ADVERTISEMENT

ಜಲ ಬಿಕ್ಕಟ್ಟಿನ ‘ಬಾಂಬ್’ ಜಲಶಕ್ತಿ ಜಾಗೃತಿ ಮೂಡಲಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 19:30 IST
Last Updated 23 ಮಾರ್ಚ್ 2018, 19:30 IST
ಜಲ ಬಿಕ್ಕಟ್ಟಿನ ‘ಬಾಂಬ್’ ಜಲಶಕ್ತಿ ಜಾಗೃತಿ ಮೂಡಲಿ
ಜಲ ಬಿಕ್ಕಟ್ಟಿನ ‘ಬಾಂಬ್’ ಜಲಶಕ್ತಿ ಜಾಗೃತಿ ಮೂಡಲಿ   

ಜಲ ಬಿಕ್ಕಟ್ಟು ಸದ್ಯದಲ್ಲೇ ಸ್ಫೋಟಿಸಲಿರುವ ಬಾಂಬ್‍ನಂತೆ ಕಾದು ಕುಳಿತಿದೆ. ಜಲ ಬಿಕ್ಕಟ್ಟಿನ ಬಗ್ಗೆ ನಾವು ಮಾತನಾಡಲು ಶುರು ಮಾಡಿ ಬಹಳಷ್ಟು ವರ್ಷಗಳೇ ಕಳೆದಿವೆ. ಆದರೆ ಸಮಸ್ಯೆ, ಸವಾಲುಗಳು ಹೆಚ್ಚಾಗುತ್ತಲೇ ಇವೆ. ಕುಡಿಯುವ ನೀರಿನ ತೀವ್ರ ಬರ ಎದುರಿಸುತ್ತಿರುವ ಜಗತ್ತಿನ 11  ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂಬಂಥ ಇತ್ತೀಚಿನ ವರದಿಯೂ ನಮ್ಮ ಆತಂಕವನ್ನು ಹೆಚ್ಚಿಸಿದೆ. ಈಗಾಗಲೇ
ತೀವ್ರ ರೀತಿಯ ಜಲಕ್ಷಾಮ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಕೇಪ್ ಟೌನ್‍ನ ಸ್ಥಿತಿ ಬೆಂಗಳೂರಿಗೂ ಬರಲಿದೆ ಎಂಬಂಥ ವರದಿಗಳನ್ನು ನಾವು ಕಡೆಗಣಿಸುವಂತಿಲ್ಲ. ಸಮುದಾಯ ಸಂಪನ್ಮೂಲಗಳಾಗಬೇಕಿದ್ದ ಜಲಮೂಲಗಳು, ಕೆರೆಗಳು ತೀವ್ರಗತಿಯ ನಗರೀಕರಣದ ಭರಾಟೆಯಲ್ಲಿ ರಾಷ್ಟ್ರದ ವಿವಿಧೆಡೆ ಬತ್ತಿಹೋಗುತ್ತಿರುವ ಸ್ಥಿತಿ ನಮ್ಮ ಕಣ್ಣೆದುರಿಗಿದೆ.

1960ರ ದಶಕದಲ್ಲಿ ಬೆಂಗಳೂರಿನಲ್ಲಿ ಸುಮಾರು 280 ಕೆರೆಗಳಿದ್ದವು. ಈಗ 80ಕ್ಕೂ ಕಡಿಮೆ ಕೆರೆಗಳಿವೆ.  ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಈಗ ಉಳಿದಿರುವ ಪ್ರಮುಖ ಕೆರೆಗಳ ನೀರಿನ ಸ್ಥಿತಿಯೂ ಭಯಾನಕವಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರದ ವರದಿಯೇ ಹೇಳುತ್ತದೆ. ನಗರದ ಕೆರೆಗಳಲ್ಲಿನ ಶೇ 85ರಷ್ಟು ನೀರನ್ನು ಕೇವಲ ಕೃಷಿ ಮತ್ತು ಕೈಗಾರಿಕೆಗಳಿಗಷ್ಟೇ ಉಪಯೋಗಿಸಬಹುದಾಗಿದೆ. ಕುಡಿಯಲು ಅಥವಾ ಸ್ನಾನ ಮಾಡಲು ಈ ನೀರು ಯೋಗ್ಯವಾಗಿಲ್ಲ ಎಂಬುದು ಕಲುಷಿತಗೊಳ್ಳುತ್ತಿರುವ ಪರಿಸರಕ್ಕೆ ವ್ಯಾಖ್ಯೆಯಾಗಿದೆ. ಕೆರೆಗಳ ನಗರ ಎಂದು ಕರೆಸಿಕೊಳ್ಳುತ್ತಿದ್ದ ಸಿಲಿಕಾನ್‌ ಸಿಟಿಯ ಜಲಮೂಲಗಳೆಲ್ಲಾ ಕಲುಷಿತಗೊಂಡಿರುವುದು ನಮ್ಮ ಆಡಳಿತಗಾರರ ತೀವ್ರ ಗಮನವನ್ನು ಸೆಳೆದುಕೊಳ್ಳಬೇಕಿದೆ. ಹಾಗೆಯೇ, ಗ್ರಾಮೀಣ ಪ್ರದೇಶಗಳಲ್ಲೂ ಶುದ್ಧ ನೀರಿಗಾಗಿ ಪರಿತಪಿಸುವ ಸ್ಥಿತಿ ಕಡಿಮೆ ಆಗಿಲ್ಲ. ಇಂತಹ ಸಂದರ್ಭದಲ್ಲಿ ಈ ಬಾರಿಯ ಜಲದಿನದ ಘೋಷವಾಕ್ಯ ‘ನೀರಿಗಾಗಿ ನಿಸರ್ಗ’. ನೀರಿನ ಸಮಸ್ಯೆಗಳಿಗೆ ನಿಸರ್ಗದಲ್ಲೇ ಉತ್ತರ ಕಂಡುಕೊಳ್ಳಬೇಕಾದ ಮಹತ್ವವನ್ನು ಈ ಮಾತು ಧ್ವನಿಸುತ್ತದೆ.

‘ಜಲಶಕ್ತಿಯ ಮಹತ್ವವನ್ನು ಜನರು ಅರಿತರೆ ನಮ್ಮ ನಗರಗಳು, ಗ್ರಾಮಗಳು ಹಾಗೂ ರೈತರಿಗೆ ಅಪಾರ ಲಾಭವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದಕ್ಕಾಗಿ ಹನಿ ಹನಿ ನೀರನ್ನೂ ಉಳಿಸುವುದು ಮುಖ್ಯ. ನೀರಿನ ಮಿತಬಳಕೆ ಬಗ್ಗೆ ಜನಸಾಮಾನ್ಯರಲ್ಲಿ ಎಷ್ಟು ಜಾಗೃತಿ
ಮೂಡಿದರೂ ಸಾಲದು. ಹಾಗೆಯೇ ನಗರಗಳಲ್ಲಿ ಸುರಿದ ಮಳೆ, ಕಾಂಕ್ರಿಟೀಕರಣಗೊಂಡ ರಸ್ತೆಗಳಿಂದಾಗಿ ಭೂಮಿಯಲ್ಲಿ ನೀರು ಇಂಗದೆ ಪ್ರತಿವರ್ಷ ಅನೇಕ ಟಿಎಂಸಿ ಅಡಿಗಳಷ್ಟು ಪರಿಶುದ್ಧ ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದೆ ಎಂಬುದು ಸಣ್ಣ ವಿಷಯವಲ್ಲ. ಈ ಪೋಲನ್ನು ತಪ್ಪಿಸಲು ಆಡಳಿತಗಾರರು ಕ್ರಮಗಳನ್ನು ಕೈಗೊಳ್ಳಬೇಕು.

ADVERTISEMENT

ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆಗಳನ್ನು ರೂಪಿಸಬೇಕು. ಮಳೆನೀರು ಸಂಗ್ರಹಿಸುವ ಯೋಜನೆಗಳಿಗೆ ಬಲ ತುಂಬಬೇಕು. ಹಾಗೆಯೇ ನೀರು ಪೂರೈಕೆ ವೇಳೆ ಸೋರಿಕೆಯನ್ನು ತಡೆಯಬೇಕು. ಕೊಳಚೆ ನೀರು ಸಂಸ್ಕರಿಸಿ ಮರುಬಳಕೆ ಮಾಡುವ ಯೋಜನೆಗಳನ್ನು ತ್ವರಿತ ಗತಿಯಲ್ಲಿ ರೂಪಿಸಬೇಕಿದೆ. ನಮಗೆ ಲಭ್ಯವಿರುವ ನೀರಿನ ಸದ್ಬಳಕೆಯತ್ತ ಹೆಚ್ಚು ಗಮನ ಹರಿಸಿದರೂ ನಿಸರ್ಗದಲ್ಲೇ ನಮ್ಮ ನೀರಿನ ಎಷ್ಟೋ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದು ಸಾಧ್ಯ. ಇದಕ್ಕೆ ಬೇಕಾಗಿರುವುದು ಜನಜಾಗೃತಿ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿ. ಈ ಭೂಮಿಯ ಮೇಲಿರುವ ನೀರಿನಲ್ಲಿ ಶೇ 2ರಿಂದ 2.5ರಷ್ಟು ಮಾತ್ರ  ಶುದ್ಧ ಜಲ. ಉಳಿದದ್ದು ರಾಸಾಯನಿಕ, ಕೈಗಾರಿಕಾ ತ್ಯಾಜ್ಯ, ಚರಂಡಿ ಹಾಗೂ ರಸಗೊಬ್ಬರಗಳಿಂದ ಮಾಲಿನ್ಯಗೊಂಡ ನೀರು. ಈ ಶುದ್ಧ ನೀರು ಮಾನವ ಬಳಕೆಗೆ ಮಾತ್ರವಲ್ಲ, ಎಲ್ಲಾ ಜೀವಿಗಳೊಂದಿಗೂ ಇದು ಹಂಚಿಕೆಯಾಗಬೇಕು. ಹೀಗಾಗಿ ಲಭ್ಯವಿರುವ ಈ ಶುದ್ಧ ನೀರನ್ನು ಉಳಿಸುವ ಹೊಣೆ ನಮ್ಮೆಲ್ಲರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.