ADVERTISEMENT

ಬಿಸಿಯೂಟಕ್ಕೂ ಆಧಾರ್‌ ಗೊಂದಲ ಸೃಷ್ಟಿ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:30 IST
Last Updated 14 ಮಾರ್ಚ್ 2017, 19:30 IST
ಬಿಸಿಯೂಟಕ್ಕೂ ಆಧಾರ್‌ ಗೊಂದಲ ಸೃಷ್ಟಿ ಸರಿಯಲ್ಲ
ಬಿಸಿಯೂಟಕ್ಕೂ ಆಧಾರ್‌ ಗೊಂದಲ ಸೃಷ್ಟಿ ಸರಿಯಲ್ಲ   

ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಬಳಿಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಗಮನಾರ್ಹವಾಗಿ ಹೆಚ್ಚಿದೆ. ಅರ್ಧದಲ್ಲಿಯೇ ಶಾಲೆ ಬಿಡುವವರ ಸಂಖ್ಯೆ ಕಡಿಮೆಯಾಗಿದೆ. ದೇಶದ ಸುಮಾರು 11.5 ಲಕ್ಷ ಶಾಲೆಗಳ 10 ಕೋಟಿ ಮಕ್ಕಳು ಬಿಸಿಯೂಟದ  ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿಯೊಂದು ಮಗುವಿಗೂ 14 ವರ್ಷದ ವರೆಗೆ ಉಚಿತ ಶಿಕ್ಷಣ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಗುರಿ ಸಾಧನೆಯಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ, ಈಗ ಕೇಂದ್ರ ಸರ್ಕಾರ  ಏಕಾಏಕಿ ಶಾಲಾ ಮಕ್ಕಳ ಬಿಸಿಯೂಟ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್‌) ಅಡಿಯಲ್ಲಿ ಪೌಷ್ಟಿಕ ಆಹಾರ ಪೂರೈಕೆ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಪ್ರತಿಭಾ ವೇತನ ವಿತರಣೆಗೆ ‘ಆಧಾರ್‌’  ಕಡ್ಡಾಯ ಮಾಡಿದೆ.

ಬಿಸಿಯೂಟ ಬೇಕಾದ ಶಾಲಾ ಮಕ್ಕಳು ಮತ್ತು ಬಿಸಿಯೂಟ ತಯಾರಿಸುವ 25 ಲಕ್ಷ ಮಹಿಳೆಯರು ಜೂನ್‌ 30ರ ಒಳಗೆ ಆಧಾರ್‌ಗೆ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳಿಗೆ ಊಟ ಇಲ್ಲ, ಅಡುಗೆ ತಯಾರಿಸುವವರಿಗೆ ಕೆಲಸ ಇಲ್ಲ. ಈ ನಿಯಮ ಅನ್ವಯವಾಗುವುದು ಸರ್ಕಾರಿ ಶಾಲೆಗಳ  ಮಕ್ಕಳಿಗೆ. ಅಲ್ಲಿಗೆ ಬರುವವರಲ್ಲಿ ಹೆಚ್ಚಿನವರು ಬಡ, ಮಧ್ಯಮ ವರ್ಗದ ಕುಟುಂಬದವರು. ಅಂದರೆ ಆಧಾರ್‌ ಇಲ್ಲದಿದ್ದರೆ ನೇರವಾಗಿ ಏಟು ಬೀಳುವುದು ಈ ಕುಟುಂಬಗಳಿಗೆ.  ನೋಂದಾಯಿಸಿಕೊಳ್ಳಲು ಅವರಿಗೆ ಇರುವ ಕಾಲಾವಕಾಶ ಕೂಡ ಕಡಿಮೆ. ಆಧಾರ್‌ ಸಂಖ್ಯೆ ಇಲ್ಲದಿದ್ದರೂ ಪರ್ಯಾಯ ಗುರುತಿನ ಚೀಟಿ ಹೊಂದಿದ್ದರೆ ಬಿಸಿಯೂಟ ಪಡೆಯಲು ತೊಂದರೆ ಇಲ್ಲ ಎಂದು ಸರ್ಕಾರ ಈಗೇನೊ ಸ್ಪಷ್ಟನೆ ಕೊಟ್ಟಿದೆ. ಆದರೆ ಈ ರೀತಿಯ ಗೊಂದಲ ಅಗತ್ಯ ಇರಲಿಲ್ಲ. ಬಿಸಿಯೂಟದ ಗುಣಮಟ್ಟ ಹೆಚ್ಚಿಸುವುದು, ಅಕ್ರಮಗಳನ್ನು ತಡೆಗಟ್ಟುವುದು, ಕಲಬೆರಕೆ ತಪ್ಪಿಸುವುದು, ಶುಚಿತ್ವ ಕಾಪಾಡುವುದು ಸರ್ಕಾರದ ಉದ್ದೇಶವಾಗಿದ್ದರೆ ಅದನ್ನು ಜಾರಿಗೆ ತರುವುದಕ್ಕೆ ಬೇರೆ ವಿಧಾನಗಳಿವೆ. ಆಧಾರ್‌ ಕಡ್ಡಾಯದಿಂದ ಅಡುಗೆಯ ಗುಣಮಟ್ಟ ಹೇಗೆ ಹೆಚ್ಚುತ್ತದೆ? ಇದಕ್ಕೆ ಸರ್ಕಾರದ ಬಳಿ ಏನಾದರೂ ಉತ್ತರ ಇದೆಯೇ? ಆಧಾರ್‌ ಸಂಖ್ಯೆ ಇಲ್ಲದ ಮಗುವೊಂದು ಶಾಲೆಗೆ ಬಂದು ಊಟ ಮಾಡಿದರೆ ಏನು ತೊಂದರೆ? ಅದೇ ರೀತಿ, ಹಸಿದ ಹೊಟ್ಟೆಯಲ್ಲಿ ಊಟದ ತಟ್ಟೆ ಹಿಡಿದು ನಿಂತ ವಿದ್ಯಾರ್ಥಿಗೆ ‘ಆಧಾರ್‌ ಕಾರ್ಡ್‌ ಇಲ್ಲ’ ಎಂಬ ಕಾರಣಕ್ಕಾಗಿ ಬಿಸಿಯೂಟ ನಿರಾಕರಿಸುವುದು ಅಮಾನವೀಯ. ಬೇರೆ ಮಕ್ಕಳು ಉಣ್ಣುವಾಗ, ಈ ಸೌಲಭ್ಯದಿಂದ ವಂಚಿತವಾದ ಮಗುವಿನ ಮನಸ್ಸಿನ ಮೇಲೆ ಎಂತಹ ಪರಿಣಾಮ ಆಗಬಹುದು? ಇದನ್ನೇನಾದರೂ ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಂಡಿದೆಯೇ? ಎಲ್ಲರೂ ಆಧಾರ್‌ ಕಾರ್ಡ್ ಹೊಂದುವಂತೆ ಮಾಡುವುದು ಸರ್ಕಾರದ ಉದ್ದೇಶ ಆಗಿರಬಹುದು. ಆದರೆ ಅದನ್ನು ಅನುಷ್ಠಾನಕ್ಕೆ ತರುವ ರೀತಿ ಇದಲ್ಲ.

ಐಎಂಆರ್‌ಬಿ ಸಾಮಾಜಿಕ ಮತ್ತು ಗ್ರಾಮೀಣ ಅಧ್ಯಯನ ಸಂಸ್ಥೆ 2015ರಲ್ಲಿ ನಡೆಸಿದ ಮಾದರಿ ಸಮೀಕ್ಷೆಯ ಪ್ರಕಾರ, ಅಂಗವೈಕಲ್ಯ ಹೊಂದಿದ     ಶೇ 28ರಷ್ಟು ಮಕ್ಕಳು ಶಾಲೆಯ ಮೆಟ್ಟಿಲನ್ನೇ ಹತ್ತಿರಲಿಲ್ಲ.  ಹೀಗಿರುವಾಗ ಶಿಷ್ಯವೇತನ ಬೇಕಾದರೆ ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯ ಎಂಬ ಷರತ್ತು ಹಾಕಿದರೆ, ಈಗ ಶಾಲೆಗೆ ಬರುತ್ತಿರುವ ಅಂಗವಿಕಲ ಮಕ್ಕಳಿಗೂ ಸಮಸ್ಯೆಯಾಗುತ್ತದೆ. ಕಡ್ಡಾಯ ಮೂಲಭೂತ ಶಿಕ್ಷಣ, ನಿರ್ದಿಷ್ಟ ಹಂತದವರೆಗೆ ಉಚಿತ ಶಿಕ್ಷಣ, ಸರ್ವ ಶಿಕ್ಷಣ ಅಭಿಯಾನ, ಮಕ್ಕಳ ಶಿಕ್ಷಣದ ಹಕ್ಕುಗಳಿಗೆ ತೊಂದರೆಯಾಗುತ್ತದೆ. ಇದರಿಂದ ಸಾರ್ವತ್ರಿಕ ಶಿಕ್ಷಣದ ಮೂಲ ಉದ್ದೇಶಕ್ಕೇ ಭಂಗ ಬರಲಿದೆ.

ADVERTISEMENT

ಆಧಾರ್‌ ಕಾರ್ಡ್‌ಗಾಗಿ ಮಕ್ಕಳ ಬೆರಳಚ್ಚು, ಕಣ್ಣಿನ ಪಾಪೆಯ ಚಿತ್ರ ಸಂಗ್ರಹಿಸಲಾಗುತ್ತದೆ. ಆದರೆ ತಜ್ಞರ ಪ್ರಕಾರ ಮಗುವಿಗೆ 14–15 ವರ್ಷ ಆಗುವವರೆಗೂ ಬೆರಳಚ್ಚು ಸ್ಥಿರವಾಗಿ ಬೆಳೆದಿರುವುದಿಲ್ಲ. ಆಧಾರ್‌ಗೆ ಸಂಗ್ರಹಿಸಿದ ಜೈವಿಕ ಗುರುತುಗಳ ಸಂಗ್ರಹಣೆಯ ಸುರಕ್ಷತೆ ಬಗ್ಗೆ ಅನುಮಾನಗಳಿವೆ. ಸೋರಿಕೆಯ ಉದಾಹರಣೆಗಳಿವೆ. ‘ಆಧಾರ್‌ ಕಡ್ಡಾಯವಲ್ಲ; ಅದು ಐಚ್ಛಿಕ’ ಎಂದು ಸರ್ಕಾರವೇ ಸುಪ್ರೀಂ ಕೋರ್ಟ್ ಎದುರು ಹೇಳುತ್ತಲೇ ಬಂದಿದೆ. ಇದರ ನಡುವೆ ಆಧಾರ್‌ ಕಾಯ್ದೆಯೂ ಜಾರಿಯಲ್ಲಿದೆ. ಆದರೆ ಆಧಾರ್‌ನ ಸಂವಿಧಾನಬದ್ಧತೆ ಕುರಿತ ತಕರಾರು ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ತೀರ್ಪು ಕೊಟ್ಟಿಲ್ಲ. ಆದ್ದರಿಂದ ತೀರ್ಪಿಗೆ ಸರ್ಕಾರ ಕಾಯಬೇಕು.  ಆಧಾರ್‌ನಂತಹ ಪರಿಣಾಮಕಾರಿ ಅಸ್ತ್ರ ಜನಪರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕೇ ಹೊರತು ಅಡ್ಡಗಾಲಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.