ADVERTISEMENT

ಜಾತ್ಯತೀತ ತತ್ವಗಳಿಗೆ ಪುಷ್ಟಿ ಸಕಾಲಿಕ ತೀರ್ಪು

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಜಾತ್ಯತೀತ ತತ್ವಗಳಿಗೆ ಪುಷ್ಟಿ  ಸಕಾಲಿಕ ತೀರ್ಪು
ಜಾತ್ಯತೀತ ತತ್ವಗಳಿಗೆ ಪುಷ್ಟಿ ಸಕಾಲಿಕ ತೀರ್ಪು   
ಜಾತಿ, ಧರ್ಮ ಅಥವಾ ಸಮುದಾಯದ ಹೆಸರಲ್ಲಿ ಮತ ಯಾಚನೆ ಮಾಡುವುದು ಚುನಾವಣಾ ಭ್ರಷ್ಟಾಚಾರವಾಗುತ್ತದೆ. ಹೀಗಾಗಿ ಅಂತಹ ಚುನಾವಣೆಯನ್ನೇ ಅನೂರ್ಜಿತಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಮಹತ್ವದ್ದು. ರಾಷ್ಟ್ರದಲ್ಲಿ ಸದ್ಯದಲ್ಲೇ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಹೊರಬಿದ್ದಿರುವ ಈ ತೀರ್ಪು ಬೀರಬಹುದಾದ ಪರಿಣಾಮ ಮುಖ್ಯವಾದುದು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಳಗೊಂಡಂತೆ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಬಹುಮತದ ತೀರ್ಪಿನ ಮೂಲಕ ಪ್ರಜಾಪ್ರತಿನಿಧಿ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.
 
 ಇದುವರೆಗೆ ಅಭ್ಯರ್ಥಿಯ  ಧರ್ಮ  ಅಥವಾ ಅಂತಹ ಇತರ ಅಂಶಗಳ ಆಧಾರದಲ್ಲಿ ಮತ ಕೇಳುವುದು ಚುನಾವಣಾ ಭ್ರಷ್ಟಾಚಾರ ಆಗುತ್ತಿತ್ತು.  ಈಗ ಅಭ್ಯರ್ಥಿಯ ಏಜೆಂಟ್ ಹಾಗೂ ಎದುರಾಳಿಯ ಧರ್ಮದ ಆಧಾರದಲ್ಲಿ ಮತ ಕೇಳುವುದೂ ಪ್ರಜಾಪ್ರತಿನಿಧಿ ಕಾಯ್ದೆ  ಅಡಿ ಚುನಾವಣಾ ಭ್ರಷ್ಟಾಚಾರ ಎಂದು ಪರಿಗಣಿತವಾಗಲಿದೆ.  ಕಾಯ್ದೆಯ ಸೆಕ್ಷನ್ 123 (3)ರಲ್ಲಿ ಹೇಳಿರುವ ಅಂಶವನ್ನು  ಈ ನಿಟ್ಟಿನಲ್ಲಿ ಸಂವಿಧಾನಪೀಠ ವ್ಯಾಖ್ಯಾನಿಸಿದೆ. 
 
ಭಾರತದ ರಾಜಕಾರಣದಲ್ಲಿ ಧರ್ಮ ಹಾಗೂ ಜಾತಿ ಬೆಸೆದುಕೊಂಡಿವೆ. ಹಾಗೆಯೇ ಭಾಷೆ, ಪಂಥದಂತಹ ಭಾವನಾತ್ಮಕ ಅಂಶಗಳು ಅನೇಕ ರಾಜಕೀಯ ಪಕ್ಷಗಳ ಹೆಸರುಗಳಲ್ಲೇ ಧ್ವನಿಸುತ್ತವೆ. ಧರ್ಮ ಅಥವಾ ಜಾತಿಗೆ ಸಂಬಂಧಿಸಿದ  ಪ್ರತ್ಯಕ್ಷ ಅಥವಾ ಪರೋಕ್ಷ ಭರವಸೆಗಳನ್ನು ನೀಡುವ ಮೂಲಕ ಹಲವು ರಾಜಕೀಯ ಪಕ್ಷಗಳು ಅಧಿಕಾರ ಗದ್ದುಗೆಗೂ ಏರಿವೆ. ಆದರೆ, ‘ಚುನಾವಣೆ  ಎನ್ನುವುದು ಜಾತ್ಯತೀತ ಕಸರತ್ತು. ಅದು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಬಿಂಬಿತವಾಗಬೇಕು’ ಎಂದು ಕೋರ್ಟ್ ಹೇಳಿದೆ. ಜೊತೆಗೆ ‘ಮಾನವ ಮತ್ತು ದೇವರ ಸಂಬಂಧ ವ್ಯಕ್ತಿಗತ ಆಯ್ಕೆ. ಇದನ್ನು ಪ್ರಭುತ್ವ ನೆನಪಿಡಬೇಕು’ ಎಂದು ಕೋರ್ಟ್ ಹೇಳಿರುವುದು ಸರಿಯಾದುದು. ಏಕೆಂದರೆ ಸಂವಿಧಾನದ ಪ್ರಕಾರ ನಮ್ಮದು ಜಾತ್ಯತೀತ ರಾಷ್ಟ್ರ. ಈಗ ಈ ತೀರ್ಪಿನಿಂದಾಗಿ  ಕಾನೂನಿನ ಮರು ಕರಡು ರಚನೆಯಾದಂತಾಗಿದೆ ಎನ್ನುತ್ತಾ ಭಿನ್ನಾಭಿಪ್ರಾಯ ದಾಖಲಿಸಿರುವ ಮೂವರು ನ್ಯಾಯಮೂರ್ತಿಗಳು ‘ಮತದಾರರಿಗೆ ಸಂಬಂಧಿಸಿದ  ವಿಚಾರದಲ್ಲಿ ಸಂವಾದ ಅಥವಾ ಚರ್ಚೆಯನ್ನು ಕಾನೂನು ನಿಷೇಧಿಸಲಾಗದು’ ಎಂದಿದ್ದಾರೆ. ಬಹುಶಃ ಈ ಬಗೆಗಿನ ಭಿನ್ನ ಅಭಿಪ್ರಾಯಗಳು ಈ ವಿಚಾರದಲ್ಲಿ ಇದ್ದೇ ಇರುತ್ತವೆ. ಆದರೆ ಬಹುಮತದ ಅಭಿಪ್ರಾಯವೇ ಮುಖ್ಯವಾದುದರಿಂದ ಯಾರು ಒಪ್ಪಲಿ ಬಿಡಲಿ ಈಗ ಕಾನೂನಂತೂ ಸ್ಪಷ್ಟವಾಗಿದೆ. 
 
ಹಿಂದುತ್ವ ಅಥವಾ ಹಿಂದೂವಾದದ  ಹೆಸರಲ್ಲಿ  ಮತ ಕೇಳುವುದರಿಂದ ಅಭ್ಯರ್ಥಿಯ  ಕುರಿತಂತೆ ಪೂರ್ವಗ್ರಹ ಸೃಷ್ಟಿಯಾಗುವುದಿಲ್ಲ ಎಂದು 1995ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.  ಸಾಂವಿಧಾನಿಕ ಬದ್ಧತೆಯಾದ ಜಾತ್ಯತೀತ ತತ್ವ ಉಲ್ಲಂಘಿಸಿದ್ದಕ್ಕಾಗಿ ಶಿವಸೇನೆ ನಾಯಕ ಮನೋಹರ ಜೋಷಿ ಅವರ ಆಯ್ಕೆಯನ್ನು ಬಾಂಬೆ ಹೈಕೋರ್ಟ್ ಆಗ ರದ್ದು ಮಾಡಿತ್ತು. ಆದರೆ ‘ಮಹಾರಾಷ್ಟ್ರದಲ್ಲಿ ಮೊದಲ ಹಿಂದೂ ರಾಷ್ಟ್ರ ಸ್ಥಾಪಿಸಲಾಗುವುದು’ ಎಂಬ ಜೋಷಿಯವರ ಹೇಳಿಕೆ, ‘ಧರ್ಮದ ಆಧಾರದ ಮೇಲೆ ಅರ್ಜಿ ಸಲ್ಲಿಕೆಗೆ ಯೋಗ್ಯವಾಗುವುದಿಲ್ಲ’  ಎಂದು  ಹೇಳಿ  ಜೋಷಿಯವರ ಆಯ್ಕೆಯನ್ನು ನ್ಯಾಯಮೂರ್ತಿ ಜೆ. ಎಸ್. ವರ್ಮಾ ನೇತೃತ್ವದ  ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ ಎತ್ತಿ ಹಿಡಿದಿತ್ತು. ಅಲ್ಲದೆ ಹಿಂದುತ್ವ ಹಾಗೂ ಹಿಂದೂ ಧರ್ಮವನ್ನು ಜೀವನ ವಿಧಾನ ಎಂದೂ ಸುಪ್ರೀಂ ಕೋರ್ಟ್  ವ್ಯಾಖ್ಯಾನಿಸಿತ್ತು.  ಆದರೆ ಈಗ ಪ್ರಜಾ ಪ್ರತಿನಿಧಿ ಕಾಯ್ದೆಗೆ ಸಂಬಂಧಿಸಿದ ಈ ಪ್ರಕರಣದಲ್ಲಿ  ಹಿಂದುತ್ವ  ವಿಚಾರ ಪ್ರಸ್ತಾಪವಾಗಿಲ್ಲದಿರುವುದರಿಂದ  ಹಿಂದುತ್ವ ವಿಚಾರ  ಮರು ಪರಿಶೀಲನೆಗೆ  ಕೋರ್ಟ್ ನಿರಾಕರಿಸಿದೆ.
 
ಏಳು ದಶಕಗಳಿಂದ ಭಾರತದ ಪ್ರಜಾತಂತ್ರ ಪ್ರಕ್ರಿಯೆ ಹಲವು ಮಿತಿಗಳ ನಡುವೆಯೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಬಹುಸಂಸ್ಕೃತಿಯ ನಾಡಿನಲ್ಲಿ  ಧಾರ್ಮಿಕ ಭಾವನೆಗಳು, ಸಂಕೇತಗಳು ಹಾಗೂ ರೂಪಕಗಳನ್ನು ಎಗ್ಗಿಲ್ಲದೆಯೇ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದನ್ನೂ ನೋಡುತ್ತಲೇ ಇದ್ದೇವೆ. ಧಾರ್ಮಿಕ ಭಾವನೆಗಳಿಗೆ  ಪುಷ್ಟಿ ನೀಡುವಂತೆ  ಮನವಿ ಮಾಡುವುದು ಸಾಮಾಜಿಕ ಬಂಧ ಹಾಗೂ ಪ್ರಜಾಪ್ರಭುತ್ವದ  ಸಂರಚನೆಗೆ ಧಕ್ಕೆ ಉಂಟುಮಾಡುವಂತಹದ್ದು. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪು, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದಕ್ಕೆ ರಾಜಕೀಯ ಪಕ್ಷಗಳು ಇಳಿಯುವುದನ್ನು ತಡೆಯುವಂತಹದ್ದಾಗಿದೆ. ಚುನಾವಣಾ ರಾಜಕೀಯದ ಕಾರ್ಯತಂತ್ರಗಳು ಇದರಿಂದ ಬದಲಾಗುವುವೇ ಎಂಬುದನ್ನು ಕಾದು ನೋಡಬೇಕು. ಜೊತೆಗೆ ಸಾಮಾಜಿಕ ಬದಲಾವಣೆಗಾಗಿ ನಿರ್ದಿಷ್ಟ ಸಮುದಾಯದ ಜನರನ್ನು ಒಟ್ಟುಗೂಡಿಸುವ ಅಸ್ಮಿತೆ ರಾಜಕಾರಣಕ್ಕೂ ಇದರಿಂದ ಹೊಡೆತ ಬೀಳುವುದೇ ಎಂಬುದೂ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.