ADVERTISEMENT

ಗಡಿ ಗುರುತು: ಕೊನೆಗೂ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಬ‌ಳ್ಳಾರಿ ಮೀಸಲು ಅರಣ್ಯದಲ್ಲಿ ಹಾದುಹೋಗಿರುವ ಕರ್ನಾಟಕ– ‌ಆಂಧ್ರ­ಪ್ರದೇಶ ಅಂತರರಾಜ್ಯ ಗಡಿ ಗುರುತು ಧ್ವಂಸ ಪ್ರಕರಣ ಎಂಟು ವರ್ಷಗಳ ಬಳಿಕ ತಾರ್ಕಿಕ ಅಂತ್ಯ ಕಾಣುವತ್ತ ಸಾಗಿದೆ.

ಆಂಧ್ರಪ್ರದೇಶದಲ್ಲಿ ಗಣಿ ಗುತ್ತಿಗೆ ಹೊಂದಿದ್ದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಗಣಿ ಕಂಪೆನಿ (ಓಎಂಸಿ), ರಾಜ್ಯದ ಭೂಭಾಗವನ್ನು ಅತಿಕ್ರಮಿಸಿ, ಗಡಿ ಗುರುತುಗಳನ್ನು ನಾಶ ಮಾಡುತ್ತಿದೆ ಎಂಬ ಆರೋಪ 2006ರಲ್ಲೇ ಕೇಳಿ­ಬಂದಿತ್ತು. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾ­ಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರ ವರದಿ ಕೂಡ ಅಂತರರಾಜ್ಯ ಗಡಿ ಗುರುತು ಧ್ವಂಸ ಮತ್ತು ಒತ್ತುವರಿಯನ್ನು ದೃಢ­ಪಡಿ­ಸಿತ್ತು.ಸರ್ವೆ ಆಫ್‌ ಇಂಡಿಯಾ ಮೂಲಕ ಗಡಿ ಗುರುತುಗಳನ್ನು ಪುನಃ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವಂತೆಯೂ ಶಿಫಾರಸು ಮಾಡಲಾಗಿತ್ತು. ಆದರೆ, ಸರ್ಕಾರ ಈ ಕುರಿತು ಯಾವ ಕ್ರಮವನ್ನೂ ಕೈ­ಗೊಂಡಿ­ರಲಿಲ್ಲ.

ಅಕ್ರಮ ಗಣಿಗಾರಿಕೆ ಕುರಿತು ಸಮಾಜ ಪರಿವರ್ತನಾ ಸಮು­ದಾಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಅಂತರ­ರಾಜ್ಯ ಗಡಿ ಗುರುತು ಮಾಡುವ ಹೊಣೆಯನ್ನು ಸರ್ವೆ ಆಫ್‌ ಇಂಡಿಯಾ ಸಂಸ್ಥೆಗೆ ಒಪ್ಪಿಸಿದೆ. ನ್ಯಾಯಾಲಯದ ಆದೇಶದಂತೆ ಸಂಸ್ಥೆಯ ಅಧಿ­ಕಾರಿಗಳು ಶನಿವಾರದಿಂದ ಗಡಿ ಸಮೀಕ್ಷೆ ಆರಂಭಿಸಿದ್ದಾರೆ. ರಾಜ್ಯದ ಸಾರ್ವ­ಭೌಮತೆಗೇ ಸವಾಲಾಗಿದ್ದ ಪ್ರಕರಣವೊಂದು ಇತ್ಯರ್ಥವಾಗುವ ದಿಕ್ಕಿನಲ್ಲಿ ಸಾಗಿದೆ.

ಗಡಿ ನಾಶ ಪ್ರಕರಣವು ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಗರಣ­ದಲ್ಲಿ ಪ್ರಮುಖ ಪ್ರಕರಣ. ರಾಜ್ಯ ಸರ್ಕಾರದಲ್ಲಿ ಅಧಿಕಾರ ಹೊಂದಿದವರು ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯಲು ಅಧಿಕಾರ ದುರ್ಬಳಕೆ ಮಾಡಿ­ಕೊಂಡು ಗಡಿಯನ್ನೇ ಬದಲಿಸಿದ ಪ್ರಕರಣ ಇದು. ಇಂತಹ ಗಂಭೀರ ಪ್ರಕರ­ಣದ ವಿರುದ್ಧ ರಾಜ್ಯ ಸರ್ಕಾರ ಸ್ವಯಂಪ್ರೇರಿತವಾಗಿ ಈವರೆಗೆ ಯಾವ ಕ್ರಮ­ವನ್ನೂ ಜರುಗಿಸಿಲ್ಲ.

ಈಗ ನ್ಯಾಯಾಲಯದ ಆದೇಶದಂತೆ ಸಮೀಕ್ಷೆ ಆರಂಭ­ವಾಗಿದೆ. ಗಡಿ ಭಾಗದಲ್ಲಿರುವ ಎರಡೂ ರಾಜ್ಯಗಳ ಗ್ರಾಮಗಳ ಗಡಿಗಳನ್ನು ಮೊದಲು ಗುರುತಿಸಬೇಕಿದೆ. ಈ ಕೆಲಸಕ್ಕೆ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯ ಸರ್ಕಾರಗಳು ಸರ್ವೆ ಆಫ್‌ ಇಂಡಿಯಾದ ಅಧಿಕಾರಿಗಳಿಗೆ ಪೂರ್ಣ ಸಹ­ಕಾರ ನೀಡಬೇಕು. ನಂತರ ಅಂತರರಾಜ್ಯ ಗಡಿಯನ್ನು ಗುರುತು ಮಾಡ­ಲಾಗು­ತ್ತದೆ. ಹೇರಳವಾದ ಖನಿಜ ಸಂಪತ್ತು ಇರುವ ಈ ಪ್ರದೇಶದಲ್ಲಿ ಗಡಿ ಗುರುತಿಸುವಾಗ ರಾಜ್ಯಕ್ಕೆ ಅನ್ಯಾಯ ಆಗದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ.

ಗಡಿಯನ್ನು ಪುನಃ ಗುರುತು ಮಾಡಿದ ಮಾತ್ರಕ್ಕೆ ಜವಾಬ್ದಾರಿ ಕೊನೆಯಾಯಿತು ಎಂದು ಸರ್ಕಾರ ಭಾವಿಸುವಂತಿಲ್ಲ. ಸ್ವಾರ್ಥಕ್ಕಾಗಿ ರಾಜ್ಯದ ಗಡಿಯನ್ನೇ ನಾಶ ಮಾಡಿದವರ ವಿರುದ್ಧ ಈವರೆಗೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಸಮೀಕ್ಷೆಯ ಬಳಿಕ ಗಡಿನಾಶ ಪ್ರಕರಣದಲ್ಲಿ ಮತ್ತಷ್ಟು ಪ್ರಬಲ ಸಾಕ್ಷ್ಯಗಳು ದೊರೆಯಬಹುದು. ಗಡಿ ನಾಶ ಪ್ರಕರಣದಲ್ಲಿ ಭಾಗಿ­ಯಾ­ದ­ವರ ವಿರುದ್ಧ  ಸರ್ಕಾರ ಈಗಲಾದರೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಶಿಕ್ಷೆಗೆ ಗುರಿಪಡಿಸುವ ಧೈರ್ಯ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.