ADVERTISEMENT

ನಕಲಿ ಕಾರ್ಡ್ ಹಾವಳಿ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2014, 19:30 IST
Last Updated 7 ಜುಲೈ 2014, 19:30 IST

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ನೀಡ­ಲಾ­ಗುವ  ಪಡಿತರ ಕಾರ್ಡ್‌ಗಳು ಅರ್ಹರಿಗಷ್ಟೇ ತಲುಪುತ್ತಿಲ್ಲ ಎಂಬ ದೂರು ಹಳೆಯದು. ಬಡತನ ನಿವಾರಣೆಗೆ ರೂಪುಗೊಳ್ಳುವ ಯೋಜನೆ­ಗ­ಳನ್ನೂ  ದುರುಪಯೋಗ ಮಾಡಿಕೊಂಡು   ಅವುಗಳ ಲಾಭ­ವನ್ನು ಅನ­ರ್ಹರು ಪಡೆ­ಯುವುದು ನಡೆದುಕೊಂಡೇ ಬಂದಿದೆ. ಇದನ್ನು ತಪ್ಪಿ­ಸಲು ಕ್ರಮ ಕೈಗೊ­ಳ್ಳು­ತ್ತಿರುವುದೂ ಇದೇ ಮೊದಲಲ್ಲ. ದೇಶದ ಎಲ್ಲ ರಾಜ್ಯ­ಗಳೂ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿವೆ.   ಹೀಗಿದ್ದೂ ಅಕ್ರಮ ಕಾರ್ಡ್‌ಗಳ ಹಾವಳಿ ನಿಂತಿಲ್ಲ ಎಂಬುದು ಸಮಸ್ಯೆಯ ತೀವ್ರತೆಗೆ ಸಾಕ್ಷಿ. ಈಗ ಅಕ್ರಮಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸುವುದಾಗಿ ರಾಜ್ಯ ಸರ್ಕಾರ ಘೋಷಿ­ಸಿದೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು  ಮುಂದಾಗಿರುವ ಸರ್ಕಾರ,  ಅಕ್ರಮ ಬಿಪಿಎಲ್‌ ಕಾರ್ಡ್ ಹೊಂದಿರುವವರ ವಿರುದ್ಧ ಕ್ರಿಮಿನಲ್ ಮೊಕ­ದ್ದಮೆ ದಾಖಲಿಸುವುದಾಗಿ ಹೇಳಿದೆ.  ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆದು­ಕೊಂಡ­­ವರಿಂದ ಸಬ್ಸಿಡಿ ಮೊತ್ತ ವಸೂಲು ಮಾಡಲಾಗು­ವುದು  ಎಂದೂ ಹೇಳಿದೆ.  ಅಕ್ರಮವೆಸಗಿದವರು ಸ್ವಯಂಪ್ರೇರಣೆಯಿಂದ ತಪ್ಪೊಪ್ಪಿಕೊಂಡಲ್ಲಿ ಕ್ರಿಮಿ­ನಲ್ ಮೊಕದ್ದಮೆ ಹೂಡುವುದಿಲ್ಲ  ಎಂಬಂಥ ರಿಯಾ­ಯಿತಿ ಘೋಷಿಸಿ­ರು­ವುದು ಸರಿಯಾದುದೆ.  15 ಲಕ್ಷಕ್ಕೂ ಅಧಿಕ ಅಕ್ರಮ ಕಾರ್ಡ್‌ಗಳು ರಾಜ್ಯ­ದಲ್ಲಿವೆ ಎಂಬುದು ಈ ಅಕ್ರಮ ಜಾಲ ಎಷ್ಟೊಂದು ದೊಡ್ಡ­ದಾಗಿದೆ ಎಂಬು­ದಕ್ಕೆ ಸಾಕ್ಷಿ.  ಇಂತಹ ನಕಲಿ ಕಾರ್ಡ್‌ಗಳಿಂದ ₨ 1300 ಕೋಟಿಯಷ್ಟು ಸಬ್ಸಿಡಿ ಪೋಲಾ­ಗಿರುವುದು ಆತಂಕದ ಸಂಗತಿ.

ಕಡು­ಬಡವರನ್ನು ತಲುಪ­ಬೇಕಾದ ಯೋಜನೆ­ಗಳ ಉದ್ದೇಶವೇ ಇದರಿಂದ ವಿಫಲ­ವಾಗುತ್ತದೆ.  ಅಕ್ರಮ ಪಡಿತರ ಕಾರ್ಡ್‌­ಗಳನ್ನು  ಪತ್ತೆ ಮಾಡಲು  ಬಿಪಿಎಲ್  ಕಾರ್ಡ್‌ನಲ್ಲಿ ಇಡೀ ಕುಟುಂಬ ಸದ­ಸ್ಯರ ಫೋಟೊ ಹಾಕುವ ಪದ್ಧತಿ ಈ ಹಿಂದೆ ಆರಂಭವಾಯಿತು. ಆ  ನಂತರ ಇನ್ನೂ ಹೆಚ್ಚು ಪರಿಣಾಮಕಾರಿ ಎಂಬಂಥ ಬಯೊ­ಮೆಟ್ರಿಕ್ ಪದ್ಧತಿ ಶುರು­ವಾಯಿತು.  ಆದರೆ   ಬಯೊಮೆಟ್ರಿಕ್ ವ್ಯವ­ಸ್ಥೆಯೂ ಫಲ ಕೊಟ್ಟಿಲ್ಲ­ದಿರುವುದು ಅಚ್ಚರಿಯ ಸಂಗತಿ. ಕೆಲವರ ಬೆರಳಿನ ಮುದ್ರೆಗಳು ನಾಲ್ಕಕ್ಕಿಂತ ಅಧಿಕ ಕಾರ್ಡ್‌­ಗಳಲ್ಲಿ ಕಂಡು ಬಂದಿರುವುದು ಯೋಜನೆ ಅನುಷ್ಠಾನದಲ್ಲಿನ ವೈಫಲ್ಯವನ್ನು ಎತ್ತಿ ಹೇಳುತ್ತದೆ.

ಬಿಪಿಎಲ್ ಕುಟುಂಬಗಳನ್ನು ಗುರುತಿಸುವ ಕೆಲಸ ಪಾರದರ್ಶಕವಾಗ ದಿದ್ದಲ್ಲಿ ದುರುಪಯೋಗವನ್ನು  ತಡೆಯುವುದು ಕಷ್ಟ. ಕಡು ಬಡವರನ್ನು ಗುರು­ತಿಸುವ ಜವಾ­ಬ್ದಾರಿ ಗ್ರಾಮಸಭೆಗಳಿಗೆ ನೀಡಬೇಕೆಂದು ಈ ಹಿಂದೆ ಸಲಹೆ ಮಾಡ­ಲಾಗಿತ್ತು. ಅದನ್ನು  ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹೆಚ್ಚು­ವರಿ ಕಾರ್ಡ್‌­ಗಳನ್ನು  ಪಡೆದುಕೊಂಡಿರುವವರಲ್ಲಿ ಶ್ರೀಮಂತರು, ರಾಜ­ಕೀಯ ಕೃಪಾ­ಶ್ರಯ ಪಡೆದವರು ಸೇರಿರುವುದು ಗುಟ್ಟಾಗಿ ಉಳಿದಿಲ್ಲ. ಪಡಿ­ತರ ಕಾರ್ಡ್‌ಗಳ ವಿತರಣೆ ವ್ಯವಸ್ಥೆಯಲ್ಲಿಯೇ  ಸಮಸ್ಯೆ ಇದೆ.

ಇದಕ್ಕಾಗಿ ಅಕ್ರಮ ಎಸಗಿದ ಆಹಾರ ನಿರೀಕ್ಷಕರು, ನ್ಯಾಯಬೆಲೆ ಅಂಗಡಿಗಳ ಮಾಲೀಕರನ್ನು ಕಾನೂನಿನ ಕಟಕಟೆಗೆ ಎಳೆಯಲು ಸರ್ಕಾರ ಮುಂದಾಗಿರುವುದು ಸರಿ. ಆದರೆ ಶಾಸಕರು, ಅವರ ಸಮೀಪವರ್ತಿಗಳು,  ಸ್ಥಳೀಯ ರಾಜಕಾರಣಿಗಳು ಅಥವಾ ಪುಢಾರಿಗಳ ಒತ್ತಡದಿಂದಲೂ  ಯಾರು  ಯಾರಿಗೋ ಕಾರ್ಡ್‌­ಗಳು ವಿತರಣೆ ಯಾಗುತ್ತವೆ ಎಂಬುದನ್ನೂ ಮರೆಯಬಾರದು. ಕಾರ್ಡ್‌­ಗಳ ಹಂಚಿಕೆ­ಯಲ್ಲಿ ಸ್ಥಳೀಯ ಪುಢಾರಿಗಳನ್ನು ದೂರವಿಟ್ಟಲ್ಲಿ  ಬಹ­ಳಷ್ಟು ಸಮಸ್ಯೆ ಪರಿಹಾರ­ವಾಗುತ್ತದೆ. ಈ ನಿಟ್ಟಿನಲ್ಲಿಯೂ  ಸರ್ಕಾರ ದಿಟ್ಟತನ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.