ADVERTISEMENT

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST
ಸಿಬಿಎಸ್‌ಇ  ಪ್ರಶ್ನೆಪತ್ರಿಕೆ ಸೋರಿಕೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ
ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ   

ಸಿಬಿಎಸ್‌ಇ  ಪರೀಕ್ಷೆಯ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಎಕನಾಮಿಕ್ಸ್‌ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗಿಂತ ಕೆಲವು ಗಂಟೆಗಳ ಮುಂಚೆಯೇ ಸೋರಿಕೆಯಾದದ್ದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ತೀವ್ರ ತಳಮಳ ಉಂಟು ಮಾಡಿದೆ. ಪರೀಕ್ಷೆ ಆರಂಭವಾಗುವುದಕ್ಕೆ ಮುಂಚೆಯೇ ವಾಟ್ಸಾಪ್‌ ಮೂಲಕ ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳಿಗೆ ಸಿಕ್ಕಿರುವುದು ನೋಡಿದರೆ, ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ವ್ಯವಸ್ಥಿತ ತಂಡವೊಂದು ಕೆಲಸ ಮಾಡುತ್ತಿರುವಂತೆ ಭಾಸವಾಗುತ್ತಿದೆ.

ಮಂಡಳಿಯ ಪರೀಕ್ಷಾ ಪ್ರಕ್ರಿಯೆಯಲ್ಲಿ ಸಾಕಷ್ಟು ನ್ಯೂನತೆಗಳಿವೆ ಎನ್ನುವುದೂ ಇದರಿಂದ ಬಯಲಿಗೆ ಬಂದಿದೆ. ಆರಂಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ ಎಂದೇ ವಾದಿಸಿದ ಸಿಬಿಎಸ್‌ಸಿ ಅಧಿಕಾರಿಗಳು, ಕೊನೆಗೆ ತಪ್ಪು ಒಪ್ಪಿಕೊಂಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡೂ ವಿಷಯಗಳ ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸಲು ಮಂಡಳಿ ಮುಂದಾಗಿದೆ.

ಹಾಗೆ ಹೇಳುವುದು ಮಂಡಳಿಯ ಅಧಿಕಾರಿಗಳಿಗೆ ಬಹಳ ಸುಲಭ. ಆದರೆ ಚೆನ್ನಾಗಿ ಓದಿ, ಪರೀಕ್ಷೆಯನ್ನೂ ಚೆನ್ನಾಗಿ ಬರೆದಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಇದರಿಂದ ಉಂಟಾಗಿರುವ ಮನಃಕ್ಲೇಶಕ್ಕೆ ಯಾರು ಹೊಣೆ? ಸಿಬಿಎಸ್‌ಇ ಮಂಡಳಿ ಹೊಣೆಗೇಡಿತನಕ್ಕೆ ವಿದ್ಯಾರ್ಥಿಗಳು ತಲೆ ಮತ್ತು ಬೆಲೆ ಕೊಡಬೇಕಾಗಿ ಬಂದಿರುವುದು ನಿಜಕ್ಕೂ ನೋವಿನ ಸಂಗತಿ.

ADVERTISEMENT

ಅತ್ಯಂತ ರಹಸ್ಯವಾಗಿ ಇಡಬೇಕಿದ್ದ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗುತ್ತವೆ ಎಂದರೆ, ಮಂಡಳಿಯ ಅಧಿಕಾರಿಗಳು ತಮ್ಮ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಮಾತ್ರವಲ್ಲ, ಲಂಚಕ್ಕೆ ಕೈಯೊಡ್ಡಿ ಈ ಸಂಚಿನಲ್ಲಿ ಶಾಮೀಲಾಗಿದ್ದಾರೆ ಎಂದೂ ಭಾವಿಸಬಹುದು. ವಿದ್ಯಾರ್ಥಿಗಳು ರೊಚ್ಚಿಗೆದ್ದು ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ತಡೆಯಲು ಮಾನವ ಸಂಪನ್ಮೂಲ ಖಾತೆಯ ಸಚಿವ ಪ್ರಕಾಶ್‌ ಜಾವ್ಡೇಕರ್‌ ಅವರ ದೆಹಲಿಯ ಮನೆಗೆ ಪೊಲೀಸ್‌ ಭದ್ರತೆಯನ್ನೂ ಒದಗಿಸಲಾಗಿದೆ.

ಮೂರು ವರ್ಷಗಳ ಹಿಂದೆ, ಸ್ಮೃತಿ ಇರಾನಿಯವರು ಮಾನವ ಸಂಪನ್ಮೂಲ ಖಾತೆಯ ಸಚಿವರಾಗಿದ್ದಾಗಲೂ ಹೀಗೆಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆಗ ಲೋಕಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವೆ, ಪ್ರಶ್ನೆ ಪತ್ರಿಕೆಗಳ ಗೋಪ್ಯತೆ ಕಾಪಾಡಲು ಮತ್ತು ಮಂಡಳಿಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದರು. ಪ್ರತಿ ವಲಯಕ್ಕೂ ಪ್ರಶ್ನೆಪತ್ರಿಕೆಗಳ ರಹಸ್ಯ ಕಾಪಾಡುವುದಕ್ಕೆ ವಿಶೇಷ ಅಧಿಕಾರಿಗಳನ್ನು ನೇಮಿಸುವುದಾಗಿ ಅವರು ತಿಳಿಸಿದ್ದರು.

ಈಗ ಮತ್ತೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ನಮ್ಮ ಪರೀಕ್ಷಾ ಪದ್ಧತಿಯಲ್ಲಿ ಇರುವ ಲೋಪದೋಷಗಳ ಬಗ್ಗೆ ಅಮೂಲಾಗ್ರ ಅವಲೋಕನ ನಡೆಸಲು ಇದು ಸಕಾಲ. ಕೊನೇಕ್ಷಣದಲ್ಲಿ ಇಂತಹ ಅವ್ಯವಸ್ಥೆಗಳು ಉಂಟಾದರೆ ತಕ್ಷಣ ಬದಲಿ ಪ್ರಶ್ನೆಪತ್ರಿಕೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಂಡಳಿ ಏಕೆ ಮಾಡಿಲ್ಲ? ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳನ್ನು ಮಾಡುವವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವುದು ನಮ್ಮಲ್ಲಿ ಏಕೆ ನಡೆಯುತ್ತಿಲ್ಲ? ಕಠಿಣ ಶಿಕ್ಷೆಯ ಭಯವಿಲ್ಲದ್ದರಿಂದಲೇ ಇಂತಹ ಅಕ್ರಮಗಳು ಪದೇ ಪದೇ ನಡೆಯುತ್ತಿವೆ.

ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಯಂತ್ರಗಳಾಗುವಂತೆ ಕುಮ್ಮಕ್ಕು ನೀಡುವ ಖಾಸಗಿ ಟ್ಯೂಷನ್‌ ಸೆಂಟರ್‌ಗಳ ಪಾತ್ರ ಇಂತಹ ಸೋರಿಕೆಗಳಲ್ಲಿ ಅವಶ್ಯವಾಗಿ ಇರುತ್ತದೆ. ದೆಹಲಿಯಲ್ಲಿ ಈಗಾಗಲೇ  ಕೆಲವು ಖಾಸಗಿ ಟ್ಯೂಷನ್‌ ನೀಡುವವರನ್ನು ತನಿಖೆಗೆ ಒಳಪಡಿಸಲಾಗಿದೆ. ಈ ತನಿಖೆ ತಾರ್ಕಿಕ ಅಂತ್ಯಕ್ಕೆ ತಲುಪುವಂತೆ ನೋಡಿಕೊಳ್ಳಬೇಕಿದೆ. ಪರೀಕ್ಷಾ ಪದ್ಧತಿಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ವಿಶ್ವಾಸವನ್ನೇ ಕಳೆದುಕೊಳ್ಳುವಂತಾದರೆ ಇಡೀ ಶಿಕ್ಷಣ ವ್ಯವಸ್ಥೆಯೇ ಕುಸಿದುಬೀಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.