ADVERTISEMENT

ಹೊಸ ತಿರುವು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2014, 19:30 IST
Last Updated 15 ಡಿಸೆಂಬರ್ 2014, 19:30 IST

ಪೆರು ದೇಶದ ಲಿಮಾದಲ್ಲಿ ವಿಶ್ವಸಂಸ್ಥೆ ಹಮ್ಮಿಕೊಂಡಿದ್ದ ಹವಾಮಾನ ಶೃಂಗಸಭೆಯಲ್ಲಿ ಭಾರತದ ನಿಲುವಿಗೆ ಮುಂದುವರಿದ ರಾಷ್ಟ್ರಗಳು ಮಣಿದಿವೆ. ಇದು ಅಭಿವೃದ್ಧಿಶೀಲ ದೇಶಗಳಿಗೆ ದೊರೆತ ವಿಜಯ ಎಂದೇ ಹೇಳಬಹುದು. ಇಂಗಾಲ ಹೊರಸೂಸುವಿಕೆ ವಿಚಾರದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಮೊದಲಿನಿಂದಲೂ ತಾರತಮ್ಯ ನೀತಿಯನ್ನೇ ಅನು­ಸರಿಸುತ್ತಿದ್ದವು. ಅಭಿವೃದ್ಧಿಶೀಲ ದೇಶಗಳಿಗೆ ಒಂದು ಸೂತ್ರ, ತಮಗೇ ಒಂದು ಸೂತ್ರ ಎನ್ನುವ ನಿಲುವು ತಳೆದ ಕಾರಣಕ್ಕೆ ೨೦೦೯ರಲ್ಲಿ ಕೋಪನ್‌­ಹೇಗನ್‌­ನಲ್ಲಿ ನಡೆದ ಹವಾಮಾನ ಶೃಂಗಸಭೆ ಸಂಪೂರ್ಣವಾಗಿ ವಿಫಲವಾಗಿತ್ತು. ಇದೀಗ ಹವಾಮಾನ ವೈಪರೀತ್ಯ ತಡೆಗೆ ಜಂಟಿ ಪ್ರಯತ್ನ ನಡೆಸಬೇಕೆಂಬ ಭಾರತದ ವಾದಕ್ಕೆ ವಿಶ್ವಸಂಸ್ಥೆಯ ೧೯೪ ಸದಸ್ಯ ರಾಷ್ಟ್ರಗಳಿಂದ ಸಮ್ಮತಿ ದೊರೆ­ತಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಪೆರುವಿನ ಪರಿಸರ ಸಚಿವ ಮ್ಯಾನುವೆಲ್‌ ಪುಲ್ಗರ್‌ ವಿಡಾಲ್‌ ಘೋಷಿಸಿದ್ದಾರೆ. ಇದೊಂದು ಹೊಸ ಬೆಳವಣಿಗೆ ಮತ್ತು ಭಾರತದ ನಿರಂತರ ಪ್ರಯತ್ನಕ್ಕೆ ಸಂದ ಜಯ.

ಆಯಾ ದೇಶಗಳ ಸಾಮರ್ಥ್ಯದ ಆಧಾರದ ಮೇಲೆ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಅಂಶ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಕರಡು ರೂಪದಲ್ಲಿ ಮಂಡನೆಯಾಗಲಿದೆ. ಇದಕ್ಕೆ ಒಪ್ಪಿಗೆ ದೊರೆತರೆ ೨೦೨೦ರಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಹಸಿರುಮನೆ ಪರಿಣಾಮ ಕಡಿಮೆ ಮಾಡಲು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಕೈಗಾರಿಕಾ ಕ್ರಾಂತಿ ಮೂಲಕ ಅತಿಹೆಚ್ಚು ಪ್ರಮಾಣದಲ್ಲಿ ಇಂಗಾಲವನ್ನು ಪರಿಸರಕ್ಕೆ ಹೊರಸೂಸುತ್ತಿರುವ ಅಭಿವೃದ್ಧಿ ಹೊಂದಿದ ದೇಶಗಳು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿವೆ. ಇದೀಗ ಇಂಗಾಲ ಪ್ರಮಾಣ ಕಡಿಮೆ ಮಾಡಲು ಆ ದೇಶಗಳೇ ಮುಂದಾಗಬೇಕಿದೆ. ಇದರ ಜೊತೆ ಜೊತೆಯಲ್ಲೇ ಅಭಿವೃದ್ಧಿಶೀಲ ದೇಶಗಳಿಗೂ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಹೊಂದಲು ಅವಕಾಶ ದೊರಕುತ್ತದೆ ಎಂಬಂಥ ವಾದ ಇದೆ. ಇಂಗಾಲದ ಅನಿಲ ಹೊರ­ಸೂಸುವಿಕೆಗೆ ಅತಿಹೆಚ್ಚು ಕೊಡುಗೆ ನೀಡುತ್ತಿರುವ ಅಮೆರಿಕ, ಚೀನಾ, ಯುರೋಪ್‌ ದೇಶಗಳು ೨೦೩೦ರ ವೇಳೆಗೆ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಒಪ್ಪಿಗೆ ನೀಡಿವೆ.

ಹೆಚ್ಚುತ್ತಿರುವ ಉಷ್ಣಾಂಶವನ್ನು ತಗ್ಗಿಸುವುದು ಅಗತ್ಯ. ಇದಕ್ಕಾಗಿ ಎಲ್ಲಾ ರಾಷ್ಟ್ರಗಳು ಪಳೆಯುಳಿಕೆ ಇಂಧನದ ಬದಲು ನವೀಕೃತ ಇಂಧನ ಬಳಕೆಯತ್ತ ಸಾಗಬೇಕಿದೆ. ಆದರೆ ಗುರಿ ಸಾಧನೆ ಮಾರ್ಗೋ­ಪಾಯಗಳ ಕುರಿತು ಇನ್ನೂ ಸಂಪೂರ್ಣ ಕಲ್ಪನೆ ಇಲ್ಲ. ಅಭಿವೃದ್ಧಿ­ಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನ ವರ್ಗಾವಣೆ ಮತ್ತಿತರ ಸಹಾಯಕ್ಕಾಗಿ ಸಾವಿರ ಕೋಟಿ ಡಾಲರ್‌ (ಸುಮಾರು ₨ 62 ಸಾವಿರ ಕೋಟಿ) ನಿಧಿ ಸ್ಥಾಪಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಹಸಿರು ತಂತ್ರಜ್ಞಾನ ವರ್ಗಾವಣೆ­ಯಲ್ಲಿ ಮುಂದುವರಿದ ರಾಷ್ಟ್ರಗಳು ಧಾರಾಳತನ ತೋರಬೇಕು. ನವೀನ ತಂತ್ರ­ಜ್ಞಾನವನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಜೊತೆಗೆ ಎಲ್ಲಾ ರಾಷ್ಟ್ರಗಳು ಹವಾಮಾನ ವೈಪರೀತ್ಯದ ವಿಚಾರದಲ್ಲಿ ತಮ್ಮ ಹೊಣೆಯನ್ನು ಅರಿತು ಕೆಲಸ ಮಾಡಬೇಕು. ಇಲ್ಲವಾದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT