ADVERTISEMENT

ಬೀದಿ ನಾಯಿಗಳ ಹಾವಳಿ ತಡೆಗಟ್ಟಿ ಸುಪ್ರೀಂ ಕೋರ್ಟ್‌ ಸಲಹೆ ಪಾಲಿಸಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಬೀದಿ ನಾಯಿಗಳ ಹಾವಳಿ ತಡೆಗಟ್ಟಿ ಸುಪ್ರೀಂ ಕೋರ್ಟ್‌ ಸಲಹೆ ಪಾಲಿಸಿ
ಬೀದಿ ನಾಯಿಗಳ ಹಾವಳಿ ತಡೆಗಟ್ಟಿ ಸುಪ್ರೀಂ ಕೋರ್ಟ್‌ ಸಲಹೆ ಪಾಲಿಸಿ   

ರಾಜ್ಯದಲ್ಲಿ  ಬೀದಿ ನಾಯಿಗಳ ಉಪಟಳ ಒಂದೇ ಸಮನೆ ಹೆಚ್ಚಾಗುತ್ತಿರುವುದು ಜನರನ್ನು ಗಾಬರಿಗೊಳಿಸಿದೆ. ಬೆಚ್ಚಿ ಬೀಳಿಸುವ ಮತ್ತೊಂದು ಸಂಗತಿಯೆಂದರೆ, ಮಕ್ಕಳು ಹಾಗೂ ವೃದ್ಧರೇ ಹೆಚ್ಚಾಗಿ ಅವುಗಳ ದಾಳಿಗೆ ಒಳಗಾಗಿರುವುದು. ರಾಜ್ಯದಲ್ಲಿ ಕಳೆದ ಒಂದೇ ವರ್ಷ 2.34 ಲಕ್ಷ ಜನರಿಗೆ ಅವುಗಳು ಕಚ್ಚಿವೆ ಎನ್ನುವುದು ಸ್ವತಃ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ.

ಹಲವು ವರ್ಷಗಳಿಂದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ನಿರಂತರವಾಗಿ ನಡೆಸಲಾಗುತ್ತಿದ್ದರೂ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇರುವುದು ಬಲು ಕೌತುಕದ ವಿದ್ಯಮಾನ. ಲಕ್ಷಾಂತರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ ಕಥೆಯನ್ನು ಸರ್ಕಾರಿ ಕಡತಗಳು ಹೇಳುತ್ತಿದ್ದರೂ ವಾಸ್ತವ ಸಂಗತಿ ಬೇರೆಯೇ ಇದೆ.

ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳ ಕಿವಿಗಳನ್ನು ಇಂಗ್ಲಿಷ್‌ನ ‘ವಿ’ ಆಕಾರದಲ್ಲಿ ಕತ್ತರಿಸಬೇಕು ಎನ್ನುವುದು ನಿಯಮ. ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ನಗರದ ಬಡಾವಣೆಯಲ್ಲಿ ಸುತ್ತಾಡಿದರೂ ಹೀಗೆ ಕಿವಿ ಕತ್ತರಿಸಿಕೊಂಡ ಬೀದಿ ನಾಯಿಗಳು ಸಿಗುವುದು ತೀರಾ ಅಪರೂಪ. ನಾಯಿಗಳ ಜನನ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಯೋಜನೆ ಫಲಕಾರಿಯಾಗಿಲ್ಲ ಹಾಗೂ ಈ ಉದ್ದೇಶಕ್ಕಾಗಿ ವ್ಯಯಿಸಿದ ಕೋಟ್ಯಂತರ ರೂಪಾಯಿ ಪೋಲಾಗಿದೆ ಎನ್ನುವ ವಾದಕ್ಕೆ ಇಂತಹ ಸಂಗತಿಗಳು ಸಾಕ್ಷ್ಯ ಹೇಳುತ್ತಿವೆ.

ಬೀದಿ ನಾಯಿಗಳ ಹಾವಳಿ ಬರೀ ನಮ್ಮ ರಾಜ್ಯದ ಸಮಸ್ಯೆಯಲ್ಲ; ದೇಶದ ಎಲ್ಲ ಭಾಗಗಳಲ್ಲೂ ಅವುಗಳ ಹಾವಳಿ ಇದೆ. ಪಕ್ಕದ ಕೇರಳವಂತೂ ಅವುಗಳ ಅಟ್ಟಹಾಸಕ್ಕೆ ನಲುಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳನ್ನು ಕೊಲ್ಲುವಂತಹ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಚಿನ್ನದ ಪದಕ ನೀಡುವುದಾಗಿ ತಿರುವನಂತಪುರದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘವೊಂದು ಘೋಷಣೆ ಮಾಡಿತ್ತು.

ನಾಯಿಗಳಿಂದ ರಕ್ಷಣೆ ಪಡೆಯಲು ಸಬ್ಸಿಡಿ ದರದಲ್ಲಿ ಏರ್‌ಗನ್‌ ವಿತರಿಸುವ ಮಾತು ಸಹ ಕೇಳಿಬಂದಿತ್ತು. ಅಲ್ಲಿನ ಸ್ಥಳೀಯ ಸಂಸ್ಥೆಗಳು ನಾಯಿಗಳ ಮಾರಣ ಹೋಮಕ್ಕಾಗಿ ಸಿದ್ಧತೆಯನ್ನೂ ನಡೆಸಿದ್ದವು. ಆದರೆ, ದೇಶದಾದ್ಯಂತ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅವುಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎನ್ನುವ ವಾದವನ್ನು ಸುಪ್ರೀಂ ಕೋರ್ಟ್‌ ಮೊನ್ನೆ ಸಾರಾಸಗಟಾಗಿ ತಳ್ಳಿಹಾಕಿದೆ. ಅವುಗಳಿಗೂ ಬದುಕುವ ಹಕ್ಕಿದೆ ಎಂದು ಅಷ್ಟೇ ಸ್ಪಷ್ಟೋಕ್ತಿಗಳಲ್ಲಿ ಹೇಳಿದೆ.

ಬೆಂಗಳೂರಿನ ಹಿಂದಿನ ಮೇಯರ್‌ವೊಬ್ಬರು ನಾಯಿದೊಡ್ಡಿಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ವಾತಾವರಣ ಪ್ರಾಣಿಗಳ ಬಗೆಗೆ ಕರುಣೆಯಿಂದ ನೋಡುವವರನ್ನು ಹೌಹಾರಿಸುವಂತಿತ್ತು. ಅದೇತಾನೆ ಶಸ್ತ್ರಚಿಕಿತ್ಸೆ ನಡೆಸಿದ ನಾಯಿಗಳನ್ನು ರಕ್ತಸಿಕ್ತವಾದ ಸ್ಥಿತಿಯಲ್ಲಿ ಮತ್ತೆ ಬೀದಿಗೆ ಬಿಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆಗಾಗಿ ನೀಡಿದ ಅರಿವಳಿಕೆಯಿಂದ ಅರೆ ಪ್ರಜ್ಞಾವಸ್ಥೆಯಲ್ಲಿ ದೊಡ್ಡಿಯಿಂದ ಹೊರಬಿದ್ದ ನಾಯಿಗಳ ಸ್ಥಿತಿ ದಾರುಣವಾಗಿತ್ತು.

ಸಂತಾನಶಕ್ತಿಹರಣ ಚಿಕಿತ್ಸೆ ಮಾಡಿದ ಮೇಲೆ ಕನಿಷ್ಠ ಮೂರು ದಿನ ಅವುಗಳ ಆರೈಕೆ ಮಾಡಬೇಕೆನ್ನುವುದು ನಿಯಮ. ಆ ನಿಯಮ ಕೂಡ ಇದುವರೆಗೆ ಪಾಲನೆಯಾಗಿಲ್ಲ. ಅಲ್ಲದೆ, ಶಸ್ತ್ರಚಿಕಿತ್ಸೆಗೆ ಬೇಕಾದ ಸೂಕ್ತ ವ್ಯವಸ್ಥೆ ಕೂಡ ಇಲ್ಲ. ರಾತ್ರಿಹೊತ್ತು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ಅಟ್ಟಹಾಸ ಮೆರೆಯುವಷ್ಟೇ ಕ್ರೂರವಾಗಿ ನಮ್ಮ ನಾಗರಿಕ ಸಮಾಜ ಅವುಗಳ ವಿರುದ್ಧ ಗದಾಪ್ರಹಾರ ನಡೆಸಿದೆ ಎನ್ನುವುದಕ್ಕೆ ಸಾಕ್ಷ್ಯಗಳು ಇವು.

‘ಬೀದಿ ನಾಯಿಗಳ ಮೇಲೆ ದಯೆ ಇರಬೇಕು. ಅದೇ ಕಾಲಕ್ಕೆ ಅವು ಸಮಾಜಕ್ಕೆ ಕಂಟಕವಾಗಿ ಪರಿಣಮಿಸದಂತೆ ನೋಡಿಕೊಳ್ಳಬೇಕು. ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಮತೋಲಿತ ನಡೆ ಅಗತ್ಯ’ ಎನ್ನುವುದು ಸುಪ್ರೀಂ ಕೋರ್ಟ್‌ನ ಸಲಹೆ. ಬೀದಿ ನಾಯಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಕೋರ್ಟ್‌ನ ಈ ಸಲಹೆಯಲ್ಲೇ ಉತ್ತರವಿದೆ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಆಗದಂತೆ ಸ್ಥಳೀಯ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು.

ರೇಬಿಸ್‌ ಸೋಂಕು ನಿರೋಧ ಚುಚ್ಚುಮದ್ದು ಹಾಕಿಸುವ ಕಾರ್ಯ ಜಾಗೃತಿಯಿಂದ ನಡೆಯಬೇಕು. ನಾಗರಿಕರು, ವಿಶೇಷವಾಗಿ ಹೋಟೆಲ್‌ಗಳ ಮಾಲೀಕರು ಮಿಕ್ಕಿದ ಆಹಾರ ಪದಾರ್ಥವನ್ನು ಎಲ್ಲೆಂದರಲ್ಲಿ ಬಿಸಾಡುವ ಪ್ರವೃತ್ತಿಗೆ ಕೊನೆಹಾಡಬೇಕು. ಪ್ರಾಣಿಗಳ ಬದುಕುವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಾಣಿದಯಾ ಸಂಘಗಳು ಬರೀ ಕಾನೂನು ಸಮರ ನಡೆಸದೆ, ಬೀದಿ ನಾಯಿಗಳಿಗೆ ಪುನರ್ವಸತಿ ಕಲ್ಪಿಸಲು ಸಮುದಾಯ ಸಹಭಾಗಿತ್ವದ ಮೂಲಕ ಕಾರ್ಯಪ್ರವೃತ್ತವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.