ADVERTISEMENT

ಉತ್ತರ ಕೊರಿಯಾದ ನಡೆ ತಪ್ಪು ಆದರೆ ಮಾತುಕತೆಯೇ ಪರಿಹಾರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST
ಉತ್ತರ ಕೊರಿಯಾದ ನಡೆ ತಪ್ಪು ಆದರೆ ಮಾತುಕತೆಯೇ ಪರಿಹಾರ
ಉತ್ತರ ಕೊರಿಯಾದ ನಡೆ ತಪ್ಪು ಆದರೆ ಮಾತುಕತೆಯೇ ಪರಿಹಾರ   

ಈ ಉತ್ತರ ಕೊರಿಯಾಕ್ಕೆ ಆಗಿರುವುದಾದರೂ ಏನು? ಕಿತ್ತು ತಿನ್ನುತ್ತಿರುವ ಬಡತನ, ಜನರ ಸಂಕಷ್ಟಗಳನ್ನು ನಿವಾರಿಸುವುದನ್ನು ಬಿಟ್ಟು ಅದು ಯುದ್ಧೋನ್ಮಾದ ಪ್ರದರ್ಶಿಸುತ್ತಿದೆ. ಇಡೀ ವಿಶ್ವಕ್ಕೆ ಸವಾಲು ಹಾಕುವಂತೆ ಅಣ್ವಸ್ತ್ರ ಅಭಿವೃದ್ಧಿಪಡಿಸುತ್ತಿದೆ. ಭಾನುವಾರ ಅದು ನಡೆಸಿದ ‘ಜಲಜನಕ ಬಾಂಬ್‌’ ಪರೀಕ್ಷೆಯಂತೂ ಆಗ್ನೇಯ ಏಷ್ಯಾ ಮಾತ್ರವಲ್ಲ ವಿಶ್ವದ ಇತರೆಡೆಯೂ ಆತಂಕ ಸೃಷ್ಟಿಸಿದೆ. ಅದರ ರಣೋತ್ಸಾಹಕ್ಕೆ ಪ್ರತಿಯಾಗಿ ಅದರ ಕಟ್ಟಾ ಎದುರಾಳಿ ದಕ್ಷಿಣ ಕೊರಿಯಾ ಸಹ ಸೋಮವಾರ ಸಮುದ್ರದಲ್ಲಿ ಬೆದರು ಕ್ಷಿಪಣಿಯನ್ನು ಹಾರಿಸಿದೆ. ದುಸ್ಸಾಹಸಕ್ಕೆ ಇಳಿಯದಂತೆ ಉತ್ತರ ಕೊರಿಯಾಕ್ಕೆ ಎಚ್ಚರಿಕೆ ಕೊಡುವುದು ಇದರ ಉದ್ದೇಶ ಎಂದು ಹೇಳಿದ್ದರೂ ಇದಕ್ಕೆಲ್ಲ ಉತ್ತರ ಕೊರಿಯಾ ಮಣಿಯುತ್ತದೆ ಎನ್ನುವುದು ಕಷ್ಟ. ಏಕೆಂದರೆ ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ಸೇನೆ ಹೊಂದಿರುವ ಅಮೆರಿಕವನ್ನೇ ಎದುರು ಹಾಕಿಕೊಳ್ಳುವ, ‘ತಾಕತ್ತಿದ್ದರೆ ನಮ್ಮ ಮೇಲೆ ದಾಳಿ ಮಾಡಿ’ ಎಂದು ಪ್ರಚೋದಿಸುವ ಒಂದೇ ಒಂದು ಅವಕಾಶವನ್ನೂ ಅದು ಬಿಟ್ಟುಕೊಟ್ಟಿಲ್ಲ. ಆದರೆ ಈ ಹಿಂದಿನ ಪರಮಾಣು ಬಾಂಬ್‌ ಪರೀಕ್ಷೆಗಳ ಸಂದರ್ಭಕ್ಕೂ ಈ ಸಲದ್ದಕ್ಕೂ ಒಂದು ವ್ಯತ್ಯಾಸವಂತೂ ಇದೆ. ಉತ್ತರ ಕೊರಿಯಾಕ್ಕೆ ಎಲ್ಲ ಹಂತಗಳಲ್ಲಿ, ಎಲ್ಲ ಸಮಯದಲ್ಲಿ ಬೆಂಗಾವಲಾಗಿ ನಿಂತಿದ್ದ ಚೀನಾ ಮಾತ್ರ ಈ ಬಾರಿ ನಿಲುವು ಬದಲಿಸಿರುವುದು ಆಶ್ಚರ್ಯ. ಅಷ್ಟೇ ಅಲ್ಲ ಸ್ವಾಗತಾರ್ಹ ಕೂಡ. ಜಲಜನಕ ಬಾಂಬ್‌ ಪರೀಕ್ಷೆಯನ್ನು ಅದು ಖಂಡಿಸಿದ್ದು, ‘ತಪ್ಪು ಹೆಜ್ಜೆ ಇಡುವುದನ್ನು ನಿಲ್ಲಿಸಿ, ಮಾತುಕತೆಗೆ ಮುಂದಾಗಬೇಕು’ ಎಂದು ಕಟುವಾದ ಶಬ್ದಗಳಲ್ಲಿಯೇ ತಾಕೀತು ಮಾಡಿರುವುದು ಒಳ್ಳೆಯ ಬೆಳವಣಿಗೆ. ಈ ಕೆಲಸವನ್ನು ಅದು ಮೊದಲೇ ಮಾಡಿದ್ದರೆ ಉತ್ತರ ಕೊರಿಯಾ ಇಷ್ಟೆಲ್ಲಾ ಹದ್ದುಮೀರುತ್ತಿರಲಿಲ್ಲ.

ವಿಶ್ವದಲ್ಲಿ ನಮ್ಮದೂ ಸೇರಿ ಅನೇಕ ದೇಶಗಳ ಬತ್ತಳಿಕೆಗಳಲ್ಲಿ ಅಣ್ವಸ್ತ್ರಗಳಿವೆ. ಆದರೆ ಜಲಜನಕ ಬಾಂಬ್‌ ತಯಾರಿಕೆ ಸಾಮರ್ಥ್ಯ ಇರುವುದು ಅಮೆರಿಕ, ರಷ್ಯಾ, ಚೀನಾ, ಬ್ರಿಟನ್‌, ಫ್ರಾನ್ಸ್‌, ಭಾರತ ಮತ್ತು ಇಸ್ರೇಲ್‌ಗಳಿಗೆ. ಇವು ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿವೆ. ನಮ್ಮ ನೆರೆಯ ಪಾಕಿಸ್ತಾನ 1998ರ ಮೇ ತಿಂಗಳಲ್ಲಿ ಮತ್ತು ಉತ್ತರ ಕೊರಿಯಾ 2016ರ ಜನವರಿಯಲ್ಲಿ ಜಲಜನಕ ಬಾಂಬ್‌ ಪರೀಕ್ಷೆ ನಡೆಸಿದ್ದಾಗಿ ಹೇಳಿಕೊಂಡಿದ್ದವು. ಆದರೆ ಅದರ ಸತ್ಯಾಸತ್ಯತೆ ಬಗ್ಗೆ ತಜ್ಞರಲ್ಲಿ ಅನುಮಾನಗಳು ಇನ್ನೂ ಬಗೆಹರಿದಿಲ್ಲ. ಸಾಮಾನ್ಯ ಪರಮಾಣು ಬಾಂಬನ್ನೇ ಸ್ವಲ್ಪ ಮಾರ್ಪಡಿಸಿ ಜಲಜನಕ ಬಾಂಬ್‌ ಎಂದು ಹೇಳಿಕೊಂಡಿರಬಹುದು ಎಂದೇ ಅಣ್ವಸ್ತ್ರ ಪರಿಣತರು ನಂಬಿದ್ದಾರೆ. ಭಾನುವಾರ ಉತ್ತರ ಕೊರಿಯಾ ನಡೆಸಿದ ಪರೀಕ್ಷೆಯ ಬಗ್ಗೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿರೋಶಿಮಾ– ನಾಗಾಸಾಕಿ ಮೇಲೆ ಹಾಕಿದ ಮತ್ತು ನಂತರ ಅನೇಕ ದೇಶಗಳು ಅಭಿವೃದ್ಧಿಪಡಿಸಿದ ಪರಮಾಣು ಬಾಂಬ್‌ಗಳಿಗಿಂತ ಜಲಜನಕ ಬಾಂಬ್‌ಗಳು ಹೆಚ್ಚು ವಿನಾಶಕ ಶಕ್ತಿ ಹೊಂದಿವೆ. ಅವನ್ನು ಸಿದ್ಧಪಡಿಸಲು ಭಾರಿ ನೈಪುಣ್ಯ, ತಂತ್ರಜ್ಞಾನ ಬೇಕು. ಹೀಗಾಗಿಯೇ ಈ ಅನುಮಾನ. ಆದರೂ ನಿಶ್ಚಿಂತೆಯಿಂದ ಇರುವುದು ಸಾಧ್ಯವೇ ಇಲ್ಲ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ಅಣ್ವಸ್ತ್ರ ಅಭಿವೃದ್ಧಿಯನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡುವ ವ್ಯಕ್ತಿಯಲ್ಲ. ಅವರ ಪಾಲಿಗೆ ಅದೇ ಮಹತ್ಸಾಧನೆ, ಶಕ್ತಿ. ಆ ದೇಶ ಜಲಜನಕ ಬಾಂಬ್‌ ತಯಾರಿಕಾ ಸಾಮರ್ಥ್ಯ ಗಳಿಸಿಕೊಂಡಿರುವುದು ನಿಜವೇ ಆಗಿದ್ದರೆ ಅಮೆರಿಕದ ಪ್ರಮುಖ ನಗರಗಳು ಅದರ ಅಣ್ವಸ್ತ್ರ ಸಿಡಿತಲೆಯ ವ್ಯಾಪ್ತಿಗೆ ಬರುತ್ತವೆ. ಕಿಮ್‌ ಜಾಂಗ್‌ ಯಾವ ಹೊತ್ತಿಗೆ ಎಂತಹ ತೀರ್ಮಾನ ತೆಗೆದುಕೊಳ್ಳಬಹುದು ಎಂಬುದನ್ನು ಊಹಿಸುವುದು ಕಷ್ಟ. ಅದೇ ಆತಂಕಕ್ಕೆ ಕಾರಣ. ಆದ್ದರಿಂದ ಇತರ ದೇಶಗಳು ತಾಳ್ಮೆಯಿಂದ ವರ್ತಿಸಬೇಕು, ಉತ್ತರ ಕೊರಿಯಾದ ಜತೆ ಮಾತುಕತೆಯ ಎಲ್ಲ ಹಾದಿಗಳನ್ನು ಹುಡುಕಬೇಕು. ಏಕೆಂದರೆ ಅದರ ವಿರುದ್ಧ ಆರ್ಥಿಕ, ಸೇನಾ ದಿಗ್ಬಂಧನ ಮುಂದುವರಿಸುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಇದು ಇಡೀ ವಿಶ್ವಕ್ಕೆ ಪರೀಕ್ಷೆಯ ಕಾಲ. ಇದನ್ನು ನಾಜೂಕಾಗಿ ನಿಭಾಯಿಸುವುದು ಅನಿವಾರ್ಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.