ADVERTISEMENT

ರಣಬಿಸಿಲು: ಸಕಾಲಿಕ ಯೋಜನೆ ಬೇಕು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2017, 2:53 IST
Last Updated 3 ಏಪ್ರಿಲ್ 2017, 2:53 IST
ರಣಬಿಸಿಲು: ಸಕಾಲಿಕ ಯೋಜನೆ ಬೇಕು
ರಣಬಿಸಿಲು: ಸಕಾಲಿಕ ಯೋಜನೆ ಬೇಕು   

ದೇಶದಲ್ಲಿ ಈ ಬಾರಿಯ ಬೇಸಿಗೆಯ ರಣಬಿಸಿಲಿನಿಂದ ಸಮಸ್ಯೆ ಹೆಚ್ಚಾಗುವ  ಸಾಧ್ಯತೆ ಇದೆ.  ಬೇಸಿಗೆ ಇನ್ನೂ ಕಾಲಿರಿಸುತ್ತಿರುವ ಸಂದರ್ಭದಲ್ಲಿಯೇ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿಬಿಟ್ಟಿದೆ. ಕರ್ನಾಟಕದಲ್ಲಿಯೂ ರಣಬಿಸಿಲು ತನ್ನ ಪ್ರತಾಪ ಆರಂಭಿಸಿದೆ. ಹೀಗಾಗಿ ಬೇಸಿಗೆ ಮತ್ತಷ್ಟು ತ್ರಾಸದಾಯಕವಾಗುವ ಅಪಾಯ ಇದೆ.

ಸತತ ಬರಗಾಲ ಹಾಗೂ ಮುಂಗಾರು ಮಳೆ ಸರಿಯಾಗಿ ಆಗದೇ ಇರುವುದು ಹೆಚ್ಚಿನ ಬಿಸಿಲು ಹಾಗೂ ಬಿಸಿಗಾಳಿಗೆ ಕಾರಣ ಎನ್ನಲಾಗಿದೆ. ಜೊತೆಗೆ ಎಲ್–ನಿನೊ ಪರಿಣಾಮ ಕೂಡ ಉಷ್ಣಾಂಶ ಹೆಚ್ಚಲು ಕಾರಣವಾಗಿದೆ. ರಾಜ್ಯದಲ್ಲಿಯೂ ಉಷ್ಣಾಂಶ ದಿನೇ ದಿನೇ ಹೆಚ್ಚಾಗುತ್ತಿದೆ.

ಮಾರ್ಚ್ ತಿಂಗಳ ಅಂತ್ಯದಲ್ಲಿಯೇ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಹಲವಾರು ಕಡೆ ದಿನದ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು.  ಬೇಸಿಗೆ ಇನ್ನೂ ಎರಡು ತಿಂಗಳು ಇರಲಿದೆ. ಮಳೆ ಬಾರದೇ ಇದ್ದರೆ ಜನಜೀವನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬಹುದು. 

ADVERTISEMENT

ಬಿಸಿಗಾಳಿಯ ಪರಿಣಾಮಗಳನ್ನು ಎದುರಿಸಲು ಕಾರ್ಯ ಯೋಜನೆ ಸಿದ್ಧ ಮಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ವಿಪತ್ತು ಪ್ರಾಧಿಕಾರ ಎಲ್ಲ ರಾಜ್ಯಗಳಿಗೆ ಈಗಾಗಲೇ ಸೂಚನೆ ನೀಡಿದೆ. ಬಿಸಿಗಾಳಿ ಇರುವ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೆ ಬರಬಾರದು ಎಂದೂ ಅದು ಸೂಚಿಸಿದೆ.

ಇದಕ್ಕೆ ಅನುಗುಣವಾಗಿ ರಾಜ್ಯದಲ್ಲಿಯೂ ಈಗಾಗಲೇ ಹೈದರಾಬಾದ್ ಕರ್ನಾಟಕದ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ರಾಜ್ಯದ 160 ತಾಲ್ಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು ಬರ ಪರಿಹಾರ ಕಾಮಗಾರಿ ಆರಂಭಿಸಲಾಗಿದೆ.

ಸಾಮಾನ್ಯವಾಗಿ ಬಿಸಿಗಾಳಿಯ ಪ್ರಭಾವ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಮಾತ್ರ ಇರುತ್ತಿತ್ತು. ಆದರೆ ಈಗ ಕೆಲವು ವರ್ಷಗಳಿಂದ ಉಷ್ಣಾಂಶ ಹೆಚ್ಚಳದ ಸಮಸ್ಯೆ ಮಲೆನಾಡು ಪ್ರದೇಶವನ್ನೂ ಕಾಡುತ್ತಿದೆ.

ಶಿವಮೊಗ್ಗ ನಗರದಲ್ಲಿಯೇ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತಿದೆ. ಇದು ವಾತಾವರಣದಲ್ಲಿ ಬದಲಾವಣೆ ಆಗಿರುವ ಸ್ಪಷ್ಟ ಸೂಚನೆ. ಒಂದೆಡೆ ಬಿಸಿಗಾಳಿ, ಇನ್ನೊಂದೆಡೆ ಕುಡಿಯುವ ನೀರಿನ ತೊಂದರೆ ರಾಜ್ಯವನ್ನು ಸತತವಾಗಿ ಕಾಡುತ್ತಿರುವ ಸಮಸ್ಯೆಗಳು. ರಾಜ್ಯದ ಬಹುತೇಕ ಜಲಾಶಯಗಳಲ್ಲಿ  ನೀರು ತಳ ಮುಟ್ಟಿದೆ. ಕುಡಿಯುವ ನೀರು ಪೂರೈಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ.

ಜನರಿಗೆ ನೀರು ಪೂರೈಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದ್ದರೂ ಪ್ರಾಣಿ– ಪಕ್ಷಿಗಳ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉಷ್ಣಾಂಶ ಹೆಚ್ಚಳದ ಪರಿಸ್ಥಿತಿಯನ್ನು ನಿರ್ವಹಿಸಲು ರಾಜ್ಯ ಸರ್ಕಾರ ಸ್ಪಷ್ಟ ಯೋಜನೆಗಳನ್ನು ರೂಪಿಸಬೇಕಾಗಿದೆ. ಜನರ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಬೇಕಿದೆ.

ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಜೊತೆಗೆ ವಿದ್ಯುತ್ ಹಾಗೂ ನೀರಿನ ಸರಬರಾಜು ವ್ಯತ್ಯಯವಾಗದಂತೆಯೂ ಕ್ರಮ ಕೈಗೊಳ್ಳಬೇಕಿದೆ. ಈ ವರ್ಷ ಬಿಸಿಗಾಳಿಗೆ ಮಹಾರಾಷ್ಟ್ರದಲ್ಲಿ ಈಗಾಗಲೇ  ಐವರು ಸತ್ತಿದ್ದಾರೆ.  ರಾಜಸ್ತಾನದ ನಂತರದ ಅತಿಹೆಚ್ಚು ಬರಡು ಭೂಮಿಯನ್ನು ಹೊಂದಿರುವ ಕರ್ನಾಟಕ ಉಷ್ಣಾಂಶ ಹೆಚ್ಚಳದ ಸ್ಥಿತಿಯನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಮುಂದೆ ಅನಾಹುತ ತಪ್ಪಿದ್ದಲ್ಲ.

ಬಿಸಿಗಾಳಿ ಹೆಚ್ಚಳಕ್ಕೆ ಎಲ್–ನಿನೊ ಕಾರಣ ಎಂದು ಹೇಳಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಹವಾಮಾನ ವೈಪರೀತ್ಯ ಹಾಗೂ ಉಷ್ಣಾಂಶ ಹೆಚ್ಚಳಕ್ಕೆ ಮಾನವನ ದುರಾಸೆಯೇ ಮುಖ್ಯ ಕಾರಣ. ತನ್ನ ಅನುಕೂಲಕ್ಕಾಗಿ ಕಾಡನ್ನು ನಾಶ ಮಾಡಿ, ಮಾಲಿನ್ಯ ಹೆಚ್ಚಿಸಿ, ನೀರನ್ನು ಬೇಕಾಬಿಟ್ಟಿ ಬಳಸಿ, ಅಂತರ್ಜಲವನ್ನು ಬರಿದು ಮಾಡಿ, ಕೆರೆ, ಹಳ್ಳಕೊಳ್ಳಗಳನ್ನು ಒತ್ತುವರಿ ಮಾಡಿ ಈಗ ಬಿಸಿಗಾಳಿ ಬೀಸುತ್ತಿದೆ ಎಂದು ಹುಯಿಲೆಬ್ಬಿಸಿದರೆ ಪ್ರಕೃತಿ ಕೇಳುವುದಿಲ್ಲ.

ಬಿಸಿಗಾಳಿ ತಡೆಯಲು ಮುನ್ನೆಚ್ಚರಿಕೆ ಕ್ರಮ ಎಂದರೆ ಕಾಡು ಸಮೃದ್ಧವಾಗಿರುವಂತೆ ನೋಡಿಕೊಳ್ಳುವುದು, ಬತ್ತಿ ಹೋದ ಕೆರೆಕಟ್ಟೆಗಳಲ್ಲಿ ನೀರು ತುಂಬುವಂತೆ ಮಾಡುವುದು, ನದಿಗಳು ಮತ್ತೆ ಹರಿಯುವಂತೆ ಮಾಡುವುದು ಇಂದಿನ ತುರ್ತು. ಬೇಸಿಗೆಯನ್ನು ಹೇಗೆ ಕಳೆಯುತ್ತೇವೆ ಎನ್ನುವುದಕ್ಕಿಂತ ಮುಂದಿನ ಮಳೆಗಾಲದಲ್ಲಿ ಮಳೆಯ ನೀರನ್ನು ಭೂಮಿಯಲ್ಲಿ ಹೇಗೆ ಇಂಗಿಸುತ್ತೇವೆ ಎನ್ನುವುದು ಬಹಳ ಮುಖ್ಯ.

ಭೂಮಿಯ ಮೇಲೆ ಬೀಳುವ ಪ್ರತಿ ಹನಿ ನೀರನ್ನೂ ಭೂಮಿಯಲ್ಲಿ ಇಂಗಿಸಿದರೆ, ಬರನಿರೋಧಕ ಜೀವನ ಶೈಲಿಯನ್ನು ರೂಢಿಸಿಕೊಂಡರೆ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತುಸು ತಗ್ಗಿಸಬಹುದು. ಇದು ಕೇವಲ ಸರ್ಕಾರ ಮಾಡುವ ಕೆಲಸ ಅಲ್ಲ. ಎಲ್ಲ ಜನರೂ ಕೈಜೋಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.