ADVERTISEMENT

ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಎನ್‌ಡಿಎ ರಾಜಕೀಯ ತಂತ್ರಗಾರಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಎನ್‌ಡಿಎ ರಾಜಕೀಯ ತಂತ್ರಗಾರಿಕೆ
ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಎನ್‌ಡಿಎ ರಾಜಕೀಯ ತಂತ್ರಗಾರಿಕೆ   

ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ  ಅಭ್ಯರ್ಥಿಯಾಗಿ ದಲಿತ ನಾಯಕ ರಾಮನಾಥ ಕೋವಿಂದ್ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತೊಮ್ಮೆ ಎಲ್ಲರನ್ನೂ ಅಚ್ಚರಿಗೆ ನೂಕಿದ್ದಾರೆ. ತುಂಬ ಲೆಕ್ಕಾಚಾರ ಹಾಕಿ ಚಾಣಾಕ್ಷ ರಾಜಕೀಯ ದಾಳ ಉರುಳಿಸಿದ್ದಾರೆ. ಹೀಗಾಗಿಯೇ, ಕೋವಿಂದ್ ಅವರ ಉಮೇದುವಾರಿಕೆಯನ್ನು ಏಕಾಏಕಿ ವಿರೋಧಿಸಲು ಪ್ರಮುಖ ಪ್ರತಿಪಕ್ಷಗಳಿಗೆ ಸಾಧ್ಯವಾಗಿಲ್ಲ. ಇದೇ ವಿಚಾರದಲ್ಲಿ ಅವುಗಳ ಮಧ್ಯೆ ಒಡಕು ಉಂಟಾದರೂ ಆಶ್ಚರ್ಯ ಇಲ್ಲ. ಆಗಲೇ ಬಿಹಾರದಲ್ಲಿ ಆಡಳಿತಾರೂಢ ಮಹಾಘಟಬಂಧನದ ಪ್ರಮುಖ ಪಕ್ಷಗಳಾದ ನಿತೀಶ್‌ ಕುಮಾರ್‌ ಅವರ ಜೆಡಿಯು ಮತ್ತು  ಲಾಲು ಪ್ರಸಾದ್ ಅವರ ಆರ್‌ಜೆಡಿ ಮಧ್ಯೆ ಭಿನ್ನಾಭಿಪ್ರಾಯದ ಕಂದರ ಉಂಟಾಗಿದೆ.   ಕೋವಿಂದ್ ಹೆಸರನ್ನು ನಿತೀಶ್‌ ಸ್ವಾಗತಿಸಿರುವುದು, ರಾಷ್ಟ್ರಪತಿ ಹುದ್ದೆಗೆ ಕೋವಿಂದ್ ಅನರ್ಹ ಎಂದು ಈಗಂತೂ ತಾನು ಹೇಳಲಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸಂದಿಗ್ಧ ತೋಡಿಕೊಂಡಿರುವುದು,  ಇನ್ನೂ ಒಳ್ಳೆಯ ಮತ್ತು ಜನಪ್ರಿಯ ದಲಿತ ಅಭ್ಯರ್ಥಿಯನ್ನು ಪ್ರತಿಪಕ್ಷಗಳು ನಿಲ್ಲಿಸದಿದ್ದರೆ ಕೋವಿಂದ್ ಅವರನ್ನು ಬೆಂಬಲಿಸಲು ಹಿಂಜರಿಕೆ ಇಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಇಂಗಿತ ನೀಡಿರುವುದು ಪ್ರತಿಪಕ್ಷ ಪಾಳಯದ  ಗೊಂದಲಕ್ಕೆ ನಿದರ್ಶನ. ಎನ್‌ಡಿಎ ಅಭ್ಯರ್ಥಿಗೆ ಬಿಜು ಜನತಾ ದಳ, ತೆಲಂಗಾಣ ರಾಷ್ಟ್ರ ಸಮಿತಿ, ವೈಎಸ್‌ಆರ್‌ ಕಾಂಗ್ರೆಸ್, ಪುದುಚೇರಿಯ ಎಐಎನ್‌ಆರ್‌ಸಿ ಈಗಾಗಲೇ ಬೆಂಬಲ ಘೋಷಿಸಿವೆ. ಎಐಎಡಿಎಂಕೆ ಬಣಗಳು ಇದೇ ಹಾದಿ ಹಿಡಿಯುವ ಸೂಚನೆಗಳಿವೆ. ಹೀಗಾಗಿ ಅವರು ದೇಶದ 14ನೇ ರಾಷ್ಟ್ರಪತಿಯಾಗುವುದು ಬಹುಪಾಲು ಖಚಿತ ಎನ್ನಬಹುದು.

ಕೋವಿಂದ್ ಅವರನ್ನು ಹೆಸರಿಸಿ ಬಿಜೆಪಿ ತನ್ನ ದಲಿತ ಕಾರ್ಯಸೂಚಿಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದೆ. ಅದರಲ್ಲಿಯೇ ಪ್ರತಿಪಕ್ಷಗಳ ಏಕತೆ ಮುರಿಯುವ ತಂತ್ರಗಾರಿಕೆಯೂ ಇದೆ. ದಲಿತರ, ಹಿಂದುಳಿದ ವರ್ಗಗಳ ಮತ್ತು ಬಡವರ ಮತಗಳನ್ನು ಒಗ್ಗೂಡಿಸಿ ಮತ್ತಷ್ಟು ಶಕ್ತಿಶಾಲಿಯಾಗುವ ಬಯಕೆಯೂ ಎದ್ದುಕಾಣುತ್ತದೆ. ಮುಂಬರುವ ತಿಂಗಳುಗಳಲ್ಲಿ  ಅನೇಕ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿವೆ. ಬಿಜೆಪಿಯನ್ನು ವಿರೋಧಿಸುವ ದಲಿತ ಯುವ ಶಕ್ತಿ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ದಲಿತರನ್ನು ಓಲೈಸುವ, ಅವರ ಬೆಂಬಲ ಉಳಿಸಿಕೊಳ್ಳುವ ಅನಿವಾರ್ಯ ಬಿಜೆಪಿಗಿದೆ. ಅದರ ಜತೆಗೇ ಆರ್‌ಎಸ್‌ಎಸ್‌ ಮತ್ತು ಹಿಂದುತ್ವದಿಂದಲೂ ಅದು ದೂರ ಸರಿಯುವಂತಿಲ್ಲ. ಇವೆಲ್ಲವೂ ಕೋವಿಂದ್ ಅವರ ಉಮೇದುವಾರಿಕೆ ಹಿಂದೆ ಕೆಲಸ ಮಾಡಿವೆ. ಅವರ ಪಕ್ಷ ನಿಷ್ಠೆ ಪ್ರಶ್ನಾತೀತ. ಆರ್‌ಎಸ್‌ಎಸ್‌ ಪ್ರಭಾವಲಯದಲ್ಲೇ ಇದ್ದರೂ ಕಟ್ಟಾ ಹಿಂದುತ್ವವಾದಿ ಎಂಬಂತೆ ಅವರೆಂದೂ ತೋರಿಸಿಕೊಂಡಿಲ್ಲ. ಒಳ್ಳೆಯ ಶೈಕ್ಷಣಿಕ ಹಿನ್ನೆಲೆಯೂ ಇದೆ. ಬಿಜೆಪಿ ಆರಂಭವಾದ ಕಾಲದಲ್ಲಿ ಸೇರಿದ ದಲಿತ ಮುಖಂಡ ಅವರು. ವಿವಾದವಿಲ್ಲದ ವ್ಯಕ್ತಿತ್ವ. ಹೀಗಾಗಿ ಅವರಿಗೆ ಪ್ರತಿಕೂಲವಾಗಿರುವ ಅಂಶಗಳು ಕಡಿಮೆ.

ಆದರೂ ಅವರದು ರಾಜಕೀಯೇತರ ಆಯ್ಕೆಯಂತೂ ಅಲ್ಲ. ಹಾಗೆ ನೋಡಿದರೆ ಎಸ್‌.ರಾಧಾಕೃಷ್ಣನ್, ಝಾಕೀರ್ ಹುಸೇನ್ ಮತ್ತು ಎ.ಪಿ.ಜೆ. ಅಬ್ದುಲ್‌ ಕಲಾಂ ಅವರನ್ನು ಬಿಟ್ಟರೆ ಉಳಿದ ಎಲ್ಲ ರಾಷ್ಟ್ರಪತಿಗಳು ರಾಜಕೀಯ ಹಿನ್ನೆಲೆಯಿಂದಲೇ ಬಂದವರು. ನೀಲಂ ಸಂಜೀವ ರೆಡ್ಡಿ ಅವರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಚುನಾವಣೆ ಎದುರಿಸಿಯೇ ಗೆದ್ದವರು. ಹೀಗಾಗಿ, ‘ರಾಷ್ಟ್ರಪತಿ ಅಭ್ಯರ್ಥಿ ರಾಜಕೀಯೇತರ ವ್ಯಕ್ತಿಯಾಗಿರಬೇಕು, ಅವಿರೋಧವಾಗಿ ಆಯ್ಕೆ ಮಾಡಬೇಕು’ ಎಂಬ ಮಾತುಗಳಿಗೆ ಅಂತಹ ತೂಕ ಏನಿಲ್ಲ. ಎಲ್ಲರಿಗೂ ರಾಜಕೀಯ ಲಾಭ– ನಷ್ಟ, ಮೇಲುಗೈಯ ಲೆಕ್ಕಾಚಾರಗಳೇ ಮುಖ್ಯ. ಕೋವಿಂದ್ ಆಯ್ಕೆಯೂ ಅದಕ್ಕೆ ಹೊರತಲ್ಲ.

ADVERTISEMENT

ರಾಷ್ಟ್ರಪತಿಯಾಗಿ ಅಧಿಕಾರಕ್ಕೆ ಏರುವವರು ಪಕ್ಷ ರಾಜಕಾರಣದಿಂದ ದೂರ ಇರಬೇಕು, ದೇಶದ ಹಿತವೊಂದೇ ಗುರಿಯಾಗಿರಬೇಕು, ಎಲ್ಲರ ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಬೇಕು. ಅದನ್ನು ಮುಂದಿನ ರಾಷ್ಟ್ರಪತಿ ಕೂಡ ಹುಸಿಗೊಳಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.