ADVERTISEMENT

ಮಾಲಿನ್ಯದಿಂದ ಸಾವು ಹೆಚ್ಚಿದೆ ಅಪಾಯ ಸನಿಹದಲ್ಲೇ ಇದೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಮಾಲಿನ್ಯದಿಂದ ಸಾವು ಹೆಚ್ಚಿದೆ ಅಪಾಯ ಸನಿಹದಲ್ಲೇ ಇದೆ
ಮಾಲಿನ್ಯದಿಂದ ಸಾವು ಹೆಚ್ಚಿದೆ ಅಪಾಯ ಸನಿಹದಲ್ಲೇ ಇದೆ   

ಕೈಗಾರಿಕೀಕರಣ ಮತ್ತು ಆಧುನಿಕ ಶೈಲಿಯ ಬದುಕಿನಿಂದಾಗಿ ನೀರು, ವಾಯು, ಆಹಾರ ಹೀಗೆ ಎಲ್ಲದರಲ್ಲಿಯೂ ಮಾಲಿನ್ಯ ಹೆಚ್ಚುತ್ತಿದೆ. ಅದರಲ್ಲಿಯೂ ವಾಯು ಮತ್ತು ಜಲ ಮಾಲಿನ್ಯವಂತೂ ಜೀವರಾಶಿಗಳ ಪಾಲಿಗೆ ಅತಿ ಹೆಚ್ಚು ಅಪಾಯಕಾರಿ. ಈ ಸಂಗತಿ ಗೊತ್ತಿದ್ದರೂ ಎಗ್ಗಿಲ್ಲದೆ ಇವೆರಡನ್ನೂ ಅತಿ ಹೆಚ್ಚು ಕಲುಷಿತಗೊಳಿಸಿದ್ದೇವೆ. ಹೀಗಾಗಿ, ಉಸಿರಾಡುವ ಗಾಳಿ, ಜೀವನಾಧಾರವಾದ ನೀರು ಮಾರಣಾಂತಿಕ ಎನ್ನುವಷ್ಟರ ಮಟ್ಟಿಗೆ ಹಾಳಾಗಿದೆ. ಅದರ ಕಹಿ ಫಲ ಏನು ಎನ್ನುವುದು ನಮ್ಮ ಮುಂದಿದೆ. ಅಂದರೆ, 2015ರಲ್ಲಿ ನಮ್ಮ ದೇಶದಲ್ಲಿ ಮಾಲಿನ್ಯ ಎಂಬುದು 26 ಲಕ್ಷ ಜನರ ಜೀವವನ್ನು ಆಹುತಿ ತೆಗೆದುಕೊಂಡಿದೆ.

ಈ ಪೈಕಿ 16 ಲಕ್ಷ ಜನರ ಸಾವಿಗೆ ವಾಯು ಮಾಲಿನ್ಯ ಮತ್ತು ಅದರಿಂದ ಉಂಟಾದ ಆರೋಗ್ಯ ಸಮಸ್ಯೆಗಳೇ ಮುಖ್ಯ ಕಾರಣ. ಎಲ್ಲರಿಗೂ ಸುಲಭವಾಗಿ ಅಡುಗೆ ಅನಿಲ ಸಿಗಬೇಕು, ಶುದ್ಧ ಮತ್ತು ಸುರಕ್ಷಿತವಾದ ಪರ್ಯಾಯ ಇಂಧನ ಮೂಲಗಳು ಅವರಿಗೆ ಲಭ್ಯವಾಗಬೇಕು ಎಂಬ ಗುರಿಯ ನಡುವೆಯೂ ಈಗಲೂ ನಮ್ಮಲ್ಲಿ /ನೂರರಲ್ಲಿ / ಮೂರು ಮನೆಗಳಲ್ಲಿ ಅಡುಗೆಗೆ ಕಟ್ಟಿಗೆ, ಬೆರಣಿ ಬಳಕೆಯಾಗುತ್ತಿದೆ. ಇದರ ಹೊಗೆ ಆ ಮನೆಯಲ್ಲಿ ವಾಸವಾಗಿರುವ ಎಲ್ಲರನ್ನೂ ಕಾಡುತ್ತದೆ. ಭಾರತದಲ್ಲಿನ ವಾಯು ಮಾಲಿನ್ಯದಲ್ಲಿ ಅರ್ಧ ಭಾಗ ಈ ಹೊಗೆಯ ಕೊಡುಗೆ.

ಯಾರೋ ಮೋಜಿಗೆ ಸಿಗರೇಟ್‌ ಸೇವಿಸಿ ಬಿಟ್ಟ ಹೊಗೆಯಿಂದ 1.65 ಲಕ್ಷ ಜನ ಸಾವಿಗೀಡಾಗಿದ್ದಾರೆ. ಇಡೀ ಜಗತ್ತಿನಲ್ಲಿ ನಮ್ಮನ್ನು ಬಿಟ್ಟರೆ ಬೇರೆ ಎಲ್ಲಿಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾಲಿನ್ಯ ಸಂಬಂಧಿ ಸಾವು ಸಂಭವಿಸಿಲ್ಲ. ಸೌದೆ ಬಳಸುವ ಅಡುಗೆ ಮನೆಯ ಹೊಗೆ ಇರಬಹುದು, ಧೂಮಪಾನಿಗಳು ಬಿಟ್ಟ ಹೊಗೆ ಇರಬಹುದು... ಇವನ್ನೆಲ್ಲ ಕಡಿಮೆ ಮಾಡುವುದು ನಮ್ಮ ಕೈಯಲ್ಲೇ ಇದೆ. ಅಧ್ಯಯನದ ಪ್ರಕಾರ ಮಾಲಿನ್ಯದಿಂದ ಹೆಚ್ಚು ತೊಂದರೆ ಅನುಭವಿಸುವವರು ಬಡವರು. ಅವರ ಮನೆಗಳ ಸುತ್ತ ಮಾಲಿನ್ಯಕಾರಕ ಅಂಶಗಳು ಹೆಚ್ಚು. ಇನ್ನುಳಿದವರಂತೆ ಆರೋಗ್ಯವಂತ ಪರಿಸರದಲ್ಲಿ ಬದುಕುವ ಹಕ್ಕು ಅವರಿಗೂ ಇದೆ. ಅಂತಹ ಅವಕಾಶವನ್ನು ಅವರಿಗೆ ಕಲ್ಪಿಸಬೇಕು. ಅದಕ್ಕೆ ಸರ್ಕಾರ ಮತ್ತು ಸಮುದಾಯದ ಸಹಕಾರ ಬೇಕು.

ADVERTISEMENT

ಆಗ ಮಾಲಿನ್ಯದಿಂದ ಸಂಭವಿಸುವ ಸಾವನ್ನು ಬಹಳಷ್ಟು ತಗ್ಗಿಸಲು ಸಾಧ್ಯ. ಅಲ್ಲದೆ, ಮಾಲಿನ್ಯದಿಂದ ಸಂಭವಿಸುವ ಸಾವು ಭಾರತದಲ್ಲಿಯೇ ಅತ್ಯಧಿಕ ಎಂಬ ಕಳಂಕದಿಂದ ಹೊರ ಬರಲು ಸಹಕಾರಿ. ಮಾಲಿನ್ಯದಿಂದ ವಿಶ್ವದಲ್ಲಿ ವರ್ಷಕ್ಕೆ ₹ 300 ಲಕ್ಷ ಕೋಟಿಗೂ ಹೆಚ್ಚು ನಷ್ಟ ಉಂಟಾಗುತ್ತಿದೆ. ಇದು ಜಗತ್ತಿನ ಒಟ್ಟು ಆರ್ಥಿಕ ಉತ್ಪನ್ನದ ಶೇ 6.2ರಷ್ಟು. ಇದೇನೂ ಸಣ್ಣ ಮೊತ್ತವಲ್ಲ.

ಹಬ್ಬ ಹರಿದಿನಗಳಲ್ಲಿ ಪಟಾಕಿ ಹೊಡೆಯುವ ಪ್ರವೃತ್ತಿ ನಮ್ಮಲ್ಲಿ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಏಕೆಂದರೆ ಪಟಾಕಿಗಳು ಸಹ ಅತಿಯಾದ ಮಾಲಿನ್ಯ ಸೃಷ್ಟಿಸುತ್ತವೆ. ಆದರೆ ಈ ಸಲ ದೀಪಾವಳಿ ಅವಧಿಯಲ್ಲಿ ಬೆಂಗಳೂರಿನಲ್ಲಿ ಪಟಾಕಿ ಅಬ್ಬರ ಇಳಿದರೂ ಶಬ್ದ ಮಾಲಿನ್ಯ ಹೆಚ್ಚಾಗಿದೆ ಮತ್ತು ವಾಯು ಮಾಲಿನ್ಯ ಗಮನಾರ್ಹ ಪ್ರಮಾಣದಲ್ಲೇನೂ ಇಳಿಮುಖವಾಗಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳಿಂದ ಗೊತ್ತಾಗಿದೆ. ಇದಕ್ಕೆ ಕಾರಣ ಏನಿರಬಹುದು ಎಂಬುದರ ಅಧ್ಯಯನ ನಡೆಯಬೇಕು.

ಮಾಲಿನ್ಯ ಇಳಿಯದೇ ಇರಲು ಯಾವ ಹೊಸ ಅಂಶಗಳು ಸೇರಿಕೊಂಡಿವೆ ಎನ್ನುವುದನ್ನು ಗುರುತಿಸಬೇಕು. ಆ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು. ಈಗಲೂ ನಾವೆಲ್ಲ ಎಚ್ಚೆತ್ತುಕೊಳ್ಳದೇ ಹೋದರೆ ಮುಂಬರುವ ದಿನಗಳು ಮತ್ತಷ್ಟು ಘೋರವಾದಾವು. ನಮಗೆಲ್ಲ ಗೊತ್ತಿರುವಂತೆ ವಾಯು ಮತ್ತು ಜಲ ಮಾಲಿನ್ಯವನ್ನು ಒಂದೇ ದಿನದಲ್ಲಿ ನಿಯಂತ್ರಿಸುವುದು ಕಷ್ಟ. ಅದಕ್ಕೆ ಬಹುಬಗೆಯ ಕಾರ್ಯತಂತ್ರಗಳ ಅಗತ್ಯವಿದೆ. ಸಾಕಷ್ಟು ಸಮಯ ಹಿಡಿಯುತ್ತದೆ.

ಈಗಿನಿಂದಲೇ, ಈ ಕ್ಷಣದಿಂದಲೇ ಕಾರ್ಯಪ್ರವೃತ್ತರಾಗುವ ಅವಶ್ಯಕತೆಯಂತೂ ಇದೆ. ಅದನ್ನು ಸರ್ಕಾರವೇ ಮಾಡಲಿ ಎಂದು ಕೈಕಟ್ಟಿ ಸುಮ್ಮನಾಗುವುದಕ್ಕಿಂತ ಜನರು ಕೂಡ ಪಾಲ್ಗೊಳ್ಳಬೇಕು. ಏಕೆಂದರೆ ಮಾಲಿನ್ಯ ರಾಕ್ಷಸ ಬಲಿ ತೆಗೆದುಕೊಳ್ಳುವುದು ಸರ್ಕಾರವನ್ನಲ್ಲ, ವ್ಯಕ್ತಿಯನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.