ADVERTISEMENT

ಏರ್‌ ಇಂಡಿಯಾ ಖರೀದಿಗೆ ಕಾಣದ ಉತ್ಸಾಹ: ಷೇರುವಿಕ್ರಯಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 19:30 IST
Last Updated 12 ಜೂನ್ 2018, 19:30 IST
ಏರ್‌ ಇಂಡಿಯಾ ಖರೀದಿಗೆ ಕಾಣದ ಉತ್ಸಾಹ: ಷೇರುವಿಕ್ರಯಕ್ಕೆ ಹಿನ್ನಡೆ
ಏರ್‌ ಇಂಡಿಯಾ ಖರೀದಿಗೆ ಕಾಣದ ಉತ್ಸಾಹ: ಷೇರುವಿಕ್ರಯಕ್ಕೆ ಹಿನ್ನಡೆ   

ನಷ್ಟಪೀಡಿತ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ (ಎ.ಐ.) ಖಾಸಗೀಕರಣ ಯತ್ನವು ಮೊದಲ ಹಂತದಲ್ಲಿಯೇ ಮುಗ್ಗರಿಸಿದೆ. ಸಂಸ್ಥೆಯಲ್ಲಿನ ಶೇ 76ರಷ್ಟು ಪಾಲು ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದ ಕೇಂದ್ರ ಸರ್ಕಾರದ ಧೋರಣೆಗೆ ಖಾಸಗಿಯವರು ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾರೆ.

ಆರಂಭದಲ್ಲಿ ದೇಶಿ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ಖರೀದಿಗೆ ಉತ್ಸಾಹ ಪ್ರಕಟಿಸಿದ್ದವು. ಆದರೆ, ಅಂತಿಮವಾಗಿ ಯಾವುದೇ ಸಂಸ್ಥೆಯು ಮುಂದಿನ ಹೆಜ್ಜೆ ಇಡಲು ಮನಸ್ಸು ಮಾಡಿಲ್ಲ. ಖರೀದಿ ಆಸಕ್ತಿ ವ್ಯಕ್ತಪಡಿಸಲು ಗಡುವು ವಿಸ್ತರಿಸಿದ್ದರೂ ಫಲಿತಾಂಶ ಶೂನ್ಯವಾಗಿದೆ.

ಇದರಿಂದ ಎ.ಐ. ಮಾರಾಟ ಯತ್ನ ಕಠಿಣವಾಗಲಿದೆ. ಒಟ್ಟಾರೆ ₹ 53 ಸಾವಿರ ಕೋಟಿಗಳಷ್ಟು ನಷ್ಟದಲ್ಲಿ ಇರುವ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ವಿಮಾನಯಾನ ರಂಗದ ಇತರ ಭಾಗಿದಾರರಿಂದ ಉತ್ತೇಜನಕರ ಸ್ಪಂದನವೇ ಸಿಕ್ಕಿಲ್ಲ. ಸರ್ಕಾರದ ಕಾರ್ಯಸೂಚಿಯಲ್ಲಿ ಪಾರದರ್ಶಕತೆ ಇಲ್ಲದಿರುವುದು, ಸಿಬ್ಬಂದಿ ಹೊರೆ, ನಷ್ಟದ ಬಾಬತ್ತು... ಇವೆಲ್ಲ ಖರೀದಿದಾರರ ಉತ್ಸಾಹ ಉಡುಗಿಸಿವೆ.

ADVERTISEMENT

ಸರ್ಕಾರ ನಿಗದಿಪಡಿಸಿರುವ ಸಂಕೀರ್ಣ ಸ್ವರೂಪದ ನಿಬಂಧನೆಗಳೇ ಖಾಸಗೀಕರಣ ಯತ್ನಕ್ಕೆ ಪ್ರಮುಖ ಅಡ್ಡಿಯಾಗಿ ಪರಿಣಮಿಸಿವೆ. ಈ ಮಾರಾಟ ಕಾರ್ಯಸೂಚಿಯು ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಇರದಿರುವುದೇ ಈ ವೈಫಲ್ಯಕ್ಕೆ ಮುಖ್ಯ ಕಾರಣವಾಗಿದೆ. ಇದರಲ್ಲಿ ಅಚ್ಚರಿಪಡುವಂತಹದ್ದು ಏನೂ ಇಲ್ಲ. ಈ ಅರೆಖಾಸಗೀಕರಣಕ್ಕೆ, ಸರ್ಕಾರದ ಅರೆಮನಸ್ಸು ಮತ್ತು ನಿಗದಿಪಡಿಸಿದ್ದ ಕೆಲ ನಿಬಂಧನೆಗಳೇ ಮುಳುವಾಗಿವೆ. ಸಂಸ್ಥೆಯನ್ನು ಖಾಸಗಿಯವರಿಗೆ ಬಿಕರಿ ಮಾಡುವ ಸರ್ಕಾರದ ಕಾರ್ಯತಂತ್ರದಲ್ಲಿ ಸ್ಪಷ್ಟತೆಯೇ ಇದ್ದಿರಲಿಲ್ಲ.

ಲಾಭದಲ್ಲಿ ಇರುವ ಇದರ ಅಂಗಸಂಸ್ಥೆಗಳಾದ ಅಗ್ಗದ ವಿಮಾನಯಾನ ಸಂಸ್ಥೆ ಎ.ಐ. ಎಕ್ಸ್‌ಪ್ರೆಸ್‌, ಸರಕು ನಿರ್ವಹಣೆ ವಿಭಾಗ ಎ.ಐ. ಟ್ರಾನ್ಸ್‌ಪೋರ್ಟ್‌ ಮತ್ತು ವಿಮಾನ ನಿಲ್ದಾಣದ ಸೇವೆ ಒದಗಿಸುವ ವಿಭಾಗಕ್ಕೆ ಸೇರಿದ ಭೂಮಿ ಮತ್ತು ಕಚೇರಿ ಕಟ್ಟಡಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದೇ ಎನ್ನುವುದನ್ನು ಸರ್ಕಾರ
ಸ್ಪಷ್ಟಪಡಿಸಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯು ಯಾವತ್ತೂ ಲಾಭದ ಹಾದಿಗೆ ಮರಳಿರಲಿಲ್ಲ. ಸರ್ಕಾರದ ಪಾಲಿಗೆ ಇದೊಂದು ಬಿಳಿಯಾನೆಯಾಗಿದೆ. ಕೇಂದ್ರೋದ್ಯಮಗಳನ್ನು ಸರ್ಕಾರದ ನಿಯಂತ್ರಣದಿಂದ ಕೈಬಿಡುವ ಇತರ ಆರ್ಥಿಕ ಸುಧಾರಣಾ ಕ್ರಮಗಳ ಮೇಲೆಯೂ ಈ ಹಿನ್ನಡೆಯು ವ್ಯತಿರಿಕ್ತ ಪರಿಣಾಮ ಬೀರಲಿದೆ. ಖಾಸಗಿ ವಿಮಾನಯಾನ ಸಂಸ್ಥೆಗಳ ತೀವ್ರ ಸ್ಪರ್ಧೆಯಿಂದ ನಿರಂತರವಾಗಿ ನಷ್ಟದಲ್ಲಿ ನಡೆಯುತ್ತಿರುವ ಸಂಸ್ಥೆಗೆ ಖಾಸಗೀಕರಣ ಪ್ರಯತ್ನವು ಜೀವದಾನ ನೀಡಲಿದೆ ಎಂದೇ ಬಹುವಾಗಿ ನಿರೀಕ್ಷಿಸಲಾಗಿತ್ತು. ಅದು ಕೂಡ ಈಗ ಹುಸಿಯಾಗಿದೆ.

ಸಂಸ್ಥೆಯಲ್ಲಿನ ಶೇ 24ರಷ್ಟು ಪಾಲನ್ನು  ಉಳಿಸಿಕೊಳ್ಳುವ ಸರ್ಕಾರದ ಧೋರಣೆ ಖಾಸಗಿಯವರಿಗೆ ಅಪಥ್ಯವಾಗಿದೆ ಎನ್ನುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಬಹುಪಾಲು ಬಂಡವಾಳದ ಮಾರಾಟದ ಹೊರತಾಗಿಯೂ ಸರ್ಕಾರದ ಹಸ್ತಕ್ಷೇಪ ಇರಲಿದೆ. ಸರ್ಕಾರ ಶೇ 1ರಷ್ಟು ಪಾಲು ಹೊಂದುವುದೂ ಖಾಸಗಿಯವರಿಗೆ ಇಷ್ಟ ಇರುವಂತೆ ಕಾಣುತ್ತಿಲ್ಲ.  ಖರೀದಿಗೆ ಮುಂದೆ ಬಂದವರೂ, ದಿನನಿತ್ಯದ ವಹಿವಾಟಿನಲ್ಲಿ ಸರ್ಕಾರದ ಹಸ್ತಕ್ಷೇಪದ ಸಾಧ್ಯತೆ ಕಾರಣಕ್ಕೆ ಹಿಂದೆ ಸರಿದಿದ್ದಾರೆ. ಮಾರಾಟ ವಿಳಂಬವಾದಷ್ಟೂ ಜನರ ತೆರಿಗೆ ದುಡ್ಡಿನ ಅಪವ್ಯಯ ಮುಂದುವರೆಯುತ್ತಲೇ ಇರುತ್ತದೆ.

ಯಾವುದೇ ಕಾರಣಕ್ಕೂ ಸರ್ಕಾರ ಇನ್ನಷ್ಟು ಬಂಡವಾಳ ಹೂಡಲು ಮುಂದಾಗಬಾರದು. ವಿಮಾನಯಾನ ಸಂಸ್ಥೆ ನಿರ್ವಹಣೆ ಸರ್ಕಾರದ ಕೆಲಸವೇ ಅಲ್ಲ ಎನ್ನುವ ತೀರ್ಮಾನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಬೇಕು. ಈ ಖಾಸಗೀಕರಣ ಪ್ರಕ್ರಿಯೆಯನ್ನು ಇದೇ ಡಿಸೆಂಬರ್‌ ಅಂತ್ಯದ ವೇಳೆಗೆ ಪೂರ್ಣಗೊಳಿಸುವುದು ಸರ್ಕಾರದ ಇರಾದೆಯಾಗಿತ್ತು.

ಅಂತಹ ಸಾಧ್ಯತೆ ಸದ್ಯಕ್ಕಂತೂ ಕ್ಷೀಣಿಸಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸರ್ಕಾರ ಈ ಖಾಸಗೀಕರಣ ಪ್ರಕ್ರಿಯೆಯನ್ನು ಯಾವುದೇ ನೆಪ ಮುಂದೆ ಮಾಡಿ ಅರ್ಧದಲ್ಲೇ ಕೈಬಿಡಬಾರದು. ವಿಳಂಬ ಮಾಡಿದಷ್ಟೂ ಸಂಸ್ಥೆಯ ನಷ್ಟದ ಹೊರೆ ಏರುತ್ತಲೇ ಹೋಗುತ್ತದೆ. ಈ ಖಾಸಗೀಕರಣ ಪ್ರಯತ್ನಕ್ಕೆ ತಾರ್ಕಿಕ ಅಂತ್ಯ ಹಾಡಲು ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.

ಶೇ 100ರಷ್ಟು ಪಾಲು ಬಂಡವಾಳ ಮಾರಾಟಕ್ಕೆ ಮುಂದಾದರೆ ಮಾತ್ರ ಯಾರಾದರೂ ಮುಂದೆ ಬಂದಾರು. ಈ ಉದ್ದೇಶಕ್ಕೆಂದೇ ರಚಿಸಲಾಗಿರುವ ಸಚಿವರ ಸಮಿತಿಯು ಇದಕ್ಕೊಂದು ಕಾರ್ಯಸಾಧ್ಯವಾದ ಸೂತ್ರ ಸಿದ್ಧಪಡಿಸಬೇಕಾಗಿದೆ. ಈ ಪ್ರಕ್ರಿಯೆ ಆದಷ್ಟು ಬೇಗ ಪೂರ್ಣಗೊಂಡಷ್ಟೂ ‘ಮಹಾರಾಜ’ ಹೆಮ್ಮೆಯಿಂದ ತಲೆ ಎತ್ತಿ ಹಾರಾಟ ನಡೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.