ADVERTISEMENT

ಮಕ್ಕಳ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 19:30 IST
Last Updated 10 ಮಾರ್ಚ್ 2017, 19:30 IST
ಮಕ್ಕಳ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ
ಮಕ್ಕಳ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ   

ತುಮಕೂರು ಜಿಲ್ಲೆಯ ಬಳ್ಳಕಟ್ಟೆಯ ‘ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌ ಶಾಲೆ’ಯ ವಸತಿಗೃಹದಲ್ಲಿ ಆಕಾಂಕ್ಷ್‌ ಪಲ್ಲಕ್ಕಿ, ಶ್ರೇಯಸ್‌ ಹಾಗೂ ಶಾಂತಮೂರ್ತಿ ಎನ್ನುವ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ತೀವ್ರ ಆಘಾತಕಾರಿಯಾದುದು. ರಾತ್ರಿ ಊಟ ಸೇವನೆಯ ನಂತರ ಮಕ್ಕಳು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಬೇಜವಾಬ್ದಾರಿಯಿಂದ ವರ್ತಿಸಿದೆ ಹಾಗೂ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಶಾಲೆಯ ನಡವಳಿಕೆ ಅಕ್ಷಮ್ಯವಾದುದು. ವಸತಿಗೃಹದಲ್ಲಿ ಉಳಿಸಿಕೊಂಡ ಮಕ್ಕಳ ಸುರಕ್ಷತೆಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಮಕ್ಕಳು ಸಾವಿನ ಅಂಚಿನಲ್ಲಿದ್ದಾಗಲೂ ಪೋಷಕರಿಗೆ ವಿಷಯವನ್ನು ತಿಳಿಸಲು ಶಾಲಾಸಿಬ್ಬಂದಿ ತಡ ಮಾಡಿದ್ದಾರೆ. ಅಸ್ವಸ್ಥರಾದ ಮಕ್ಕಳನ್ನು ಸಕಾಲಕ್ಕೆ ಆಸ್ಪತ್ರೆಗೆ ತಲುಪಿಸಿದ್ದಲ್ಲಿ ಅವರು ಬದುಕುಳಿಯುವ ಸಾಧ್ಯತೆಯಿತ್ತು. ರಾತ್ರಿ 9ರ ಸುಮಾರಿಗೆ ಮಕ್ಕಳು ಊಟ ಮಾಡಿ ಹೊಟ್ಟೆನೋವಿಗೆ ಒಳಗಾದರೂ ಅವರಿಗೆ ತಕ್ಷಣ ಪ್ರಥಮಚಿಕಿತ್ಸೆ ದೊರೆತಿಲ್ಲ. ಸಾವಿನೊಂದಿಗೆ ಸೆಣಸುತ್ತಿದ್ದ ಮಕ್ಕಳನ್ನು ದಾಖಲಿಸಿಕೊಳ್ಳಲು ತುಮಕೂರಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ನಿರಾಕರಿಸಿರುವುದು ಕೂಡ ಕಳವಳ ಹುಟ್ಟಿಸುವಂತಿದೆ. ಚಿಕಿತ್ಸೆ ನೀಡಲು ನಿರಾಕರಿಸುವ ಮೂಲಕ ಈ ಆಸ್ಪತ್ರೆಗಳು ವೈದ್ಯಕೀಯ ಧರ್ಮದ ಪ್ರಾಥಮಿಕ ಅಂಶಗಳನ್ನೇ ಉಲ್ಲಂಘಿಸಿವೆ ಹಾಗೂ ಅದು ಕಾನೂನಿನ ಸ್ಪಷ್ಟ ಉಲ್ಲಂಘನೆಯೂ ಆಗಿದೆ.‌

ಮಕ್ಕಳ ಊಟದಲ್ಲಿ ವಿಷ ಸೇರಿರುವುದಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದೆ ಶಾಲೆಯಿಂದ ವಜಾಗೊಂಡಿರುವ ಪ್ರಾಂಶುಪಾಲರೊಬ್ಬರ ಕೈವಾಡ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಊಹೆ, ಪ್ರಕರಣದ ಹಿಂದೆ ವ್ಯವಸ್ಥಿತ ಪಿತೂರಿಯೊಂದು ಇರುವುದನ್ನು ಸೂಚಿಸುವಂತಿದೆ. ಮಕ್ಕಳ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಕಾಲಮಿತಿಗೆ ಒಳಪಟ್ಟ ತನಿಖೆ ನಡೆಸಬೇಕಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಮೂಲಕ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ. ಪ್ರಸಕ್ತ ಘಟನೆ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವಾಗಿರುವಂತೆಯೇ ಕಾನೂನು ಉಲ್ಲಂಘನೆಯೂ ಆಗಿದೆ. ಅನುಮತಿ ಪಡೆಯದೆಯೇ ವಸತಿಗೃಹ ನಡೆಸಿರುವ ಶಾಲೆ, ಸರ್ಕಾರಕ್ಕೆ ಮೋಸ ಮಾಡಿದೆ ಹಾಗೂ ಮಕ್ಕಳ ಪೋಷಕರನ್ನು ವಂಚಿಸಿದೆ. ಮಕ್ಕಳ ಸಾವಿನ ಹೊಣೆಯ ಜೊತೆಗೆ, ವಸತಿಗೃಹಕ್ಕೆ ಸಂಬಂಧಿಸಿದ ಕಾನೂನು ಉಲ್ಲಂಘನೆ ಕಾರಣದಿಂದಲೂ ಶಿಕ್ಷೆಯಾಗಬೇಕು.

ಮಕ್ಕಳ ಸಾವಿನ ಕುರಿತ ದಿಗ್ಭ್ರಮೆಯಲ್ಲಿ ಈ ಪ್ರಕರಣ ಕೊನೆಗೊಳ್ಳಬಾರದು. ಇಂಥ ಪ್ರಕರಣಗಳು ‘ಪ್ರತಿಷ್ಠಿತ’ ಶಾಲೆಗಳ ಕುರಿತ ಪೋಷಕರ ಭ್ರಮೆಯನ್ನು ಕಳೆಯಲು ಪ್ರೇರಣೆಯಾಗಬೇಕು. ‘ಇಂಟರ್‌ನ್ಯಾಷನಲ್‌’ ಎನ್ನುವ ಹಣೆಪಟ್ಟಿ ಹಚ್ಚಿಕೊಂಡ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲಿಕ್ಕಾಗಿ ಪೋಷಕರು ದೊಡ್ಡ ಮೊತ್ತ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಿಗೂ ಈ ‘ಇಂಟರ್‌ನ್ಯಾಷನಲ್‌’ ಭ್ರಮೆ ವ್ಯಾಪಿಸಿಕೊಂಡಿದೆ. ಕೃಷಿ ಹಿನ್ನೆಲೆಯ ಪೋಷಕರು ಕೂಡ ಸಾಲಸೋಲ ಮಾಡಿ ಶಿಕ್ಷಣಸಂಸ್ಥೆಗಳಿಗೆ ದುಡ್ಡು ಸುರಿಯುತ್ತಿದ್ದಾರೆ. ಸಿಬಿಎಸ್‌ಇ, ಐಸಿಎಸ್‌ಇ ಎನ್ನುವ ಹಣೆಪಟ್ಟಿ ಹಚ್ಚಿಕೊಂಡ ಬಹುತೇಕ ಶಾಲೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸುಲಿಯುತ್ತಿವೆ. ಈ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಹೇಗಿರಬಹುದು ಹಾಗೂ ಮಕ್ಕಳ ಸುರಕ್ಷತೆಗೆ ಅಲ್ಲಿ ಏನೆಲ್ಲ ಸೌಕರ್ಯಗಳಿವೆ ಎನ್ನುವುದರ ಮೌಲ್ಯಮಾಪನ ಬಹುತೇಕ ಸಂದರ್ಭಗಳಲ್ಲಿ ನಡೆಯುವುದೇ ಇಲ್ಲ. ನೈತಿಕತೆಗೆ ತಿಲಾಂಜಲಿ ನೀಡಿ ವ್ಯಾಪಾರೀಕರಣಗೊಂಡಿರುವ ಸಂಸ್ಥೆಗಳ ಮೂಲಕ ನಮ್ಮ ಶಿಕ್ಷಣಕ್ಷೇತ್ರ ಸಾಗುತ್ತಿರುವ ದಿಕ್ಕು ಗಾಬರಿಹುಟ್ಟಿಸುವಂತಿದೆ. ಇಂಥ ಶಾಲೆಗಳನ್ನು ನಿಯಂತ್ರಿಸಬೇಕಾದ ಸರ್ಕಾರ ಕೂಡ ತನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರುವಂತೆ ಕಾಣಿಸುತ್ತಿಲ್ಲ. ‘ಎಲ್ಲ ಶಾಲೆಗಳೂ ರಾಜ್ಯದ ಆಡಳಿತಕ್ಕೆ ಒಳಪಟ್ಟಿರಬೇಕು’ ಎಂದು 2010ರ ಹೈಕೋರ್ಟ್‌ ಆದೇಶ ಸ್ಪಷ್ಟವಾಗಿ ಹೇಳಿದೆ. 2010ರ ‘ಶಿಕ್ಷಣ ಹಕ್ಕು ಕಾಯ್ದೆ’ ಕೂಡ ಸರ್ಕಾರದ ನಿಯಮಗಳು ಎಲ್ಲಾ ಶಾಲೆಗಳಿಗೂ ಅನ್ವಯಿಸುತ್ತವೆ ಎನ್ನುವುದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಹೇಳಿದೆ. ಮಕ್ಕಳ ರಕ್ಷಣೆ ಶಾಲೆಗಳ ಜವಾಬ್ದಾರಿ ಎನ್ನುವುದನ್ನೂ ಕಾಯ್ದೆ ಸ್ಪಷ್ಟಪಡಿಸಿದೆ. ಹೀಗಿದ್ದೂ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಪದೇ ಪದೇ ಧಕ್ಕೆ ಉಂಟಾಗುತ್ತಿರುವುದು ನಮ್ಮ ಕಾರ್ಯಾಂಗ ವ್ಯವಸ್ಥೆಯಲ್ಲಿನ ಲೋಪವನ್ನು ಸೂಚಿಸುವಂತಿದೆ. ಜಡ್ಡುಗಟ್ಟಿದ ಕಾರ್ಯಾಂಗ ಹಾಗೂ ಶಿಕ್ಷಣ ವ್ಯವಸ್ಥೆಗೆ ವಿದ್ಯಾವಾರಿಧಿ ಶಾಲೆಯ ಮಕ್ಕಳ ಸಾವಿನ ಪ್ರಕರಣ ಪಾಠವಾಗಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.