ADVERTISEMENT

‘ಅತಿಥಿ’ ಶೋಷಣೆ ತಪ್ಪಲಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST

ನಮ್ಮ ಸರ್ಕಾರದ ಆದ್ಯತೆಗಳೇ ಅರ್ಥವಾಗುವುದಿಲ್ಲ. ಯಾವ ಕ್ಷೇತ್ರದ ಕಡೆ ಹೆಚ್ಚು ಗಮನಹರಿಸಬೇಕಿತ್ತೊ ಅದನ್ನೇ ಕಡೆಗಣಿಸುವುದು ಆಳುವವರ ನೀತಿ ಇದ್ದಂತಿದೆ. ಜ್ಞಾನವಂತ ಸಮಾಜ ರೂಪಿಸುವಲ್ಲಿ ನಿರ್ಣಾ­ಯಕ ಪಾತ್ರ ವಹಿಸುವ ಶಿಕ್ಷಣ ಕ್ಷೇತ್ರ ಇದಕ್ಕೆ ಬಹುದೊಡ್ಡ ನಿದರ್ಶನವಾಗಿ ನಿಲ್ಲುತ್ತದೆ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಪ್ರತೀ ಹಂತವೂ ಬೋಧಕರ ಕೊರತೆಯನ್ನು ಎದುರಿಸುತ್ತಿದೆ. ಶಿಕ್ಷಕರು ಹಾಗೂ ಅಧ್ಯಾಪಕರ ನೇಮಕದಲ್ಲಿ ಸರ್ಕಾರ ಮುತುವರ್ಜಿಯನ್ನೇ ವಹಿಸುತ್ತಿಲ್ಲ.

ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ಹಂಗಾಮಿ ವ್ಯವಸ್ಥೆಯಡಿ ಕಾಲ ದೂಡುವ ತಂತ್ರದ ಮೊರೆ ಹೋಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳ­ವಣಿಗೆ ಅಲ್ಲ. ಶಿಕ್ಷಣದ ಮೇಲಿನ ವೆಚ್ಚ ಅನುತ್ಪಾದಕ ಎಂದು ಪರಿಗಣಿಸುವ ಆಡಳಿತಶಾಹಿಯ ಧೋರಣೆಯೇ ಈ ಹಂಗಾಮಿ ನೇಮಕಾತಿ ಪ್ರವೃತ್ತಿ ಹೆಚ್ಚಲು ಕಾರಣ. ಇದಕ್ಕೆ ಕಡಿವಾಣ ಹಾಕದೇ ಹೋದರೆ ಯುವಪೀಳಿಗೆಯ ಭವಿಷ್ಯ ಆತಂಕಕ್ಕೆ ಒಳಗಾಗುವ  ಅಪಾಯ ಇದೆ. ಶಾಲಾ–ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಸಂಖ್ಯೆ ಏರುತ್ತಿದೆ. ಇದು ಅಗತ್ಯವೂ ಇರಬಹುದು. ಆದರೆ ಅವುಗಳನ್ನು ದಕ್ಷವಾಗಿ, ಸುಪುಷ್ಟವಾಗಿ ರೂಪಿಸಲು ಬೇಕಾದ ದೀರ್ಘಾವಧಿ ಯೋಜನೆಗಳಾಗಲಿ, ಶೈಕ್ಷಣಿಕ ಗುರಿಯಾಗಲಿ ಇಲ್ಲದೇ ಹೋದರೆ ಉದ್ದೇಶ ಈಡೇರುವುದಾದರೂ ಹೇಗೆ? ಕೌಶಲಯುತ  ಮಾನವ ಸಂಪನ್ಮೂಲವನ್ನು ಒದಗಿಸುವುದು ಶಿಕ್ಷಣವಾದರೆ, ಅದಕ್ಕೆ ಬುನಾದಿಯಾದ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಒಳ್ಳೆಯ ಶಿಕ್ಷಕ ವರ್ಗ. ಅಂಥವರ ಅಳಲು ಸರ್ಕಾರದ ಕಿವಿಗೇ ಬೀಳದಿರುವುದು ದುರದೃಷ್ಟಕರ.

ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಅವರನ್ನು ನಡೆಸಿ­ಕೊ­ಳ್ಳುತ್ತಿರುವ ರೀತಿ ಕಿಂಚಿತ್ತೂ ಸರಿಯಲ್ಲ. ಪಿಎಚ್‌.ಡಿ ಮಾಡಿಕೊಂಡವರಿಗೆ ತಿಂಗ­ಳಿಗೆ ₨ 10 ಸಾವಿರ, ಉಳಿದವರಿಗೆ ₨ 8 ಸಾವಿರ ವೇತನ ನೀಡಲಾಗುತ್ತಿದೆ. ಅದೂ ವರ್ಷದಲ್ಲಿ 10 ತಿಂಗಳು ಮಾತ್ರ ಕೆಲಸ. ಅತಿಥಿ ಉಪನ್ಯಾಸಕರಿಗೆ ಕೇರಳ, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ನೀಡುತ್ತಿರುವ ಸಂಬಳಕ್ಕೆ ಹೋಲಿ­ಸಿದರೆ ಕರ್ನಾಟಕದಲ್ಲಿ ನೀಡುತ್ತಿರುವ ಮೊತ್ತ ತೀರಾ ಕಡಿಮೆ. ಏಕೀ ತಾರತಮ್ಯ? ವಿಚಿತ್ರವೆಂದರೆ ಆ ವೇತನವೂ ನಿಗದಿತವಾಗಿ ಪ್ರತೀ ತಿಂಗಳು ದೊರೆಯುತ್ತಿಲ್ಲ. ಮೂರು ತಿಂಗಳಿಗೋ, ಆರು ತಿಂಗಳಿಗೋ ಒಟ್ಟಿಗೆ ವೇತನ ಎಂಬಂತಾಗಿದೆ. ಈಗೇನೊ ಪ್ರತೀ ತಿಂಗಳು ಸಂಬಳ ವಿತರಿಸುವುದಾಗಿ ಸಚಿವರು ಹೇಳಿದ್ದಾರೆ. ಇದು ಹೇಳಿಕೆ ಮಟ್ಟದಲ್ಲೇ ನಿಲ್ಲಬಾರದು. ಜಾರಿಯಾಗಬೇಕು.

ಅರೆ­ಹೊಟ್ಟೆ­ಯಲ್ಲಿ ಪಾಠ ಮಾಡಬೇಕಾದ ಸ್ಥಿತಿಗೆ ಅಧ್ಯಾಪಕರನ್ನು ದೂಡುವುದು ಕಟುಕ ಮನಸ್ಥಿತಿಯಲ್ಲದೆ ಬೇರೇನೂ ಅಲ್ಲ. ದಿನಕ್ಕೆ ಮೂರು ಕಡೆ ಕೆಲಸ ಮಾಡುವ ವ್ಯಕ್ತಿ ಅಧ್ಯಯನಶೀಲನಾಗಲು ಸಾಧ್ಯವೆ? ಅದರ ದುಷ್ಪರಿಣಾಮ ಆಗುವುದು ವಿದ್ಯಾರ್ಥಿಗಳ ಮೇಲೆ ಎಂಬ ಸರಳ ಸತ್ಯ ಸರ್ಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ? ಪ್ರಥಮ ದರ್ಜೆ ಕಾಲೇಜುಗಳಲ್ಲಿ 4,800 ಅಧ್ಯಾಪಕರ ಪೂರ್ಣಾವಧಿ ಸೇವೆ ಅಗತ್ಯ ಇದೆ ಎನ್ನಲಾಗಿದೆ. ಅದರೊಂದಿಗೆ ಸಾವಿರಾರು ಶಿಕ್ಷಕರ ಹುದ್ದೆಗಳೂ ಖಾಲಿ ಇವೆ. ಖಾಲಿಯಾಗುವ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಲು ಸರ್ಕಾರಕ್ಕೆ ಇರುವ ತೊಂದರೆಯಾದರೂ ಏನು? ಸರ್ಕಾರ ಇನ್ನಾದರೂ ಈ ಕಡೆ ಗಮನಹರಿಸಲಿ. ಶಿಕ್ಷಣವನ್ನು ಆದ್ಯತೆಯ ಕ್ಷೇತ್ರವನ್ನಾಗಿ ಪರಿಗಣಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.