ADVERTISEMENT

ಮರಳು ಮಾಫಿಯಾ ಹಾವಳಿ ಮಟ್ಟ ಹಾಕದಿದ್ದರೆ ಅಪಾಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2017, 20:20 IST
Last Updated 4 ಏಪ್ರಿಲ್ 2017, 20:20 IST
ಮರಳು ಮಾಫಿಯಾ ಹಾವಳಿ ಮಟ್ಟ ಹಾಕದಿದ್ದರೆ ಅಪಾಯ
ಮರಳು ಮಾಫಿಯಾ ಹಾವಳಿ ಮಟ್ಟ ಹಾಕದಿದ್ದರೆ ಅಪಾಯ   

ರಾಜ್ಯದಲ್ಲಿ ಮರಳು ಮಾಫಿಯಾ ಹಾವಳಿ ದಿನೇದಿನೇ ಹೆಚ್ಚುತ್ತಿದೆ. ಹಿರಿಯ ಸರ್ಕಾರಿ ಅಧಿಕಾರಿಗಳಿಗೇ ಬೆದರಿಕೆ ಹಾಕುವ, ಹಲ್ಲೆ ನಡೆಸುವಷ್ಟರ ಮಟ್ಟಿಗೆ ಅದು ಬೆಳೆದಿದೆ. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಕುಂದಾಪುರದ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌ ಮತ್ತು ಸಿಬ್ಬಂದಿ ಮೇಲೆ ಭಾನುವಾರ ತಡ ರಾತ್ರಿ ಮರಳು ದಂಧೆಕೋರರು ನಡೆಸಿದ ದಾಳಿಯೇ ಅದಕ್ಕೆ ಸಾಕ್ಷಿ. 

ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಯ ಭಯವೂ ಇವರಿಗಿಲ್ಲ ಎಂದರೆ ಅದು ಗಂಭೀರವಾಗಿ ಪರಿಗಣಿಸಲೇಬೇಕಾದ ವಿಚಾರ. ಈ ಮಾಫಿಯಾವನ್ನು ಮಟ್ಟ ಹಾಕದಿದ್ದರೆ ಮುಂದೆ ಇನ್ನೂ ಹೆಚ್ಚಿನ ಅನಾಹುತಗಳು ನಡೆಯಬಹುದು. ಇಂತಹ ಪುಂಡಾಟ ಸಹಿಸಲು ಸಾಧ್ಯವಿಲ್ಲ ಎನ್ನುವ ಖಡಕ್‌ ಸಂದೇಶ ಅಕ್ರಮ ಮರಳು ದಂಧೆಕೋರರಿಗೆ ಹೋಗಬೇಕು.

ತಪ್ಪು ಮಾಡಿದವರು ಪಾರಾಗಲು ಸಾಧ್ಯವೇ ಇಲ್ಲ ಎನ್ನುವ ಸನ್ನಿವೇಶವನ್ನು ನಿರ್ಮಾಣ ಮಾಡಬೇಕು. ಅಪಾಯದ ಅರಿವಿದ್ದರೂ ಮರಳು ಮಾಫಿಯಾ ವಿರುದ್ಧ ದಿಟ್ಟತನದಿಂದ ಹೋರಾಟಕ್ಕೆ ಇಳಿದ ಉಡುಪಿ ಜಿಲ್ಲಾಧಿಕಾರಿ, ಕುಂದಾಪುರ ಉಪವಿಭಾಗಾಧಿಕಾರಿ ಮತ್ತು ಸಿಬ್ಬಂದಿ ಶ್ಲಾಘನೆಗೆ ಅರ್ಹರು.

‘ಮರಳು ಮಾಫಿಯಾ ಬಗ್ಗೆ ರಾಜ್ಯ ಸರ್ಕಾರ ಬಿಗಿ ಧೋರಣೆ ತಳೆದಿಲ್ಲ; ಹೀಗಾಗಿಯೇ ಇಂತಹ ಪ್ರಕರಣಗಳು ಪದೇಪದೇ ನಡೆಯುತ್ತಿವೆ’ ಎನ್ನುವ ಅಭಿಪ್ರಾಯ ದಟ್ಟವಾಗಿದೆ. ಕೆಲ ಸಮಯದ ಹಿಂದೆ ಅಕ್ರಮ ಮರಳು ದಂಧೆಕೋರರು ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ಡಿಎಸ್‌ಪಿ ಮೇಲೇ ದಾಳಿ ಮಾಡಿದ್ದರು. ಅವರ ಪ್ರಾಣಕ್ಕೆ ಅಪಾಯ ತರಲು ಮುಂದಾಗಿದ್ದರು.

ಅದೇ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಹೋಗಿದ್ದ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಮೇಲೂ ಹಲ್ಲೆ ನಡೆದಿತ್ತು. ರಾಜ್ಯದ ಬೇರೆಬೇರೆ ಕಡೆಗಳಲ್ಲೂ ಇಂತಹ ಪ್ರಕರಣಗಳು ವರದಿಯಾಗಿವೆ. ಕೆಳ ಹಂತದ ಪ್ರಾಮಾಣಿಕ ನೌಕರರಂತೂ ಜೀವಭಯದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ADVERTISEMENT

ಈಗ ನೋಡಿದರೆ ಜಿಲ್ಲಾಧಿಕಾರಿಯನ್ನೇ ಈ ಮಾಫಿಯಾ ಬಿಟ್ಟಿಲ್ಲ. ಇದು, ಉತ್ತರ ಭಾರತದ ರಾಜ್ಯಗಳಲ್ಲಿ ವಿಜೃಂಭಿಸುತ್ತಿದ್ದ ಮಾಫಿಯಾ ಸಂಸ್ಕೃತಿ ನಮ್ಮ ರಾಜ್ಯದಲ್ಲೂ ಬೇರು ಬಿಡುತ್ತಿರುವ ಸಂಕೇತ. ಈ ಪ್ರವೃತ್ತಿಯನ್ನು ತಡೆಯಲೇ ಬೇಕು. ಕರ್ತವ್ಯನಿರತ ಸಿಬ್ಬಂದಿ ಮೇಲೆ ಕೈ ಮಾಡಿದರೆ ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂಬುದು ಅಕ್ರಮ ದಂಧೆಕೋರರಿಗೆ ಗೊತ್ತಾಗುವಂತೆ ಮಾಡಬೇಕು.

ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳನ್ನು ಬೆಂಬಲಿಸಿ ಧೈರ್ಯ ತುಂಬಬೇಕು. ಉಡುಪಿ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತವರ ತಂಡ ಇನ್ನಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿತ್ತು. ಪೊಲೀಸರಿಗೂ ಮಾಹಿತಿ ಕೊಡದೆ, ದಾಳಿ ನಡೆಸಲು ಅಪರಾತ್ರಿಯಲ್ಲಿ ಖಾಸಗಿ ವಾಹನದಲ್ಲಿ ಹೋಗುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ಇಲ್ಲಿ ಸುರಕ್ಷತೆಯ ವಿಚಾರವೂ ಇದೆ. ಆದರೆ, ‘ನಿಯಮಾವಳಿಗಳಲ್ಲಿ ಖಾಸಗಿ ವಾಹನ ಬಳಕೆಗೆ ಅವಕಾಶವಿದೆ. ಅಲ್ಲದೆ, ಹಿಂದೆಲ್ಲ ಇಂತಹ ದಾಳಿಯ ವಿಷಯ ಸೋರಿಕೆಯಾಗಿ ದಂಧೆಕೋರರು ಪಾರಾಗುತ್ತಿದ್ದರು’ ಎಂದು ಜಿಲ್ಲಾಧಿಕಾರಿ ತಮ್ಮ ತೀರ್ಮಾನ ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಮಾಹಿತಿ ಹೇಗೆ ಸೋರಿಕೆಯಾಗುತ್ತಿತ್ತು ಎನ್ನುವುದರ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು.

ಸಾರ್ವಜನಿಕ ಬೊಕ್ಕಸದಿಂದ ಸಂಬಳ ಬರುತ್ತಿದ್ದರೂ ಕಾನೂನು ಪ್ರಕಾರ ಕೆಲಸ ಮಾಡದೆ ಮರಳು ದಂಧೆಕೋರರಿಗೆ ಸಹಾಯ ಮಾಡುತ್ತಿದ್ದವರು ಯಾರು ಎಂಬುದು ಎಲ್ಲರಿಗೂ ತಿಳಿಯಬೇಕು. ತಪ್ಪಿತಸ್ಥರಿಗೆ ತಕ್ಕ ಶಾಸ್ತಿಯಾದರೆ ಮಾತ್ರ ಇಂತಹ ಅಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯ.

ಮರಳಿನಂತಹ ಅಮೂಲ್ಯ ಪ್ರಾಕೃತಿಕ ಸಂಪತ್ತಿನ ಲೂಟಿ ತಡೆಯುವ ಕೆಲಸದಲ್ಲಿ ಪೊಲೀಸ್‌ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಜಿಲ್ಲಾ ಆಡಳಿತಕ್ಕೆ ಸಹಕಾರ ಕೊಡಬೇಕು. ಅದು ಅವರ ಕರ್ತವ್ಯವೂ ಹೌದು.

ಮರಳು ಕೊರತೆಯಿಂದಾಗಿ ಅಕ್ರಮ ಮರಳು ದಂಧೆ ಬೆಳೆಯುತ್ತಿದೆ. ಏಕೆಂದರೆ ಎಲ್ಲ ಬಗೆಯ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಬೇಕೇಬೇಕು. ಆದರೆ ಅಗತ್ಯಕ್ಕೆ ತಕ್ಕಷ್ಟು ಮರಳು ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ಮರಳಿಗೆ ಪರ್ಯಾಯವಾಗಿ ಎಂ ಸ್ಯಾಂಡ್‌ ಬಳಕೆಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು.

ಬೇಡಿಕೆ ಮತ್ತು ಪೂರೈಕೆ ಮಧ್ಯೆ ಅಂತರ ಇರುವವರೆಗೂ ಮರಳು ಅಕ್ರಮ ದಂಧೆ  ನಿಯಂತ್ರಿಸುವುದು ಕಷ್ಟ. ಆದರೆ, ನೆರೆಯ ರಾಜ್ಯಗಳಲ್ಲಿ ನಮ್ಮಲ್ಲಿಯಷ್ಟು ಸಮಸ್ಯೆ ಇಲ್ಲ. ಅದನ್ನು  ನೋಡಿಯಾದರೂ ನಮ್ಮ ಸರ್ಕಾರ ಕಲಿಯಬೇಕು. ಉಡುಪಿ ಪ್ರಕರಣದಿಂದಲಾದರೂ ಎಚ್ಚೆತ್ತುಕೊಳ್ಳಬೇಕು. ಮನಸ್ಸು ಮಾಡಿದರೆ ಎಂತಹ ಮಾಫಿಯಾವನ್ನೂ ಬಗ್ಗು ಬಡಿಯುವುದು ಸರ್ಕಾರಕ್ಕೆ ದೊಡ್ಡದೇನಲ್ಲ. ಆ ಕೆಲಸ ಈಗಿನಿಂದಲೇ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.