ADVERTISEMENT

ಮುನ್ನೆಚ್ಚರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2014, 19:30 IST
Last Updated 10 ಜೂನ್ 2014, 19:30 IST

ಹಿಮಾಚಲ ಪ್ರದೇಶದ ಥಾಲೋಟ್‌ ಸಮೀಪದ ಬಿಯಾಸ್‌ ನದಿಯಲ್ಲಿ ಹೈದರಾಬಾದಿನ ವಿಎನ್‌ಆರ್‌ ಎಂಜಿನಿಯರಿಂಗ್‌ ಕಾಲೇಜಿನ 24 ವಿದ್ಯಾರ್ಥಿಗಳು ಕೊಚ್ಚಿ ಹೋದ ಪ್ರಕರಣ  ದುರದೃಷ್ಟಕರ. ಈ ಘಟನೆ ಎಲ್ಲರ ಮನ ಕಲಕುವಂತಹದ್ದು. ಆದರೆ ಇದರಲ್ಲಿ ಸರ್ಕಾರ, ಅಧಿಕಾರಿಗಳು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಸೇರಿ ಎಲ್ಲರೂ ಕಲಿಯಬೇಕಾದ ಪಾಠ ಇದೆ.

ವಿದ್ಯುತ್‌ ಯೋಜನೆ ಅಧಿಕಾರಿಗಳನ್ನು ಮಾತ್ರ ಇದಕ್ಕೆ ಹೊಣೆ ಮಾಡುವುದು ಸರಿಯಲ್ಲ. ನೀರಿನ ಹರಿವು ಇರುವ ಪ್ರದೇಶಗಳಲ್ಲಿ ಸೂಚನಾ ಫಲಕಗಳನ್ನು ಹಾಕಬೇಕಾದದ್ದು ಅಧಿಕಾರಿಗಳ ಪ್ರಾಥಮಿಕ ಕರ್ತವ್ಯ. ಜಲಾಶಯದಿಂದ ನೀರು ಬಿಡುವುದಕ್ಕೆ ಮೊದಲು ಎಚ್ಚರಿಕೆ ನೀಡಬೇಕಾಗಿತ್ತು ಎನ್ನುವುದನ್ನೂ ಒಪ್ಪಬಹುದು. ನೀರು ಬಿಡುವುದಕ್ಕೆ ಎಚ್ಚರಿಕೆ ಎಂದು ಸೈರನ್‌ ಹೊಡೆದಿದ್ದರೆ ಅದು ಸ್ಥಳೀಯರಿಗೆ ಗೊತ್ತಾಗಬಹುದೇ ವಿನಾ ಪ್ರವಾಸಿಗರಿಗೆ ಅದು ಅರ್ಥ­ವಾಗದೇ ಇರುವ ಸಾಧ್ಯತೆಯೇ ಹೆಚ್ಚು.

ಎಷ್ಟೇ ಎಚ್ಚರಿಕೆ ನೀಡಿದರೂ ನಮ್ಮ ಜನ ಪಾಠ ಕಲಿಯುವುದಿಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ನಮ್ಮ ರಾಜ್ಯದ ಮೇಕೆದಾಟು, ಸಂಗಮ ಮುಂತಾದ ಸ್ಥಳಗಳಲ್ಲಿ ಸಾಕಷ್ಟು ಎಚ್ಚರಿಕೆಯ ಫಲಕಗಳು ಇದ್ದರೂ ಪ್ರವಾಸಿಗರು ಸಾಯುವುದು ಕಡಿಮೆ­ಯಾ­ಗಿಲ್ಲ. ಹಿಮಾಚಲ ಪ್ರದೇಶದ ಘಟನೆಯನ್ನು ತೀವ್ರವಾಗಿ ತರಾಟೆಗೆ ತೆಗೆದು­ಕೊಂಡಿ­ರುವ ಅಲ್ಲಿನ ಹೈಕೋರ್ಟ್ ಇದು ಲಾರ್ಜಿ ವಿದ್ಯುತ್‌ ಯೋಜನೆ ಅಧಿಕಾರಿ­ಗಳ ನಿರ್ಲಕ್ಷ್ಯದ ಪರಮಾವಧಿ ಎಂದು ಹೇಳಿದೆ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಾಗಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ.

ಹೈದರಾಬಾದ್‌ನಿಂದ ಪ್ರವಾಸಕ್ಕೆ ಹೋದವರು ಚಿಕ್ಕ ಮಕ್ಕಳಲ್ಲ. ಎಂಜಿನಿ­ಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು. ಅವರಿಗೂ  ಎಚ್ಚರಿಕೆ ಇರಬೇಕಾಗಿತ್ತು. ಶಿಕ್ಷಕರು ಕೂಡ ವಿದ್ಯಾರ್ಥಿಗಳು ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ನೋಡಿಕೊಳ್ಳಬಹುದಾಗಿತ್ತು. ಇದೊಂದು ಚಿಕ್ಕ ಜಲಾಶಯ. ಹಿಮ ಕರಗಿ ಜಲಾಶಯ ತುಂಬಿದ್ದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಅನಿ­ವಾರ್ಯ­ವಾಗಿ ನೀರು ಬಿಡಲಾಗಿದೆ.

24 ವಿದ್ಯಾರ್ಥಿಗಳನ್ನು ಬಲಿ ತೆಗೆದು­-ಕೊಂಡ ಘಟನೆ ನಡೆದ ನಂತರ ಈಗ ಎಲ್ಲ ಕಡೆ ಸುರಕ್ಷತೆಯ ಮಾತನಾ­ಡ­ಲಾಗುತ್ತಿದೆ. ಒಬ್ಬರ ಮೇಲೆ ಒಬ್ಬರು ಆರೋಪಗಳನ್ನೂ ಮಾಡುತ್ತಿದ್ದಾರೆ. ಆದರೆ ಅಪಾಯಕಾರಿ ಪ್ರವಾಸಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾದುದು ಎಲ್ಲರ ಕರ್ತವ್ಯ.

ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ­ಗಳ ಶವ ಪತ್ತೆಗೆ ಸಾಕಷ್ಟು ಸಂಖ್ಯೆಯಲ್ಲಿ ದೋಣಿಗಳು ಲಭ್ಯವಿಲ್ಲ. ಅದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎನ್ನುವುದು ಮಾತ್ರ ಸಮರ್ಥನೀಯ ಅಲ್ಲ. ಶವಗಳನ್ನು ಪತ್ತೆ ಮಾಡಲು ಅಗತ್ಯವಾದ ಎಲ್ಲ ಸೌಕರ್ಯ ಮತ್ತು ಸಹಕಾರ­ವನ್ನು ಹಿಮಾಚಲಪ್ರದೇಶ ಸರ್ಕಾರ ನೀಡಬೇಕು.

ಪ್ರವಾಸಕ್ಕೆ ಮೊದಲು ಎಲ್ಲ ಪಾಲಕರಿಂದ ಒಪ್ಪಿಗೆ ಪಡೆಯಲಾಗಿತ್ತು ಎಂದು ಹೇಳಿ ಕಾಲೇಜು ಆಡಳಿತ ಮಂಡಳಿ ಕೂಡ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಅದು ಕೂಡ ಹೊಣೆ ಹೊರಲೇಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.