ADVERTISEMENT

ಉದ್ಧಟತನಕ್ಕೆ ಪೆಟ್ಟು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಉದ್ಧಟತನಕ್ಕೆ ಸುಪ್ರೀಂ ಕೋರ್ಟ್‌ ಮತ್ತೊಂದು ಗುದ್ದು ನೀಡಿದೆ. ಐಪಿಎಲ್‌ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ನಡೆಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ನೇತೃತ್ವದ ಸಮಿತಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದು, ಮುದ್ಗಲ್‌ ಕೂಡಾ ಒಪ್ಪಿದ್ದಾರೆ.  ಈ ದೇಶದಲ್ಲಿ ಕ್ರಿಕೆಟ್‌ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ವಾಮಮಾರ್ಗಗಳಿಂದ ಹಣ ದೋಚಲು ಹಲ­ವರು ಯತ್ನಿಸಿದ್ದಾರೆ. ಅಂತಹ ವಂಚಕರ ಕೂಟದ ಜತೆ ಕೆಲವು ಕ್ರಿಕೆಟ್‌ ಆಡ­ಳಿತ­ಗಾರರು, ಆಟಗಾರರು ಸೇರಿಕೊಂಡಿದ್ದಾರೆಂಬ ಬಗ್ಗೆ ಹಿಂದಿನಿಂದಲೂ ಗುಮಾನಿ ಇತ್ತು. ಮುದ್ಗಲ್‌ ಸಮಿತಿ ಅದೇ ಜಾಡಿನಲ್ಲಿ ಆಳವಾದ ತನಿಖೆ ನಡೆಸಿ, ಸಾಕ್ಷ್ಯಾಧಾರಗಳೊಂದಿಗೆ ಸಮಗ್ರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.

ಅದರಲ್ಲಿ ಚೆನ್ನೈ ಸೂಪರ್‌ಕಿಂಗ್‌ ತಂಡದ ಆಡಳಿತಗಾರರ ಪ್ರಸ್ತಾ­ಪ­­ವಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್‌ ತಾತ್ಕಾಲಿಕವಾಗಿ ಕ್ರಿಕೆಟ್‌ ಮಂಡಳಿಯ ಆಡಳಿತ­ದಿಂದ ದೂರವಿರಬೇಕೆಂದು ಆದೇಶಿಸಿತ್ತು. ಈ ಸಮಯದಲ್ಲಿ ಆಡಳಿತ ನೋಡಿ­ಕೊಳ್ಳಲು ಹಿರಿಯ ಉಪಾಧ್ಯಕ್ಷ ಶಿವಲಾಲ್‌ ಯಾದವ್‌ ಅವರಿಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲಾ­ಯಿತು, ನಿಜ. ಆದರೆ ಕಳ್ಳಾಟ, ಬೆಟ್ಟಿಂಗ್‌ ಇತ್ಯಾದಿ ಬಗ್ಗೆ ತನಿಖೆ  ನಡೆಸಲು ಮೂವರು ಸದಸ್ಯರ ಸಮಿತಿಯೊಂದನ್ನು ಬಿಸಿಸಿಐ ಈಚೆಗೆ ನೇಮಿಸಿತು.

ಇಲ್ಲಿ ಮುದ್ಗಲ್‌ ಸಮಿತಿಯ ವರದಿಯನ್ನೇ ತಿರಸ್ಕಾರ ಮನೋಭಾವದಿಂದ ನೋಡಿದ್ದು  ಎದ್ದು ಕಾಣು­ತ್ತದೆ. ಸಮಿತಿಯಲ್ಲಿರುವ ರವಿಶಾಸ್ತ್ರಿ ಅವರು ಬಿಸಿಸಿಐ­ನಿಂದ ಸಂಭಾ­ವನೆ ಪಡೆಯುತ್ತಿರುವವರ ಪಟ್ಟಿಯಲ್ಲಿದ್ದರೆ, ಜೆ.ಎನ್‌.­ಪಟೇಲ್‌ ಅವರು ಪ್ರಸಕ್ತ ಮಂಡಳಿಯ ತಾತ್ಕಾಲಿಕ ಅಧ್ಯಕ್ಷ ಶಿವ­ಲಾಲ್‌ಯಾದವ್‌ ಅವರ ಸಮೀಪ ಬಂಧು ಎನ್ನಲಾಗಿದೆ. ಆರ್‌.ಕೆ.­ರಾಘ­ವನ್‌ ಅವರಿಗೆ ಚೆನ್ನೈ ಕ್ರಿಕೆಟ್‌ ಸಂಸ್ಥೆಯ ಜತೆಗೆ ನಿಕಟ ನಂಟಿದೆ. ಈ ನೇಮಕಗಳು ಹಿತಾಸಕ್ತಿ ಸಂಘರ್ಷಕ್ಕೆ ಸ್ಪಷ್ಟ ನಿದರ್ಶನದಂತಿವೆ. ಕಳ್ಳಾಟದ  ಆರೋಪಗಳ ಬಗ್ಗೆ ತನಿಖೆಗೆ ಸಂಬಂಧಿಸಿ­ದಂತೆ ಏನು ಮಾಡಿದ್ದೀರೆಂದು ನ್ಯಾಯಾಲಯ ಬಿಸಿಸಿಐಯನ್ನು ಪ್ರಶ್ನಿಸಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಈ ಸಮಿತಿಯನ್ನು ರಚಿಸಲಾಗಿದೆ. ಇದು ಬಿಸಿಸಿಐನ ಸ್ವಾಯತ್ತತೆಯನ್ನೇ ಪ್ರಶ್ನಿಸಿ­ದಂತಿದೆ. ಈಚಿನ ದಿನಗಳಲ್ಲಿ ಬಿಸಿಸಿಐಗೆ ಆಗಿರುವ ಬಹಳಷ್ಟು ಮುಖಭಂಗದ ಪ್ರಕರಣಗಳಿಂದ ಅದು ಪಾಠ ಕಲಿತಿಲ್ಲ ಎಂಬುದು ಮಂಡಳಿಯ ಈ ನೇಮಕ­ದಿಂದ ಸ್ಪಷ್ಟವಾಗಿದೆ.  ಹೀಗಾಗಿ  ಮುದ್ಗಲ್‌ ಅವರೇ ಇನ್ನಷ್ಟು ತನಿಖೆ ನಡೆಸ­ಬೇಕೆಂದು ನ್ಯಾಯಪೀಠ ಕೋರಿರುವುದು ಬಿಸಿಸಿಐ ಪ್ರಸ್ತಾಪಿಸಿದ  ಸಮಿತಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಕ್ರಿಕೆಟ್‌ ಮಂಡಳಿಯ 86 ವರ್ಷಗಳ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್‌ ಈ ಮಟ್ಟಿಗೆ ಮಧ್ಯ ಪ್ರವೇಶಿಸಿರುವುದು ಇದೇ ಮೊದಲು. ಮುದ್ಗಲ್‌ ವರ­ದಿಯ  ಮಾಹಿತಿಗಳು ಗೊತ್ತಾದ ನಂತರವಾದರೂ  ಈ  ಕ್ರೀಡಾ ಸಂಸ್ಥೆಯ ಆಡಳಿತಗಾರರು ಪಶ್ಚಾತ್ತಾಪ ಪಡಬೇಕಿತ್ತು. ಆದರೆ ಹಾಗಾಗಿಲ್ಲ. ತನ್ನನ್ನು ಶುದ್ಧೀಕರಿಸಿಕೊಳ್ಳಲು ಸಿಕ್ಕಿದ ಅತ್ಯುತ್ತಮ ಅವಕಾಶದಲ್ಲಿಯೂ ಬಿಸಿಸಿಐ ಎಡವಿದಂತಿದೆ. ಹೀಗಾಗಿಯೇ ಸುಪ್ರೀಂ ಕೋರ್ಟ್‌, ಮುದ್ಗಲ್‌ ಅವರೇ ಇನ್ನಷ್ಟು ತನಿಖೆ ನಡೆಸಬೇಕೆಂದಿರುವುದು ಬಿಸಿಸಿಐನ ಅಹಂಕಾರದ ವರ್ತನೆ­ಗೊಂದು ಪೆಟ್ಟು ನೀಡಿದಂತಿದೆ. ಈ ದೇಶದಲ್ಲಿ ಕ್ರಿಕೆಟ್‌ನ ಪಾವಿತ್ರ್ಯ ಉಳಿಸಿ­ಕೊಳ್ಳು­ವಲ್ಲಿ ಇದೊಂದು ಶ್ಲಾಘನಾರ್ಹ ಬೆಳವಣಿಗೆ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.