ADVERTISEMENT

ಮಕ್ಕಳ ಸುರಕ್ಷತೆ: ನಿರ್ಲಕ್ಷ್ಯ ಸಲ್ಲ

​ಪ್ರಜಾವಾಣಿ ವಾರ್ತೆ
Published 24 ಜೂನ್ 2014, 19:30 IST
Last Updated 24 ಜೂನ್ 2014, 19:30 IST

ವಿದ್ಯಾರ್ಥಿಗಳ ಜತೆಗೆ ಮಕ್ಕಳಿಗೆ ಸಂಬಂಧಿಸಿದ ದೊಡ್ಡವರಿಗೂ ಶಿಕ್ಷಣದ ಅಗತ್ಯ ಇದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಬೆಂಗಳೂರಿನ ನಮಿತಾ ಎನ್ನುವ ವಿದ್ಯಾರ್ಥಿನಿಯ ಸಾವು. ಶಾಲಾ ವಾಹನದ ಕೆಳಗೆ ಬಿದ್ದ ಊಟದ ಡಬ್ಬಿ ತೆಗೆದುಕೊಳ್ಳಲು ಹೋದ ಬಾಲಕಿ ಅದೇ ವಾಹನಕ್ಕೆ ಸಿಕ್ಕಿ ಸಾವಿಗೀಡಾದ ದುರ್ಘ­ಟನೆ ಶಾಲಾ ಚೌಕಟ್ಟಿನಾಚಿನ ಶೈಕ್ಷಣಿಕ ಶಿಸ್ತಿನ ಬಗ್ಗೆ ಮರು ಯೋಚ­ನೆಗೆ ಪ್ರೇರಣೆಯಂತಿದೆ.

ನಮಿತಾ ಸಾವನ್ನು ತೀರಾ ಅಪರೂಪದ ಘಟನೆ ಎಂದು ಭಾವಿಸುವಂತಿಲ್ಲ. ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಶಾಲಾ ವಾಹ­ನ­ಗಳಿಗೆ ಬಲಿಯಾದ ವಿದ್ಯಾರ್ಥಿಗಳ ಹಲವು ಪ್ರಕರಣಗಳು ರಾಜ್ಯದ ವಿವಿಧೆ­ಡೆ­ಗಳಿಂದ ವರದಿಯಾಗಿವೆ. ಕಳೆದ ವರ್ಷ ಬೆಂಗಳೂರಿನಲ್ಲೇ ಶಾಲಾ ಬಸ್‌ ಮತ್ತು ಬಿಎಂಟಿಸಿ ಬಸ್‌ ಡಿಕ್ಕಿಯಲ್ಲಿ ಏಳು ಮಕ್ಕಳು ಗಾಯಗೊಂಡಿದ್ದರು. ಈ ಘಟನೆ­ಗಳು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಆತಂಕ ಹುಟ್ಟಿಸುವುದರ ಜತೆಗೆ, ವಾಣಿಜ್ಯೀಕರಣದ ಭರಾಟೆಯಲ್ಲಿ ಮುಳುಗಿರುವ ಶಿಕ್ಷಣ ವ್ಯವಸ್ಥೆ­ಯಲ್ಲಿ ಮಕ್ಕಳ ಸುರಕ್ಷತೆಗೆ ಕವಡೆ ಕಿಮ್ಮತ್ತೂ ಇಲ್ಲದಿರುವುದನ್ನು ಸೂಚಿಸು­ವಂ­ತಿವೆ.

ಶಾಲೆಗಳ ಆಯ್ಕೆಯ ಬಗ್ಗೆ ಮುತುವರ್ಜಿ ವಹಿಸುವ ಪೋಷಕರು, ತಮ್ಮ ಮಕ್ಕಳು ಪ್ರಯಾಣಿಸುವ ವಾಹನಗಳ ಬಗ್ಗೆಯೂ ನಿಗಾ ವಹಿಸಬೇಕಿದೆ. ಅಂತೆಯೇ, ಶುಲ್ಕ ಹೆಚ್ಚು ಪಡೆಯುವ ಮೂಲಕ ತನ್ನನ್ನು ತಾನು ಪ್ರತಿಷ್ಠಿತ ಎಂದು ಬಿಂಬಿಸಿಕೊಳ್ಳುವ ಶಾಲೆಗಳು, ಶಾಲಾ ಕೊಠಡಿಗಳಲ್ಲಿ ಕಲಿಸುವುದರ ಆಚೆಗೂ ತಮ್ಮ ಜವಾಬ್ದಾರಿಯನ್ನು ವಿಸ್ತರಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಮಿತಾ ಪ್ರಕರಣ ಒಂದು ಪಾಠವೂ ಎಚ್ಚರಿಕೆಯ ಗಂಟೆಯೂ ಆಗಬೇಕು.

ಮಕ್ಕಳು ಪ್ರಯಾಣಿಸುವ ಶಾಲಾ ವಾಹನಗಳ ಬಗ್ಗೆ ಸುಪ್ರೀಂಕೋರ್ಟ್‌ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಗೊತ್ತುಪಡಿಸಿದ್ದು, ಈ ನೀತಿಸಂಹಿತೆ­ಯನ್ನು ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ನೆನಪಿಸಿಕೊಳ್ಳುತ್ತವೆ. ಆದರೆ, ಈ  ಸೂತ್ರ­ಗಳನ್ನು ಶಾಲಾವಾಹನಗಳು ಕಟ್ಟುನಿಟ್ಟಾಗಿ ಅನುಸರಿಸುತ್ತಿವೆಯೇ ಎನ್ನು­ವುದರ ಬಗ್ಗೆ ಯಾರೂ ಗಮನಹರಿಸುವುದಿಲ್ಲ. ಹಳದಿಬಣ್ಣ ಹೊಂದಿರುವುದು ಹಾಗೂ ‘ಶಾಲಾವಾಹನ’ ಎನ್ನುವ ಬರಹವನ್ನು ಹೊಂದಿರುವುದಷ್ಟೇ ಈ ವಾಹ­ನಗಳು ಪಾಲಿಸಬೇಕಾದ ನಿಯಮಗಳಲ್ಲ.

12 ವರ್ಷಕ್ಕೂ ಹೆಚ್ಚಿನ ವಯ­ಸ್ಸಿನ ಮಕ್ಕಳನ್ನು ಆಸನಕ್ಕೆ ಒಬ್ಬರಂತೆ ಪರಿಗಣಿಸುವುದು, 12 ವರ್ಷ­ದೊಳಗಿನ ವಿದ್ಯಾರ್ಥಿಗಳಾದರೆ ಅವರ ಸಂಖ್ಯೆ ಆಸನಗಳ ಸಾಮರ್ಥ್ಯದ ಒಂದೂ­­ವರೆ ಪಟ್ಟು ಮೀರದಂತೆ ಎಚ್ಚರ ವಹಿಸಬೇಕೆನ್ನುವ ನಿಯಮವಿದೆ. ಆದರೆ, ಮಕ್ಕಳನ್ನು ಸರಕಿನಂತೆ ತುಂಬಿಕೊಂಡು ಕೊಂಚವೂ ಅಳುಕಿಲ್ಲದೆ ಓಲಾ­ಡುತ್ತಾ ಸಾಗುವ ವ್ಯಾನ್‌–ರಿಕ್ಷಾಗಳನ್ನು ದಿನನಿತ್ಯವೂ ಕಾಣಬಹುದಾಗಿದೆ.

ಪರಿ­ಸ್ಥಿತಿ ಹೀಗಿರುವಾಗ ಈ ವಾಹನಗಳು ಅಧಿಕೃತ ಪರವಾನಗಿಯನ್ನು ಹೊಂದಿ­­ರುವುದನ್ನು ಹಾಗೂ ಅವುಗಳ ಚಾಲಕ, ಆತನ ಸಹಾಯಕ ಅನು­ಭವಿಗಳೇ ಎನ್ನುವುದನ್ನು ಪರಿಶೀಲಿಸುವವರಾದರೂ ಯಾರು? ಮನೆಯಿಂದ ಹೊರ­ಡುವ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ಮರಳುವುದು ಸುಶಿಕ್ಷಿತ ಸಮಾ­ಜವೊಂದರಲ್ಲಿ ಸಂಕೀರ್ಣ ಪ್ರಕ್ರಿಯೆ ಆಗಬಾರದು. ಅಂಥ ವಾತಾ­ವರಣವನ್ನು ಸೃಷ್ಟಿಸುವಲ್ಲಿ ನಾಗರಿಕರು ಹಾಗೂ ಶಿಕ್ಷಣ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಒಟ್ಟಾಗಿ ನಿರ್ವಹಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.