ADVERTISEMENT

ಭಾರತದ ಕಾಳಜಿಗಳನ್ನು ಕೆನಡಾ ಅರ್ಥ ಮಾಡಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಭಾರತದ ಕಾಳಜಿಗಳನ್ನು ಕೆನಡಾ ಅರ್ಥ ಮಾಡಿಕೊಳ್ಳಲಿ
ಭಾರತದ ಕಾಳಜಿಗಳನ್ನು ಕೆನಡಾ ಅರ್ಥ ಮಾಡಿಕೊಳ್ಳಲಿ   

ಖಲಿಸ್ತಾನ್ ಹೋರಾಟದ ಚರ್ಚೆ ಕೇಂದ್ರಬಿಂದುವಾಗುವಂತಹ ಬೆಳವಣಿಗೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಭಾರತ ಭೇಟಿ ಕಾಲದಲ್ಲಿ ನಡೆದಿದ್ದು ವಿಪರ್ಯಾಸ. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಟ್ರುಡೊ ಭೇಟಿಯಾದಾಗಲೂ ಸಹಜವಾಗಿಯೇ ಖಲಿಸ್ತಾನ್ ವಿಚಾರ ಪ್ರಸ್ತಾಪವಾಗಿದೆ. ಆದರೆ, ‘ನಮ್ಮ ನಡುವೆ ಸಮಸ್ಯೆಗಳನ್ನು ಸೃಷ್ಟಿಸುವ ಯಾವುದಕ್ಕೂ ಕೆನಡಾ ಅವಕಾಶ ನೀಡುವುದಿಲ್ಲ’ ಎಂದು ಟ್ರುಡೊ ಆಶ್ವಾಸನೆಯನ್ನೇನೋ ನೀಡಿದ್ದಾರೆ. ಈ ಮಧ್ಯೆ ಗುರುವಾರ ರಾತ್ರಿ ನಿಗದಿಯಾಗಿದ್ದ ಔತಣ ಕೂಟದಲ್ಲಿ ಭಾಗಿಯಾಗಲು ಖಲಿಸ್ತಾನ್ ಉಗ್ರ ಜಸ್ವಾಲ್ ಅತ್ವಾಲ್‌ಗೆ ಆಹ್ವಾನ ನೀಡಿದ್ದ ವಿಚಾರ ಪತ್ತೆಯಾದದ್ದು ಟ್ರುಡೊ ಅವರ ಭಾರತ ಪ್ರವಾಸವನ್ನು ವಿವಾದಮಯವಾಗಿಸಲು ಮತ್ತಷ್ಟು ಕಾರಣವಾಯಿತು. ನಂತರ. ಅತ್ವಾಲ್‌ಗೆ ನೀಡಿದ್ದ ಆಹ್ವಾನವನ್ನು ಕೆನಡಾ ಹೈಕಮಿಷನರ್ ರದ್ದುಗೊಳಿಸಿ ವಿವಾದಕ್ಕೆ ತೇಪೆ ಹಚ್ಚಲು ಯತ್ನಿಸಿದ ಘಟನೆಯೂ ನಡೆಯಿತು.

ಜೊತೆಗೆ ದೆಹಲಿ ಹಾಗೂ ಮುಂಬೈನಲ್ಲಿ ನಡೆದ ಅಧಿಕೃತ ಕಾರ್ಯಕ್ರಮಗಳಲ್ಲಿ ಅತ್ವಾಲ್‌ ಭಾಗಿಯಾಗಿದ್ದ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿವೆ. ಅಷ್ಟೇ ಅಲ್ಲ, ಟ್ರುಡೊ ಅವರ ಪತ್ನಿ ಸೋಫಿ ಗ್ರಗೋರಿ, ಕೆನಡಾ ಸಚಿವ ಅಮರ್ ಜೀತ್ ಸೋಹಿ ಅವರು ಅತ್ವಾಲ್ ಜೊತೆಗೆ ತೆಗೆಸಿಕೊಂಡಿರುವ ಫೋಟೊ ಕೂಡ ಮತ್ತೊಂದು ವಿವಾದಕ್ಕೆ ಕಾರಣವಾದದ್ದು ವಿಪರ್ಯಾಸ.

‘ಇದು ಕಣ್ತಪ್ಪಿನಿಂದ ಆಗಿರುವಂತಹದ್ದು. ಆಹ್ವಾನ ನೀಡಿರಬಾರದಿತ್ತು’ ಎಂದು ಕೆನಡಾ ಒಪ್ಪಿಕೊಂಡಿದೆ. ಆದರೆ ಅತ್ವಾಲ್ ಹೇಗೆ ಭಾರತ ಪ್ರವೇಶಿಸಿದರು? ವೀಸಾ ಹೇಗೆ ಪಡೆದುಕೊಂಡರು? ಎಂಬ ಬಗ್ಗೆ ಭಾರತ ಸರ್ಕಾರ ಮಾಹಿತಿಗಳನ್ನು ಪಡೆಯಲು ಯತ್ನಿಸುತ್ತಿದ್ದು ಹಾನಿಯಂತೂ ಆಗಿದೆ.

ADVERTISEMENT

ಕೆನಡಾದಲ್ಲಿ ಖಲಿಸ್ತಾನ್ ಚಳವಳಿಯ ಹುಟ್ಟು ಹಾಗೂ ಬೆಳವಣಿಗೆ ಮತ್ತು ಆ ನಂತರ ಬೆಳೆದಂತಹ ಉಗ್ರ ಗುಂಪುಗಳ ಕುರಿತಂತೆ ದೀರ್ಘ ಹಾಗೂ ಸಂಕೀರ್ಣ ಇತಿಹಾಸವೇ ಇದೆ. ರಾಷ್ಟ್ರಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಇದರ ಬೇರುಗಳಿವೆ. ಖಲಿಸ್ತಾನ್ ಆಂದೋಲನಕ್ಕೆ ಅನಿವಾಸಿ ಸಿಖ್ ಸಮುದಾಯ ತೋರಿಸಿಕೊಂಡು ಬರುತ್ತಿರುವಂತಹ ತೀವ್ರ ಬೆಂಬಲವು ಭಾರತ ಸರ್ಕಾರಕ್ಕೆ ತಲೆನೋವಿನ ಸಂಗತಿಯಾಗಿದೆ.  2008ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರೂ, ಕೆನಡಾದಲ್ಲಿ ತಲೆ ಎತ್ತುತ್ತಿರುವ ಖಲಿಸ್ತಾನ್ ಚಳವಳಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು. ಆದರೆ ನಿಜ ವಿಚಾರ ಏನೆಂದರೆ, ಈಗ ಇದು ಗಂಭೀರ ಆಯಾಮಗಳನ್ನು ಪಡೆದುಕೊಂಡು ಮತ್ತಷ್ಟು ಸಮಸ್ಯೆಯ ಮೂಲವಾಗಿದೆ. ದ್ವಿಪಕ್ಷೀಯ ಬಾಂಧವ್ಯದ ಮೇಲೂ ಪರಿಣಾಮ ಬೀರಿದೆ. ಟ್ರುಡೊ ಮತ್ತು ಕೆನಡಾದ ಇತರ ರಾಜಕಾರಣಿಗಳು ಈ ವಿಚಾರದ ಬಗ್ಗೆ ಯಾವುದೇ ನಿಲುವು ತೆಗೆದುಕೊಂಡಿಲ್ಲ. ಏಕೆಂದರೆ ಅವರಿಗೆ 10.4 ಲಕ್ಷ ಭಾರತೀಯ ಮೂಲದ ಸಮುದಾಯವನ್ನು ಒಲಿಸಿಕೊಳ್ಳಬೇಕಿದೆ. ಈ ಪೈಕಿ ದೊಡ್ಡ ‍ಪ್ರಮಾಣದಲ್ಲಿ ಸಿಖ್ಖರೂ ಇದ್ದಾರೆ. ಮುಂದಿನ ವರ್ಷವೇ ಚುನಾವಣೆಯನ್ನು ಕೆನಡಾ ಎದುರಿಸಬೇಕಿದೆ.

ಜಸ್ಟಿನ್ ಟ್ರಡೊ ಭಾರತ ಭೇಟಿಯ ಬಗ್ಗೆ ಭಾರತದ ರಾಜಕೀಯ ನಾಯಕತ್ವದಿಂದ ಅಷ್ಟೊಂದು ಉತ್ಸುಕತೆ ವ್ಯಕ್ತವಾಗಲಿಲ್ಲ ಎಂಬುದನ್ನೂ ಗಮನಿಸಬೇಕು. ತಣ್ಣಗಿನ ಸ್ವಾಗತವನ್ನು ಅವರಿಗೆ ನೀಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದವರು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಗಜೇಂದ್ರ ಶೆಖಾವತ್.  ಕೆನಡಾ ಪ್ರಧಾನಿ ಭೇಟಿಯ ವೇಳೆ ಮೋದಿಯವರು ಹೆಚ್ಚಿನ ಉತ್ಸುಕತೆ ತೋರದಿದ್ದುದು ಅಚ್ಚರಿಯ ಸಂಗತಿಯಾಗಿತ್ತು.  ಆದರೆ ಟ್ರುಡೊ ಅವರ ಗುಜರಾತ್, ಮುಂಬೈ ಹಾಗೂ ಪಂಜಾಬ್ ಪ್ರವಾಸ ಮುಗಿದಾದ ನಂತರ ಟ್ರಡೊ ಅವರನ್ನು ಸ್ವಾಗತಿಸುವಂತಹ ಟ್ವೀಟ್  ಅನ್ನು ಕಡೆಗೂ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖಲಿಸ್ತಾನ್ ಪರ ಚಟುವಟಿಕೆಗಳನ್ನು ಹೆಚ್ಚಿಸಿರುವ ಸಿಖ್ ಉಗ್ರರ ಬಗ್ಗೆ ಕೆನಡಾ ಹೊಂದಿರುವ ಮೃದು ಧೋರಣೆಯ ಬಗ್ಗೆ ಭಾರತ ಸರ್ಕಾರ ಅಸಂತೋಷಗೊಂಡಿದೆ ಎಂಬಂಥ ವರದಿಗಳೂ ಇವೆ. ‘ಭಾರತದ ಸಾರ್ವಭೌಮತ್ವ, ಏಕತೆ ಹಾಗೂ ಸಮಗ್ರತೆಗೆ ಸವಾಲು ಹಾಕುವವರನ್ನು ಸಹಿಸಲಾಗದು ಎಂದು ಪ್ರಧಾನಿ ಮೋದಿ ಅವರು ಟ್ರುಡೊ ಅವರ ಜೊತೆ ಭೇಟಿಯ ನಂತರ ಹೇಳಿಕೆ ನೀಡಿರುವುದು ಧ್ವನಿಪೂರ್ಣವಾಗಿದೆ. ‘ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ದುರುಪಯೋಗ ಮಾಡಿಕೊಂಡು ‍ಪ್ರತ್ಯೇಕತಾವಾದ ಬೆಳೆಸುವವರಿಗೆ ಸ್ಥಾನವಿಲ್ಲ’ ಎಂದು ಮೋದಿ ಹೇಳಿರುವುದು ಸರಿಯಾಗಿದೆ. ರಕ್ಷಣೆ, ವ್ಯಾಪಾರ , ಭಯೋತ್ಪಾದನೆ ಪ್ರತಿರೋಧ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳು ಒಡಂಬಡಿಕೆಗಳಿಗೆ ಸಹಿ ಹಾಕಿವೆ. ಭಾರತದ ಕಾಳಜಿಗಳನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅರ್ಥ ಮಾಡಿಕೊಳ್ಳಬೇಕು. ಅಣು ಇಂಧನ, ಜನರ ನಡುವೆ ಸಹಕಾರ ಸೇರಿದಂತೆ ಉಭಯ ದೇಶಗಳ ಮಧ್ಯೆ ಸಹಕಾರಕ್ಕೆ ಇರುವ ಅಪಾರ ಸಾಧ್ಯತೆಗಳನ್ನು ಮನಗಾಣುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.