ADVERTISEMENT

ಸೇನಾಡಳಿತ ಪರಿಹಾರವಲ್ಲ

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:30 IST
Last Updated 25 ಮೇ 2014, 19:30 IST

ಪ್ರಜಾಸತ್ತೆಯನ್ನು ಕಾಪಾಡಿಕೊಂಡು, ಬೆಳೆಸಿಕೊಂಡು ಬರುವುದು ಸುಲಭದ ಕೆಲಸವಂತೂ ಅಲ್ಲ.  ರಾಜಕೀಯ ನಾಯಕರು ಸ್ವಲ್ಪ ಎಡವಿ­ದರೂ ಅಧಿಕಾರವನ್ನು ಕಬಳಿಸಲು ಸೇನೆ ಹೊಂಚುಹಾಕುತ್ತಲೇ ಇರುತ್ತದೆ. ಇದು ಥಾಯ್ಲೆಂಡ್ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಅಲ್ಲಿ ಪ್ರಜಾಪ್ರತಿನಿಧಿಗಳ ಸರ್ಕಾರವನ್ನು ಸೇನೆ ಪದಚ್ಯುತಗೊಳಿಸಿದೆ. ಸೇನಾ­ಡಳಿತ ಜಾರಿಗೆ ಬಂದಿದೆ. ಸೇನಾ ಮುಖ್ಯಸ್ಥ ಜನರಲ್ ಪ್ರಯೂತ್ ಚಾನ್ ಒಚಾ ಅವರು ಪ್ರಧಾನಿ ಹುದ್ದೆಯನ್ನೂ ಕೈಗೆ ತೆಗೆದುಕೊಂಡಿದ್ದಾರೆ. ಸೇನಾ ಕ್ರಾಂತಿ ನಡೆದರೆ ಅಥವಾ ಸರ್ವಾಧಿಕಾರಿ ಕೈಗೆ ಅಧಿಕಾರ ಬಂದರೆ ಮಾಡುವ ಮೊದಲ ಕೆಲಸ ಸಂವಿಧಾನ ರದ್ದತಿ ಮತ್ತು ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು. ಥಾಯ್ ಸೇನೆ ಕೂಡ ಇದೇ ಕೆಲಸ ಮಾಡಿದೆ. ಪರಿಸ್ಥಿತಿ ಇಷ್ಟೆಲ್ಲ ವಿಷಮಿಸಲು ಸೇನೆಗಿಂತ ರಾಜಕಾರಣಿಗಳೇ ಕಾರಣ ಎನ್ನುವುದು ಥಾಯ್ಲೆಂಡ್‌ನ ದುರಂತ.

ಅಲ್ಲಿ ನಾಗರಿಕ ಅಂತಃಕಲಹ ಅನೇಕ ತಿಂಗಳಿ­ನಿಂದಲೂ ಇತ್ತು. ಪ್ರಧಾನಿಯಾಗಿದ್ದ ಯಿಂಗ್ಲಕ್ ಶಿನವಾತ್ರ ಅವರ ಆಯ್ಕೆ ಮತ್ತು ಅವರ ಕಾಲದಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ಪ್ರತಿಪಕ್ಷ­ಗಳು ಒಪ್ಪಿಕೊಂಡಿರಲೇ ಇಲ್ಲ. ಅಧಿಕಾರಕ್ಕೆ ಏರಬೇಕು ಎಂದರೆ ಪ್ರಜಾ­ಸತ್ತಾತ್ಮಕ­ವಾಗಿ ಚುನಾವಣೆ ಎದುರಿಸಿ ಗೆಲ್ಲಬೇಕು. ಅದನ್ನು ಬಿಟ್ಟು ಪ್ರತಿ­ಭಟನೆ, ಚಳವಳಿಗಳ ಮೂಲಕ ಸರ್ಕಾರವನ್ನು ಇಳಿಸಲು ಮುಂದಾಗುವುದು, ಚುನಾವಣೆ ಬಹಿಷ್ಕರಿಸುವುದು ಸರಿಯಾದ ಮಾರ್ಗ ಅಲ್ಲ. ಆದರೆ ಥಾಯ್ ಪ್ರತಿಪಕ್ಷಗಳು ಅರಾಜಕತೆ ಸೃಷ್ಟಿಸಲು ಯತ್ನಿಸುವ ಮೂಲಕ ಎಡವಿದವು. ಪ್ರಧಾನಿ ಯಿಂಗ್ಲಕ್ ಕೂಡ ರಾಜಕೀಯ ಎದುರಾಳಿಗಳನ್ನು ವಿಶ್ವಾಸಕ್ಕೆ ತೆಗೆದು­ಕೊಳ್ಳಲು ಮುಂದಾಗಲಿಲ್ಲ.

ಈಚೆಗೆ ನ್ಯಾಯಾಲಯವೊಂದು ಪ್ರಧಾನಿ ಪಟ್ಟ­ದಿಂದ ಯಿಂಗ್ಲಕ್ ಅವರನ್ನು ಅನರ್ಹಗೊಳಿಸಿದ ನಂತರವೂ ಪರಿಸ್ಥಿತಿ ಸರಿ­ಹೋಗಿ­ರಲಿಲ್ಲ. ದೇಶದ ಪ್ರಮುಖ ಆದಾಯ ಮೂಲವಾದ ಪ್ರವಾಸೋದ್ಯಮ ಕುಸಿದಿದೆ. ಜನಸಾಮಾನ್ಯರ ಬದುಕು ದುರ್ಬರವಾಗಿದೆ. ಗ್ರಾಮೀಣ ಪ್ರದೇಶದ ಬಡ ಜನ ಶಿನವಾತ್ರ ಅವರನ್ನು ಬೆಂಬಲಿಸಿದರೆ ನಗರವಾಸಿ ಮಧ್ಯಮ ವರ್ಗ ಪ್ರತಿಪಕ್ಷ ಮುಖಂಡ ಸುಥೆಪ್ ಥಗ್ಸುಬನ್ ಅವರ ಬೆನ್ನಿಗಿದೆ.  ರಾಜಕೀಯವಾಗಿ ಇಡೀ ದೇಶವೇ ಹೋಳಾಗಿದೆ. ಇಷ್ಟಾ­ದರೂ ರಾಜಕೀಯ ಬಿಕ್ಕಟ್ಟು ಪರಿಹಾರಕ್ಕಾಗಿ ಪ್ರಧಾನಿ ಮತ್ತು ಪ್ರತಿಪಕ್ಷ ಮುಖಂಡರ ಮಧ್ಯೆ ಮಾತುಕತೆ ನಡೆಯಲಿ ಎಂದು ಸೇನೆ ಸಂಯಮ ವಹಿಸಿತ್ತು. ಆಗಲೂ ರಾಜಕಾರಣಿಗಳು ವಿವೇಕ ತೋರಿಸಲಿಲ್ಲ. ಅದರ ಫಲವೇ ಸೇನಾ ಕ್ರಾಂತಿ.

ಥಾಯ್ಲೆಂಡ್‌ನ ಆಂತರಿಕ ವಿದ್ಯಮಾನದ ಬಗ್ಗೆ ತಲೆಕೆಡಿಸಿಕೊಳ್ಳುವುದು ಅನಗತ್ಯ ಎಂದು ನಾವು ಅಂದುಕೊಳ್ಳುವುದು ತಪ್ಪು. ಏಕೆಂದರೆ ಹಿಂದೂ­ಮಹಾಸಾಗರದಲ್ಲಿ ಅದು ನೆರೆ ರಾಷ್ಟ್ರ.  ಭಾರತೀಯರ ಪಾಲಿಗೆ ಅದೊಂದು ಆಕರ್ಷಣೀಯ ಪ್ರವಾಸಿ ತಾಣ. ಸಾಂಸ್ಕೃತಿಕವಾಗಿಯೂ ನಮಗೆ ಹತ್ತಿರ. ದಕ್ಷಿಣ ಏಷ್ಯಾ ಉಪಖಂಡದಲ್ಲಿ ನಡೆಯಬಹುದಾದ ಯಾವುದೇ ರಾಜ­ಕೀಯ ಅಸ್ಥಿರತೆ ಈ ವಲಯದ ಇತರ ದೇಶಗಳ ಮೇಲೂ ಪ್ರಭಾವ ಬೀರು­ತ್ತದೆ. ಆದ್ದರಿಂದ ಅಲ್ಲಿ ಬೇಗ ಪ್ರಜಾಸತ್ತೆ ಮರಳುವುದು ಒಳ್ಳೆಯದು.  ಈ ವಿಷ­ಯದಲ್ಲಿ ಥಾಯ್ಲೆಂಡ್‌ನ ರಾಜಕೀಯ ಮುಖಂಡರು ಪ್ರತಿಷ್ಠೆ ಬದಿಗಿಡ­ಬೇಕು. ಪ್ರಜಾಸತ್ತೆಗೆ ಪರ್ಯಾಯ ಇಲ್ಲ ಎಂಬುದನ್ನು ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.