ADVERTISEMENT

ಬೀಜ ಮಾರುಕಟ್ಟೆ ಬೀಗ ತೆರೆಯಲಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:30 IST
Last Updated 14 ಸೆಪ್ಟೆಂಬರ್ 2014, 19:30 IST

ದಾವಣಗೆರೆಯಲ್ಲಿ ಸುಮಾರು ₨1.4 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ‘ಬಿತ್ತನೆ ಬೀಜ ಮಾರುಕಟ್ಟೆ’ ಉದ್ಘಾಟನೆಯಾಗಿ ತಿಂಗಳೇ
ಕಳೆ­ದಿದೆ. ಆದರೆ ಅದಕ್ಕೆ ಬೀಗ ಜಡಿದಿರುವುದರಿಂದ ರೈತರಿಗೆ ಪ್ರಯೋಜನ­ವಾಗುತ್ತಿಲ್ಲ ಎನ್ನುವ ಸಂಗತಿ ಬಯಲಾಗಿದೆ. ಇದೊಂದೇ ಅಲ್ಲ. ಅಲ್ಲಿ ಸುಮಾರು ₨ 2 ಕೋಟಿ ವೆಚ್ಚದಲ್ಲಿ ತಲೆಯೆತ್ತಿದ್ದ ‘ಹೈಟೆಕ್ ಪುಷ್ಪ ಹರಾಜು ಕೇಂದ್ರ’ವೂ ನಾಲ್ಕು ವರ್ಷಗಳಿಂದ ಪಾಳು ಬಿದ್ದಿದೆ. ತೆರಿಗೆದಾರರ ಹಣದಿಂದ ಅಭಿವೃದ್ಧಿಪಡಿಸಿದ ಸೌಕರ್ಯಗಳ ಪ್ರಯೋಜನ ತಲುಪಬೇಕಾದವರಿಗೆ ತಲು­ಪುತ್ತಿಲ್ಲ ಎನ್ನುವುದಕ್ಕೆ ಈ ಉದಾಹರಣೆಗಳೇ ಸಾಕು.

ಉದ್ಘಾಟನೆ ಸಮಾ­ರಂಭ­ಕ್ಕಾಗಿಯೇ ತಂದು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದ ಬಿತ್ತನೆ ಬೀಜದ ಪೊಟ್ಟ­ಣ­ಗಳು ಈಗ ಕಣ್ಮರೆಯಾಗುತ್ತಿದ್ದು, ಕೊಠಡಿಗಳಿಗೆಲ್ಲ ಬೀಗ ಹಾಕಲಾ­ಗಿದೆ­­ಯಂತೆ. ಅಂದರೆ ಮಾರುಕಟ್ಟೆ ಉದ್ಘಾಟಿಸಿದ್ದು ಬರೀ ತೋರಿಕೆ­ಗೇನು? ಕಳಪೆ ಬೀಜದ ಹಾವಳಿ ಮಿತಿಮೀರಿದೆ. ಇದರಿಂದಾಗಿ  ರೈತರು ಪ್ರತಿವರ್ಷ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸು­ವುದಕ್ಕಾಗಿ ಸ್ಥಾಪನೆ­ಯಾಗಿರುವ ‘ಕರ್ನಾಟಕ ರಾಜ್ಯ ಬೀಜ ನಿಗಮ’ ಅಥವಾ ರಾಷ್ಟ್ರಮಟ್ಟದ ‘ರಾಷ್ಟ್ರೀಯ ಬಿತ್ತನೆ ಬೀಜ ನಿಗಮ’ದಿಂದ ಅಗತ್ಯದಷ್ಟು ಪ್ರಯೋಜನ­ವಾಗುತ್ತಿಲ್ಲ. ರೈತರು ಅನುಭವಿಸುತ್ತಿರುವ ಕಷ್ಟ ಕೋಟಲೆಗಳು ತೀರಿಲ್ಲ. ಏಕೆಂದರೆ ಬಿತ್ತನೆ ಬೀಜದ ಬಹುಪಾಲು ವಹಿವಾಟು ಈಗಲೂ ಖಾಸಗಿ ವ್ಯಕ್ತಿಗಳು ಮತ್ತು ಕಂಪೆನಿಗಳ ಕೈಯಲ್ಲಿಯೇ ಇದೆ.

ಅಧಿಕ ಇಳುವರಿಯ ಮತ್ತು ಹೈಬ್ರಿಡ್ ತಳಿಗಳ ಬಳಕೆ ಹೆಚ್ಚುತ್ತ ನಡೆದಂತೆ ರೈತರೇ ಮುಂದಿನ ಹಂಗಾಮಿಗಾಗಿ ಬಿತ್ತನೆ ಬೀಜ ಸಂಗ್ರ­ಹಿ­ಸಿಕೊಳ್ಳುವ ಪ್ರವೃತ್ತಿ ಕಡಿಮೆಯಾಗುತ್ತ ಬಂದಿದೆ. ಈಗ ವ್ಯಾಪಕ ಬಳಕೆ­ಯ­ಲ್ಲಿ­ರುವ ಹೈಬ್ರಿಡ್ ತಳಿಗಳಲ್ಲಂತೂ ಪ್ರತಿ ಸಲವೂ ಪ್ರಮಾಣೀಕೃತ ಬೀಜಗಳನ್ನೇ ಬಿತ್ತ­ಬೇಕಾ­ಗುತ್ತದೆ. ಇವನ್ನು ಹೊರಗಿ­ನಿಂದಲೇ ಖರೀದಿಸಬೇಕು. ಆದರೆ ಅಲ್ಲಿ ಖಾತರಿ ಮತ್ತು ಗುಣಮಟ್ಟದ್ದೇ ದೊಡ್ಡ ಸಮಸ್ಯೆ. ಜತೆಗೆ ದುಬಾರಿ ಬೆಲೆ ಮೂಲ­ಕವೂ ರೈತರನ್ನು ಶೋಷಿಸ­ಲಾಗುತ್ತಿದೆ. ಸ್ವತಃ ಹೈಬ್ರಿಡ್ ಬೀಜಗಳನ್ನು ಬೆಳೆದು­ಕೊಳ್ಳಲು ಸಾಧ್ಯವಿಲ್ಲದ ರೈತರ ಅಸಹಾಯಕತೆಯನ್ನು ಖಾಸಗಿ­ಯವರು ಹೀಗೆ ದುರುಪಯೋಗ ಮಾಡಿ­ಕೊಳ್ಳುತ್ತಿದ್ದಾರೆ.

ಮಾರುಕಟ್ಟೆಯಲ್ಲಿ 60ಕ್ಕೂ ಹೆಚ್ಚು ಬೆಳೆಗಳ 600ಕ್ಕೂ ಹೆಚ್ಚು ತಳಿಗಳಿವೆ. ಈ ವೈವಿಧ್ಯ ರೈತರ ಪಾಲಿಗೆ ವರವಾಗುವ ಬದಲು ಖಾಸಗಿ ಬಿತ್ತನೆ ಬೀಜ ಮಾರಾಟಗಾರರ ಜೇಬು ತುಂಬಿಸುವ ಸಾಧನವಾಗುತ್ತಿದೆ. ಇದನ್ನೆಲ್ಲ ನಿಯಂತ್ರಿಸುವ ಒಂದು ಪ್ರಯ­ತ್ನ­ವನ್ನು ಸರ್ಕಾರಿ ಬಿತ್ತನೆ ಬೀಜ ಮಾರುಕಟ್ಟೆ ಮೂಲಕ ಮಾಡ­ಬಹು­ದಿತ್ತು. ಅಲ್ಲಿ ಒಂದೇ ಸೂರಿನಡಿ ಎಲ್ಲ ಬಗೆಯ ಬಿತ್ತನೆ ಬೀಜಗಳನ್ನು ಅಧಿಕೃತ ರೂಪದಲ್ಲಿಯೇ ಪೂರೈಸಲು ಅವಕಾಶವಿತ್ತು. ಆದರೆ ಆ ಮಾರುಕಟ್ಟೆಗೇ ಗ್ರಹಣ ಹಿಡಿದಿದೆ.

ಗುಣಮಟ್ಟದ ಮತ್ತು ಪ್ರಮಾಣೀಕೃತ ಬಿತ್ತನೆ ಬೀಜ ಸಿಕ್ಕಿದರೆ ರೈತರ ಅರ್ಧ ಕಷ್ಟ ನೀಗುತ್ತದೆ. ಸಕಾಲಕ್ಕೆ ಸರಿಯಾದ ಬೀಜ ಕೊಡಿಸಿ ಎನ್ನುವುದೇ ಅವರ ಪ್ರಧಾನ ಬೇಡಿಕೆ. ಏಕೆಂದರೆ ಉತ್ತಮವಾದ ಬಿತ್ತನೆ ಬೀಜ ಸುಸ್ಥಿರ ಬೇಸಾ­ಯದ ಬುನಾದಿ. ಅದೇ ಸರಿ ಇಲ್ಲದಿದ್ದರೆ ರೈತರ ಬದುಕು ಮೂರಾ­ಬಟ್ಟೆ­ಯಾಗುತ್ತದೆ. ಜಮೀನಿಗೆ ಹಾಕಿದ  ಶ್ರಮ ವ್ಯರ್ಥವಾಗುತ್ತದೆ. ಈ ಸಂಗತಿ ಗೊತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎನ್ನುವ ರೈತರ ಕೋಪಕ್ಕೂ ಅರ್ಥ ಇದೆ. ಈಗಲೂ ಕಾಲ ಮಿಂಚಿಲ್ಲ. ಹಿಂಗಾರಿ ಹಂಗಾಮಿಗೆ ಮುನ್ನವಾದರೂ ಈ ಎರಡೂ ಮಾರುಕಟ್ಟೆಗಳು ಕಾರ್ಯಾರಂಭ ಮಾಡಬೇಕು. ಖಾಸಗಿಯವರ ಸುಲಿಗೆಯಿಂದ ರೈತರನ್ನು ರಕ್ಷಿಸಬೇಕು. ಲೋಪಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.