ADVERTISEMENT

ಕಾನೂನು ಎಲ್ಲರಿಗೂ ಒಂದೆ

​ಪ್ರಜಾವಾಣಿ ವಾರ್ತೆ
Published 8 ಮೇ 2014, 19:30 IST
Last Updated 8 ಮೇ 2014, 19:30 IST

ಭ್ರಷ್ಟಾಚಾರ ಆರೋಪಗಳ ಬಗ್ಗೆ  ಹಿರಿಯ ಅಧಿಕಾರಿಗಳನ್ನು ಸಿಬಿಐ ನಿಂದ  ವಿಚಾರಣೆಗೆ ಒಳಪಡಿಸುವ ಮುನ್ನ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾ­ನುಮತಿ ಪಡೆಯಬೇಕೆಂಬ  ಕಾನೂನನ್ನು   ಸುಪ್ರೀಂಕೋರ್ಟ್‌ನ ಸಂವಿ­­ಧಾನ­ಪೀಠ ಕಿತ್ತುಹಾಕಿದೆ. ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರ ವಿರು­ದ್ಧದ ಹೋರಾಟದಲ್ಲಿ ಇರಿಸಿದ ಸರಿಯಾದ ಹೆಜ್ಜೆ ಇದು. ಹೀಗಾಗಿ ಆರೋಪ ಇರುವ ಜಂಟಿ ಕಾರ್ಯದರ್ಶಿ ಅಥವಾ ಅದಕ್ಕೂ ಹಿರಿಯ ಅಧಿಕಾರಿಗಳನ್ನು  ನೇರ­ವಾಗಿ ವಿಚಾರಣೆಗೆ ಒಳಪಡಿಸುವ ಅಧಿಕಾರ ಸಿಬಿಐಗೆ ದೊರೆತಂತಾಗಿದೆ.

ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಆಗಬಹುದಾದ ಸಹಜ ತಪ್ಪುಗಳ ಪರಿ­ಣಾಮ­ಗಳು ಹಾಗೂ ಸುಳ್ಳು ದೂರುಗಳ ವಿರುದ್ಧ ಅಧಿಕಾರಿಗಳನ್ನು ರಕ್ಷಿಸುವ ನೆಪ ಹೇಳಿ 2003ರಲ್ಲಿ  ದೆಹಲಿ ವಿಶೇಷ ಪೊಲೀಸ್    ಕಾಯಿದೆಗೆ ಸೆಕ್ಷನ್ 6 ‘ಎ’ಯನ್ನು  ಎನ್‌ಡಿಎ ಸರ್ಕಾರ ಸೇರಿಸಿತ್ತು.  ಹಿರಿಯ ಐಎಎಸ್ ಅಧಿಕಾರಿ­ಗಳನ್ನು  ರಕ್ಷಿಸಿಕೊಳ್ಳಲು ರಾಜಕೀಯ ಪ್ರಭುಗಳಿಗೆ ಇದೊಂದು ಗುರಾಣಿ­ಯಾ­ಗಿತ್ತು.  ಹೀಗಾಗಿ ಹೆಚ್ಚುತ್ತಿರುವ ರಾಜಕಾರಣಿ, ಅಧಿಕಾರಶಾಹಿ ಹಾಗೂ ಅಪ­ರಾಧಿ­ಗಳ ಅಪವಿತ್ರ ಮೈತ್ರಿಯನ್ನು ನಿಯಂತ್ರಿಸಲು ಕಾನೂನು ಸಹ ಮಿತಿಯುಳ್ಳದ್ದಾಗಿದ್ದು ವಿಪರ್ಯಾಸ.

ಪೂರ್ವಾನುಮತಿ ಪಡೆಯಬೇಕೆಂ­ಬುದೇ, ಸಾಕ್ಷ್ಯಗಳನ್ನು ನಾಶ ಮಾಡಿ ತಪ್ಪಿಸಿಕೊಳ್ಳಲು ತಪ್ಪಿತಸ್ಥರಿಗೆ ಅವಕಾಶ ಕಲ್ಪಿಸಿದಂತಾ­ಗುತ್ತಿತ್ತು. ಈಗ ಕಾನೂನಿನ ಈ ದೋಷವನ್ನು ಸರಿಪಡಿಸು­ವಂತಹ ತೀರ್ಪನ್ನು  ಐವರು ನ್ಯಾಯಮೂರ್ತಿಗಳಿದ್ದ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ನೀಡಿರುವುದು ಸ್ವಾಗತಾರ್ಹ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಲ್ಲಿ  ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿರುವುದು ಮೂರನೇ ಬಾರಿ. 1997ರಲ್ಲಿ ವಿನೀತ್ ನಾರಾಯಣ್ ಪ್ರಕರಣದಲ್ಲಿ ಉನ್ನತ ಹಂತದ ಅಧಿಕಾರಿಗಳಿಗೆ ರಕ್ಷಣೆ ನೀಡುವುದರ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಒಂದು ವರ್ಷದ ನಂತರ ಸುಗ್ರೀವಾಜ್ಞೆಯ ಮೂಲಕ ಉನ್ನತ ಅಧಿಕಾರಿಗಳಿಗೆ ಈ ರಕ್ಷಣೆ­ಯನ್ನು ನೀಡುವ ಕ್ರಮವನ್ನು ಕೇಂದ್ರ ಸರ್ಕಾರ ಮರುಸ್ಥಾಪಿಸಿತ್ತು.  ಅದೂ ಕೂಡ ಸರಿಯಲ್ಲ ಎಂದು ತೀರ್ಪು ಹೊರಬಿದ್ದಿತ್ತು.

ನಂತರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2003ರಲ್ಲಿ ದೆಹಲಿ ವಿಶೇಷ ಪೊಲೀಸ್  ಕಾಯಿ­ದೆಗೆ ಸೆಕ್ಷನ್ 6 ಎ ಸೇರಿಸಲಾಯಿತು. ಇದನ್ನು ಯುಪಿಎ ಸರ್ಕಾರದ ವಕೀ­ಲರು ಬಲವಾಗಿ ಸಮರ್ಥಿಸಿಕೊಂಡರೂ, ಈ ವಿಚಾರ ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸರಿಯಾಗಿಯೇ ಇದೆ. ಸರ್ಕಾರಿ ಸೇವೆ­ಯಲ್ಲಿ ಅಧಿಕಾರಿಗಳ ಸ್ಥಾನಮಾನವನ್ನು ಆಧರಿಸಿ ಅವರನ್ನು ವರ್ಗೀಕ­ರಿ­ಸಿ­ರುವುದಕ್ಕೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಭ್ರಷ್ಟ ಅಧಿಕಾರಿಗಳು ಉನ್ನತ ದರ್ಜೆಯವರಾಗಿರಲಿ, ಕಿರಿಯ ದರ್ಜೆಯವರಾಗಿರಲಿ ಅವರನ್ನು ಒಂದೇ ರೀತಿ ಪರಿ­ಗಣಿಸಬೇಕು. ಇಲ್ಲದಿದ್ದಲ್ಲಿ ಇದು ಸಮಾನತೆಯ ಹಕ್ಕನ್ನು ಹೇಳುವ ಸಂವಿ­ಧಾ­­ನದ 14ನೇ ವಿಧಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂಬಂತಹ  ಕೋರ್ಟ್ ಮಾತು ಸರಿಯಾದುದೆ. ಭ್ರಷ್ಟ ಅಧಿಕಾರಿಗಳು ಕಾನೂನಿನ ಕುಣಿಕೆಯಿಂದ ಬಚಾವಾಗುವುದು ಎಂದಿಗೂ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.