ADVERTISEMENT

ಲಂಚಗುಳಿತನದ ಕಳಂಕ ನಿವಾರಣೆಗೆ ಪಣ ತೊಡಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 20:29 IST
Last Updated 28 ಏಪ್ರಿಲ್ 2017, 20:29 IST
ಲಂಚಗುಳಿತನದ ಕಳಂಕ ನಿವಾರಣೆಗೆ ಪಣ ತೊಡಿ
ಲಂಚಗುಳಿತನದ ಕಳಂಕ ನಿವಾರಣೆಗೆ ಪಣ ತೊಡಿ   

ಪ್ರಗತಿಪಥದಲ್ಲಿ ಮುನ್ನಡೆದಿರುವ ದೇಶದ ಕೆಲವೇ ರಾಜ್ಯಗಳಲ್ಲಿ ಒಂದೆಂಬ ಹಿರಿಮೆಗೆ ಒಳಗಾದ ಕರ್ನಾಟಕ, ಲಂಚಗುಳಿತನದಲ್ಲೂ ರಾಷ್ಟ್ರದಲ್ಲಿ ಮೊದಲನೇ ಸ್ಥಾನ ಪಡೆದಿರುವುದು ವಿಪರ್ಯಾಸವೇ ಸರಿ. ದೆಹಲಿಯ ಸೆಂಟರ್ ಫಾರ್‌ ಮೀಡಿಯಾ ಸ್ಟಡೀಸ್‌ ನಡೆಸಿರುವ ಸಮೀಕ್ಷೆಯು ಕರ್ನಾಟಕದಲ್ಲಿ ಅತೀ ಹೆಚ್ಚು ಲಂಚಗುಳಿತನವಿದೆ ಎಂಬ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ.

ಇದರಿಂದ ರಾಜ್ಯದ ವರ್ಚಸ್ಸಿಗೆ ಧಕ್ಕೆ ಆಗಿದೆ. ಗ್ರಾಮ ಪಂಚಾಯಿತಿಗಳಿಂದ ಹಿಡಿದು ವಿಧಾನಸೌಧದವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನನ  ಮತ್ತು ಮರಣ ಪ್ರಮಾಣ ಪತ್ರ ಪಡೆಯುವುದರಿಂದ ಆರಂಭವಾಗುವ ಲಂಚದ ಹಾವಳಿ ಎಲ್ಲ ಸರ್ಕಾರಿ ಕಚೇರಿಗಳು, ಸಚಿವಾಲಯಗಳನ್ನು ವ್ಯಾಪಿಸಿರುವುದು ನಾಚಿಕೆಗೇಡಿನ ಸಂಗತಿ. ಒಂದೂವರೆ ದಶಕದಿಂದ ಈಚೆಗೆ ನಡೆದಿರುವ ಹಗರಣಗಳು ಕರ್ನಾಟಕದ  ವರ್ಚಸ್ಸನ್ನು ಕುಂದಿಸಿವೆ.

ಡಿನೋಟಿಫಿಕೇಷನ್‌ ಮತ್ತು ಅಕ್ರಮ ಗಣಿಗಾರಿಕೆ ಹಗರಣಗಳಲ್ಲಿ ಸಿಲುಕಿ ಮುಖ್ಯಮಂತ್ರಿ, ಮಂತ್ರಿಗಳು ಜೈಲಿಗೆ ಹೋಗಿ ಬಂದರೂ ನಮ್ಮ ಜನಪ್ರತಿನಿಧಿಗಳು ಪಾಠ ಕಲಿತಂತಿಲ್ಲ. ಆಡಳಿತ ವ್ಯವಸ್ಥೆ ಸ್ವಚ್ಛಗೊಳಿಸುವ ಇಚ್ಛಾಶಕ್ತಿ ತೋರುತ್ತಿಲ್ಲ. ಭ್ರಷ್ಟಾಚಾರದಲ್ಲಿ ಯಾವ ಪಕ್ಷದ ಸರ್ಕಾರವೂ ಹಿಂದೆ ಬಿದ್ದಿಲ್ಲ. ಒಂದನ್ನೊಂದು ಮೀರಿಸುವಂತೆ ಪೈಪೋಟಿಗಿಳಿದಿವೆ. ಹಿಂದೆ ಭ್ರಷ್ಟಾಚಾರ ಇರಲಿಲ್ಲವೆಂದಲ್ಲ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ.

ಆಗಿನ ಆಡಳಿತಗಾರರು ಮತ್ತು ಸರ್ಕಾರಿ ಬಾಬುಗಳು ಅಲ್ಪಸ್ವಲ್ಪ ಪ್ರಮಾಣದಲ್ಲಿ ಹಣ ಮಾಡುತ್ತಿದ್ದರಾದರೂ ಅಭಿವೃದ್ಧಿಗೂ ಒತ್ತು ಕೊಟ್ಟಿದ್ದರು. ಅವರಿಗೆ ದೂರದೃಷ್ಟಿ ಇತ್ತು. ಅದರಿಂದಾಗಿಯೇ ಒಂದಿಷ್ಟು ಪ್ರಗತಿ ಸಾಧ್ಯವಾಯಿತು. ಈಗ ದುಡ್ಡು ಮಾಡುವುದೇ ದಂಧೆ ಆಗಿದೆ. ಅದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಲು ನಮ್ಮ ಆಡಳಿತಗಾರರು ಹಿಂಜರಿಯುವುದಿಲ್ಲ.

ಜನರಿಗಾಗಿ ಜಾರಿಗೆ ತಂದಿರುವ ಭಾಗ್ಯ ಯೋಜನೆಗಳೂ ಹಣ ಮಾಡುವುದಕ್ಕೆ ಬಳಕೆಯಾಗುತ್ತಿರುವುದು ವಿಷಾದನೀಯ. ನಮ್ಮ ವ್ಯವಸ್ಥೆ ಎಷ್ಟೊಂದು ಭ್ರಷ್ಟವಾಗಿದೆ ಎಂಬುದಕ್ಕೆ ಚುನಾವಣೆಗಳಿಗೆ ಖರ್ಚಾಗುತ್ತಿರುವ ಹಣವೇ ಸಾಕ್ಷಿ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅನೇಕ ಮಾರ್ಗಗಳಿದ್ದರೂ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸರ್ಕಾರಿ ಸೇವೆಗಳಲ್ಲಿ ಜನಸಾಮಾನ್ಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ‘ಸಕಾಲ’ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬಹುತೇಕ ಇಲಾಖೆಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಆದರೂ ವ್ಯವಸ್ಥೆಯಲ್ಲಿ ಸುಧಾರಣೆ ಆಗಿಲ್ಲ. ಜನರ  ಗೋಳಾಟ ತಪ್ಪಿಲ್ಲ. ಲಂಚ ಕೇಳುವ ಪರಿಪಾಠ ನಿಂತಿಲ್ಲ.

ಈ ವಿಷಯದಲ್ಲಿ ಸರ್ಕಾರದ ಕಿವಿ ಹಿಂಡಲು ಲೋಕಾಯುಕ್ತ ಸಂಸ್ಥೆಯೂ ಇದೆ. ಗಣಿಗಾರಿಕೆ ಹಗರಣ ಬಯಲಿಗೆಳೆಯುವ ಮೂಲಕ ಈ ಸಂಸ್ಥೆ, ಇಡೀ ದೇಶ ಕರ್ನಾಟಕದ ಕಡೆ ನೋಡುವಂತೆ ಮಾಡಿತ್ತು. ಆದರೆ ಆ ನಂತರ ಅಧಿಕಾರ ಗದ್ದುಗೆ ಏರಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಿತು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸುವ ಅಧಿಕಾರವನ್ನೇ ಲೋಕಾಯುಕ್ತ ಸಂಸ್ಥೆಯಿಂದ ಕಿತ್ತುಕೊಳ್ಳಲಾಗಿದೆ. ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಭ್ರಷ್ಟಾಚಾರ ನಿಯಂತ್ರಣ ವಿಭಾಗ (ಎಸಿಬಿ) ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲ, ಲೋಕಾಯುಕ್ತರ ನೇಮಕವೂ ವಿವಾದವಾಗಿತ್ತು. 

ಹೀಗಾಗಿ ‘ಯಥಾ ರಾಜಾ ತಥಾ  ಪ್ರಜಾ’ ಎಂಬಂತೆ ಆಡಳಿತದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದನ್ನು ನಿಯಂತ್ರಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿರುವುದು ಸಹಜವೇ ಆಗಿದೆ.

ಇನ್ನಾದರೂ ನಮ್ಮ ರಾಜಕೀಯ ನಾಯಕರು ಜಾಗೃತರಾಗಬೇಕು. ಕರ್ನಾಟಕಕ್ಕೆ ಅಂಟಿಕೊಂಡಿರುವ ಭ್ರಷ್ಟಾಚಾರದ ಕಳಂಕ ತೊಳೆಯಬೇಕು. ಮಣ್ಣುಪಾಲಾಗಿರುವ ಪ್ರತಿಷ್ಠೆಯನ್ನು ಮರಳಿ ಪಡೆಯಬೇಕು. ಈ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವ ಅವಶ್ಯಕತೆಯಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.