ವಿವರಣೆ ಕೊಡುತ್ತಿದ್ದಾರೆ.

ಕಾಲೇಜಿನ ಪ್ರಾಚಾರ್ಯರೂ ಆಗಿರುವ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರನ್ನು ಅಮಾನತು ಮಾಡಿದ್ದಾರೆ. ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶಿಸಿದ್ದಾರೆ. ಮುಂದೆ ಪೋಷಕರಿಗೆ ಒಂದಿಷ್ಟು ಪರಿಹಾರ ಕೊಟ್ಟು ಕೈತೊಳೆದುಕೊಳ್ಳಲೂಬಹುದು. ಆದರೆ, ಮಕ್ಕಳನ್ನು ಕಳೆದುಕೊಂಡ ತಂದೆತಾಯಿ ಯಾತನೆ ಇದರಿಂದ ಕೊನೆಯಾಗುತ್ತದೆಯೇ? ಹೋದ ಜೀವ ಬರುತ್ತದೆಯೇ? ಈ ಅರಿವು ಸರ್ಕಾರಕ್ಕೂ ಬೇಕು, ವೈದ್ಯರಲ್ಲೂ ಇರಬೇಕು.

ADVERTISEMENT

ಆಮ್ಲಜನಕದ ಕೊರತೆಯೇ ಮಕ್ಕಳ ಸಾವಿಗೆ ಕಾರಣ ಎನ್ನುವುದು ನಿಜವೇ ಆಗಿದ್ದರೆ ಅದಕ್ಕಿಂತ ದೊಡ್ಡ ಅವಮಾನ, ಅಮಾನವೀಯ ವರ್ತನೆ ಬೇರೆ ಇಲ್ಲ. ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಿದ್ದರ ಬಾಬ್ತು ಲಕ್ಷಗಟ್ಟಲೆ ಬಾಕಿ ಉಳಿದಿತ್ತು. ಇದನ್ನು ಪಾವತಿಸಲು ಅಧಿಕಾರಿಗಳಿಗೆ 40–45 ಪತ್ರಗಳನ್ನು ಬರೆಯಲಾಗಿತ್ತು. ಆದರೂ ಸ್ಪಂದಿಸದ ಕಾರಣ ಸರಬರಾಜು ನಿಲ್ಲಿಸಲಾಯಿತು ಎಂದು ಸಿಲಿಂಡರ್‌ ಪೂರೈಕೆ ಸಂಸ್ಥೆ ಪ್ರತಿನಿಧಿಯೊಬ್ಬರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆ. 5ರಂದೇ ಆಸ್ಪತ್ರೆಗೆ ಹಣ ಬಿಡುಗಡೆಯಾಗಿತ್ತು; ಆದರೆ ಆಮ್ಲಜನಕ ಸರಬರಾಜುದಾರರಿಗೆ ವಿತರಿಸಿದ್ದು ಆ. 11ರಂದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಮಂತ್ರಿ ಬಹಿರಂಗಪಡಿಸಿದ್ದಾರೆ. 

ಕಾಲಕಾಲಕ್ಕೆ ಬಾಕಿ ಚುಕ್ತಾ ಮಾಡಲು ಏನು ತೊಂದರೆಯಿತ್ತು? ವಿಳಂಬ ಮಾಡಿದವರು ಯಾರು, ಯಾಕೆ ಎನ್ನುವುದನ್ನು ಬಹಿರಂಗಪಡಿಸಬೇಕು. ಮಕ್ಕಳ ಸಾವಿಗೆ ಮಿದುಳುಜ್ವರ ಮತ್ತು ಆಸ್ಪತ್ರೆಯ ಕೊಳಕು ವಾತಾವರಣ ಕಾರಣ ಎಂದು ಹೇಳಿ ಬೇರೆಯೇ ತಿರುವು ಕೊಡಲಾಗುತ್ತಿದೆ. ಇದು ನಿಜವೇ ಎಂಬುದನ್ನು ತಜ್ಞರೇ ದೃಢಪಡಿಸಬೇಕು. ಕೊಳಕು ವಾತಾವರಣದಿಂದ ಮಕ್ಕಳು ಸತ್ತಿದ್ದರೆ ಸರ್ಕಾರವೇ ಹೊಣೆ ಹೊರಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಬಳಸುವವರು ಬಹುತೇಕ ಬಡವರು. ಅವರ ಮಕ್ಕಳ ಬಗ್ಗೆ ಇಷ್ಟೊಂದು ಹೃದಯಹೀನರಾಗಿ ವರ್ತಿಸುವುದು ಸರಿಯಲ್ಲ. ಆ ಮಕ್ಕಳ ಜೀವಕ್ಕೆ ಬೆಲೆಯೇ ಇಲ್ಲವೇ? ಇದು ಸಾವಲ್ಲ; ನರಹತ್ಯೆ. ಇದರಿಂದ ಇಡೀ ದೇಶದ, ವಿಶೇಷವಾಗಿ ವೈದ್ಯಕೀಯ ಕ್ಷೇತ್ರದ ಮಾನ ಹರಾಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.